ಎಲ್ರರಿಗೂ ಈ ಧೈರ್ಯ ಇರಲ್ಲ... ಟೀಮ್​ನಿಂದ ಸಿರಾಜ್​ನ ಹೊರಗಿಟ್ಟ ಗೌತಿ-ಗಿಲ್​ ನಿರ್ಧಾರ ಕೊಂಡಾಡಿದ ಮಾಜಿ ಕ್ರಿಕೆಟಿಗ | Mohammed Siraj  
ಕ್ರಿಕೆಟ್

ಎಲ್ರರಿಗೂ ಈ ಧೈರ್ಯ ಇರಲ್ಲ... ಟೀಮ್​ನಿಂದ ಸಿರಾಜ್​ನ ಹೊರಗಿಟ್ಟ ಗೌತಿ-ಗಿಲ್​ ನಿರ್ಧಾರ ಕೊಂಡಾಡಿದ ಮಾಜಿ ಕ್ರಿಕೆಟಿಗ | Mohammed Siraj

ನವದೆಹಲಿ: ಪ್ರಸಕ್ತ ನಡೆಯುತ್ತಿರುವ ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯಕ್ಕೆ ಟೀಮ್‌ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್‌ ಸಿರಾಜ್​ರನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಇದೀಗ ಕ್ರಿಕೆಟ್​ ಪ್ರೇಮಿಗಳು ಮತ್ತು ಮಾಜಿ ಕ್ರಿಕೆಟಿಗರು ಭಾರಿ ಅಸಮಾಧಾನ ಹೊರಹಾಕಿದ್ದಾರೆ. ಈ ಮಧ್ಯೆ, ಭಾರತದ ಮಾಜಿ ಕ್ರಿಕೆಟಿಗರೊಬ್ಬರು ಕೋಚ್​ ಗೌತಮ್​ ಗಂಭೀರ್ ಮತ್ತು ತಂಡದ ನಾಯಕ ಶುಭಮನ್​ ಗಿಲ್​ ನಿರ್ಧಾರವನ್ನು ಕೊಂಡಾಡಿದ್ದಾರೆ.

ಮೊದಲ ಟೆಸ್ಟ್‌ನಲ್ಲೂ ಸಿರಾಜ್‌ ಆಡಿರಲಿಲ್ಲ. ಇದೀಗ ಎರಡನೇ ಪಂದ್ಯದಲ್ಲೂ ಅವರಿಗೆ ಅವಕಾಶ ನೀಡದಿರುವುದು ಅಭಿಮಾನಿಗಳು ಹಾಗೂ ಕ್ರಿಕೆಟ್‌ ತಜ್ಞರ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ, ಟೀಮ್‌ ಇಂಡಿಯಾದ ಈ ನಿರ್ಧಾರವನ್ನು ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್‌ ಮತ್ತೊಂದು ದೃಷ್ಟಿಕೋನದಿಂದ ನೋಡಿದ್ದಾರೆ. ಕೋಚ್‌ ಗೌತಮ್‌ ಗಂಭೀರ್‌ ಮತ್ತು ನಾಯಕ ಶುಭ್‌ಮನ್‌ ಗಿಲ್‌ ಅವರ ನಿರ್ಧಾರ ಸರಿಯಿದೆ ಮತ್ತು ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಧೈರ್ಯ ಬೇಕು ಎಂದಿದ್ದಾರೆ.

ಈ ಬೆಳವಣಿಗೆಯ ಬಗ್ಗೆ ವಾಸಿಂ ಜಾಫರ್‌ ತಮ್ಮ ಅಧಿಕೃತ ಎಕ್ಸ್‌ (ಹಿಂದಿನ ಟ್ವಿಟರ್​) ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು, ಸಿರಾಜ್​ರನ್ನು ತಂಡಕ್ಕೆ ಕರೆದುಕೊಳ್ಳಬೇಕು ಎಂದು ಎಲ್ಲೆಡೆಯಿಂದ ಟೀಕೆಗಳು ಕೇಳಿಬರುತ್ತಿದ್ದರೂ ತಮ್ಮ ನಿರ್ಧಾರಕ್ಕೆ ಬದ್ಧವಾಗಿರುವುದು ಅಷ್ಟು ಸುಲಭದ ಕೆಲಸವಲ್ಲ. ಒತ್ತಡದ ನಡುವೆಯೂ ತಮ್ಮ ನಿಲುವಿನಲ್ಲಿ ದೃಢವಾಗಿ ನಿಲ್ಲುವ ಧೈರ್ಯ ತೋರಿದ ಗಂಭೀರ್‌ ಮತ್ತು ಗಿಲ್‌ ಅವರಿಗೆ ಮೆಚ್ಚುಗೆ ಸಲ್ಲಬೇಕು ಎಂದು ಜಾಫರ್‌ ಮೆಚ್ಚುಗೆ ತಿಳಿಸಿದ್ದಾರೆ.

7 ವರ್ಷಗಳ ದಾಖಲೆ ಅಂತ್ಯ

ಎರಡನೇ ಟೆಸ್ಟ್‌ನಲ್ಲೂ ಸಿರಾಜ್‌ ಆಡದಿರುವುದರಿಂದ ಅವರ ಏಳು ವರ್ಷಗಳ ವಿಶೇಷ ದಾಖಲೆಯೊಂದು ಅಂತ್ಯಗೊಂಡಿದೆ. ಭಾರತದ ವಿದೇಶಿ ಟೆಸ್ಟ್‌ ಸರಣಿಗಳಲ್ಲಿ ಕನಿಷ್ಠ ಒಂದು ಪಂದ್ಯದಲ್ಲಾದರೂ ಆಡುತ್ತಿದ್ದ ಸಿರಾಜ್‌ ಅವರ ಸತತ ಸರಣಿ ದಾಖಲೆ ಗಂಭೀರ್​ ಮತ್ತು ಗಿಲ್​ ನಿರ್ಧಾರದಿಂದ ಇದೀಗ ಕೊನೆಗೊಂಡಿದೆ.

ಮೊದಲ ದಿನ ನ್ಯೂಜಿಲೆಂಡ್‌ ಮೇಲುಗೈ

ಎರಡನೇ ಟೆಸ್ಟ್‌ನ ಮೊದಲ ದಿನ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್‌ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ ನಷ್ಟಕ್ಕೆ 246 ರನ್‌ ಗಳಿಸಿತು. ನಾಯಕ ಟಾಮ್‌ ಲಾಥಮ್‌ 59 ರನ್‌ ಗಳಿಸಿದರೆ, ವಿಕೆಟ್‌ ಕೀಪರ್‌ ಬ್ಯಾಟರ್‌ ಟಾಮ್‌ ಬ್ಲಂಡೆಲ್‌ ಅಜೇಯ 53 ರನ್‌ ಗಳಿಸಿದರು. ಡಿವಾನ್‌ ಕಾನ್ವೇ 31, ಡ್ಯಾರಿಲ್‌ ಮಿಚೆಲ್‌ 31 ಹಾಗೂ ಗ್ಲೆನ್‌ ಫಿಲಿಪ್ಸ್‌ ಅಜೇಯ 36 ರನ್‌ ಗಳಿಸಿ ತಂಡಕ್ಕೆ ನೆರವಾದರು.

ಭಾರತದ ಪರ ಆಕಾಶ್‌ ದೀಪ್‌ ಎರಡು ವಿಕೆಟ್‌ ಪಡೆದರು. ಪದಾರ್ಪಣೆ ಮಾಡಿದ ಗುರ್‌ನೂರ್‌ ಬ್ರಾರ್‌, ಅನ್ಶುಲ್‌ ಕಾಂಬೋಜ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ತಲಾ ಒಂದು ವಿಕೆಟ್‌ ಕಬಳಿಸಿದರು. ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್‌ ಬುಮ್ರಾ ಮೊದಲ ದಿನ ವಿಕೆಟ್‌ ಪಡೆಯಲು ವಿಫಲರಾದರು.

WTC ಫೈನಲ್‌ ರೇಸ್‌ನಲ್ಲಿ ಗೆಲುವು ಮುಖ್ಯ

2025-27ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್‌ ಮೂರನೇ ಸ್ಥಾನದಲ್ಲಿದ್ದರೆ, ಭಾರತ ನಾಲ್ಕನೇ ಸ್ಥಾನದಲ್ಲಿದೆ. ಹೀಗಾಗಿ, ಫೈನಲ್‌ ಪ್ರವೇಶದ ರೇಸ್‌ನಲ್ಲಿ ಉಳಿಯಲು ಉಭಯ ತಂಡಗಳಿಗೂ ಈ ಸರಣಿಯ ಗೆಲುವು ಮಹತ್ವದ್ದಾಗಿದೆ. ಇಂತಹ ನಿರ್ಣಾಯಕ ಸಂದರ್ಭದಲ್ಲಿ ಸಿರಾಜ್​ರನ್ನು ಕೈಬಿಟ್ಟಿರುವ ಟೀಮ್‌ ಇಂಡಿಯಾದ ಆಯ್ಕೆ ನಿರ್ಧಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್​ ಪ್ರೇಮಿಗಳು ಭಾರಿ ಟೀಕೆ, ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).