ಕ್ರೀಡೆ

ಚೆನ್ನೈ vs ಗುಜರಾತ್ ಫೈನಲ್ ಪಂದ್ಯ ಮುಂದೂಡಿಕೆ; ರಾತ್ರಿಯಿಡಿ ರಸ್ತೆಯಲ್ಲಿ ಕಾಲಕಳೆದ ಸಿಎಸ್​ಕೆ ಫ್ಯಾನ್ಸ್​

ಅಹಮದಾಬಾದ್​: ಭಾನುವಾರ ಅಹಮದಾಬಾದ್​ನಲ್ಲಿ ಎಡಬಿಡದೆ ಮಳೆ ಸುರಿದ ಕಾರಣ ಚೆನ್ನೈ ಸೂಪರ್​ಕಿಂಗ್ಸ್​ ಹಾಗು ಗುಜರಾತ್​ ಟೈಟಾನ್ಸ್​ ನಡುವಿನ ಫೈನಲ್​ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿತ್ತು.

ಒಂದು ಲಕ್ಷದ ಮೂವತ್ತು ಸಾವಿರ ಆಸನ ಸಾಮರ್ಥ್ಯ ಹೊಂದಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕ್ರಿಕೆಟ್​ ಪ್ರೇಮಿಗಳು ಫೈನಲ್​ ಪಂದ್ಯವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಮಳೆಯ ಕಾರಣಕ್ಕೆ ಒಂದು ಎಸೆತ ಕಾಣದೆ ಪಂದ್ಯ ಮೀಸಲು ದಿನಕ್ಕೆ ಮುಂದೂಡಿದ ಕಾರಣಕ್ಕೆ ಟಿಕೆಟ್​ ಪಡೆದಿರುವವರು ಮಾರನೆಯ ದಿನ ಪಂದ್ಯವನ್ನು ಹಳೆಯ ರಶೀದಿ ತೋರಿಸಿ ವೀಕ್ಷಿಸಬಹುದು ಎಂದು ಬಿಸಿಸಿಐ ತಿಳಿಸಿತ್ತು.

ತಮ್ಮ ನೆಚ್ಚಿನ ಆಟಗಾರರನನ್ನು ನೋಡಲು ದೂರದ ಊರುಗಳಿಂದ ಬಂದಿದ್ದ ಕ್ರೀಡಾಭಿಮಾನಿಗಳಿಗೆ ಮಳೆರಾಯ ನಿರಾಸೆ ಉಂಟುಮಾಡಿದ್ದ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್​ ಆಗಿದೆ.

ಸಿಎಸ್​ಕೆ ತಂಡದ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರ ಧೋನಿಯನ್ನು ನೋಡಲು ಬಂದಿದ್ದರು ಆದರೆ ಪಂದ್ಯ ನಡೆಯದ ಕಾರಣ ಅಭಿಮಾನಿಗಳು ಸ್ಟೇಡಿಯಂ ಹಾಗೂ ಹತ್ತಿರದ ರೈಲ್ವೇ ಸ್ಟೇಷನ್​ಗಳಲ್ಲಿ ರಾತ್ರಿ ಕಳೆದಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇನ್ನು ಪಂದ್ಯ ವೀಕ್ಷಿಸಲು ಬಂದಿದ್ದ ಜನತೆ ಮಳೆಯಿಂದ ರಕ್ಷಣೆ ಪಡೆಯಲು ಸ್ಟೇಡಿಯಂ ಹೊರಗೆ ಹಾಕಲಾಗಿದ್ದ ವಿರಾಟ್​ ಕೊಹ್ಲಿ ಅವರ ಬ್ಯಾನರ್​ಅನ್ನು ತೆಗೆದು ಅದರಲ್ಲಿ ಕೆಳಗೆ ನಿಲ್ಲುತ್ತಿರುವ ವಿಡಿಯೋವನ್ನು ಸಹ ವೈರಲ್​ ಆಗಿದೆ.