ಗಂಭೀರ್​, ರೋಕೊ ಜೋಡಿ 
ಕ್ರಿಕೆಟ್

ಶತಕ, ಅರ್ಧಶತಕ ಫಲವಿಲ್ಲ! ಮುಂದುವರಿದ ಗೌತಿ 'Vs ರೋಕೊ' ಮನಸ್ತಾಪ; ಮಾಜಿ ಕ್ರಿಕೆಟಿಗ ಕಿವಿಮಾತು​

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾದಲ್ಲಿ ಆಂತರಿಕ ಸಮಸ್ಯೆ?
  • ಗೌತಮ್ ಗಂಭೀರ್ ವಿರುದ್ಧ ಕೊಹ್ಲಿ, ರೋಹಿತ್ ಅಸಮಾಧಾನ
  • ದ್ವಿತೀಯ ಪಂದ್ಯದ ಬೆನ್ನಲ್ಲೇ ಸಭೆ ನಡೆಸಲು ನಿರ್ಧಾರ
ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ದಿಗ್ಗಜ ಬ್ಯಾಟರ್​ಗಳಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಕ್ರಿಕೆಟ್​ ಪ್ರೇಮಿಗಳಿಗೆ ಗೊತ್ತೇ ಇದೆ. ಕೊಹ್ಲಿ ಶತಕದಾಟ (135 ರನ್​) ತೋರಿದರೆ, ರೋಹಿತ್ ಆಕರ್ಷಕ ಅರ್ಧಶತಕ (57) ಬಾರಿಸಿದರು. ಇದು ಅವರ ಅಭಿಮಾನಿಗಳು ಮೈದಾನದಲ್ಲಿ ಸಂಭ್ರಮಿಸುವಂತೆ ಮಾಡಿತು. ಮತ್ತೊಂದೆಡೆ, ಭಾರತ 17 ರನ್​ಗಳಿಂದ ಪಂದ್ಯ ಗೆದ್ದಿತು. ಇಷ್ಟೆಲ್ಲ ಖುಷಿ ಸಂಗತಿಗಳಿದ್ದರೂ ತಂಡದಲ್ಲಿ ಮನಸ್ತಾಪಗಳ ಕಟ್ಟೆ ಹೊಡೆದಿರುವುದು ಇದೀಗ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಈಗಾಗಲೇ ಟೆಸ್ಟ್ ಮತ್ತು ಟಿ20 ಕ್ರಿಕೆಟ್​ಗೆ​ ಗುಡ್​ಬೈ ಹೇಳಿರುವ 'ರೋಕೊ' ಜೋಡಿ, ಕೇವಲ ಏಕದಿನ ಟೂರ್ನಿಯಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಅಂತೆಯೇ, ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ರೋಹಿತ್ ಮತ್ತು ಕೊಹ್ಲಿ, ಮೊದಲ ಪಂದ್ಯದಲ್ಲೇ ಅಭಿಮಾನಿಗಳ ಹಾಗೂ ಬಿಸಿಸಿಐ ನಿರೀಕ್ಷೆಗಳನ್ನು ಉಳಿಸಿಕೊಂಡರು. 2027ರ ಏಕದಿನ ವಿಶ್ವಕಪ್ ಆಡಲು ಇಚ್ಛಿಸಿರುವ ರೋಹಿತ್, ಕೊಹ್ಲಿ, ಉತ್ತಮ ಪ್ರದರ್ಶನದತ್ತ ಹೆಚ್ಚು ಗಮನಹರಿಸಿದ್ದಾರೆ. ಅಂತೆಯೇ, ಹುಬ್ಬೇರಿಸುವ ಆಟ ತೋರಿದ್ದಾರೆ. ಆದ್ರೆ, ಹೆಡ್​ ಕೋಚ್​ ಅವರಿಂದ ಇದಕ್ಕೆ ಅಂತಹ ಮನ್ನಣೆ ಸಿಕ್ಕಿಲ್ಲ ಎಂಬುದು ಸದ್ಯ ದಿಗ್ಗಜ ಆಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
'ರೋಕೊ' ಮತ್ತು ಗೌತಮ್ ಗಂಭೀರ್ ನಡುವೆ ಉತ್ತಮ ಸಂಬಂಧವಿಲ್ಲ ಎಂಬ ವರದಿಗಳು ಸುದ್ದಿ, ಜಾಲತಾಣಗಳಲ್ಲಿ ಬಲು ಜೋರಾಗಿವೆ. ಈ ಹಿಂದೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಹೀನಾಯವಾಗಿ ಸೋತಿತು. ಸರಣಿ ಸೋಲಿಗೆ ರೋಹಿತ್ ಶರ್ಮ ಮತ್ತು ಕೊಹ್ಲಿಯನ್ನು ದೂಷಿಸಲಾಯಿತು. ಇದಾದ ಬಳಿಕ, ರೋಹಿತ್ ಮೊದಲು ಟೆಸ್ಟ್‌ನಿಂದ ನಿವೃತ್ತಿ ಘೋಷಿಸಿದರು. ಅವರ ಬೆನ್ನಲ್ಲೇ ಕೊಹ್ಲಿ ವಿದಾಯ ಹೇಳಿದರು. ನಂತರದಲ್ಲಿ, ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಬಳಿಕ, 'ಹಿಟ್‌ಮ್ಯಾನ್'ರನ್ನು ಏಕದಿನ ನಾಯಕತ್ವದಿಂದ ಹೊರಗಿಡಲಾಯಿತು. ಗಂಭೀರ್ ಮತ್ತು ಅಜಿತ್ ಅಗರ್ಕರ್ ಅವರ ಈ ನಿರ್ಧಾರಗಳು, ಕ್ರಿಕೆಟ್​ ಪ್ರಿಯರ ಕೆಂಗಣ್ಣಿಗೆ ಗುರಿಯಾಯಿತು.

ಬಿಸಿಸಿಐ ಬೇಸರ

ಕೊಹ್ಲಿ ಮತ್ತು ರೋಹಿತ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಗಂಭೀರ್ ಅವರತ್ತ ಬೆರಳು ಮಾಡಿ ಟೀಕಿಸುತ್ತಿರುವುದಕ್ಕೆ ಬಿಸಿಸಿಐ ಬೇಸರ ವ್ಯಕ್ತಪಡಿಸಿದೆ. ಈ ಸಮಸ್ಯೆಯನ್ನು ಸರಿಪಡಿಸಲು ಪ್ರಯತ್ನಗಳು ನಡೆಯುತ್ತಿದ್ದರೂ, ಪ್ರಸ್ತುತ, ಪರಿಸ್ಥಿತಿ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಬಿಸಿಸಿಐ ವಕ್ತಾರರು ತಿಳಿಸಿದ್ದಾರೆ.

2ನೇ ಏಕದಿನ ಪಂದ್ಯ ನಂತರ...

ಪ್ರಸ್ತುತ, ರೋಕೊ ಮತ್ತು ಗೌತಮ್ ಗಂಭೀರ್​ ಮಧ್ಯೆ ನಡೆಯುತ್ತಿರುವ ಮನಸ್ತಾಪಗಳಿಂದ ತಲೆಕೆಡಿಸಿಕೊಂಡಿರುವ ಬಿಸಿಸಿಐ, ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದ ಬಳಿಕ ಮೂವರೊಂದಿಗೆ ಸಭೆ ನಡೆಸಿ, ಚರ್ಚಿಸಲು ನಿರ್ಧರಿಸಿರುವುದಾಗಿ ಕ್ರಿಕೆಟ್​ ಮೂಲಗಳು ತಿಳಿಸಿವೆ.

ಮಾಜಿ ಕ್ರಿಕೆಟಿಗನಿಂದ ಗೌತಿಗೆ ಕಿವಿಮಾತು

ರೋಕೊ ಬೇಸರಕ್ಕೆ ಕಾರಣವಾಗಿರುವ ಹೆಡ್​ ಕೋಚ್​ ಗೌತಮ್ ಗಂಭೀರ್​ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್​ ಪ್ರಿಯರು ಹಾಗೂ ನೆಟ್ಟಿಗರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಬೆಳವಣಿಗೆಗಳನ್ನು ಗಮನಿಸಿದ 2011ರ ವಿಶ್ವಕಪ್​ ವಿಜೇತ ತಂಡದ ಸದಸ್ಯ ಜಹೀರ್​ ಖಾನ್​, "ಸತತ ಪಂದ್ಯಗಳನ್ನು ಗೆದ್ದಾಗ ಭಾವನೆಗಳು ಏರುವುದರಲ್ಲಿ ಅನುಮಾನವಿಲ್ಲ. ಆಗ ನಿರೀಕ್ಷೆಗಳು ಸಹ ಹೆಚ್ಚುತ್ತದೆ. ಈ ಸಮಯದಲ್ಲಿ ಗೌತಿ ಸಮತೋಲನದಿಂದ ಇರಬೇಕು ಮತ್ತು ಹರಿದುಬರುತ್ತಿರುವ ಟೀಕೆ, ವ್ಯಂಗ್ಯಗಳನ್ನು ಮೌನದಿಂದಲೇ ಎದುರಿಸುವುದು ಒಳಿತು" ಎಂದಿದ್ದಾರೆ,(ಏಜೆನ್ಸೀಸ್).