WBBL: ಕ್ರಿಕೆಟ್ ಮೈದಾನದಲ್ಲಿ ಕಾಲಕಾಲಕ್ಕೆ ವಿಲಕ್ಷಣ ಹಾಗೂ ಅನಿರೀಕ್ಷಿತ ರನ್ ಔಟ್ಗಳು ಸಂಭವಿಸುತ್ತಲೇ ಇರುತ್ತವೆ. ಅಂತೆಯೇ, ಪ್ರಸಕ್ತ ನಡೆಯುತ್ತಿರುವ ಮಹಿಳಾ ಬಿಗ್ ಬ್ಯಾಷ್ ಲೀಗ್ನಲ್ಲಿ, ಕ್ರಿಕೆಟ್ ಇತಿಹಾಸದಲ್ಲೇ ಇಂತಹದ್ದೊಂದು ಘಟನೆ ಈಗ ಮರುಕಳಿಸಿರುವುದು ಸದ್ಯ ಅನೇಕರನ್ನು ಅಕ್ಷರಶಃ ಬೆರಗಾಗಿಸಿದೆ.
ಬುಧವಾರ ನಡೆದ ಬ್ರಿಸ್ಬೇನ್ ಹೀಟ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ನಡುವಿನ ಪಂದ್ಯದಲ್ಲಿ, ಮೆಲ್ಬೋರ್ನ್ ತಂಡದ ಆಲ್ರೌಂಡರ್ ಡಿಯಾಂಡ್ರಾ ಡಾಟಿನ್ ಕ್ರೀಸ್ (ವೆಸ್ಟ್ ಇಂಡೀಸ್ ಆಟಗಾರ್ತಿ)ಗೆ ಬರುವ ಮುನ್ನವೇ ಔಟ್ ಆಗಿದ್ದು ಕ್ರಿಕೆಟ್ ಪ್ರೇಮಿಗಳ ಗೊಂದಲಕ್ಕೆ ಕಾರಣವಾಗಿದೆ. WBBL ಮತ್ತು BBL ಪಂದ್ಯದಲ್ಲಿ ವಿಳಂಬವನ್ನು ತಗ್ಗಿಸಲು ಕ್ರಿಕೆಟ್ ಆಸ್ಟ್ರೇಲಿಯಾ 2021-22 ಸೀಸನ್ನಿಂದ ಈ ವಿಶೇಷ ನಿಯಮವನ್ನು ಪರಿಚಯಿಸಿದೆ. ಹೊಸ ಬ್ಯಾಟರ್ ಕ್ರೀಸ್ಗೆ ಬಂದು, 75 ಸೆಕೆಂಡುಗಳಲ್ಲಿ ಬಾಲ್ ಅನ್ನು ಎದುರಿಸಲು ರೆಡೆ ಇರಬೇಕೆಂಬುದು ನಿಯಮ.
ಅಕಸ್ಮಾತ್ ಈ ನಿಗದಿತ ಸಮಯದೊಳಗೆ ಹೊಸ ಬ್ಯಾಟರ್ ಕ್ರೀಸ್ಗೆ ಬರದಿದ್ದರೆ ಬ್ಯಾಟರ್ ಅಥವಾ ಬ್ಯಾಟ್ಸ್ವುಮನ್ ಅಲ್ಲೇ ಪಕ್ಕದಲ್ಲೇ ಸುಮ್ಮನೆ ನಿಲ್ಲಬೇಕು. ನಂತರ, ಬೌಲರ್ ಖಾಲಿ ವಿಕೆಟ್ಗಳಲ್ಲಿ ಚೆಂಡನ್ನು ಎಸೆಯುತ್ತಾರೆ. ಆ ಬಾಲ್ ಏನಾದರೂ ವಿಕೆಟ್ಗೆ ತಾಗಿದರೆ, ತಡವಾಗಿ ಬಂದ ಬ್ಯಾಟರ್ ಔಟ್ ಆಗಿ ಕೆಲವೇ ಕ್ಷಣಗಳಲ್ಲಿ ವಾಪಾಸ್ ಪೆವಿಲಿಯನ್ಗೆ ಹೋಗುತ್ತಾರೆ. ಸದ್ಯ ಇಲ್ಲಿಯೂ ಆಗಿದ್ದು ಅದೇ ಎಡವಟ್ಟು.
ಈ ಲೀಗ್ನ ಪಂದ್ಯದಲ್ಲಿ, ಮೆಲ್ಬೋರ್ನ್ ರೆನೆಗೇಡ್ಸ್ 138 ರನ್ಗಳ ಗುರಿಯನ್ನು ಬೆನ್ನಟ್ಟುತ್ತಿತ್ತು. 15ನೇ ಓವರ್ನ ಮೊದಲ ಎಸೆತದಲ್ಲಿ ಜಾರ್ಜಿಯಾ ವೇರ್ಹ್ಯಾಮ್ ಔಟಾದರು. ಈ ಓವರ್ನ ಎರಡನೇ ಬಾಲ್ಗೆ ಏಳನೇ ಕ್ರಮಾಂಕದಲ್ಲಿ ಬರಲು ರೆಡಿಯಾಗಿದ್ದ ಡಾಟಿನ್ರನ್ನು ಹೋಗುವಂತೆ ತಂಡ ಸೂಚಿಸಿತು. ಆದರೆ, ಆಕೆ ಕ್ರೀಸ್ಗೆ ಬರಲು 75 ಸೆಕೆಂಡ್ಗೂ ಹೆಚ್ಚು ಸಮಯ ತೆಗೆದುಕೊಂಡರು. ಹೆಲ್ಮೆಟ್ ಮತ್ತು ಬ್ಯಾಟಿಂಗ್ ಗ್ಲೌಸ್ ಹಾಕಿಕೊಳ್ಳಲು ಟೈಮ್ ವೇಸ್ಟ್ ಮಾಡಿದ್ದೇ ಸುಮ್ಮನೆ ಅವರ ವಿಕೆಟ್ ಹೋಗುವಂತಾಯಿತು.
ನಿಗದಿತ 75 ಸೆಕೆಂಡ್ಗಳು ಮೀರಿದ್ದನ್ನು ನೋಡಿದ ಅಂಪೈರ್ಗಳು, ಲೆಗ್ಸೈಡ್ನಲ್ಲಿರುವ ಪಿಚ್ನಿಂದ ಕನಿಷ್ಠ ಐದು ಮೀಟರ್ ದೂರದಲ್ಲಿ ನಿಲ್ಲುವಂತೆ ಡಾಟಿನ್ಗೆ ಹೇಳಿದರು. ಬೌಲರ್ ಸಾರಾ ಗ್ಲೆನ್ ವಿಕೆಟ್ ಮೇಲೆ ಪ್ರೀ ಬಾಲ್ ಎಸೆಯುವ ಅವಕಾಶ ಪಡೆದಿದ್ದಲ್ಲದೇ, ವಿಕೆಟ್ ಕೂಡ ಕಬಳಿಸಿದರು. ಇದರಿಂದ, ಕೆರಿಬಿಯನ್ನ ಸ್ಟಾರ್ ಆಲ್ರೌಂಡರ್, ಒಂದೇ ಒಂದು ಚೆಂಡನ್ನು ಆಡದೆ ಪೆವಿಲಿಯನ್ನತ್ತ ಮುಖ ಮಾಡಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಘಟನೆಯು 2023ರ ಏಕದಿನ ವಿಶ್ವಕಪ್ನಲ್ಲಿ ಶ್ರೀಲಂಕಾದ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಔಟಾದ ಕ್ಷಣವನ್ನು ನೆನಪಿಸಿದೆ. ಇವರೆಡು ಔಟ್ಗಳ ನಡುವೆ ದೊಡ್ಡ ವ್ಯತ್ಯಾಸವಿದೆ. ಸಾಮಾನ್ಯವಾಗಿ ಸಮಯ ಮೀರಿದಾಗ, ಬ್ಯಾಟರ್ ವಿರುದ್ಧ ಮೇಲ್ಮನವಿಯ ಆಧಾರದ ಮೇಲೆ ಅಂಪೈರ್ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಆದರೆ, ಡಬ್ಲ್ಯೂಬಿಬಿಲ್ ನಿಯಮಗಳಲ್ಲಿ, ತಡವಾಗಿ ಬಂದ ಬ್ಯಾಟರ್ ಅನ್ನು ಕ್ರೀಸ್ನ ಪಕ್ಕಕ್ಕೆ ಇರಿಸಿ, ಚೆಂಡನ್ನು ಖಾಲಿ ವಿಕೆಟ್ಗಳ ಮೇಲೆ ಹಾಕಿಸಲಾಗುತ್ತೆ. ಆ ಬಾಲ್ ಏನಾದರೂ ವಿಕೆಟ್ ಬೀಳದೆ ಹೋದರೆ, ಬ್ಯಾಟರ್ ಔಟಾಗದೇ ತಮ್ಮ ಇನ್ನಿಂಗ್ಸ್ ಅನ್ನು ಮುಂದುವರಿಸಬಹುದು,(ಏಜೆನ್ಸೀಸ್).