ಕ್ರೀಡೆ

ಈ ವಿಷಯದಲ್ಲಿ ಸಿಎಸ್​ಕೆಗೆ ಆರ್​ಸಿಬಿಯೇ ಸ್ಫೂರ್ತಿ! SRH ವಿರುದ್ಧದ ಪಂದ್ಯಕ್ಕೂ ಮುನ್ನ ಫ್ಲೆಮಿಂಗ್ ಭರವಸೆಯ ನುಡಿ | CSK

ಮೋಹನ್​ ಶೆಟ್ಟಿ

CSK: ಮಾ.22ರಿಂದ ಆರಂಭಗೊಂಡ ಐಪಿಎಲ್​ 18ನೇ ಆವೃತ್ತಿಯಲ್ಲಿ ಐದು ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಸತತ ಸೋಲಿನ ನೆರಳಿನಲ್ಲಿ ಸಾಗುತ್ತಿದೆ. ಆಡಿರುವ 8 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಜಯ ಸಾಧಿಸಿರುವ ಸಿಎಸ್​ಕೆ, 6 ಮ್ಯಾಚ್​ನಲ್ಲಿ ಹೀನಾಯ ಸೋಲು ಅನುಭವಿಸಿದೆ. ಇದು ತಂಡದಲ್ಲಿ ಗೆಲುವಿನ ವಿಶ್ವಾಸವನ್ನೇ ದೂರ ಸರಿಸಿದೆ.

ಸತತ ಸೋಲು

ಕಳೆದ ವರ್ಷಗಳಲ್ಲಿ ಚಾಂಪಿಯನ್ಸ್ ಆಗಿ ಮಿಂಚಿರುವ ಚೆನ್ನೈ ಪಡೆ, ಹಲವು ಬಾರಿ ಪ್ಲೇಆಫ್​ಗೆ ಎಂಟ್ರಿಕೊಟ್ಟಿದೆ. ಐಪಿಎಲ್​ ಇತಿಹಾಸದಲ್ಲಿ ಹಲವು ದಾಖಲೆಗಳಿಗೆ ಸಾಕ್ಷಿಯಾಗಿರುವ ತಂಡ ಇದೇ ಮೊದಲ ಬಾರಿಗೆ ಅತ್ಯಂತ ಕಳಪೆ ಪ್ರದರ್ಶನದ ಮೂಲಕ ಅಂಕಪಟ್ಟಿಯಲ್ಲಿ ಕೊನೆ ಸ್ಥಾನವನ್ನು ಅಲಂಕರಿಸಿದೆ. ಈ ಸಂಗತಿ ಫ್ರಾಂಚೈಸಿಯ ಅಭಿಮಾನಿಗಳಲ್ಲಿ ಹಾಗೂ ಕ್ರಿಕೆಟ್​ ಪ್ರಿಯರಿಗೆ ಭಾರೀ ಆಶ್ಚರ್ಯವನ್ನೇ ತಂದೊಡ್ಡಿದೆ. ಧೋನಿ ನಾಯಕತ್ವದಲ್ಲಿಯೂ ತಂಡ ಗೆಲುವಿಗಾಗಿ ಹೆಣಗಾಡುತ್ತಿರುವುದು ನೋಡುಗರಲ್ಲಿ ಗೊಂದಲ ಮೂಡಿಸಿದೆ.

ಗೆಲುವಿನ ಹಂಬಲ

ಇನ್ನು ಪ್ಲೇಆಫ್​ ಕನಸಿನಿಂದ ದೂರ ಉಳಿದಿರುವ ಸಿಎಸ್​ಕೆ ಇಂದಿನ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಭಾರೀ ಅಂತರದ ಗೆಲುವು ಸಾಧಿಸಬೇಕಿದೆ. ಈ ಪಂದ್ಯಕ್ಕೂ ಮುನ್ನ ತಂಡದ ಸತತ ಸೋಲಿನ ಬಗ್ಗೆ ಮುಕ್ತವಾಗಿ ಮಾತನಾಡಿರುವ ಕೋಚ್​ ಸ್ಟೀಫನ್ ಫ್ಲೆಮಿಂಗ್​, "ಮುಂದಿನ ಆರು ಪಂದ್ಯಗಳನ್ನು ನಾವು ಗೆದ್ದೆ ಗೆಲ್ಲುತ್ತೇವೆ. ನನ್ನ ಈ ಮಾತನ್ನು ಕೇಳಿದ ಬಹುತೇಕರು ಖಂಡಿತ ನಗುತ್ತಾರೆ. ಆದರೆ, ನೆನಪಿರಲಿ ಕಳೆದ ಸೀಸನ್​ ಆರ್​ಸಿಬಿ ಕೂಡ ಇದೇ ಪರಿಸ್ಥಿತಿಯಲ್ಲಿತ್ತು. ಸತತ ಗೆಲುವಿನ ಮೂಲಕ ಪುಟಿದೆದ್ದರು. ಹೀಗಾಗಿ ನಮಗಿನ್ನೂ ಅವಕಾಶವಿದೆ" ಎಂದರು.

ಆರ್​ಸಿಬಿ ಮಾದರಿ

"ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ. ಈ ರೀತಿಯ ಸಂದರ್ಭಗಳು ಈ ಹಿಂದೆಯೂ ನಡೆದಿದೆ. ಸಾಕಷ್ಟು ಬಾರಿ ಕಮ್​ಬ್ಯಾಕ್ ಮಾಡಿದ್ದೇವೆ. ಮುಂದೆ ಸಾಗುವ ಹಾದಿ ನಮಗೆ ತಿಳಿದಿದೆ. ಮುಂದಿನ ಯಾವೊಂದು ಪಂದ್ಯವನ್ನು ಲಘುವಾಗಿ ಪರಿಗಣಿಸುವುದಿಲ್ಲ. ನಮ್ಮ ತಂಡ 100ಕ್ಕೆ 100ರಷ್ಟು ಉತ್ತಮ ಪ್ರದರ್ಶನ ನೀಡಲಿದೆ" ಎಂದು ಫ್ಲೆಮಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).