ನೋವು ತಾಳಲಾರದೇ ಹೆಲ್ಮೆಟ್‌ಗೆ ಒದ್ದು ಮೈದಾನದಲ್ಲೇ ಬ್ಯಾಟರ್ ಆಕ್ರೋಶ: ಪಿಚ್ಗೆ ಹೆದರಿ ಪಂದ್ಯವೇ ರದ್ದು! Dangerous Pitch
- ವೆಸ್ಟ್ ಇಂಡೀಸ್ ಚಾಂಪಿಯನ್‌ಶಿಪ್ ಲೀಗ್ನಲ್ಲಿ ಒಂದು ಭಯಾನಕ ಘಟನೆ ನಡೆದಿದೆ
- ಸರ್ ವಿವಿಯನ್ ಕ್ರೀಡಾಂಗಣದ ಪಿಚ್ ಅಪಾಯಕಾರಿ ಎಂದು ಗೊತ್ತಾದ ಕೂಡಲೇ ಪಂದ್ಯ ರದ್ದು
- ಲೀವರ್ಡ್ ಐಸ್ಲ್ಯಾಂಡ್ಸ್ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊ ತಂಡಗಳ ನಡುವಿನ ಪಂದ್ಯ ಡ್ರಾ ಎಂದು ಘೋಷಣೆ
- ನೋವು ತಾಳಲಾರದೇ ಹೆಲ್ಮೆಟ್ ಅನ್ನು ಬಿಚ್ಚಿಟ್ಟು, ಕಾಲಿನಿಂದ ಒದ್ದು ಹೋದ ಬ್ಯಾಟ್ಸ್‌ಮನ್
Dangerous Pitch : ವೆಸ್ಟ್ ಇಂಡೀಸ್ ಆಯೋಜಿಸುತ್ತಿರುವ ವೆಸ್ಟ್ ಇಂಡೀಸ್ ಚಾಂಪಿಯನ್‌ಶಿಪ್ ಲೀಗ್ನಲ್ಲಿ ಒಂದು ಭಯಾನಕ ಘಟನೆ ನಡೆದಿದೆ. ಸರ್ ವಿವಿಯನ್ ಕ್ರೀಡಾಂಗಣದಲ್ಲಿ ಲೀವರ್ಡ್ ಐಸ್ಲ್ಯಾಂಡ್ಸ್ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಆದರೆ, ಪಿಚ್ ಅಸುರಕ್ಷಿತವಾಗಿರುವುದರಿಂದ ಈ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.
ಟ್ರಿನಿಡಾಡ್ ವೇಗಿ ಜೇಡನ್ ಸೀಲ್ಸ್ ಎಸೆದ ಚೆಂಡು ಲೀವರ್ಡ್ ಐಸ್ಲ್ಯಾಂಡ್ಸ್ ತಂಡದ ಬ್ಯಾಟ್ಸ್‌ಮನ್ ಜೆರೆಮಿಯಾ ಲೂಯಿಸ್ ಅವರ ಹೆಲ್ಮೆಟ್‌ಗೆ ಬಲವಾಗಿ ಬಡಿಯಿತು. ಬೌನ್ಸ್‌ನಿಂದಾಗಿ ಚೆಂಡು ಲೂಯಿಸ್ ಅವರ ಹೆಲ್ಮೆಟ್‌ಗೆ ಬಡಿಯುತ್ತಿದ್ದಂತೆ ಕೆಳಗೆ ಬಿದ್ದರು. ಬಳಿಕ ನೋವು ತಾಳಲಾರದೇ ಹೆಲ್ಮೆಟ್ ಅನ್ನು ಬಿಚ್ಚಿಟ್ಟು, ತಕ್ಷಣ ಎದ್ದು ನಿಂತು ಹೆಲ್ಮೆಟ್ ಅನ್ನು ಕಾಲಿನಿಂದ ಒದ್ದು, ಮೈದಾನದಿಂದ ಹೊರ ನಡೆದರು. ಈ ಘಟನೆಯು ಮೈದಾನದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಂದಹಾಗೆ, ಕೆಲ ಹೊತ್ತಿನ ಬಳಿಕ ಲೂಯಿಸ್ ಅವರನ್ನು ಸ್ಟ್ರೆಚರ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಸ್ತುತ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಈ ಘಟನೆಯ ನಂತರ, ಪಂದ್ಯದ ಅಧಿಕಾರಿಗಳು ಮತ್ತು ಅಂಪೈರ್‌ಗಳು ಪಿಚ್ ಅನ್ನು ಪರಿಶೀಲಿಸಿ ಹಾಗೂ ಚರ್ಚಿಸಿ ಅದು ಅಸುರಕ್ಷಿತ ಎಂದು ತೀರ್ಮಾನಿಸಿದರು. ಆಟವನ್ನು ಮತ್ತೆ ಮುಂದುವರಿಸಿದರೆ ಆಟಗಾರರಿಗೆ ಗಾಯಗಳಾಗುವುದು ಖಚಿತ ಎಂದು ಗೊತ್ತಾದ್ದರಿಂದ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಅಂದಹಾಗೆ, ಪಂದ್ಯ ಶುರುವಾದ ಮೂರನೇ ದಿನದವರೆಗೂ ಪಿಚ್ ಅಸ್ಥಿರವಾಗಿತ್ತು. ಈಗಾಗಲೇ ಹಲವಾರು ವಿಕೆಟ್‌ಗಳು ಕೂಡ ಬಿದ್ದಿದ್ದವು. ಎಷ್ಟರ ಮಟ್ಟಿಗೆ ಚೆಂಡು ಬೌನ್ ಆಗುತ್ತಿತ್ತು ಅಂದರೆ, ಹೇಗೆ ಪುಟಿಯುತ್ತದೆ ಎಂದು ಊಹಿಸುವುದು ಕೂಡ ಬ್ಯಾಟ್ಸ್‌ಮನ್‌ಗಳಿಗೆ ಕಷ್ಟಕರವಾಗಿತ್ತು. ಪಿಚ್ ಅನ್ನು ದುರಸ್ತಿಪಡಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ ನಂತರ, ಅಧಿಕಾರಿಗಳು ಪಂದ್ಯವನ್ನು ಡ್ರಾ ಎಂದು ಘೋಷಿಸಿದರು. ನಿಯಮದಂತೆ, ಆಟ ನಿಲ್ಲುವವರೆಗೆ ಎರಡೂ ತಂಡಗಳು ಗಳಿಸಿದ ಅಂಕಗಳನ್ನು ಅವರಿಗೆ ನೀಡಲಾಗುತ್ತದೆ. ಆಟಗಾರರ ಸುರಕ್ಷತೆಯೇ ಪ್ರಥಮ ಆದ್ಯತೆಯಾಗಿರುವುದರಿಂದ ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವೆಸ್ಟ್ ಇಂಡೀಸ್ ಮಂಡಳಿ ಸ್ಪಷ್ಟಪಡಿಸಿದೆ.
ಸದ್ಯಕ್ಕೆ ಸರ್ ವಿವ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಯಾವುದೇ ಪಂದ್ಯಗಳನ್ನು ನಿಗದಿಪಡಿಸಿಲ್ಲ. ಆದರೆ, ಮೇ 17 ರಿಂದ 20ರವರೆಗೆ ನಡೆಯಲಿರುವ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಇದೇ ಮೈದಾನದಲ್ಲಿ ನಡೆಯಲಿದೆ. ಫೈನಲ್‌ಗೆ ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಪಿಚ್ ಅನ್ನು ಸಿದ್ಧಪಡಿಸಲು ಎಲ್ಲಾ ಅಗತ್ಯ ಸಂಪನ್ಮೂಲಗಳನ್ನು ಬಳಸಲಾಗುವುದು ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ (CWI) ಭರವಸೆ ನೀಡಿದೆ.
ಇನ್ನೂ ಈ ಘಟನೆಯು ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸಿದ ಆಸ್ಟ್ರೇಲಿಯಾದ ಆಟಗಾರ ಫಿಲ್ ಹ್ಯೂಸ್ ಘಟನೆಯನ್ನು ನೆನಪಿಸುತ್ತದೆ. ಹ್ಯೂಸ್ ಕುತ್ತಿಗೆಗೆ ಚೆಂಡು ಬಡಿದು ಸಾವಿಗೀಡಾಗಿದ್ದು ಗೊತ್ತೇ ಇದೆ. ಪ್ರಸ್ತುತ ನಡೆದ ಘಟನೆಯಲ್ಲಿ ಲೂಯಿಸ್ ಯಾವುದೇ ಗಾಯಗಳಿಲ್ಲದೆ ಪಾರಾಗಿರುವುದು ಸಮಾಧಾನಕರವಾಗಿದ್ದರೂ, ಪಿಚ್ ಪರಿಸ್ಥಿತಿಗಳ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಆಟಗಾರರ ಸುರಕ್ಷತೆ ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ನಮಗೆ ನೆನಪಿಸಿದೆ. ತಂತ್ರಜ್ಞಾನ ಮತ್ತು ರಕ್ಷಣಾ ಸಾಧನಗಳಲ್ಲಿ ಸುಧಾರಣೆಗಳ ಹೊರತಾಗಿಯೂ, ಪಿಚ್‌ನ ಗುಣಮಟ್ಟ ಕಳಪೆಯಾಗಿದ್ದರೆ ಅಪಘಾತಗಳು ಅನಿವಾರ್ಯ ಎಂಬುದನ್ನು ಈ ಘಟನೆ ಸ್ಪಷ್ಟಪಡಿಸಿದೆ, (ಏಜೆನ್ಸೀಸ್).