ಆಕಾಶ್ ಚೋಪ್ರಾ ಪಾಡ್‌ಕಾಸ್ಟ್‌ನಲ್ಲಿ ವೈಯಕ್ತಿಕ ಬಿಕ್ಕಟ್ಟು ಬಿಚ್ಚಿಟ್ಟ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ 
ಕ್ರಿಕೆಟ್

ಮೈದಾನದಲ್ಲಿ ನಗು, ಬದುಕಲ್ಲಿ ನರಕಯಾತನೆ: ಕುಡಿತ, ಡಿವೋರ್ಸ್ ಮತ್ತು ರಿಹ್ಯಾಬ್ ವಾಸದ ಕಹಿ ಸತ್ಯ ಬಿಚ್ಚಿಟ್ಟ ಯುಜ್ವೇಂದ್ರ ಚಾಹಲ್! Yuzvendra Chahal

ಭಾರತದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತಮ್ಮ ಡಿವೋರ್ಸ್, ಮದ್ಯದ ವ್ಯಸನ, ಪ್ಯಾನಿಕ್ ಅಟ್ಯಾಕ್ ಹಾಗೂ ರಿಹ್ಯಾಬ್ ಸೆಂಟರ್‌ನಲ್ಲಿ ಕಳೆದ 26 ದಿನಗಳ ಕಹಿ ಅನುಭವಗಳನ್ನು ಮುಕ್ತವಾಗಿ ಬಿಚ್ಚಿಟ್ಟಿದ್ದಾರೆ. ಸಂಪೂರ್ಣ ವಿವರ ಓದಿ.

Yuzvendra Chahal: ಕ್ರಿಕೆಟ್ ಮೈದಾನದಲ್ಲಿ ಎದುರಾಳಿ ಬ್ಯಾಟರ್‌ಗಳನ್ನು ತಮ್ಮ ಸ್ಪಿನ್ ಜಾದೂವಿನಿಂದ ಕಟ್ಟಿಹಾಕಿ, ಅವರ ವಿಕೆಟ್​ ಪಡೆದ ನಂತರ ವಿನೂತನ ರೀತಿಯಲ್ಲಿ ಸೆಲೆಬ್ರೆಟ್​ ಮಾಡುವ ಬೌಲರ್​ ಎಂದರೆ ಅದು ಯುಜ್ವೇಂದ್ರ ಚಾಹಲ್ ಆಗಿದ್ದಾರೆ. ಮೈದಾನದಲ್ಲಿ ಹಸನ್ಮುಖಿಯಾಗಿರುವ ಈ ಆಟಗಾರನ ಬದುಕಿನಲ್ಲಿ ಅನುಭವಿಸಿರುವ ನೋವುಗಳು ಅಷ್ಟಿಷ್ಟಲ್ಲ.

ಮದ್ಯದ ಗೀಳು, ವಿಚ್ಛೇದನದ ನೋವು, ಪ್ಯಾನಿಕ್ ಅಟ್ಯಾಕ್ ಮತ್ತು ರಿಹ್ಯಾಬ್​ ಸೆಂಟರ್​ನಲ್ಲಿ ಕಳೆದ 26 ದಿನಗಳ ಕಹಿ ನೆನಪುಗಳನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಯುಜಿ ಮುಕ್ತಕಂಠದಿಂದ ಹಂಚಿಕೊಂಡಿದ್ದಾರೆ.

ಮೈದಾನದಲ್ಲಿ ನಗು, ಒಳಗೊಳಗೆ ನರಕ!

ಐಪಿಎಲ್‌ನಲ್ಲಿ ಬರೋಬ್ಬರಿ 233 ವಿಕೆಟ್ ಕಿತ್ತು ಜಸ್ಪ್ರೀತ್ ಬೂಮ್ರಾ, ಲಸಿತ್ ಮಲಿಂಗರಂತಹ ದಿಗ್ಗಜರನ್ನೇ ಹಿಂದಿಕ್ಕಿರುವ ಚಾಹಲ್, ವೈಯಕ್ತಿಕ ಜೀವನದಲ್ಲಿ ಎದುರಾದ ಬಿರುಗಾಳಿ ಇವರ ಬದುಕನ್ನೇ ತಲ್ಲಣಗೊಳಿಸಿತ್ತು. "ಮೈದಾನದಲ್ಲಿ ಎಲ್ಲರನ್ನೂ ನಗಿಸೋ ನೀನು, ನಿನ್ನ ವೈಯಕ್ತಿಕ ಜೀವನದ ಬಿಕ್ಕಟ್ಟಿನಲ್ಲಿ ಯಾರಾದ್ರೂ ನಿನ್ನ ಜತೆಗಿದ್ರಾ?" ಎಂದು ಆಕಾಶ್ ಚೋಪ್ರಾ ಕೇಳಿದ ಪ್ರಶ್ನೆಗೆ ಚಾಹಲ್ ಭಾವುಕರಾಗಿ, ಆ ಕಠಿಣ ಸಮಯದಲ್ಲಿ ನನ್ನ ಬೆನ್ನಿಗೆ ನಿಂತಿದ್ದು ನನ್ನ ಕುಟುಂಬ ಮತ್ತು ಆಪ್ತ ಸ್ನೇಹಿತರು ಮಾತ್ರ ಎಂದು ಹೇಳಿಕೊಂಡಿದ್ದಾರೆ.

26 ದಿನಗಳ ರಿಹ್ಯಾಬ್ ಸೆಂಟರ್ ವಾಸ!

ಮದ್ಯಪಾನವನ್ನು ಸಂಪೂರ್ಣವಾಗಿ ಬಿಡಲು ಯಾವಾಗ ತೀರ್ಮಾನಿಸಿದಿರಿ ಎಂಬ ಪ್ರಶ್ನೆಗೆ ಚಾಹಲ್, ಕಳೆದ ವರ್ಷ ಕೌಂಟಿ ಕ್ರಿಕೆಟ್ ಆಡಿದ ನಂತರ ಪರಿಸ್ಥಿತಿ ನನ್ನ ಕೈಮೀರಿ ಹೋಗಿತ್ತು. ಕುಡಿಯುವ ಚಟ ವಿಪರೀತ ಹಂತಕ್ಕೆ ತಲುಪಿತ್ತು. ಇದರಿಂದ ಹೊರಬರಲೇಬೇಕೆಂದು ನಿರ್ಧರಿಸಿ ರಿಹ್ಯಾಬ್ ಸೆಂಟರ್​​ವೊಂದನ್ನು ಸೇರಿಕೊಂಡೆ.

ಅಲ್ಲಿ 26 ದಿನಗಳ ಕಾಲ ಕಳೆದೆ. ಆ ಒಂದು ನಿರ್ಧಾರ ನನ್ನ ಬದುಕನ್ನು ಸಂಪೂರ್ಣ ಬದಲಿಸಿತು. ನನ್ನಲ್ಲಿ ಪ್ರಬುದ್ಧತೆ ಬಂತು, ಭಾವನೆಗಳು ಹತೋಟಿಗೆ ಬಂದವು. ಕಠಿಣ ಫೀಲ್ಡಿಂಗ್, ಜಿಮ್ ಮತ್ತು ತರಬೇತಿಯನ್ನು ಮೊದಲಿನಂತೆ ಮಾಡಲು ಸಾಧ್ಯವಾಯಿತು ಎಂದಿದ್ದಾರೆ.

ಆರಂಭದ ದಿನಗಳಲ್ಲಿ ಪಾರ್ಟಿಗಳಿಗೆ ಹೋಗುವ ಹವ್ಯಾಸವಿತ್ತು. ಆ ಸಂದರ್ಭದಲ್ಲಿ ಆರ್‌ಸಿಬಿ ಆಟಗಾರ ಎಬಿ ಡಿವಿಲಿಯರ್ಸ್, 'ಜೀವನದಲ್ಲಿ ಬ್ಯಾಲೆನ್ಸ್ ಬಹಳ ಮುಖ್ಯ' ಎಂದು ಬುದ್ಧಿವಾದ ಹೇಳಿದ್ದರಂತೆ. ಆದರೆ, ನನ್ನ ಡಿವೋರ್ಸ್ ಆದ ನಂತರ ಪರಿಸ್ಥಿತಿ ಕೈಮೀರಿತು. ಮಾನಸಿಕವಾಗಿ ನಾನು ಸಂಪೂರ್ಣ ಕುಸಿದುಹೋದೆ.

ಈ ಕೆಟ್ಟ ಹಾದಿಯಲ್ಲೇ ಮುಂದುವರಿದರೆ ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಕ್ರಿಕೆಟ್ ಹಾಳಾಗುತ್ತದೆ ಎಂದು ಭಯವಾಯಿತು. ಹಾಗಾಗಿಯೇ ಆ ಜೀವನಕ್ಕೆ ಪೂರ್ಣವಿರಾಮ ಇಟ್ಟೆ. ಈಗ ನಾನು ನಿಜವಾಗಿಯೂ ನೆಮ್ಮದಿಯಾಗಿದ್ದೇನೆ ಎಂದು ಚಾಹಲ್ ಹೇಳಿದ್ದಾರೆ.

ತೀವ್ರ ಪ್ಯಾನಿಕ್ ಅಟ್ಯಾಕ್!

ವೈಯಕ್ತಿಕ ಬದುಕಿನ ನೋವುಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದ್ದಾಗ ಆದ ಯಾತನೆಯನ್ನು ವಿವರಿಸಿದ ಚಾಹಲ್, ನಾವು ಸೆಲೆಬ್ರಿಟಿಗಳಾದಾಗ ಪ್ರತಿಯೊಬ್ಬರೂ ನಮ್ಮ ಬಗ್ಗೆ ಏನೇನೋ ಮಾತನಾಡುತ್ತಾರೆ. ಜಡ್ಜ್ ಮಾಡುತ್ತಾರೆ. ಅದು ನನ್ನ ಆಟದ ಮೇಲೂ ಪರಿಣಾಮ ಬೀರಿತು.

ಆ ವರ್ಷ ಮಾನಸಿಕವಾಗಿ ಕುಗ್ಗಿದ್ದರಿಂದ ನಾನು ಕೇವಲ ಎರಡು ಪಂದ್ಯಗಳನ್ನಷ್ಟೇ ಆಡಿದೆ. ನಾನು ನೂರಕ್ಕೆ ನೂರರಷ್ಟು ಫಿಟ್ ಇರದಿದ್ದಾಗ ತಂಡಕ್ಕೆ ನನ್ನಿಂದ ಹೊರೆಯಾಗುವುದು ಇಷ್ಟವಿರಲಿಲ್ಲ. ಹಾಗಾಗಿ ಬ್ರೇಕ್ ತೆಗೆದುಕೊಂಡೆ ಎಂದಿದ್ದಾರೆ.

ಇದೇ ವೇಳೆ ತಮಗಾಗುತ್ತಿದ್ದ ಪ್ಯಾನಿಕ್ ಅಟ್ಯಾಕ್‌ನ ಭೀಕರತೆಯನ್ನು ಬಿಚ್ಚಿಟ್ಟ ಅವರು, ಆತಂಕ ಶುರುವಾದಾಗ ಹೃದಯದ ಬಡಿತ ಎಗ್ಗಿಲ್ಲದೆ ಹೆಚ್ಚಾಗುತ್ತಿತ್ತು. ಪ್ಯಾನಿಕ್ ಅಟ್ಯಾಕ್ ಆದಾಗ ನನ್ನ ಮುಖದ ಸ್ನಾಯುಗಳು ಬಿಗಿದುಕೊಳ್ಳುತ್ತಿದ್ದವು. ತುಟಿ ಒಂದು ಬದಿಗೆ ಎಳೆದಂತಾಗಿ ನನಗೆ ಮಾತನಾಡಲೂ ಬರುತ್ತಿರಲಿಲ್ಲ. ಏನೋ ಸರಿಯಿಲ್ಲ ಎಂಬುದು ನೋಡಿದವರಿಗೆ ಸ್ಪಷ್ಟವಾಗಿ ಗೊತ್ತಾಗಿಬಿಡುತ್ತಿತ್ತು.

ಆತಂಕ ಇಷ್ಟೊಂದು ಭೀಕರವಾಗಿರುತ್ತದೆಯೇ ಎಂದು ನನಗಾಗಲೇ ತಿಳಿದಿದ್ದು. ಸೋಷಿಯಲ್ ಮೀಡಿಯಾದಲ್ಲಿ ಜನರು ಏನೇನೋ ಮಾತನಾಡುತ್ತಾರೆ, ಎಲ್ಲರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಅರಿತು ಎಲ್ಲವನ್ನೂ ಮರೆತು ಕ್ರಿಕೆಟ್ ಕಡೆಗೆ ಮುಖ ಮಾಡಿದೆ ಎಂದಿದ್ದಾರೆ, (ಏಜೆನ್ಸೀಸ್​).