ಸನ್​ ಗ್ಲಾಸ್​ ಧರಿಸಿ ಕಣ್ಣೀರು ಮರೆಮಾಚಿದ ಮೊಹಮ್ಮದ್​ ಸಿರಾಜ್​!  
ಕ್ರಿಕೆಟ್

ಸನ್​ ಗ್ಲಾಸ್​ ಧರಿಸಿ ಕಣ್ಣೀರು ಮರೆಮಾಚಿದ ಸಿರಾಜ್​! ಟೀಮ್​ ಇಂಡಿಯಾ ವೇಗಿಗೆ ಕಾಡುತ್ತಿರುವ ನೋವೇನು? ವಿಡಿಯೋ ವೈರಲ್...Mohammed Siraj

ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ, ಬೆಂಚ್ ಕಾಯುತ್ತಿದ್ದ ಮೊಹಮ್ಮದ್ ಸಿರಾಜ್ ಸನ್‌ಗ್ಲಾಸ್ ಧರಿಸಿ ಭಾವುಕರಾಗಿರುವಂತೆ ಕಂಡುಬಂದರು.

ವೆಲ್ಲಿಂಗ್ಟನ್​: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದಲೂ ಹಿರಿಯ ವೇಗಿ ಮೊಹಮ್ಮದ್ ಸಿರಾಜ್ ( Mohammed Siraj ) ಅವರನ್ನು ಕೈಬಿಟ್ಟಿರುವ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ ವಿರುದ್ಧ ಮಾಜಿ ಕ್ರಿಕೆಟಿಗ ಮುರಳಿ ಕಾರ್ತಿಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಿರಾಜ್ ಅವರು ಸನ್‌ಗ್ಲಾಸ್ ಧರಿಸಿ ತಮ್ಮ ಕಣ್ಣೀರನ್ನು ಮರೆಮಾಚುತ್ತಿದ್ದರಾ ಎಂಬ ಪ್ರಶ್ನೆ ಕೇಳುವ ಮೂಲಕ ಕಾರ್ತಿಕ್​ ಅವರು ಕ್ರಿಕೆಟ್​ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ, ಬೆಂಚ್ ಕಾಯುತ್ತಿದ್ದ ಮೊಹಮ್ಮದ್ ಸಿರಾಜ್ ಸನ್‌ಗ್ಲಾಸ್ ಧರಿಸಿ ಭಾವುಕರಾಗಿರುವಂತೆ ಕಂಡುಬಂದರು. ಅಧಿಕೃತ ಪ್ರಸಾರಕರ ಚರ್ಚೆಯಲ್ಲಿ ಭಾಗವಹಿಸಿದ್ದ ಮಾಜಿ ಕ್ರಿಕೆಟಿಗರಾದ ಮುರಳಿ ಕಾರ್ತಿಕ್ ಮತ್ತು ಅಜಿಂಕ್ಯ ರಹಾನೆ ಈ ದೃಶ್ಯಗಳನ್ನು ಗಮನಿಸಿ, ಸಿರಾಜ್ ತಮ್ಮ ಕಣ್ಣೀರನ್ನು ಮರೆಮಾಚಲು ಸನ್‌ಗ್ಲಾಸ್ ಧರಿಸಿದ್ದರಾ ಎಂದು ಅನುಮಾನ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕಾರ್ತಿಕ್, "ಸಿರಾಜ್ ಅಳುತ್ತಿದ್ದಾರೆ, ಅವರು ಖಂಡಿತವಾಗಿಯೂ ಹಾಗೆ ಮಾಡುತ್ತಾರೆ. ಏಕೆಂದರೆ ಅವರು ತುಂಬಾ ಭಾವುಕ ವ್ಯಕ್ತಿ" ಎಂದು ಹೇಳಿದರೆ, ತಮಗೆ ಈ ಬಗ್ಗೆ ಖಚಿತತೆಯಿಲ್ಲ ಎಂದು ರಹಾನೆ ಉತ್ತರಿಸಿದರು.

2020ರಲ್ಲಿ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದ, ಸಿರಾಜ್ ಭಾರತದ ಪ್ರತಿಯೊಂದು ವಿದೇಶಿ ಟೆಸ್ಟ್ ಸರಣಿಯಲ್ಲೂ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಕ್ರೈಸ್ಟ್‌ಚರ್ಚ್ ಪಂದ್ಯದಲ್ಲಿ ಅವಕಾಶ ವಂಚಿತರಾಗುವ ಮೂಲಕ ಅವರ ಆರು ವರ್ಷಗಳ ಈ ಅಪರೂಪದ ದಾಖಲೆಗೆ ತೆರೆಬಿದ್ದಿದೆ. ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಆವೃತ್ತಿಯಲ್ಲಿ 11 ಪಂದ್ಯಗಳಿಂದ 43 ವಿಕೆಟ್ ಪಡೆದು ಭಾರತದ ಪರ ಅತಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಆಗಿದ್ದರೂ, ಮೊದಲ ಟೆಸ್ಟ್ ಬಳಿಕ ಎರಡನೇ ಟೆಸ್ಟ್‌ನಲ್ಲೂ ಅವರನ್ನು ಬೆಂಚ್‌ಗೆ ಸೀಮಿತಗೊಳಿಸಿರುವುದು ಅಚ್ಚರಿ ಮೂಡಿಸಿದೆ.

ತಂಡದಿಂದ ಕೈಬಿಟ್ಟಾಗ ಆಟಗಾರರು ಪ್ರತಿಕ್ರಿಯಿಸುವ ರೀತಿಯನ್ನು ವಿವರಿಸಿದ ಮುರಳಿ ಕಾರ್ತಿಕ್, "ತಂಡದಿಂದ ಹೊರಗುಳಿದಾಗ ಖಂಡಿತವಾಗಿಯೂ ನೋವಾಗುತ್ತದೆ. ನಾವು ಅಂತಹ ಅನೇಕ ಆಟಗಾರರೊಂದಿಗೆ ಆಡಿದ್ದೇವೆ. ಕೆಲವರಿಗೆ ತಂಡದಿಂದ ಕೈಬಿಟ್ಟರೂ ಯಾವುದೇ ಸಮಸ್ಯೆಯಾಗುವುದಿಲ್ಲ, ಆದರೆ ಇನ್ನು ಕೆಲವರು ಕಾಲು ನೋವು, ಮೈಕೈ ನೋವಿದ್ದರೂ ಅಥವಾ ಇಡೀ ದೇಹ ನಡುಗುತ್ತಿದ್ದರೂ ದೇಶಕ್ಕಾಗಿ ಆಡಲು ಹಂಬಲಿಸುತ್ತಾರೆ ಮತ್ತು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತಾರೆ. ಸಿರಾಜ್ ಕೂಡ ಅಂತಹದ್ದೇ ಮನಸ್ಸಿನಿಂದ ಆಡುವ ಆಟಗಾರ ಎಂದು ಶ್ಲಾಘಿಸಿದರು.

ಸಿರಾಜ್ ಅವರ ಅಂಕಿಅಂಶಗಳನ್ನು ಗಮನಿಸಿದರೆ ಅವರನ್ನು ಕೈಬಿಡುವ ನಿರ್ಧಾರ ತಮಗೆ ತೀವ್ರ ಆಶ್ಚರ್ಯ ತಂದಿದೆ ಎಂದು ಕಾರ್ತಿಕ್ ಟೀಮ್ ಮ್ಯಾನೇಜ್‌ಮೆಂಟ್‌ ವಿರುದ್ಧ ಕಿಡಿಕಾರಿದ್ದಾರೆ. "ಸಿರಾಜ್ ನೆಟ್ಸ್‌ನಲ್ಲಿ ಸರಿಯಾಗಿ ಬೌಲಿಂಗ್ ಮಾಡುತ್ತಿಲ್ಲ ಅಥವಾ ಅವರು ಫಾರ್ಮ್‌ನಲ್ಲಿ ಇಲ್ಲ ಎಂದು ನಿಮಗೆ ಅನಿಸಿದರೆ, ಅವರನ್ನು ತಂಡಕ್ಕೆ ಆಯ್ಕೆ ಮಾಡಬೇಡಿ ಮತ್ತು ಪ್ರವಾಸಕ್ಕೆ ಕರೆದೊಯ್ಯಬೇಡಿ. ಸುಮ್ಮನೆ ತಂಡದಲ್ಲಿಟ್ಟುಕೊಂಡು ಅವಕಾಶ ನೀಡದಿರುವುದರಲ್ಲಿ ಏನು ಅರ್ಥವಿದೆ?" ಎಂದು ಮುರಳಿ ಕಾರ್ತಿಕ್ ನೇರವಾಗಿ ಪ್ರಶ್ನಿಸಿದ್ದಾರೆ, (ಏಜೆನ್ಸೀಸ್​).