ವೈಭವ್​, ಅಭಿಷೇಕ್​ ಪ್ರತಿಭೆಗೆ... ಬಿಸಿಸಿಐ ಆಯ್ಕೆಗಾರರಿಗೆ ಈ ತಪ್ಪು ಮಾಡದಂತೆ 'ವರ್ಲ್ಡ್​ಕಪ್​ ಹೀರೋ' ಯುವಿ ಕಿವಿಮಾತು | Yuvraj Singh  
ಕ್ರಿಕೆಟ್

ವೈಭವ್​, ಅಭಿಷೇಕ್​ ಪ್ರತಿಭೆಗೆ... ಬಿಸಿಸಿಐ ಆಯ್ಕೆಗಾರರಿಗೆ ಈ ತಪ್ಪು ಮಾಡದಂತೆ 'ವಿಶ್ವ​ಕಪ್​ ಹೀರೋ' ಯುವಿ ಕಿವಿಮಾತು | Yuvraj Singh

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಸ್ಟಾರ್​ ಆಟಗಾರ, 2011ರ ವಿಶ್ವಕಪ್​ನ ಅನ್​ಸಂಗ್​ ಹೀರೋ ಯುವರಾಜ್ ಸಿಂಗ್, ಇದೀಗ ಟೀಮ್ ಇಂಡಿಯಾದ ಯುವ ಬ್ಯಾಟ್ಸ್​ಮನ್​ಗಳಾದ ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್​ ಶರ್ಮಾ ವಿಚಾರದಲ್ಲಿ ಬಿಸಿಸಿಐ ಆಯ್ಕೆಗಾರರ ​​ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

50 ಓವರ್‌ಗಳ ಫಾರ್ಮೆಟ್​

ಪಿಟಿಐ ಜತೆಗಿನ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ ಯುವಿ, "ಟಿ20 ಕ್ರಿಕೆಟ್​ನಲ್ಲಿ ತಂಡದ ಪರ ಅದ್ಭುತ ಪ್ರದರ್ಶನ ನೀಡುತ್ತಿರುವ ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಅವರನ್ನು ತಕ್ಷಣವೇ ಏಕದಿನ ತಂಡಕ್ಕೂ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ, ನೀವು ಅವರ ಪ್ರತಿಭೆಯನ್ನು ವ್ಯರ್ಥ ಮಾಡಿದಂತಾಗುತ್ತದೆ. ಈ ಯುವ ಆಟಗಾರರನ್ನು 50 ಓವರ್‌ಗಳ ಮಾದರಿಗೆ ಆಯ್ಕೆ ಮಾಡದಿರುವುದು ಅವರ ಪ್ರತಿಭೆಗೆ ನೀವು ಮಾಡುವ ಅನ್ಯಾಯವಾಗಲಿದೆ" ಎಂದಿದ್ದಾರೆ.

"ನಮ್ಮಲ್ಲಿ ಈಗಾಗಲೇ ಏಕದಿನ ಫಾರ್ಮೆಟ್​ನಲ್ಲಿ ಅತ್ಯುತ್ತುಮ ಆಟಗಾರರಿದ್ದಾರೆ. ಹೀಗಾಗಿ, ವೈಭವ್​, ಅಭಿಷೇಕ್​ ಶರ್ಮಾಗೆ ಈಗಲೇ ತಂಡದಲ್ಲಿ ಸ್ಥಾನ ನೀಡುವುದು ಕಷ್ಟಸಾಧ್ಯ ಎಂಬುದು ನನಗೆ ಗೊತ್ತಿದೆ. ಆದರೆ, ಯುವ ಬ್ಯಾಟರ್‌ಗಳು ನೀಡುತ್ತಿರುವ ಸ್ಫೋಟಕ ಪ್ರದರ್ಶನವನ್ನು ನೋಡಿದಾಗ, ಅವರಿಗೂ ಶೀಘ್ರದಲ್ಲೇ ಟೀಮ್​ನಲ್ಲಿ ಸ್ಥಾನ ಸಿಗಬೇಕು ಎಂದು ನನಗಿಸುತ್ತೆ. ಪ್ರಸ್ತುತ, ಅಭಿಷೇಕ್​ ಏನೆಲ್ಲ ಸಾಧಿಸಿದ್ದಾರೋ, ಅದೆಲ್ಲವೂ ಅವರ ಕಠಿಣ ಪರಿಶ್ರಮದಿಂದಾಗಿ ಮತ್ತು ಇದರ ಕ್ರೆಡಿಟ್ ಸಂಪೂರ್ಣವಾಗಿ ಅವರಿಗೆ ಸಲ್ಲುತ್ತದೆ" ಎಂದು ಹೇಳಿದ್ದಾರೆ.

ಕಿರಿಯ ವಯಸ್ಸಿನಲ್ಲೇ ಸ್ಫೋಟಕ ಬ್ಯಾಟಿಂಗ್​

ಪ್ರಸ್ತುತ ಟಿ20 ಕ್ರಿಕೆಟ್‌ನಲ್ಲಿ ಅಭಿಷೇಕ್ ಶರ್ಮಾ ವಿಶ್ವದ ನಂಬರ್ ಒನ್ ಬ್ಯಾಟರ್ ಆಗಿದ್ದರೂ, ಅವರ ಆಟವು ಟಿ20 ಕ್ರಿಕೆಟ್​ಗೆ ಮಾತ್ರ ಸೀಮಿತವಾಗಿದೆ. ಮತ್ತೊಂದೆಡೆ, ಅತ್ಯಂತ ಕಿರಿಯ ವಯಸ್ಸಿನಲ್ಲೇ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಇಡೀ ವಿಶ್ವದಲ್ಲೇ ಹೊಸ ಸಂಚಲನ ಮೂಡಿಸುತ್ತಿರುವ ವೈಭವ್ ಸೂರ್ಯವಂಶಿ ಕೂಡ ತಂಡದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿದ್ದಾರೆ. ಏಕದಿನ ಫಾರ್ಮೆಟ್​ನಲ್ಲಿ, ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರಂತಹ ಅತ್ಯುತ್ತಮ ಆರಂಭಿಕ ಜೋಡಿ ಈಗಾಗಲೇ ತಂಡದಲ್ಲಿ ಬೇರೂರಿದೆ. ಜತೆಗೆ ಯಶಸ್ವಿ ಜೈಸ್ವಾಲ್ ಕೂಡ ಅದ್ಭುತವಾಗಿ ಆಡುತ್ತಿದ್ದರೂ, ಅಂತಿಮ ತಂಡದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಯುವ ಆಟಗಾರರನ್ನು ಆಡಿಸುವುದು ಆಯ್ಕೆಗಾರರಿಗೆ ನಿಜಕ್ಕೂ ದೊಡ್ಡ ಸವಾಲೇ ನಿಜ.

ಅಂಕಿ-ಅಂಶಗಳನ್ನು ಗಮನಿಸಿದರೆ, ಅಭಿಷೇಕ್ ಶರ್ಮಾ 'ಲಿಸ್ಟ್-ಎ' (List-A) ಕ್ರಿಕೆಟ್‌ನಲ್ಲಿ 68 ಇನ್ನಿಂಗ್ಸ್‌ಗಳಲ್ಲಿ 33.78 ಸರಾಸರಿಯೊಂದಿಗೆ 2196 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 4 ಶತಕಗಳು ಮತ್ತು 8 ಅರ್ಧಶತಕಗಳು ಸೇರಿವೆ. ಇದು ಟಿ20 ಮಾದರಿಗೆ ಉತ್ತಮವಾಗಿದ್ದರೂ, ಏಕದಿನ ಕ್ರಿಕೆಟ್‌ನ ಅಗ್ರ ಕ್ರಮಾಂಕಕ್ಕೆ ಇದು ಸಾಲುವುದಿಲ್ಲ ಎಂದು ಪರಿಗಣಿಸಲಾಗಿದೆ. ವೈಭವ್ ಸೂರ್ಯವಂಶಿ ಅವರು ಇಲ್ಲಿಯವರೆಗೆ ಕೆಲವೇ ಕೆಲವು ಏಕದಿನ ಪಂದ್ಯಗಳನ್ನು ಆಡಿದ್ದರೂ, 43.38 ಸರಾಸರಿಯೊಂದಿಗೆ 564 ರನ್‌ಗಳನ್ನು ದಾಖಲಿಸಿದ್ದಾರೆ.

ಮುಖ್ಯವಾಗಿ, ಅವರ 176.80 ಸ್ಟ್ರೈಕ್ ರೇಟ್ ಎಲ್ಲರನ್ನೂ ಅಚ್ಚರಿಗೊಳಿಸುವಂತಿದೆ. ಪ್ರಸ್ತುತ, ಭಾರತೀಯ ಕ್ರಿಕೆಟ್‌ನಲ್ಲಿ ಬ್ಯಾಟ್ಸ್​ಮನ್​ ಪ್ರತಿಭೆಗಳಿಗೆ ಕೊರತೆಯಿಲ್ಲದಿದ್ದರೂ, ತಂಡದಲ್ಲಿ ಸೀಮಿತ ಸ್ಥಾನಗಳಿರುವುದರಿಂದ ಆಯ್ಕೆಗಾರರಿಗೆ ಯಾರನ್ನು ಆಡಿಸಬೇಕು, ಯಾರನ್ನು ಕೂರಿಸಬೇಕು ಎಂಬುದೇ ದೊಡ್ಡ ತಲೆನೋವಾಗಿ ಕಾಡಲಾರಂಭಿಸಿದೆ. ಈ ಮಧ್ಯೆ, ಈಗ ಯುವರಾಜ್​ ಸಿಂಗ್ ಕೊಟ್ಟಿರುವ ಹೇಳಿಕೆಗಳು ಆಯ್ಕೆಗಾರರನ್ನು ಒತ್ತಡಕ್ಕೆ ಸಿಲುಕಿಸಿದೆ ಎಂದೇ ಹೇಳಬಹುದು,(ಏಜೆನ್ಸೀಸ್).