ಬೆಂಗಳೂರು: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಭರದ ಸಿದ್ಧತೆ ನಡೆಯುತ್ತಿದೆ. ಕಳೆದ ವಾರಾಂತ್ಯದಲ್ಲಿ ಅರಬ್ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದ ಆಟಗಾರರು ಇನ್ನು ಒಂದು ವಾರಗಳ ಕಾಲ ಹೋಟೆಲ್ಗಳಲ್ಲೇ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಎಲ್ಲ ತಂಡಗಳು ದುಬೈ ಹಾಗೂ ಅಬು ಧಾಬಿಯಲ್ಲೇ ಉಳಿದುಕೊಂಡಿವೆ. ಬಹುತೇಕ ತಂಡಗಳು ಸಮುದ್ರದ ತಟದಲ್ಲಿ ರೆಸಾರ್ಟ್ ಹಾಗೂ ಹೋಟೆಲ್ಗಳಲ್ಲಿ ತಂಗಿವೆ. ಈ ವೇಳೆ ಅರಬ್ ನಗರದ ಸುಂದರ ಪ್ರಕೃತಿಯ ಸೊಬಗನ್ನು ಆಟಗಾರರು ಸವಿಯುತ್ತಿದ್ದಾರೆ. ಜತೆಗೆ ಅರಬ್ ರಾಷ್ಟ್ರದ ಸುಂದರ ಪ್ರಕೃತಿಯನ್ನು ಮೊಬೈಲ್ನಲ್ಲಿ ಸೆರೆಹಿಡಿದು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿದ್ದಾರೆ.
ಆಟಗಾರರು ಹೋಟೆಲ್ನಲ್ಲೇ ಫಿಟ್ನೆಸ್ ಹಾಗೂ ದೈಹಿಕ ಕಸರತ್ತಿನ ಮೊರೆ ಹೋಗಿದ್ದು, ಮುಂದಿನ 5 ದಿನಗಳ ಕಾಲ ಹೋಟೆಲ್ ಆವರಣದಲ್ಲಿ ಹಾಗೂ ಕೊಠಡಿಯಲ್ಲಿ ಅಭ್ಯಾಸ ನಡೆಸಲಿದ್ದಾರೆ. ಸೆ.19 ರಿಂದ ನವೆಂಬರ್ 10ರವರೆಗೆ 13ನೇ ಐಪಿಎಲ್ ನಡೆಯಲಿದ್ದು, ಟೂರ್ನಿ ಅಂತಿಮ ವೇಳಾಪಟ್ಟಿ ಇನ್ನಷ್ಟೇ ಪ್ರಕಟಿಸಬೇಕಿದೆ. ಯುಎಇಯ ಮೂರು ನಗರಗಳಾದ ದುಬೈ, ಶಾರ್ಜಾ ಹಾಗೂ ಅಬುಧಾಬಿಯಲ್ಲಿ 53 ದಿನಗಳ ಕಾಲ 60 ಪಂದ್ಯಗಳು ನಡೆಯಲಿವೆ.