ನಾನು ಆರ್‌ಸಿಬಿ ಅಭಿಮಾನಿ ಎಂದ ಜರ್ಮನ್ ಬೆಡಗಿ
- ಇನ್‌ಸ್ಟಾಗ್ರಾಮ್‌ನಲ್ಲಿ ಲಿಜ್‌ಲಾಜ್ ಫೋಟೊವನ್ನು ಲೈಕ್ ಮಾಡಿ ಅನ್‌ಲೈಕ್ ಮಾಡಿದ ವಿರಾಟ್ ಕೊಹ್ಲಿ
- ಈ ಬಗ್ಗೆ ಮಾತನಾಡಿದ ಲಿಜ್‌ಲಾಜ್
- ನಾನು ಆರ್‌ಸಿಬಿ ಅಭಿಮಾನಿ ಎಂದ ಜರ್ಮನ್ ಬೆಡಗಿ
ವೈರಲ್: ವಿರಾಟ್ ಕೊಹ್ಲಿ ಮೈದಾನದಲ್ಲಿ ಅಬ್ಬರಿಸಲಿ ಅಥವಾ ಬಿಡಲಿ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಕೊಹ್ಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಲಿಜ್‌ಲಾಜ್ (Virat Kohli Likes LizLaj) ಎಂಬ ಯುವತಿಯ ಫೋಟೋ ಒಂದನ್ನು ಲೈಕ್ ಮಾಡಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಅದನ್ನು ಅನ್‌ಲೈಕ್ ಮಾಡಿದ್ದರು. ಅಷ್ಟರಲ್ಲಾಗಲೇ ಇದು ನೆಟ್ಟಿಗರ ಕಣ್ಣಿಗೆ ಬಿದ್ದಿತ್ತು. ಇದರ ಬೆನ್ನಲ್ಲೇ ನಟಿ ಅವನೀತ್ ಕೌರ್ ವಿಚಾರವೂ ಸೇರಿಕೊಂಡು ದೊಡ್ಡ ಮಟ್ಟದ ಗೊಂದಲ ಸೃಷ್ಟಿಯಾಗಿತ್ತು.
ಇವತ್ತು ಎಲ್ಲಾ ಕಡೆ ನನ್ನದೆ ಸುದ್ದಿ!
ಈ ಇಡೀ ಘಟನೆಯ ಬಗ್ಗೆ ಮಾತನಾಡಿದ ಲಿಜ್‌ಲಾಜ್, ನಾನು ಬೆಳಿಗ್ಗೆ ಎದ್ದಾಗ ಅಕ್ಷರಶಃ ಆಘಾತಕ್ಕೊಳಗಾಗಿದ್ದೆ. ನನ್ನ ಡಿಎಂ (Direct Message) ಫುಲ್ ಆಗಿತ್ತು. ಕೊಹ್ಲಿ ಅವರು ನನ್ನ ಫೋಟೋ ಯಾವಾಗ ಲೈಕ್ ಮಾಡಿದರು ಎಂಬುದು ನನಗೂ ತಿಳಿದಿರಲಿಲ್ಲ. ಸುದ್ದಿಗಳ ಮೂಲಕವೇ ನಾನು ಇದನ್ನು ತಿಳಿದುಕೊಂಡೆ. ನನಗೆ ಇದರಿಂದ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.
ಭಾರತದ ಪ್ರವಾಸ ಮತ್ತು ಆರ್‌ಸಿಬಿ ಮೇಲಿನ ಪ್ರೀತಿ
ಲಿಜ್‌ಲಾಜ್ ಮೂಲತಃ ದಕ್ಷಿಣ ಆಫ್ರಿಕಾದಲ್ಲಿ ಜನಿಸಿ, ಜರ್ಮನಿಯಲ್ಲಿ ಬೆಳೆದವರು. ಜರ್ಮನಿಯಲ್ಲಿ ಫುಟ್‌ಬಾಲ್ ಕ್ರೇಜ್ ಹೆಚ್ಚು, ಹೀಗಾಗಿ ಅವರಿಗೆ ಕ್ರಿಕೆಟ್ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಆದರೆ ಕಳೆದ ವರ್ಷ ಅವರು ತನ್ನ ಬೆಂಗಳೂರಿನ ಗೆಳೆಯನನ್ನು ಭೇಟಿ ಮಾಡಲು ಭಾರತಕ್ಕೆ ಬಂದಿದ್ದರಂತೆ.
ನಾನು ಬೆಂಗಳೂರಿಗೆ ಬಂದಾಗ ಎರಡು ವಾರ ಇರಲು ಪ್ಲ್ಯಾನ್ ಮಾಡಿದ್ದೆ. ಆದರೆ ಇಲ್ಲಿನ ಪರಿಸರ ಇಷ್ಟವಾಗಿ ಹಲವು ತಿಂಗಳು ಇಲ್ಲೇ ಉಳಿದೆ. ಕಳೆದ ವರ್ಷ ಐಪಿಎಲ್ ನಡೆಯುತ್ತಿದ್ದಾಗ ನನ್ನ ಸ್ನೇಹಿತರೊಂದಿಗೆ ಆರ್‌ಸಿಬಿ (RCB) ಪಂದ್ಯಗಳನ್ನು ನೋಡಲು ಶುರು ಮಾಡಿದೆ. ಆಗಲೇ ನನಗೆ ವಿರಾಟ್ ಕೊಹ್ಲಿ ಎಂಬ ಅದ್ಭುತ ಆಟಗಾರನ ಪರಿಚಯವಾಗಿದ್ದು. ಈಗ ನಾನು ಆರ್‌ಸಿಬಿಯ ದೊಡ್ಡ ಫ್ಯಾನ್ ಎಂದು ಅವರು ತಮ್ಮ ಭಾರತದ ಪ್ರವಾಸವನ್ನು ನೆನಪಿಸಿಕೊಂಡಿದ್ದಾರೆ.
ಲೈಕ್ ತೆಗೆದಿದ್ದಕ್ಕೆ ಬೇಜಾರಿಲ್ಲ!
ವಿರಾಟ್ ಕೊಹ್ಲಿ ತಮ್ಮ ಫೋಟೋ ಲೈಕ್ ಮಾಡಿ, ನಂತರ ಅನ್‌ಲೈಕ್ ಮಾಡಿದ ಬಗ್ಗೆ ಲಿಜ್‌ಲಾಜ್ ಅವರಿಗೆ ಬೇಸರವಿಲ್ಲವಂತೆ. ಬದಲಿಗೆ ಕೊಹ್ಲಿ ಬಗ್ಗೆ ಅವರಿಗೆ ಕನಿಕರ ಉಂಟಾಗಿದೆ. ಇಲ್ಲ, ನನಗೆ ಅವರ ಬಗ್ಗೆ ಸ್ವಲ್ಪ ವಿಷಾದ (Regret) ಎನಿಸಿತು. ಜನರು ಇಷ್ಟೊಂದು ಸೂಕ್ಷ್ಮವಾಗಿ ಗಮನಿಸಿ ಅದನ್ನು ದೊಡ್ಡ ಸುದ್ದಿ ಮಾಡುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ಬಹುಶಃ ಅವರು ತಪ್ಪಾಗಿ ಲೈಕ್ ಮಾಡಿರಬಹುದು. ಆದರೆ ಅವರು ನನ್ನ ಫೋಟೋ ಇಷ್ಟಪಟ್ಟಿದ್ದಕ್ಕೆ ನಾನು ಕೃತಜ್ಞಳಾಗಿದ್ದೇನೆ ಎಂದು ಲಿಜ್ ಹೇಳಿದ್ದಾರೆ.
ಮುಂದಿನ ಪ್ಲ್ಯಾನ್ ಏನು?
ವ್ಲಾಗರ್ ಮತ್ತು ಸಂಗೀತಗಾರ್ತಿಯಾಗಿರುವ ಲಿಜ್‌ಲಾಜ್‌ಗೆ ಈಗ ಭಾರತದಲ್ಲಿ ಸಾಕಷ್ಟು ಫಾಲೋವರ್ಸ್ ಸಿಕ್ಕಿದ್ದಾರೆ. ನನಗೆ ಭಾರತದಲ್ಲಿ ಸಂಗೀತದ ಅವಕಾಶಗಳು ಸಿಕ್ಕರೆ ಖಂಡಿತ ಬರುತ್ತೇನೆ. ಈ ಬಾರಿಯ ಐಪಿಎಲ್ ನೋಡಲು ಮತ್ತೆ ಬೆಂಗಳೂರಿಗೆ ಬರುವ ಆಸೆಯಿದೆ ಎಂದು ಅವರು ಹೇಳಿದ್ದಾರೆ,(ಏಜನ್ಸೀಸ್).