ಕ್ರಿಕೆಟ್

ಇಶಾನ್ ಕಿಶನ್‌ರನ್ನು ಅಲ್ಲಿ ಆಡಿಸೋದು ಟೈಮ್ ವೇಸ್ಟ್! ಮಾಜಿ ಆಟಗಾರ ಹಿಂಗ್ಯಾಕಂದ್ರು..? ಅಸಲಿ ಸಂಗತಿ ಇಲ್ಲಿದೆ! | INDvsNZ

INDvsNZ: ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 135 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟುವಾಗ ಭಾರತ ತಂಡವು ಅಕ್ಷರ್​ ಪಟೇಲ್​ರನ್ನು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿತು. ಆದರೆ, ವೇಗಿಗಳಿಗೆ ಸಹಕಾರಿಯಾಗಿದ್ದ ಪಿಚ್‌ನಲ್ಲಿ ಅಕ್ಷರ್​​ ರನ್​ ಗಳಿಸಲು ಪರದಾಡಿ 17 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ಮ್ಯಾಥ್ಯೂ ಫಿಶರ್ ಬೌಲಿಂಗ್‌ನಲ್ಲಿ ತಮ್ಮ ವಿಕೆಟ್​ ಒಪ್ಪಿಸಿದರು.

ಈ ಕುರಿತು ಕ್ರಿಕ್‌ಬಜ್ ಕಾರ್ಯಕ್ರಮದಲ್ಲಿ ಮಾತನಾಡಿದ ಟೀಮ್​ ಇಂಡಿಯಾ ಮಾಜಿ ಆಟಗಾರ ಅಂಬಟಿ ರಾಯುಡು, ಇಂತಹ ಕಠಿಣ ಸನ್ನಿವೇಶಗಳಲ್ಲಿ ಅಕ್ಷರ್ ಪಟೇಲ್ 5ನೇ ಕ್ರಮಾಂಕಕ್ಕೆ ಸೂಕ್ತವಲ್ಲ, ಅವರು 6 ಅಥವಾ 7ನೇ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್ ಮಾಡಬಲ್ಲರು. ಆದರೆ 5ನೇ ಕ್ರಮಾಂಕದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಮತ್ತು ರಾಹುಲ್ ಅವರೊಂದಿಗೆ ಕ್ರಿಸ್​ನಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಸ್ಪೆಷಲಿಸ್ಟ್ ಬ್ಯಾಟರ್ ಅಗತ್ಯವಿದೆ. ಆದ್ದರಿಂದ ಅಕ್ಷರ್ ಬದಲಿಗೆ ಇಶಾನ್ ಕಿಶನ್​ರನ್ನು 5ನೇ ಕ್ರಮಾಂಕದಲ್ಲಿ ಆಡಿಸುವುದು ಸೂಕ್ತ. ಆದ್ದರಿಂದ ನಮನ್​ಧೀರ್​ರನ್ನು ತಂಡದಿಂದ ಹೊರಗಿಡಬಹುದು ಎಂದು ಸಲಹೆ ನೀಡಿದರು.

ರಾಯುಡು ಸಲಹೆಗೆ ಮುರಳಿ ಕಾರ್ತಿಕ್ ವಿರೋಧ!

ಅಂಬಟಿ ರಾಯುಡು ಈ ಹೇಳಿಕೆಯನ್ನು ಮಾಜಿ ಸ್ಪಿನ್ನರ್ ಮುರಳಿ ಕಾರ್ತಿಕ್ ವಿರೋಧಿಸಿದ್ದು, ಇಶಾನ್ ಕಿಶನ್​ರನ್ನು 6 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಆಡಿಸುವುದು ಟೈಮ್​ ವೇಸ್ಟ್​ ಎಂದರು.

ಕಾರ್ತಿಕ್ ತಮ್ಮ ಮಾತು ಮುಂದುವರೆಸುತ್ತಾ, ಇಶಾನ್ ಕಿಶನ್​ಗೆ ಸೂಕ್ತ ಕ್ರಮಾಂಕ ಎಂದರೆ ಅದು ಟಾಪ್​ 3 (ವಿಶೇಷವಾಗಿ 3ನೇ ಕ್ರಮಾಂಕ). ಆದರೆ ಪ್ರಸ್ತುತ ತಂಡದಲ್ಲಿ ವಿರಾಟ್ ಕೊಹ್ಲಿ 3, ಶ್ರೇಯಸ್ ಅಯ್ಯರ್ 4 ಮತ್ತು ಕೆ ಎಲ್ ರಾಹುಲ್ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಹೀಗಿರುವಾಗ ಕಿಶನ್​ರನ್ನು 6ನೇ ಕ್ರಮಾಂಕದಲ್ಲಿ ಆಡಿಸುವುದು ವ್ಯರ್ಥ. ಇದಷ್ಟೆ ಅಲ್ಲದೆ, ನಮನ್ ಧೀರ್ ಬ್ಯಾಟಿಂಗ್ ಟೈಮಿಂಗ್ ಉತ್ತಮವಾಗಿದೆ ಎಂದು ಸಮರ್ಥಿಸಿಕೊಂಡರು.

ಅಕ್ಷರ್​ ಪಟೇಲ್ ಫಾರ್ಮ್ ಚಿಂತೆ!

ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ಅಕ್ಷರ್​ ಪಟೇಲ್​ರ ಇತ್ತೀಚಿನ ಫಾರ್ಮ್ ಟೀಮ್​ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಹಾಗೂ 4 ವಿಕೆಟ್ ಪಡೆದು ಉತ್ತಮವಾಗಿ ಆಟವಾಡಿದ್ದ ಅಕ್ಷರ್, ಆ ನಂತರದ ಪಂದ್ಯಗಳಲ್ಲಿ ಕ್ರಮವಾಗಿ 1, 2, ಮತ್ತು 0 ರನ್‌ಗಳಿಗೆ ಔಟಾಗಿದ್ದು, ಕೇವಲ 1 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದಾರೆ. ತಂಡವು ಪಂದ್ಯಗಳನ್ನು ಗೆಲ್ಲುತ್ತಿದ್ದರೂ, ಮಧ್ಯಮ ಕ್ರಮಾಂಕದ ಈ ಬ್ಯಾಟಿಂಗ್ ಗೊಂದಲ ಮತ್ತು ಅಕ್ಷರ್​ ಫಾರ್ಮ್ ಕುರಿತು ಮಾಜಿ ಆಟಗಾರರ ನಡುವಿನ ಈ ಚರ್ಚೆ ಇದೀಗ ತೀವ್ರ ಕುತೂಹಲ ಮೂಡಿಸಿದೆ(ಏಜೆನ್ಸೀಸ್​).