

AI Takeover: ಒಂದೆಡೆ ಜಗತ್ತಿನ ಪ್ರಮುಖ ಟೆಕ್ ಕಂಪನಿಗಳು ಉದ್ಯೋಗಿಗಳ ಕೆಲಸ ಕಿತ್ತುಕೊಳ್ಳುವ ಮೂಲಕ ವಜಾ ಪ್ರಕ್ರಿಯೆಗೆ ಇನ್ನಷ್ಟು ವೇಗ ಕೊಡುತ್ತಿದ್ದು, ಅತ್ತ ಉದ್ಯೋಗಿಗಳಿಗೆ ಮೀಸಲಿಡುತ್ತಿದ್ದ ಹಣವನ್ನೆಲ್ಲ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮೇಲೆ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿವೆ. ಇದು ನಿಜಕ್ಕೂ ತೀರ ಕಳವಳಕಾರಿ ಸಂಗತಿ ಹಾಗೂ ಚಿಂತೆಗೆ ದೂಡುವಂತ ವಿಷಯ. ಸದ್ಯದ ಮಟ್ಟಿಗೆ ಕೆಲಸದ ಸಮಯವನ್ನು ತಗ್ಗಿಸಿರುವ ಎಐ, ಮುಂದಿನ ದಿನಗಳಲ್ಲಿ ಮಾನವನ ಉಳಿವಿಗೆ ಕುತ್ತು ತರಲಿದೆ ಎಂದು ಮಾಜಿ ಗೂಗಲ್ ವಿಜ್ಞಾನಿಯೊಬ್ಬರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಕೋಡಿಂಗ್ನಿಂದ ಹಿಡಿದು ನಿರ್ಧಾರ ತೆಗೆದುಕೊಳ್ಳುವವರೆಗೆ ಎಲ್ಲ ಕೆಲಸಗಳಿಗೂ ಎಐ ಬಳಕೆ ದ್ವಿಗುಣಗೊಳ್ಳುತ್ತಿದೆ. ಹೀಗಿರುವಾಗ, ಸಾಫ್ಟ್ವೇರ್ ಉದ್ಯೋಗಿಗಳ ಭವಿಷ್ಯ ಏನಾಗಬಹುದು ಎಂಬ ಆತಂಕ ಶುರುವಾಗಿದೆ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಎಐ ನಿಯಂತ್ರಣವನ್ನೇ ಕಳೆದುಕೊಂಡರೆ ಖಂಡಿತ ಮನುಕುಲಕ್ಕೆ ಅಪಾಯ ಎದುರಾಗಬಹುದು ಎಂಬ ಎಚ್ಚರಿಕೆಯೂ ಕೇಳಿಬಂದಿದೆ.
ಇತ್ತೀಚಿನ ದಿನಗಳಲ್ಲಿ ಟೆಕ್ ವಲಯದಲ್ಲಿ ಉದ್ಯೋಗ ಕಡಿತದ ಸುದ್ದಿಗಳು ನಿರಂತರವಾಗಿ ಕೇಳಿಬರುತ್ತಿವೆ. ಜಾಗತಿಕ ಸಾಫ್ಟ್ವೇರ್ ದೈತ್ಯ ಸ್ಯಾಪ್ ಸೇರಿದಂತೆ ಹಲವು ಕಂಪನಿಗಳು ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿರ್ಧಾರ ಕೈಗೊಳ್ಳುತ್ತಿವೆ ಎಂಬ ವರದಿಗಳು ಹೊರಬಿದ್ದಿವೆ. ಇದರ ಬೆನ್ನಲ್ಲೇ ಎಐ ತಂತ್ರಜ್ಞಾನದ ಬಳಕೆಯೂ ವೇಗವಾಗಿ ಹೆಚ್ಚುತ್ತಿದೆ.
ಈ ಹಿಂದೆ ಹಲವು ಗಂಟೆಗಳ ಕಾಲ ತೆಗೆದುಕೊಳ್ಳುತ್ತಿದ್ದ ಕೆಲಸಗಳನ್ನು ಈಗ ಎಐ ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳಿಸುತ್ತಿದೆ. ಸಾಫ್ಟ್ವೇರ್ ಕೋಡಿಂಗ್, ಡೇಟಾ ವಿಶ್ಲೇಷಣೆ, ಗ್ರಾಹಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎಐ ಮಹತ್ವದ ಕೊಡುಗೆ ನೀಡುತ್ತಿದೆ. ಹೀಗಾಗಿ, ಭವಿಷ್ಯದಲ್ಲಿ ಕೆಲವು ಸಾಂಪ್ರದಾಯಿಕ ಉದ್ಯೋಗಗಳ ಸ್ವರೂಪ ಬದಲಾಗಬಹುದು ಅಥವಾ ಕೆಲವು ಕೆಲಸಗಳಿಗೆ ಮಾನವ ಉದ್ಯೋಗಿಗಳ ಅಗತ್ಯತೆ ಬಹುತೇಕ ಕಡಿತಗೊಳ್ಳಬಹುದು ಎಂಬ ಆತಂಕ ಉದ್ಯೋಗಿಗಳಲ್ಲಿ ಮೂಡಿದೆ.
ಎಐನಿಂದ ಉದ್ಯೋಗಗಳಿಗೆ ಮಾತ್ರವಲ್ಲ, ಮಾನವ ಸಮಾಜದ ಭವಿಷ್ಯಕ್ಕೂ ಅಪಾಯ ಎದುರಾಗಬಹುದು ಎಂಬ ಚರ್ಚೆ ಇದೀಗ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ. ಈ ನಡುವೆ ಗೂಗಲ್ ಡೀಪ್ಮೈಂಡ್ನಲ್ಲಿ ಕೆಲಸ ಮಾಡಿದ್ದ ಮಾಜಿ ಸಂಶೋಧಕರೊಬ್ಬರು ನೀಡಿರುವ ಎಚ್ಚರಿಕೆ ಈಗ ಅನೇಕರ ಗಮನ ಸೆಳೆದಿದೆ.
ಅಲೆಕ್ಸ್ ಟರ್ನರ್ (Alex Turner) ಅವರು ಮುಂದುವರಿದ ಎಐ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ಅವುಗಳ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಎಐ ಸುರಕ್ಷತೆಗೆ ಸಂಬಂಧಿಸಿದ ಭರವಸೆಗಳನ್ನು ಕಂಪನಿ ಈಡೇರಿಸಲು ಸಾಧ್ಯವಾಗದ ಕಾರಣ, ತಾವು ಕೆಲಸ ತೊರೆದಿರುವುದಾಗಿ ಹೇಳಿದ್ದಾರೆ. ಇತ್ತೀಚೆಗೆ, ಪಾಲಿಸೇಡ್ ರಿಸರ್ಚ್ (Palisade Research) ಜತೆಗಿನ ಸಂದರ್ಶನದಲ್ಲಿ, ಎಐನಿಂದ ಎದುರಾಗಬಹುದಾದ ಅಪಾಯಗಳ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಸರ್ಕಾರದ ಆಡಳಿತ ವ್ಯವಸ್ಥೆ, ಸೇನಾ ಕಾರ್ಯಾಚರಣೆಗಳು ಮತ್ತು ಹಣಕಾಸು ವಲಯ ಸೇರಿದಂತೆ ಪ್ರಮುಖ ಕ್ಷೇತ್ರಗಳು ಎಐ ಮೇಲೆ ಹೆಚ್ಚು ಅವಲಂಬಿತವಾಗುವ ಸಾಧ್ಯತೆಯಿದೆ ಎಂದು ಟರ್ನರ್ ಎಚ್ಚರಿಸಿದ್ದಾರೆ. ಇಂತಹ ಪರಿಸ್ಥಿತಿ ಎದುರಾದರೆ, ಈ ವ್ಯವಸ್ಥೆಗಳ ಮೇಲಿನ ಮಾನವನ ನಿಯಂತ್ರಣ ದುರ್ಬಲವಾಗಬಹುದು ಎಂದಿದ್ದಾರೆ.
ಎಐ ವ್ಯವಸ್ಥೆಗಳು ಮನುಷ್ಯರು ನಿರೀಕ್ಷಿಸಿದ ರೀತಿಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತವೆ ಎಂಬ ಖಾತರಿ ಇಲ್ಲ. ಅವುಗಳಿಗೆ ನೀಡಿದ ಗುರಿಯನ್ನು ಸಾಧಿಸುವ ಪ್ರಕ್ರಿಯೆಯಲ್ಲಿ ಮಾನವ ಹಿತಾಸಕ್ತಿಗೆ ವಿರುದ್ಧವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯೂ ಇದೆ ಎಂದೂ ಅಭಿಪ್ರಾಯಿಸಿದ್ದಾರೆ.
ತಮ್ಮ ಆತಂಕಕ್ಕೆ ಉದಾಹರಣೆಯಾಗಿ ಓಪನ್ಎಐ ಏಜೆಂಟ್ಗಳು ಮತ್ತು ಹಗ್ಗಿಂಗ್ ಫೇಸ್ (Hugging Face) ಸಂಬಂಧಿತ ಪರೀಕ್ಷೆಯೊಂದನ್ನು ಅವರು ಉಲ್ಲೇಖಿಸಿದ್ದಾರೆ. ಈ ಪರೀಕ್ಷೆಯಲ್ಲಿ ಎಐ ಏಜೆಂಟ್ಗಳು ಯಶಸ್ಸು ಸಾಧಿಸಲು ನಿರೀಕ್ಷೆಗೂ ಮೀರಿದ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡಿದ್ದವು. ಇಂತಹ ಘಟನೆಗಳು ಎಐ ವ್ಯವಸ್ಥೆಗಳನ್ನು ನಿಯಂತ್ರಿಸುವಲ್ಲಿನ ಸವಾಲುಗಳನ್ನು ತೋರಿಸುತ್ತವೆ ಎಂಬುದು ಅವರ ವಾದ.
ಎಐ ತಂತ್ರಜ್ಞಾನದ ಅಭಿವೃದ್ಧಿಯನ್ನೇ ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬುದು ತಮ್ಮ ನಿಲುವಲ್ಲ. ಆದರೆ, ಸೂಕ್ತ ಸುರಕ್ಷತಾ ಕ್ರಮಗಳನ್ನು ರೂಪಿಸದೆ, ಯಾವುದೇ ನಿಯಂತ್ರಣವಿಲ್ಲದೆ ಎಐ ಅಭಿವೃದ್ಧಿಯನ್ನು ವೇಗಗೊಳಿಸುವುದು ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ. ಒಟ್ಟಾರೆ, ಎಐ ತಂತ್ರಜ್ಞಾನ ಮಾನವನ ಕೆಲಸವನ್ನು ಸುಲಭಗೊಳಿಸುವ ಪ್ರಬಲ ಸಾಧನವಾಗುತ್ತದೆಯೋ ಅಥವಾ ಉದ್ಯೋಗಗಳಿಗೂ ಮಾನವ ನಿಯಂತ್ರಣಕ್ಕೂ ಸವಾಲಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ. ಎಐನಿಂದ ಉದ್ಯೋಗ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಜತೆಗೆ ಅದರ ಸುರಕ್ಷತೆಯ ಬಗ್ಗೆಯೂ ಗಂಭೀರ ಚರ್ಚೆ ಇದೀಗ ಹುಟ್ಟಿಕೊಂಡಿದೆ,(ಏಜೆನ್ಸೀಸ್).