ಮುಂಬೈ: ಭೋಜ್ಪುರಿ ನಟಿ ಸಪ್ನಾ ಗಿಲ್ ಮಾಡಿದ್ದ ಲೈಂಗಿಕ ಕಿರುಕುಳ ಆರೋಪದ ಪ್ರಕರಣದಲ್ಲಿ ಕ್ರಿಕೆಟಿಗ ಪೃಥ್ವಿ ಷಾಗೆ ಮುಂಬೈ ಪೊಲೀಸರು ಬಹುದೊಡ್ಡ ರಿಲೀಫ್ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಪೊಲೀಸರು, ಪೃಥ್ವಿ ಷಾ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದೊಂದು ಸುಳ್ಳು ದೂರು ಆಗಿದೆ ಎಂದು ತಿಳಿಸಿದ್ದಾರೆ.
ವರ್ಷಾರಂಭದಲ್ಲಿ ಪೃಥ್ವಿ ಷಾ ಅಂಧೇರಿಯ ಪಬ್ ಒಂದಕ್ಕೆ ಸ್ನೇಹಿತರ ಜತೆಗೆ ಹೋಗಿದ್ದ ಸಮಯದಲ್ಲಿ ಸಪ್ನಾ ಗಿಲ್ ಜತೆಗೆ ಕಿತ್ತಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಪೃಥ್ವಿ ಷಾ, ಸ್ನೇಹಿತನ ಕಾರಿಗೆ ಸಪ್ನಾ ಗಿಲ್ ಹಾನಿ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಸಪ್ನಾ ಗಿಲ್, ಪೃಥ್ವಿ ಷಾ ವಿರುದ್ಧ ಐಪಿಸಿ ಸೆಕ್ಷನ್ 354 (ಮಹಿಳೆ ಮೇಲೆ ಹಲ್ಲೆ), 509 (ಮಹಿಳೆ ಜತೆ ಅನುಚಿತ ವರ್ತನೆ) ಮತ್ತು 324 (ಮಾರಾಕಾಸ್ತ್ರಗಳಿಂದ ಹಲ್ಲೆ) ಅಡಿಯಲ್ಲಿ ದೂರು ನೀಡಿದ್ದರು. ಪೃಥ್ವಿ ಷಾ ತನ್ನ ಮೈಮುಟ್ಟಿ ಕಿರುಕುಳ ನೀಡಿದ್ದಾರೆ ಮತ್ತು ಬೇಸ್ಬಾಲ್ ಬ್ಯಾಟ್ನಿಂದ ಹಲ್ಲೆ ನಡೆಸಿದ್ದಾರೆ ಎಂದೂ ಗಿಲ್ ಆರೋಪಿಸಿದ್ದರು. ಈ ಸಂಬಂಧ ತನಿಖಾಧಿಕಾರಿ ಸೋಮವಾರ ಮ್ಯಾಜಿಸ್ಟ್ರೆಟ್ ಕೋರ್ಟ್ಗೆ ಹಾಜರಾಗಿ ವರದಿ ಸಲ್ಲಿಸಿದರು.
ಪಬ್ನಲ್ಲಿರುವ ಸಿಸಿಟಿವಿಗಳ ಚಿತ್ರಣಗಳನ್ನು ಪರಿಶೀಲಿಸಿದ್ದೇವೆ. ಅದರಲ್ಲಿ ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತ ಶೋಬಿತ್ ಠಾಕೂರ್ ಕುಡಿದು ನರ್ತಿಸುತ್ತಿರುವುದು ಕಾಣಿಸಿದೆ. ಇದೇ ವೇಳೆ ಅಲ್ಲೇ ಇದ್ದ ಪೃಥ್ವಿ ಷಾ ಜತೆ ಮೊಬೈಲ್ನಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಲು ಶೋಬಿತ್ ಪ್ರಯತ್ನಿಸಿದ್ದು, ಅದಕ್ಕೆ ಪೃಥ್ವಿ ಷಾ ನಿರಾಕರಿಸಿದ್ದಾರೆ. ಆದರೆ ಅದರಲ್ಲಿ ಸಪ್ನಾ ಗಿಲ್ಗೆ ಪೃಥ್ವಿ ಷಾ ಅಥವಾ ಅವರ ಸ್ನೇಹಿತರು ಕಿರುಕುಳ ನೀಡಿರುವ ದೃಶ್ಯಗಳಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆ ಸಮಯದಲ್ಲಿ ಪಬ್ನಲ್ಲಿ ಹಾಜರಿದ್ದವರ ಹೇಳಿಕೆಗಳನ್ನೂ ಪಡೆದುಕೊಂಡಿದ್ದೇವೆ. ಆದರೆ ಅವರಲ್ಲಿ ಯಾರೂ, ಸಪ್ನಾ ಗಿಲ್ ಜತೆ ಅನುಚಿತವಾಗಿ ವರ್ತಿಸಿರುವ ಬಗ್ಗೆ ಹೇಳಿಕೆ ನೀಡಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಸಪ್ನಾ ಗಿಲ್ ಪರ ವಕೀಲ ಅಲಿ ಕಾಸಿಪ್ ಖಾನ್, ಟನೆಯ ವೇಳೆ ಸಪ್ನಾ ಗಿಲ್ ಸ್ನೇಹಿತ ಮೊಬೈಲ್ನಲ್ಲಿ ಚಿತ್ರೀಕರಿಸಿರುವ ವಿಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ಕೇಳಿದ್ದಾರೆ. ಅಲ್ಲದೆ ಘಟನೆ ನಡೆದ ಸಮಯದಲ್ಲಿನ ಪಬ್ ಹೊರಗಿನ ಸಿಸಿಟಿವಿಗಳನ್ನೂ ಪರಿಶೀಲಿಸುವಂತೆ ಕೇಳಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರಿಗೆ ಸೂಚನೆ ನೀಡಿರುವ ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು ಜೂನ್ 28ಕ್ಕೆ ಮುಂದೂಡಿದೆ.