ಟೈಟಾನಿಕ್​, ಒಲಿಂಪಿಕ್​... ಮೂರಕ್ಕೆ ಮೂರು ಅತಿದೊಡ್ಡ ಹಡಗು ದುರಂತಗಳಿಂದ ಸಾವು ಗೆದ್ದು ವಿಧಿಗೆ ಚಳ್ಳೆಹಣ್ಣು ತಿನ್ನಿಸಿದ ಮಹಿಳೆ ಈಕೆ | Violet Jessop

Violet Jessop
ಟೈಟಾನಿಕ್​, ಒಲಿಂಪಿಕ್​... ಮೂರಕ್ಕೆ ಮೂರು ಅತಿದೊಡ್ಡ ಹಡಗು ದುರಂತಗಳಿಂದ ಪಾರಾಗಿ ಸಾವು ಗೆದ್ದ ಮಹಿಳೆ ಈಕೆ | Violet Jessop
Published on: 

Violet Jessop: ಸಾವಿರಾರು ಪ್ರಯಾಣಿಕರ ಕನಸುಗಳನ್ನು ಹೊತ್ತು ಸಮುದ್ರಯಾನ ಆರಂಭಿಸಿದ್ದ ಲಕ್ಸುರಿ, ಮುಳುಗಡೆಯೇ ಆಗದ ಹಡಗು ಎಂಬ ಪಟ್ಟ ಪಡೆದಿದ್ದ ಟೈಟಾನಿಕ್, ತನ್ನ ಮೊದಲ ಯಾನದಲ್ಲೇ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಅಟ್ಲಾಂಟಿಕ್ ಮಹಾಸಾಗರದ ಆಳದಲ್ಲಿ ದುರಂತಕ್ಕೀಡಾಯಿತು. ಈ ದುರಂತದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡರೆ, ಬದುಕುಳಿದ ಕೆಲವರ ಕಥೆಗಳು ಇಂದಿಗೂ ರೋಚಕ ಹಾಗೂ ಅಚ್ಚರಿ ಮೂಡಿಸುತ್ತವೆ.

ಈ ಟೈಟಾನಿಕ್ ದುರಂತದಿಂದ ಮಾತ್ರವಲ್ಲ, ಅದೇ ಕಂಪನಿಗೆ ಸೇರಿದ ಇನ್ನೆರಡು ಅತಿದೊಡ್ಡ ಹಡಗುಗಳ ದುರಂತಗಳಿಂದ ಪಾರಾದ ಮಹಿಳೆಯೊಬ್ಬರ ಕಥೆ ನಿಜಕ್ಕೂ ನಿಮ್ಮ ಹುಬ್ಬೇರಿಸುವುದು ಖಚಿತ. ಮೂರು ಬಾರಿ ಹಡಗು ದುರಂತ ಎದುರಾದರೂ ಸಾವಿಗೆ ಸವಾಲೆಸೆದು ಬದುಕುಳಿದ ಆ ಮಹಿಳೆಯ ಹೆಸರೇ ವೈಲೆಟ್ ಕಾನ್ಸ್‌ಟನ್ಸ್ ಜೆಸಪ್. ಜಗತ್ತು ಆಕೆಯನ್ನು ಪ್ರೀತಿಯಿಂದ 'ದಿ ಅನ್‌ಸಿಂಕಬಲ್ ವುಮನ್' ಅಂದರೆ 'ಮುಳುಗದ ಮಹಿಳೆ' ಎಂದೇ ಕರೆದಿದೆ.

ಮೊದಲ ದುರಂತ: ಆರ್‌ಎಂಎಸ್ ಒಲಿಂಪಿಕ್

ವೈಟ್ ಸ್ಟಾರ್ ಲೈನ್ ಕಂಪನಿಯ ಒಲಿಂಪಿಕ್ ವರ್ಗದ ಮೊದಲ ಹಡಗು ಆರ್‌ಎಂಎಸ್ ಒಲಿಂಪಿಕ್‌ನಲ್ಲಿ ವೈಲೆಟ್ ಕೆಲಸ ಮಾಡುವ ಸಿಬ್ಬಂದಿಯಾಗಿದ್ದರು. 1911ರ ಸೆಪ್ಟೆಂಬರ್ 20ರಂದು ಈ ಹಡಗು ಬ್ರಿಟಿಷ್ ಯುದ್ಧನೌಕೆ ಎಚ್‌ಎಂಎಸ್ ಹಾಕ್‌ಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿಯಿಂದ ಹಡಗಿನ ಒಂದು ಭಾಗಕ್ಕೆ ಹಾನಿಯಾಗಿದ್ದರೂ, ಯಾವುದೇ ಪ್ರಯಾಣಿಕರು ಮೃತಪಟ್ಟಿರಲಿಲ್ಲ. ವೈಲೆಟ್ ಕೂಡ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದರು. ಆ ಸಮಯಕ್ಕೆ ಇದೇ ದೊಡ್ಡ ದುರಂತವಾಗಿತ್ತು.

2ನೇ ದುರಂತ: ಜಗತ್ತನ್ನೇ ಬೆಚ್ಚಿಬೀಳಿಸಿದ ಟೈಟಾನಿಕ್

ಒಲಿಂಪಿಕ್ ಹಡಗಿನ ಅಪಘಾತದ ಸುಮಾರು ಒಂದು ವರ್ಷದ ಬಳಿಕ ವೈಲೆಟ್ ಮತ್ತೊಂದು ಹಡಗಿನಲ್ಲಿ ಕೆಲಸ ಗಿಟ್ಟಿಸಿಕೊಂಡರು. ಅದೇ ಎಂದೂ ಮರೆಯಲಾಗದ ಆರ್​ಎಂಎಸ್​ ಟೈಟಾನಿಕ್​. ಸ್ನೇಹಿತರ ಒತ್ತಾಯದ ಮೇರೆಗೆ ಅವರು ಟೈಟಾನಿಕ್‌ನಲ್ಲಿ ಕೆಲಸ ಮಾಡಲು ಒಪ್ಪಿಕೊಂಡರು ಎಂದು ವರದಿಗಳು ತಿಳಿಸಿವೆ. 1912ರ ಏಪ್ರಿಲ್ 14ರ ರಾತ್ರಿ ಟೈಟಾನಿಕ್ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಹಂತ ಹಂತವಾಗಿ ಮುಳುಗಲು ಆರಂಭಿಸಿತು. ಈ ವೇಳೆ ಡೆಕ್ ಮೇಲಿದ್ದ ಪ್ರಯಾಣಿಕರನ್ನು ಸಮಾಧಾನ ಮಾಡುವಂತೆ ವೈಲೆಟ್‌ಗೆ ಹೇಳಲಾಯಿತು.

ಮೊದಲಿಗೆ ಮಹಿಳೆಯರು ಮತ್ತು ಮಕ್ಕಳು ಹೋ್ಗಲಿ ಎಂಬ ಆದೇಶದಡಿ ಆರಂಭಗೊಂಡ ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಅವರು ಲೈಫ್‌ಬೋಟ್ ಸಂಖ್ಯೆ 16ರಲ್ಲಿ ಹತ್ತಿದರು. ಆ ಸಮಯದಲ್ಲಿ ಅಧಿಕಾರಿಯೊಬ್ಬರು ಮಗುವೊಂದನ್ನು ಅವರ ಕೈಗೆ ಕೊಟ್ಟರು. ಹೀಗೆ ವೈಲೆಟ್ ಆ ಮಗುವಿನೊಂದಿಗೆ ಲೈಫ್‌ಬೋಟ್‌ನಲ್ಲಿ ಸುರಕ್ಷಿತವಾಗಿ ಪಾರಾಗಿದ್ದು ಎರಡನೇ ಮಹಾ ದುರಂತದ ಬಚಾವ್ ಆಗಲು ಕಾರಣವಾಯಿತು.

3ನೇ ದುರಂತ: ಬ್ರಿಟಾನಿಕ್

ಟೈಟಾನಿಕ್ ದುರಂತದ ಬಳಿಕವೂ ವೈಲೆಟ್ ತಮ್ಮ ಸಾವಿನೊಂದಿಗೆ ಆಟವಾಡಲು ದಿಟ್ಟ ನಿರ್ಧಾರ ಮಾಡಿದ್ದರು ಅವರ ಹಡಗಿನ ಪ್ರಯಾಣವನ್ನು ಮುಂದುವರಿದಿದ್ದು. ಮೊದಲ ಮಹಾಯುದ್ಧದ ಸಂದರ್ಭದಲ್ಲಿ 1916ರಲ್ಲಿ ಟೈಟಾನಿಕ್‌ನ ಸಹೋದರಿ ಹಡಗಾದ ಎಚ್‌ಎಂಎಚ್‌ಎಸ್ ಬ್ರಿಟಾನಿಕ್‌ನಲ್ಲಿ ಅವರು ನರ್ಸ್ ಆಗಿ ಸೇರಿಕೊಂಡರು. ಯುದ್ಧದ ಸಮಯದಲ್ಲಿ ಈ ಹಡಗನ್ನು ಆಸ್ಪತ್ರೆಯಾಗಿ ಬಳಸಲಾಗುತ್ತಿತ್ತು ಎಂದು ವಿವರಿಸಲಾಗಿದೆ.

1916ರ ನವೆಂಬರ್ 21ರಂದು ಬ್ರಿಟಾನಿಕ್ ಜರ್ಮನ್ ನೌಕಾ ಮೈನ್‌ಗೆ ಡಿಕ್ಕಿ ಹೊಡೆದು ಮುಳುಗಲಾರಂಭಿಸಿತು. ವೈಲೆಟ್ ಲೈಫ್‌ಬೋಟ್ ಮೂಲಕ ಪಾರಾಗಲು ಪ್ರಯತ್ನಿಸಿದರು. ಆದರೆ, ಆ ದೋಣಿ ಹಡಗಿನ ಪ್ರೊಪೆಲ್ಲರ್‌ಗೆ ಸಿಲುಕುವ ಅಪಾಯ ಎದುರಾಯಿತು. ತಕ್ಷಣವೇ ಅವರು ಲೈಫ್‌ಬೋಟ್‌ನಿಂದ ನೀರಿಗೆ ಜಿಗಿದು ಪ್ರಾಣ ಉಳಿಸಿಕೊಂಡರು. ಈ ವೇಳೆ, ಹಡಗಿಗೆ ತಲೆ ಬಡಿದು ಗಂಭೀರ ಗಾಯಗೊಂಡಿದ್ದರು. ಇಷ್ಟಾದರೂ ವೈಲೆಟ್ ಸಾವನ್ನು ಗೆದ್ದು ಮೂರನೇ ಬಾರಿಗೆ ಪಾರಾಗಿದ್ದು ನಿಜಕ್ಕೂ ಪವಾಡ ಎಂದೇ ಕರೆಯಲಾಯಿತು. ಅಂದೇ, ಜನ ಈಕೆಗೆ ಅನ್​ಸಿಂಕೆಬಲ್​ ವುಮನ್​ ಎಂಬ ಪಟ್ಟವನ್ನು ನೀಡಿದರು.

Also Read
ಪಾಕಿಸ್ತಾನದಲ್ಲಾಗಿದ್ರೆ 15 ವರ್ಷದ ಆಟಗಾರನನ್ನು...ವೈಭವ್​ ಬಗ್ಗೆ ಅಚ್ಚರಿ ಮಾತುಗಳಾಡಿದ ಪಾಕ್​ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್! Vaibhav Suryavanshi
Violet Jessop

'ಅನ್‌ಸಿಂಕಬಲ್ ವುಮನ್' ಎಂಬ ಖ್ಯಾತಿ

ಒಂದೇ ಕಂಪನಿಯ ಮೂರು ಅತಿದೊಡ್ಡ ಹಡಗುಗಳಿಗೆ ಸಂಬಂಧಿಸಿದ ಅಪಘಾತಗಳನ್ನು ಎದುರಿಸಿ ಬದುಕುಳಿದ ವೈಲೆಟ್ ಜೆಸಪ್ ಅವರ ಜೀವನ ಅಸಾಮಾನ್ಯ ಕಥೆಯಾಗಿದೆ. ಆಕೆ ಅದೃಷ್ಟವಂತೆಯೋ ಅಥವಾ ದುರದೃಷ್ಟವಂತೆಯೋ ಎಂಬ ಪ್ರಶ್ನೆ ಇಂದಿಗೂ ಅನೇಕರಲ್ಲಿ ಮೂಡುತ್ತದೆ. ಒಂದರ ಹಿಂದೆ ಒಂದರಂತೆ ದುರಂತಗಳು ಎದುರಾದರೂ ಬದುಕಿನ ಹಾದಿಯಲ್ಲಿ ಮುನ್ನಡೆಯುವ ಧೈರ್ಯವನ್ನು ಆಕೆ ಕಳೆದುಕೊಳ್ಳಲಿಲ್ಲ ಎಂಬುದೇ ಗಮನಾರ್ಹ.

1950ರಲ್ಲಿ ನಿವೃತ್ತಿ ಪಡೆಯುವವರೆಗೂ ಹಡಗುಗಳಲ್ಲಿ ಕೆಲಸ ಮುಂದುವರಿಸಿದ ವೈಲೆಟ್, ತಮ್ಮ ಅನುಭವಗಳನ್ನು ಟೈಟಾನಿಕ್​ ಸರ್ವೈವರ್​ (Titanic Survivor) ಎಂಬ ಆತ್ಮಕಥೆಯ ಮೂಲಕ ಜಗತ್ತಿನೊಂದಿಗೆ ಹಂಚಿಕೊಂಡಿದ್ದಾರೆ. 1971ರಲ್ಲಿ 83ನೇ ವಯಸ್ಸಿನಲ್ಲಿ ಅವರು ಕೊನೆಯುಸಿರೆಳೆದರು ಎಂದು ವರದಿಗಳು ಉಲ್ಲೇಖಿಸಿವೆ. ಮೂರು ಭೀಕರ ಹಡಗು ದುರಂತಗಳಿಂದ ಪಾರಾದ ವೈಲೆಟ್ ಜೆಸಪ್ ಅವರ ಬದುಕು ಇಂದಿಗೂ ಅಚ್ಚರಿ, ಅನುಮಾನ, ಗೊಂದಲ ಮೂಡಿಸುತ್ತೆ ಎಂಬುದರಲ್ಲಿ ಕಿಂಚಿತ್ತು ಅನುಮಾನ ಬೇಡ. ಎಂತಹ ಸಂಕಷ್ಟ ಎದುರಾದರೂ ಧೈರ್ಯ ಮತ್ತು ಆತ್ಮಸ್ಥೈರ್ಯದಿಂದ ಮುನ್ನಡೆಯಬಹುದು ಎಂಬುದಕ್ಕೆ ಈಕೆಯ ಜೀವನ ಒಂದು ಅಪರೂಪದ ಉದಾಹರಣೆಯಾಗಿದೆ,(ಏಜೆನ್ಸೀಸ್).