RCB ಮಾಡಿದ ಪಾಪವಾದ್ರೂ ಏನು? ಇಷ್ಟೊಂದು ಕೀಳಾಗಿ ನೋಡೋ ಬದಲು ಆ ತಂಡವನ್ನೇ ಹೊರಹಾಕಿ ಎಂದು ಮಾಜಿ ಕ್ರಿಕೆಟಿಗನ ಆಕ್ರೋಶ!  
ಕ್ರಿಕೆಟ್

RCB ಮಾಡಿದ ಪಾಪವಾದ್ರೂ ಏನು? ಇಷ್ಟೊಂದು ಕೀಳಾಗಿ ನೋಡೋ ಬದಲು ಆ ತಂಡವನ್ನೇ ಹೊರಹಾಕಿ ಎಂದು ಮಾಜಿ ಕ್ರಿಕೆಟಿಗನ ಆಕ್ರೋಶ!

ಪ್ರಮುಖ ಮುಖ್ಯಾಂಶಗಳು

  • ಜಿಂಬಾಬ್ವೆ ಸರಣಿಗೆ ಟೀಮ್ ಇಂಡಿಯಾ ಆಯ್ಕೆ ವಿರುದ್ಧ ಮಾಜಿ ಕ್ರಿಕೆಟಿಗ ಸದಗೋಪಾನ್ ರಮೇಶ್ ತೀವ್ರ ವಾಗ್ದಾಳಿ
  • ಆರ್‌ಸಿಬಿ ಆಟಗಾರರನ್ನು ಕಡೆಗಣಿಸಿದ ಆಯ್ಕೆ ಮಂಡಳಿಯ ಪಕ್ಷಪಾತ ಧೋರಣೆ ವಿರುದ್ಧ ರಮೇಶ್ ಆಕ್ರೋಶ
  • ಆರ್‌ಸಿಬಿಯನ್ನು ಹೀಗೆ ಕೀಳಾಗಿ ನೋಡುವುದಾದರೆ ಐಪಿಎಲ್‌ನಿಂದಲೇ ಹೊರಹಾಕಿ ಎಂದು ರಮೇಶ್ ಕಿಡಿಕಾರಿಕೆ
  • ಭುವನೇಶ್ವರ್ ಕುಮಾರ್ ಕಡೆಗಣನೆ ಮತ್ತು ಕಡಿಮೆ ಶ್ರೇಯಾಂಕದ ಬೌಲರ್‌ಗಳ ಆಯ್ಕೆ ವಿರುದ್ಧ ರಮೇಶ್ ಗರಂ
RCB : ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ-20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿರುವ ಪ್ರಕ್ರಿಯೆಯ ವಿರುದ್ಧ ಮಾಜಿ ಕ್ರಿಕೆಟಿಗ ಸದಗೊಪ್ಪನ್ ರಮೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಐಪಿಎಲ್ (IPL) ಪ್ರದರ್ಶನದ ಆಧಾರದ ಮೇಲೆಯೇ ಭಾರತೀಯ ಟಿ-20 ತಂಡವನ್ನು ಆಯ್ಕೆ ಮಾಡಲಾಗುತ್ತಿದೆ ಎಂಬುದು ನಿಜವಾದರೂ, ಈ ನಿಯಮ ಹಾಗೂ ಮಾನದಂಡಗಳು ಕೇವಲ ಕೆಲವು ನಿರ್ದಿಷ್ಟ ಆಟಗಾರರಿಗೆ ಮಾತ್ರ ಸೀಮಿತವಾಗಿರುವುದು ದುರದೃಷ್ಟಕರ ಎಂದು ರಮೇಶ್​ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ವಿಡಿಯೋದಲ್ಲಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಸತತವಾಗಿ 2025 ಮತ್ತು 2026ರ ಸೀಸನ್‌ಗಳಲ್ಲಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಿಂದ ಒಬ್ಬೇ ಒಬ್ಬ ಆಟಗಾರನನ್ನೂ ಜಿಂಬಾಬ್ವೆ ಸರಣಿಗೆ ಆಯ್ಕೆ ಮಾಡದಿರುವುದನ್ನು ಸದಗೊಪ್ಪನ್​ ರಮೇಶ್ ಪ್ರಮುಖವಾಗಿ ಪ್ರಶ್ನಿಸಿದ್ದಾರೆ. ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದುಬಂದ ಆರ್‌ಸಿಬಿ ಆಟಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಆಯ್ಕೆ ಮಂಡಳಿಯ ಪಕ್ಷಪಾತ ಧೋರಣೆಯನ್ನು ಎತ್ತಿಹಿಡಿಯುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2026ರ ಐಪಿಎಲ್ ಸೀಸನ್‌ನಲ್ಲಿ ಬರೋಬ್ಬರಿ 28 ವಿಕೆಟ್‌ಗಳನ್ನುಪಡೆದುಕೊಂಡು ಗರಿಷ್ಠ ವಿಕೆಟ್‌ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಆರ್​ಸಿಬಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ತಂಡದಿಂದ ಹೊರಗಿಟ್ಟಿರುವುದಕ್ಕೆ ಸದಗೊಪ್ಪನ್​ ರಮೇಶ್ ತೀವ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಭುವನೇಶ್ವರ್ ಅವರಂತಹ ಹಿರಿಯ ಬೌಲರ್‌ಗೆ ಕೋಕ್ ನೀಡಿ, ಐಪಿಎಲ್ ವಿಕೆಟ್ ಬೇಟೆಯ ಪಟ್ಟಿಯಲ್ಲಿ ಕ್ರಮವಾಗಿ 47, 55 ಮತ್ತು 89ನೇ ಸ್ಥಾನಗಳಲ್ಲಿರುವ ಹರ್ಷ ದುಬೆ, ಅಶೋಕ್ ಶರ್ಮಾ ಮತ್ತು ಯಶ್ ಠಾಕೂರ್ ಹಾಗೂ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡದ ಮಯಾಂಕ್ ಯಾದವ್ ಅವರನ್ನು ಆಯ್ಕೆ ಮಾಡಿರುವುದರ ವಿರುದ್ಧ ರಮೇಶ್​ ಅವರು ಆಕ್ರೋಶ ಹೊರಹಾಕಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಒಂದೇ ಒಂದು ಓವರ್ ಬೌಲಿಂಗ್ ಮಾಡದ ಸೂರ್ಯಾಂಶ್ ಶೆಡ್ಗೆ ಅವರನ್ನು ಆಲ್ರೌಂಡರ್ ಆಗಿ ಆಯ್ಕೆ ಮಾಡಿದ್ದು ಹೇಗೆ ಎಂದು ಪ್ರಶ್ನಿಸಿರುವ ರಮೇಶ್, ತಮ್ಮ ಫ್ರಾಂಚೈಸಿ ತಂಡದ ಅಂತಿಮ ಹನ್ನೊಂದರ ಬಳಗದಲ್ಲೇ ಸ್ಥಾನ ಪಡೆಯಲು ವಿಫಲರಾಗಿದ್ದ ರವಿ ಬಿಷ್ಣೋಯ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದನ್ನು ತೀವ್ರವಾಗಿ ಟೀಕಿಸಿದ್ದಾರೆ. ಶ್ರೇಯಸ್ ಅಯ್ಯರ್ ಮತ್ತು ವೈಭವ್ ಸೂರ್ಯವಂಶಿ ಅವರಂತಹ ಆಟಗಾರರಿಗೆ ಐಪಿಎಲ್ ಪ್ರದರ್ಶನದ ಆಧಾರದ ಮೇಲೆ ಜಾಗ ನೀಡುವಾಗ, ಇತರ ಅರ್ಹ ಆಟಗಾರರ ವಿಷಯದಲ್ಲಿ ಆಯ್ಕೆಗಾರರು ಇಂತಹ ದ್ವಂದ್ವ ನೀತಿ ಅನುಸರಿಸುತ್ತಿರುವುದು ಸಂಪೂರ್ಣ ತಪ್ಪು ಎಂದು ಅವರು ಕಿಡಿಕಾರಿದ್ದಾರೆ.
ಸತತವಾಗಿ ಪ್ರಶಸ್ತಿ ಗೆದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರರನ್ನು ಹೀಗೆ ಕಡೆಗಣಿಸಲು ಆರ್‌ಸಿಬಿ ಮಾಡಿದ ಪಾಪವಾದರೂ ಏನು ಎಂದು ಪ್ರಶ್ನಿಸಿದ ರಮೇಶ್, ಒಂದು ವೇಳೆ ಆರ್‌ಸಿಬಿ ಆಟಗಾರರನ್ನು ಪ್ರಶಸ್ತಿ ಗೆದ್ದರೂ ಹೀಗೆ ನಿರಂತರವಾಗಿ ಕೀಳಾಗಿ ನೋಡುವುದಾದರೆ, ಆ ತಂಡವನ್ನು ಐಪಿಎಲ್‌ನಿಂದಲೇ ಹೊರಹಾಕಿ ಎಂದು ಆಕ್ರೋಶ ಭರಿತರಾಗಿ ಹೇಳಿದ್ದಾರೆ. ರಾಷ್ಟ್ರೀಯ ಆಯ್ಕೆಗಾರರು ಆರ್‌ಸಿಬಿ ತಂಡವನ್ನು ಈ ರೀತಿ ಕಡೆಗಣಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್​).