ಕ್ರೀಡೆ

ಲೀಗ್ ​ಪಂದ್ಯದಲ್ಲಿ 10 ವಿಕೆಟ್​ ಉರುಳಿಸಿ ಗಮನ ಸೆಳೆದ ಯುವ ಕ್ರಿಕೆಟಿಗ; ಬಹುಮಾನ ಮೊತ್ತ ಕೇಳಿದರೆ ನೀವು ಬೆರಗಾಗೋದು ಖಚಿತ

ಮುಂಬೈ: ಕ್ರೀಡಾ ಲೋಕ ಅಂದರೆ ಅದು ಅಚ್ಚರಿಯ ತಾಣ ಎಂದರೆ ತಪ್ಪಾಗಲಾರದು. ಪ್ರತಿದಿನ ನಾವು ಕ್ರೀಡೆ ಕುರಿತಾದ ಸುದ್ದಿಗಳನ್ನು ಓದಬೇಕಾದರೆ ಹೊಸ ಹೊಸ ವಿಚಾರಗಳ ಬಗ್ಗೆ ತಿಳಿದುಕೊಳ್ಳುತ್ತಿರುತ್ತೇವೆ. ಕ್ರೀಡೆಯಲ್ಲಿ ವಿಶೇಷವಾಗಿ ಕ್ರಿಕೆಟ್​ ಹೆಚ್ಚು ಮಹತ್ವ ಪಡೆದುಕೊಂಡಿದ್ದು, ಪ್ರತಿದಿನ ಒಂದಿಲ್ಲೊಂದು ವಿಶಿಷ್ಟ ಸಾಧನೆಗಳು ನಡೆಯುತ್ತಿರುತ್ತವೆ. ಇದೀಗ ಅದೇ ರೀತಿಯ ಸಾಧನೆಯೊಂದು ಸ್ಥಳೀಯ ಟೂರ್ನಮೆಂಟ್​ನಲ್ಲಿ ನಡೆದಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಕ್ರಿಕೆಟ್​ನಲ್ಲಿ 10 ವಿಕೆಟ್​ಗಳ ಸಾಧನೆ ಮಾಡಿರುವವರು ಯಾರು ಎಂದರೆ ಕೇಳಿ ಬರುವುದು ಇಂಗ್ಲೆಂಡ್​ನ ಜಿಮ್ ಲೇಕರ್, ಭಾರತದ ಅನಿಲ್​ ಕುಂಬ್ಳೆ ಹಾಗೂ ನ್ಯೂಜಿಲೆಂಡ್​ನ ಏಜಾಜ್ ಪಟೇಲ್ ಹೆಸರು ಕೇಳಿ ಬರುತ್ತಿದೆ. ಇದೀಗ ಈ ಸಾಲಿಗೆ ಹೊಸದಾಗಿ ಮುಂಬೈ ಮೂಲದ ಯುವ ಕ್ರಿಕೆಟಿಗ ಸೇರ್ಪಡೆಯಾಗಿದ್ದು, ಎಲ್ಲರ ಗಮನ ಸೆಳೆಯುವಲ್ಲಿ ಈತ ಯಶಸ್ವಿಯಾಗಿದ್ದಾನೆ.

ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ್ದ ಕಂಗ ಕ್ರಿಕೆಟ್​ ಲೀಗ್​ನಲ್ಲಿ ಶೋಯೆಬ್​ ಖಾಬ್​ ಎಂಬಾತ 10 ವಿಕೆಟ್​ಗಳನ್ನು ಉರುಳಿಸಿದ್ದು, ಎಲ್ಲರ ಗಮನ ಸೆಳೆದಿದ್ದಾನೆ.  ಗೌರ್-ಸರಸ್ವತ್ ಕ್ರಿಕೆಟ್ ಕ್ಲಬ್ ಮತ್ತು ಜಾಲಿ ಕ್ರಿಕೆಟರ್ಸ್ ನಡುವಿನ ಪಂದ್ಯದಲ್ಲಿ ಶೋಯೆಬ್​ ಈ ಸಾಧನೆ ಮಾಡಿದ್ದು, ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.

ಈ ಪಂದ್ಯದಲ್ಲಿ ಗೌರ್-ಸರಸ್ವತ್ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿದ ಎಡಗೈ ಸ್ಪಿನ್ನರ್ ಶೋಯೆಬ್​, ಜಾಲಿ ಕ್ರಿಕೆಟರ್ಸ್​ ತಂಡದ ಬ್ಯಾಟರ್​ಗಳನ್ನು ಇನ್ನಿಲ್ಲದಂತೆ ಕಾಡಿದರು ಮತ್ತು ಅವರನ್ನು ಆಲೌಟ್​ ಮಾಡುವಲ್ಲಿ ಯಶಸ್ವಿಯಾದರು. 17.4 ಓವರ್​ಗಳನ್ನು ಬೌಲ್​ ಮಾಡಿದ ಶೋಯೆಬ್​ 10 ವಿಕೆಟ್​ಗಳನ್ನು ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದರು. ಎದುರಾಳಿ ತಂಡವನ್ನು 67 ರನ್​ಗಳಿಗೆ ಕಟ್ಟಿ ಹಾಕುವ ಮೂಲಕ ತಂಡಕ್ಕೆ ನೆರವಾದರು.

ಈ ಪಂದ್ಯದಲ್ಲಿ ಶೋಯೆಬ್​ 10 ವಿಕೆಟ್ ಉರುಳಿಸುತ್ತಿದ್ದಂತೆ ಗೌರ್-ಸರಸ್ವತ್ ಕ್ರಿಕೆಟ್ ಕ್ಲಬ್ ತಂಡದ ಮಾಲೀಕ ರವಿ ಮಾಂಡ್ರೇಕರ್ 10 ಸಾವಿರ ರೂಪಾಯಿ ನಗದು ಬಹುಮಾನವನ್ನು ನೀಡುವ ಮೂಲಕ ಯುವ ಸ್ಪಿನ್ನರ್​ಅನ್ನು ಶ್ಲಾಘಿಸಿದರು. ಯುವ ಸ್ಪಿನ್ನರ್​ನ ಸಾಧನೆಯನ್ನು ಕೊಂಡಾಡಿರುವ ನೆಟ್ಟಿಗರು ಮುಂದೊಂದು ದಿನ ಈತ ಭಾರತದ ಪರ ಆಡುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.