ಪಾಕಿಸ್ತಾನ ಟಿ20 ವಿಶ್ವಕಪ್ ಬಹಿಷ್ಕರಿಸಿದ್ರೆ ಏನಾಗುತ್ತೆ?
- ಟಿ20 ವಿಶ್ವಕಪ್ ಆಡಲು ಬಾಂಗ್ಲಾದೇಶ ನಿರಾಕರಿಸಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ
- ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಾಂಗ್ಲಾ ಬದಲು ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಿದೆ
- ಬಾಂಗ್ಲಾ ಬೆಂಬಲಕ್ಕೆ ನಿಂತು ತಾವು ಕೂಡ ವಿಶ್ವಕಪ್ ಬಹಿಷ್ಕಾರ ಹಾಕುವ ಬೆದರಿಕೆ ಒಡ್ಡುತ್ತಿದೆ
ನವದೆಹಲಿ: ಭಾರತದಲ್ಲಿ ನಮ್ಮ ಸುರಕ್ಷತೆಯ ಬಗ್ಗೆ ಆತಂಕವಿದೆ ಎಂಬ ನೆಪ ಒಡ್ಡಿ ಟಿ20 ವಿಶ್ವಕಪ್ ಆಡಲು ಬಾಂಗ್ಲಾದೇಶ ನಿರಾಕರಿಸಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಹೀಗಾಗಿ, ಬಾಂಗ್ಲಾದಿಂದ ತೆರವಾಗಿರುವ ಸ್ಥಾನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಿದೆ. ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶವನ್ನು ದೂರ ಇಡುತ್ತಿದ್ದಂತೆ ತನ್ನ ಹೊಟ್ಟೆಗೆ ಬೆಂಕಿ ಬಿದ್ದಂತೆ ಆಡುತ್ತಿರುವ ಪಾಕಿಸ್ತಾನ ( Pakistan ), ಬಾಂಗ್ಲಾ ಬೆಂಬಲಕ್ಕೆ ನಿಂತು ತಾವು ಕೂಡ ವಿಶ್ವಕಪ್ ಬಹಿಷ್ಕಾರ ಹಾಕುವ ಬೆದರಿಕೆ ಒಡ್ಡುತ್ತಿದೆ. ಆದರೆ, ಐಸಿಸಿ ಮಾತ್ರ ಇದ್ಯಾವುದಕ್ಕೂ ಕವಡೆ ಕಾಸಿನ ಬೆಲೆ ನೀಡುತ್ತಿಲ್ಲ.
ಸೋಮವಾರವಷ್ಟೇ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಜತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೋಹ್ಸಿನ್ ನಖ್ವಿ ಸಭೆ ನಡೆಸಿದ್ದಾರೆ. ಆದರೆ, ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ವಿಶ್ವಕಪ್ ಆಡಬೇಕಾ? ಬೇಡವಾ? ಅನ್ನೋ ಗೊಂದಲದಲ್ಲಿ ಪಾಕ್ ಮುಳುಗಿದೆ. ಈ ವಾರದ ಅಂತ್ಯಕ್ಕೆ ಒಂದು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅಂದಹಾಗೆ, ಪಾಕಿಸ್ತಾನಕ್ಕೆ ವಿಶ್ವಕಪ್ ಬಹಿಷ್ಕಾರವು ಕೇವಲ ಒಂದು ಪ್ರತಿಭಟನೆಯಲ್ಲ, ಒಂದು ವೇಳೆ ಬಹಿಷ್ಕಾರದ ನಿರ್ಧಾರ ತೆಗೆದುಕೊಂಡರೆ ಕ್ರಿಕೆಟ್ ವಿಚಾರದಲ್ಲಿ ಪಾಕಿಸ್ತಾನ ಆತ್ಮಹತ್ಯೆ ಮಾಡಿಕೊಂಡಂತೆ.
ಟಿ20 ವಿಶ್ವಕಪ್‌ನಲ್ಲಿ ನಮ್ಮ ತಂಡದ ಭಾಗವಹಿಸುವಿಕೆಯ ಅಂತಿಮ ನಿರ್ಧಾರ ಸರ್ಕಾರದ ಕೈಯಲ್ಲಿದೆ ಎಂದು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಹೇಳುತ್ತಲೇ ಬರುತ್ತಿದ್ದಾರೆ. ಈ ಮೆಗಾ ಟೂರ್ನಮೆಂಟ್ಗಾಗಿ 15 ಸದಸ್ಯರ ತಂಡವನ್ನು ಪಿಸಿಬಿ ಈಗಾಗಾಲೇ ಘೋಷಣೆ ಮಾಡಿದೆ. ಆದರೆ, ಸರ್ಕಾರ ಮಾತ್ರ ಮುಂದುವರಿಯಿರಿ ಎಂಬ ಆದೇಶವನ್ನು ಮಾತ್ರ ಇನ್ನು ನೀಡಿಲ್ಲ. ಹೀಗಾಗಿ, ಪಾಕಿಸ್ತಾನ ಭಾಗವಹಿಸುವಿಕೆ ಇನ್ನೂ ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಆದರೆ, ವಿಶ್ವಕಪ್ ಸಮಯ ಹತ್ತಿರ ಬರುತ್ತಿದೆ. ಮುಂದಿನ 7 ದಿನಗಳ ಒಳಗೆ ಪಾಕಿಸ್ತಾನ ತನ್ನ ನಿಲುವನ್ನು ತಿಳಿಸಲೇಬೇಕಿದೆ. ಆದರೆ, ಪಾಕಿಸ್ತಾನ ಅಷ್ಟು ಸುಲಭವಾಗಿ ಈ ಮೆಗಾ ಟೂರ್ನಿಯಿಂದ ಹೊರಬರಲು ಸಾಧ್ಯವಿಲ್ಲ. ಒಂದು ವೇಳೆ ಬಂದರೆ ಸಾಕಷ್ಟು ತೊಂದರೆ ಸಿಲುಕಬೇಕಾಗುತ್ತದೆ. ಒಂದು ರೀತಿಯಲ್ಲಿ ಪಾಕ್ ಪಾಲಿಗೆ ಆತ್ಮಹತ್ಯೆ ಮಾಡಿಕೊಂಡಂತಾಗುತ್ತದೆ.
ಭಾಗವಹಿಸುವಿಕೆ ಒಪ್ಪಂದ ಮುರಿದಂತೆ
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ನ ಪೂರ್ಣ ಸದಸ್ಯ ರಾಷ್ಟ್ರಗಳು ಈ ಮೆಗಾ-ಈವೆಂಟ್ ಪ್ರಾರಂಭವಾಗುವ ಮೊದಲೇ ಟೂರ್ನಮೆಂಟ್ ಭಾಗವಹಿಸುವಿಕೆ ಒಪ್ಪಂದಕ್ಕೆ (ಟಿಪಿಎ) ಸಹಿ ಹಾಕುತ್ತವೆ. ಒಂದು ವೇಳೆ ಈ ಒಪ್ಪಂದದಿಂದ ಹಿಂದೆ ಸರಿದರೆ, ಪಾಕಿಸ್ತಾನವು ಕಾನೂನುಬದ್ಧ ಒಪ್ಪಂದವನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಇದರ ಪರಿಣಾಮ ಆದಾಯದ ಮೇಲೆ ಒಡೆತ ಬೀಳುತ್ತದೆ. ಅಂದರೆ, ಐಸಿಸಿಯ ವಾರ್ಷಿಕ ಆದಾಯದಲ್ಲಿ ತನ್ನ ಪಾಲು ಸಿಗುವುದಿಲ್ಲ. ಈ ಬಗ್ಗೆ ಈಗಾಗಲೇ ಐಸಿಸಿ ಸೂಚನೆ ನೀಡಿದೆ. ಒಂದು ವೇಳೆ ಪಾಕ್ ಹೊರಗುಳಿದರೆ, ಅಂದಾಜು 34.5 ಮಿಲಿಯನ್ ಯುಎಸ್ ಡಾಲರ್ (ಸುಮಾರು ರೂ. 316 ಕೋಟಿ) ನಷ್ಟವಾಗಲಿದೆ. ಇದು ಐಸಿಸಿಯ ಶೇ. 6 ರಷ್ಟು ಆದಾಯವಾಗಿದೆ. ಈಗಾಗಲೇ ಆರ್ಥಿಕ ಸ್ಥಿತಿಯಲ್ಲಿ ಹೀನಾಯ ಹಂತವನ್ನು ತಲುಪಿರುವ ಪಾಕ್, ಶೇ. 6 ರಷ್ಟು ಆದಾಯ ಕಳೆದುಕೊಂಡಲ್ಲಿ ಪಿಸಿಬಿ, ಆರ್ಥಿಕ ಕುಸಿತ ಕಾಣುವುದರಲ್ಲಿ ಸಂದೇಹವೇ ಇಲ್ಲ. ಅಲ್ಲದೆ, ಅದರಿಂದ ಪಾಕ್, ಚೇತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
ಐಸಿಸಿ ನಿರ್ಬಂಧಗಳು
ಇನ್ನು ಕ್ರಿಕೆಟ್ನಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಿದರೆ ಐಸಿಸಿ ನಿರ್ಬಂಧಗಳು ಕಠಿಣವಾಗಿವೆ. ಕೇವಲ ಸರ್ಕಾರದ ಸಲಹೆಯ ಮೇರೆಗೆ ವಿಶ್ವಕಪ್ ಬಹಿಷ್ಕಾರ ಮಾಡಿದರೆ, ಕ್ರೀಡೆಯನ್ನು ರಾಜಕೀಯಗೊಳಿಸುವ ಪ್ರಯತ್ನವೆಂದು ಐಸಿಸಿ ಪರಿಗಣಿಸಬಹುದು. ಇದರ ಪರಿಣಾಮವಾಗಿ ಕೆಲವು ನಿರ್ಬಂಧಗಳು ಎದುರಿಸಬೇಕಾಗುತ್ತದೆ. ಅದರಲ್ಲಿ ಮೊದಲನೆಯದು, ಜಾಗತಿಕ ಕ್ರಿಕೆಟ್‌ನಿಂದ ಅಮಾನತು. ಈ ಹಿಂದೆ ಜಿಂಬಾಬ್ವೆ ಮತ್ತು ಶ್ರೀಲಂಕಾ ಇದರ ಪರಿಣಾಮ ಎದುರಿಸಿತ್ತು. ಎರಡನೇಯದು ಏಷ್ಯಾ ಕಪ್ನಿಂದ ಹೊರಗಿಡಲಾಗುತ್ತದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸಾಮಾನ್ಯವಾಗಿ ಐಸಿಸಿ ನಿಲುವುಗಳನ್ನು ಪ್ರತಿಬಿಂಬಿಸುತ್ತದೆ. ಹೀಗಾಗಿ ವಿಶ್ವಕಪ್ ಬಹಿಷ್ಕಾರವು ಭವಿಷ್ಯದ ಏಷ್ಯಾ ಕಪ್‌ಗಳಲ್ಲಿ ಪಾಕಿಸ್ತಾನದ ಸ್ಥಾನವನ್ನು ಕಸಿದುಕೊಳ್ಳಬಹುದು. ಸದ್ಯ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಏಷ್ಯನ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಾಗಿದ್ದಾರೆ. ಮೂರನೆಯದಾಗಿ ಆತಿಥೇಯ ಹಕ್ಕುಗಳ ನಷ್ಟ. ಪಾಕಿಸ್ತಾನವು ಪ್ರಸ್ತುತ 2028ರ ಮಹಿಳಾ ಟಿ20 ವಿಶ್ವಕಪ್‌ನಂತಹ ಪ್ರಮುಖ ಟೂರ್ನಿಗಳನ್ನು ಆಯೋಜಿಸಲಿದೆ. ಒಂದು ವೇಳೆ ವಿಶ್ವಕಪ್ ಬಹಿಷ್ಕಾರ ಮಾಡಿದರೆ ಈ ಹಕ್ಕುಗಳು ಬಹುತೇಕ ರದ್ದಾಗುವುದು ಖಚಿತ.
ಪಿಎಸ್ಎಲ್ ಬಿಕ್ಕಟ್ಟು
ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಪಾಕಿಸ್ತಾನದ ದೇಶೀಯ ಕ್ರಿಕೆಟ್‌ನ ಪ್ರಮುಖ ಟಿ20 ಲೀಗ್ ಆಗಿದೆ. ಆದಾಗ್ಯೂ, ಇದರ ಯಶಸ್ಸು ಸಂಪೂರ್ಣವಾಗಿ ವಿದೇಶಿ ಆಟಗಾರರ ಭಾಗವಹಿಸುವಿಕೆ ಮೇಲೆ ಅವಲಂಬಿತವಾಗಿದೆ. ಒಂದು ವೇಳೆ ಪಾಕಿಸ್ತಾನ ವಿಶ್ವ ಕ್ರೀಡಾಕೂಟವನ್ನು ಬಹಿಷ್ಕರಿಸಿದರೆ, ಐಸಿಸಿ ಮತ್ತು ಇತರ ಸದಸ್ಯ ಮಂಡಳಿಗಳು (ಕ್ರಿಕೆಟ್ ಆಸ್ಟ್ರೇಲಿಯಾ ಅಥವಾ ಇಸಿಬಿ ನಂತಹವು) ಐಸಿಸಿ ಸೂಚನೆಯ ಮೇರೆಗೆ ತಮ್ಮ ಆಟಗಾರರು ಪಿಎಸ್‌ಎಲ್‌ನಲ್ಲಿ ಭಾಗವಹಿಸಲು ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (ಎನ್‌ಒಸಿ) ನಿರಾಕರಿಸಬಹುದು. ಇದರಿಂದ ಪಾಕ್ಗೆ ಬಹುದೊಡ್ಡ ಹೊಡೆತ ಬಿದ್ದಂತಾಗುತ್ತದೆ.
ಏಕಾಂಗಿಯಾಗಿಬಿಡುತ್ತೆ ಪಾಕ್
ಕ್ರಿಕೆಟ್ ಆರ್ಥಿಕತೆಯು ದ್ವಿಪಕ್ಷೀಯ ಸಂಬಂಧಗಳ ಮೇಲೆ ನಿರ್ಮಿಸಲ್ಪಟ್ಟಿದೆ. ಅಲ್ಲದೆ, ಐಸಿಸಿಯ ಪ್ರಾಥಮಿಕ ಆದಾಯದ ಮೂಲ ವಿಶ್ವಕಪ್‌ನಂತಹ ಮೆಗಾ ಟೂರ್ನಿಗಳು. ಇದಕ್ಕೆ ಅಡ್ಡಿಪಡಿಸಿದರೆ, ಪಾಕಿಸ್ತಾನವು ಬಹಳ ದೊಡ್ಡ ಹೊಡೆತವನ್ನು ಅನುಭವಿಸುತ್ತದೆ. ಎಲ್ಲ ರಾಷ್ಟ್ರಗಳು ಪಾಕಿಸ್ತಾನದಲ್ಲಿ ಆಡಲು ನಿರಾಕರಿಸಿದರೆ, ಪಿಸಿಬಿಯ ಸ್ವತಂತ್ರ ಆದಾಯದ ಪ್ರಾಥಮಿಕ ಮೂಲವೇ ಮಾಯವಾಗುತ್ತದೆ.
ಅಂದಹಾಗೆ, ಬಾಂಗ್ಲಾದೇಶದೊಂದಿಗೆ ತಮ್ಮ ಒಗ್ಗಟ್ಟು ಪ್ರದರ್ಶಿಸುವ ನೆಪದಲ್ಲಿ ಐಸಿಸಿ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದು ಸ್ವಯಂ ವಿನಾಶವಲ್ಲದೆ ಬೇರೇನೂ ಅಲ್ಲ ಎಂಬುದನ್ನು ಪಾಕಿಸ್ತಾನಕ್ಕೆ ಚೆನ್ನಾಗಿ ತಿಳಿದಿದೆ. ಹೀಗಾಗಿ, ನಿರ್ಧಾರ ತೆಗೆದುಕೊಳ್ಳುವಲ್ಲಿ ಮೀನಾಮೇಷ ಎಣಿಸುತ್ತಿದೆ, (ಏಜೆನ್ಸೀಸ್).