

ವೈರಲ್: ಜಮ್ಮು-ಕಾಶ್ಮೀರದ ಹಿರಿಯ ಐಎಎಸ್ ಅಧಿಕಾರಿ ಕುಮಾರ್ ರಾಜೀವ್ ರಂಜನ್, ತಮ್ಮ ಇಲಾಖೆಗೆ ಕೆಳಸ್ತರದ ಮಹಿಳಾ ಅಧಿಕಾರಿಗೆ ಅವಾಚ್ಯ ಪದಗಳಿಂದ ನಿಂದಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ದೇಶದಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿದೆ.
ಈ ವಿಡಿಯೋನಲ್ಲಿ ಕಾಣಿಸಿಕೊಂಡಿರುವ ಪುರುಷ ಐಎಎಸ್ ಅಧಿಕಾರಿಯನ್ನು, ರಾಜ್ಯ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಕುಮಾರ್ ರಾಜೀವ್ ರಂಜನ್ ಎಂದು ಗುರುತಿಸಲಾಗಿದ್ದರೆ, ಇತ ಅಸಭ್ಯವಾಗಿ ನಡೆದುಕೊಂಡ ಮಹಿಳಾ ಅಧಿಕಾರಿಯನ್ನು ಕಾರ್ಮಿಕ ಇಲಾಖೆಯ ಸಹಾಯಕ ನಿರ್ದೇಶಕಿ ಬೀನಿಶ್ ವಾನಿ ಎಂದು ಹೇಳಲಾಗುತ್ತಿದೆ.
ಸೋಷಿಯಲ್ ಮೀಡಿಯಾನಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ, ಇಲಾಖೆಯ ಕೆಲ ವಿಷಯಗಳ ಬಗ್ಗೆ ವರ್ಚುವಲ್ ಮೀಟಿಂಗ್ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ, ರಾಜ್ಯ ಸರ್ಕಾರದ ಮಿಷನ್ ಯುವಾ ಎಂಬ ಯೋಜನೆ ಸರಿಯಾಗಿ ಕಾರ್ಯರೂಪಕ್ಕೆ ಬರದ ಹಿನ್ನಲೆ ರಾಜೀವ್ ರಂಜನ್, ಬೀನಿಶ್ ಅವರ ಮೇಲೆ ರೇಗಿದ್ದಾರೆ. ವಿಳಂಬಕ್ಕೆ ಕಾರಣ ನೀಡಲು ಪ್ರಾರಂಭಿಸಿದಾಗ, ಐಎಎಸ್ ಅಧಿಕಾರಿ, ಮಹಿಳೆ ಮೇಲೆ ಅವಾಚ್ಯ ಪದಗಳನ್ನು ಪ್ರಯೋಗಿಸಿದ್ದಾರೆ. ಆಗ, ಬೀನಿಶ್, ಸರ್ ನೀವು ನನ್ನ ಜತೆ ಈ ರೀತಿ ಮಾತನಾಡಬೇಡಿ ಎಂದಿದ್ದಾರೆ. ಆಗ, ನಾನು ನಿನ್ನ ಬಾಸ್, ನಾನು ಇದೇ ರೀತಿ ಮಾತನಾಡುತ್ತೇನೆಂದು ರಾಜೀವ್ ರಂಜನ್ ಹೇಳಿದ್ದಾರೆ.
ಈ ವಿಡಿಯೋ ವೈರಲ್ ಆಗಿ ರಾಜೀವ್ ರಂಜನ್ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ಕೆಲವೊಂದಿಷ್ಟು ಜನ ಇದೊಂದು ಕೃತಕ ಬುದ್ದಿಮತ್ತೆ ಸಹಾಯದಿಂದ ಸೃಷ್ಟಿಸಿರುವ ವಿಡಿಯೋ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಅಧಿಕಾರಿ ಬೀನಿಶ್ ವಾನಿ, ಇದು ಯಾವುದೇ ಎಐ ವಿಡಿಯೋ ಅಲ್ಲ, ಬದಲಾಗಿ ವರ್ಚುವಲ್ ಮೀಟಿಂಗ್ನಲ್ಲಿ ನನ್ನ ಮೇಲಾಧಿಕಾರಿ ನನ್ನ ಮೇಲೆ ರೇಗಿದ, ಅಸಹ್ಯಕರವಾಗಿ ನಡೆದುಕೊಂಡ ಘಟನೆಯಾಗಿದೆ ಎಂದಿದ್ದಾರೆ. ಯಾವುದೇ ಕ್ಷೇತ್ರದಲ್ಲಿಯೇ ಆಗಲೀ, ಮಹಿಳೆಯರಿಗೆ ಸರಿಯಾಗಿ ಗೌರವ ನೀಡುವ, ಆಕೆಯ ಮಾನಕಳೆಯುವ ಕೆಲಸ ಆಗಕೂಡದೆಂದು ಬೀನಿಶ್ ವಿನಂತಿಕೊಂಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ, ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದು, ಐಎಎಸ್ ಅಧಿಕಾರಿಗಳು, ರಾಜ್ಯದ ಅಧಿಕಾರ ಮೇಲೆ ತಮ್ಮ ದರ್ಪ ತೋರಿಸಬಾರದು. ಇದರಿಂದ ಆಡಳಿತ ಯಂತ್ರದಲ್ಲಿ ವ್ಯತ್ಯಯ ಉಂಟಾಗುತ್ತದೆ. ಹಾಗೆಯೇ ಒಬ್ಬ ಮಹಿಳಾ ಅಧಿಕಾರಿಯೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕೆಂಬ ಸೌಜನ್ಯವಿರಬೇಕು. ನಾನು ಈ ಘಟನೆಯನ್ನು ಖಂಡಿಸುತ್ತೇನೆ ಹಾಗೂ ಆ ಅಧಿಕಾರಿ ವಿರುದ್ಧ ಕಠಣ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯ ಕಾರ್ಯದರ್ಶಿಯಲ್ಲಿ ನಿವೇಧಿಸುತ್ತೇನೆಂದು ಹೇಳಿದ್ದಾರೆ.
ವಿಡಿಯೋ ವೈರಲ್ ಆಗಿ, ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ವಿವಾದಿತ ಅಧಿಕಾರಿ, ಕುಮಾರ್ ರಾಜೀವ್ ರಂಜನ್, ತಮ್ಮ ವರ್ತನೆಯನ್ನು ಮನ್ನಿಸಬೇಕೆಂದು ಕೋರಿದ್ದಾರೆ. ಆ ದಿನ ಮೀಟಿಂಗ್ನಲ್ಲಿ ಎಷ್ಟು ಬಾರಿ ಪ್ರಶ್ನಿಸುತ್ತಿದ್ದರೂ, ಆ ಮಹಿಳಾ ಅಧಿಕಾರಿ ಉತ್ತರಿಸುತ್ತಿರಲಿಲ್ಲ. ನಾನು, ನನ್ನ ಮೇಲಾಧಿಕಾರಿಗಳಿಗೆ ಉತ್ತರಿಸಬೇಕಾಗುತ್ತದೆ. ಆದರೆ, ಆ ಸಂದರ್ಭದಲ್ಲಿ ನಾನು ನನ್ನ ತಾಳ್ಮೆ ಕಳೆದುಕೊಳ್ಳಬಾರದಿತ್ತು ಎಂದಿದ್ದಾರೆ, (ಏಜೆನ್ಸೀಸ್).