ವಡೋದರಾ: ಭಾರತದ ಮಾಜಿ ಕ್ರಿಕೆಟಿಗ ಹಾಗೂ ತೃಣಮೂಲ ಕಾಂಗ್ರೆಸ್ ವಿರುದ್ಧ ಬಂಡಾಯ ಸಾರಿ ಹೊರ ಬಂದಿರುವ ಸಂಸದ ಯೂಸುಫ್ ಪಠಾಣ್ (Yusuf Pathan) ಅವರಿಗೆ ವಡೋದರಾದಲ್ಲಿರುವ 978 ಚದರ ಮೀಟರ್ ವಿವಾದಿತ ಸರ್ಕಾರಿ ಭೂಮಿಯಲ್ಲಿ 500 ಚದರ ಮೀಟರ್ ಉಚಿತವಾಗಿ ಮತ್ತು ಉಳಿದ ಭಾಗವನ್ನು ಭಾರಿ ರಿಯಾಯಿತಿ ದರದಲ್ಲಿ ನೀಡುವ ಗುಜರಾತ್ ಸರ್ಕಾರದ ಪ್ರಸ್ತಾವನೆಗೆ ವಡೋದರಾ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಬುಧವಾರ ಅನುಮೋದನೆ ನೀಡಿದೆ.
ಕಾಂಗ್ರೆಸ್ ಸದಸ್ಯರ ಭಾರೀ ವಿರೋಧ ಮತ್ತು ಪ್ರತಿಭಟನೆಯ ನಡುವೆಯೂ ಬಿಜೆಪಿ ಹಿಡಿತದಲ್ಲಿರುವ ಮಹಾನಗರ ಪಾಲಿಕೆಯು ಬಹುಮತದ ಮೂಲಕ ಈ ನಿರ್ಣಯವನ್ನು ಅಂಗೀಕರಿಸಿದೆ.
ಈ ಪ್ರಸ್ತಾವನೆಯ ಪ್ರಕಾರ, ವಡೋದರಾದ ತಂಡಲ್ಜಾ ಪ್ರದೇಶದಲ್ಲಿರುವ ಯೂಸುಫ್ ಪಠಾಣ್ ನಿವಾಸಕ್ಕೆ ಹೊಂದಿಕೊಂಡಿರುವ ಒಟ್ಟು 978 ಚದರ ಮೀಟರ್ ನಿವೇಶನದಲ್ಲಿ, 500 ಚದರ ಮೀಟರ್ ಭೂಮಿಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ಉಳಿದ 478 ಚದರ ಮೀಟರ್ ಜಾಗಕ್ಕೆ ಮಾರುಕಟ್ಟೆ ಮೌಲ್ಯದ ಶೇ. 55 ರಷ್ಟು ಮಾತ್ರ ಪಾವತಿಸುವಂತೆ ರಿಯಾಯಿತಿ ನೀಡಲಾಗಿದೆ.
ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್ ಸದಸ್ಯರು ಈ ಪ್ರಸ್ತಾವನೆಯ ವಿರುದ್ಧ ಮತ ಚಲಾಯಿಸಿ ತೀವ್ರ ವಾಗ್ವಾದ ನಡೆಸಿದರು. ಈ ಕುರಿತು ಪ್ರತಿಕ್ರಿಯಿಸಿದ ಮೇಯರ್ ಗೀತಾ ಮಕ್ವಾನಾ, ವಿರೋಧ ಪಕ್ಷದ ಸದಸ್ಯರು ಪ್ರಸ್ತಾವನೆಯನ್ನು ವಿರೋಧಿಸಿದ್ದರಿಂದ ಸಭೆಯಲ್ಲಿ ಚರ್ಚೆ ನಡೆಯಿತು. ಆದರೆ, ಈ ಪ್ರಸ್ತಾವನೆಯು ರಾಜ್ಯ ಸರ್ಕಾರದಿಂದ ಬಂದಿರುವುದರಿಂದ ನಾವು ಬಹುಮತದ ಮೂಲಕ ಅನುಮೋದನೆ ನೀಡಿದ್ದೇವೆ. ಪಠಾಣ್ ಅವರಿಗೆ ಮಂಜೂರು ಮಾಡಲಾದ ನಿವೇಶನಕ್ಕೆ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಅನ್ವಯಿಸುವ ಬಗ್ಗೆ ಚರ್ಚಿಸಲಾಗಿದೆ. ಅಲ್ಲದೆ, ಈ ಭೂಮಿಯನ್ನು ಯಾವುದೇ ಮೂರನೇ ವ್ಯಕ್ತಿಗೆ ಮಾರಾಟ ಮಾಡದಂತೆ ನಿರ್ಬಂಧ ಹೇರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಭೂಮಿಯನ್ನು 44 ವರ್ಷದ ಮಾಜಿ ಕ್ರಿಕೆಟಿಗನಿಗೆ ಮಂಜೂರು ಮಾಡಿರುವ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದ್ದು, ಇದನ್ನು ದ್ವಂದ್ವ ನೀತಿ ಎಂದು ಕರೆದಿದೆ. ಪಶ್ಚಿಮ ಬಂಗಾಳದ ಬೆಹ್ರಾಂಪುರ ಕ್ಷೇತ್ರದಿಂದ 2024ರ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಟಿಕೆಟ್ನಿಂದ ಗೆದ್ದಿದ್ದ ಪಠಾಣ್, ಈ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲಿನ ನಂತರ ಪಕ್ಷದ ಬಂಡಾಯಗಾರರೊಂದಿಗೆ ಗುರುತಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿ ಸರ್ಕಾರ ಅವರಿಗೆ ವಿನಾಯತಿ ನೀಡಿದೆ ಎಂಬ ಆರೋಪಗಳು ಕೇಳಿಬಂದಿವೆ.
2012ರ ಮಾರ್ಚ್ನಲ್ಲಿ ಯೂಸುಫ್ ಪಠಾಣ್ ವಸತಿ ಉದ್ದೇಶಕ್ಕಾಗಿ ತಮ್ಮ ಮನೆಯ ಪಕ್ಕದ ಸರ್ಕಾರಿ ಜಾಗವನ್ನು ಮಂಜೂರು ಮಾಡುವಂತೆ ಪಾಲಿಕೆಗೆ ಮನವಿ ಸಲ್ಲಿಸಿದ್ದರು. ಆಗ ಆ ಭೂಮಿಯ ಮೌಲ್ಯ ಪ್ರತಿ ಚದರ ಮೀಟರ್ಗೆ 52,270 ರೂಪಾಯಿ ನಿಗದಿಯಾಗಿತ್ತು. 2012ರ ಜೂನ್ನಲ್ಲಿ ಬಿಜೆಪಿ ನೇತೃತ್ವದ ಪಾಲಿಕೆಯ ಸ್ಥಾಯಿ ಸಮಿತಿಯು ದೇಶಕ್ಕೆ ಕೀರ್ತಿ ತಂದ ಕ್ರಿಕೆಟಿಗ ಎಂಬ ಕಾರಣ ನೀಡಿ ಭೂಮಿ ನೀಡಲು ಶಿಫಾರಸು ಮಾಡಿತ್ತು. ಆದರೆ, 2014ರ ಜೂನ್ನಲ್ಲಿ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಈ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಆದರೂ ಪಠಾಣ್ ಆ ಜಾಗವನ್ನು ತಮ್ಮ ವಶದಲ್ಲೇ ಇಟ್ಟುಕೊಂಡಿದ್ದರು.
2024ರ ಜೂನ್ನಲ್ಲಿ ಪಠಾಣ್ ಟಿಎಂಸಿ ಸಂಸದರಾಗಿ ಆಯ್ಕೆಯಾದ ಕೆಲವೇ ವಾರಗಳಲ್ಲಿ, ಪಾಲಿಕೆಯು ಆ ಜಾಗವನ್ನು ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಪಠಾಣ್ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರಾದರೂ, ಏಕಸದಸ್ಯ ಪೀಠವು ಅವರ ಅರ್ಜಿಯನ್ನು ವಜಾಗೊಳಿಸಿತ್ತು. ನಂತರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿ, ಬಳಿಕ ಅದನ್ನು ಹಿಂಪಡೆದಿದ್ದರು.
ಮಂಗಳವಾರ ಮಾತನಾಡಿದ್ದ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚಾವ್ಡಾ, 2024ರ ಲೋಕಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆ ಪಠಾಣ್ ಈ ವಿವಾದಿತ ನಿವೇಶನವನ್ನು ತಮ್ಮ ಸ್ವಂತ ಆಸ್ತಿ ಎಂದು ಘೋಷಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 2014ರಲ್ಲೇ ರಾಜ್ಯ ಸರ್ಕಾರ ಈ ಭೂಮಿಯನ್ನು ಪಠಾಣ್ ಅವರಿಗೆ ನೀಡಬಾರದು ಎಂದು ಆದೇಶಿಸಿದ್ದರೂ, ಅದನ್ನು ಪ್ರಮಾಣಪತ್ರದಲ್ಲಿ ತಮ್ಮದೆಂದು ಘೋಷಿಸಿರುವುದು ಗಂಭೀರ ಅಪರಾಧವಾಗಿದೆ. ಇದೀಗ ಗುಜರಾತ್ ಸರ್ಕಾರ ಮತ್ತು ಪಾಲಿಕೆಯು ಪಠಾಣ್ ಅವರ ಅಕ್ರಮ ಒತ್ತುವರಿಯನ್ನು ಕಡೆಗಣಿಸಿ, ದಂಡವನ್ನು ಮನ್ನಾ ಮಾಡಿ ಬಂಡಾಯ ಟಿಎಂಸಿ ಸಂಸದನಿಗೆ ಈ ಭೂಮಿಯನ್ನು ಉಡುಗೊರೆಯಾಗಿ ನೀಡುತ್ತಿವೆ ಎಂದು ಚಾವ್ಡಾ ಕಿಡಿಕಾರಿದ್ದಾರೆ(ಏಜೆನ್ಸೀಸ್).