ಕ್ರಿಕೆಟ್‌ನಿಂದ ಬ್ರೇಕ್ ಫ್ಯಾಮಿಲಿ ಜೊತೆ ಪಿಕ್ನಿಕ್: ಮಗ ಅಕಾಯ್ ಜತೆ ಆಡುತ್ತಾ ಚೇತರಿಸಿಕೊಳ್ಳುತ್ತಿರುವ ಕಿಂಗ್ ಕೊಹ್ಲಿ! Virat Kohli
- ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ
- ಬಿಡುವಿನ ಸಮಯವನ್ನು ತಮ್ಮ ಕುಟುಂಬದೊಂದಿಗೆ ಕಳೆಯುತ್ತಿರುವ ಕೊಹ್ಲಿ ಸುಮಧುರ ಕ್ಷಣಗಳನ್ನು ಸವಿಯುತ್ತಿದ್ದಾರೆ
- ಹೊಸ ಫೋಟೋಗಳು ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಹೊರಗಿನ ಜೀವನವನ್ನು ಪರಿಚಯಿಸಿದೆ
Virat Kohli : ಟೀಮ್ ಇಂಡಿಯಾದ ರನ್ ಮಷಿನ್, ದಾಖಲೆಗಳ ಸರದಾರ, ಕ್ರಿಕೆಟ್ ಲೋಕದ ಕಿಂಗ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವುದರಿಂದ ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದಾರೆ. ಈ ಬಿಡುವಿನ ಸಮಯವನ್ನು ತಮ್ಮ ಕುಟುಂಬದೊಂದಿಗೆ ಕಳೆಯುತ್ತಿರುವ ಕೊಹ್ಲಿ ಸುಮಧುರ ಕ್ಷಣಗಳನ್ನು ಸವಿಯುತ್ತಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಹೊಸ ಫೋಟೋಗಳು ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಹೊರಗಿನ ಜೀವನವನ್ನು ಪರಿಚಯಿಸಿದೆ. ಫೋಟೋಗಳಲ್ಲಿ ಕೊಹ್ಲಿ ಅವರು ತಮ್ಮ ಕುಟುಂಬದೊಂದಿಗೆ ಹಸಿರುಮಯವಾದ ಸುಂದರ ವಾತಾವರಣದಲ್ಲಿ ವಿಶ್ರಾಂತಿ ಪಡೆಯುತ್ತಾ ಆನಂದಿಸುತ್ತಿರುವುದು ಕಂಡುಬರುತ್ತದೆ. ಅದರಲ್ಲೂ ವಿಶೇಷವಾಗಿ ಒಂದು ಫೋಟೋದಲ್ಲಿ ಕೊಹ್ಲಿ ಅವರು ತಮ್ಮ ಮಗ ಅಕಾಯ್ ಅವರಿಗೆ ಪಿಗ್ಗಿಬ್ಯಾಕ್ ರೈಡ್ ನೀಡುತ್ತಿರುವುದು ಅಥವಾ ಬೆನ್ನ ಮೇಲೆ ಹೊತ್ತು ಓಡುತ್ತಿರುವ ಪ್ರೀತಿಯ ಕ್ಷಣ ಸೆರೆಯಾಗಿದೆ.
ಬ್ಲ್ಯಾಕ್ ಹೂಡಿ ಮತ್ತು ಖಾಕಿ ಪ್ಯಾಂಟ್ ಧರಿಸಿ ಅತ್ಯಂತ ಸರಳವಾಗಿ ಕಾಣಿಸಿಕೊಂಡಿರುವ ವಿರಾಟ್ ಕೊಹ್ಲಿ, ತಮ್ಮ ಕುಟುಂಬದೊಂದಿಗೆ ಪ್ರಶಾಂತವಾದ ಕ್ಷಣಗಳನ್ನು ಕಳೆಯುತ್ತಾ ನಿರಾಳವಾಗಿ ಕಂಡುಬಂದರು. ಅವರ ಹಿನ್ನೆಲೆಯಲ್ಲಿ ಕಂಡ ಮಗುವಿನ ಸ್ಟ್ರೋಲರ್, ಸ್ನ್ಯಾಕ್ಸ್ ಮತ್ತು ಗುಲಾಬಿ ಬಣ್ಣದ ಬಲೂನ್ ಅವರೆಲ್ಲರೂ ಒಂದು ಸುಂದರವಾದ ಫ್ಯಾಮಿಲಿ ಪಿಕ್ನಿಕ್ ಎಂಜಾಯ್ ಮಾಡುತ್ತಿರುವ ಸುಳಿವು ನೀಡಿವೆ. ಇದೇ ವೇಳೆ, ಪತ್ನಿ ಅನುಷ್ಕಾ ಶರ್ಮಾ ಅವರು ಪಕ್ಕದಲ್ಲೇ ಸ್ನೇಹಿತರೊಂದಿಗೆ ಮಾತುಕತೆಯಲ್ಲಿ ನಿರತರಾಗಿರುವುದು ಫೋಟೋಗಲ್ಲಿ ಕಂಡುಬಂದಿವೆ.
ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದ್ದು, ಕ್ರಿಕೆಟ್‌ನಿಂದ ಸಿಕ್ಕಿರುವ ಈ ಅಪರೂಪದ ಬಿಡುವಿನ ದಿನಗಳಲ್ಲಿ ತಮ್ಮ ನೆಚ್ಚಿನ ಬ್ಯಾಟರ್ ಕುಟುಂಬದೊಂದಿಗೆ ಅಮೂಲ್ಯವಾದ ಕ್ಷಣಗಳನ್ನು ಕಳೆಯುತ್ತಿರುವುದನ್ನು ಕಂಡು ಅಭಿಮಾನಿಗಳು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಐಪಿಎಲ್ 2026ರ ಫೈನಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಅವರ ತೊಡೆಯ ಹಿಂಭಾಗದ ಸ್ನಾಯುವಿಗೆ ತೀವ್ರ ಪೆಟ್ಟಾಗಿದ್ದು, ಸದ್ಯ ಅವರು ಮೈದಾನದಿಂದ ಹೊರಗುಳಿಯಬೇಕಾಗಿ ಬಂದಿದೆ. ಈ ಗಾಯದ ಕಾರಣದಿಂದಾಗಿಯೇ ಅವರು ಪ್ರಸ್ತುತ ಅಫ್ಘಾನಿಸ್ತಾನ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಯಶಸ್ವಿ ಜೈಸ್ವಾಲ್ ತಂಡವನ್ನು ಸೇರಿಕೊಂಡಿದ್ದಾರೆ.
ಸದ್ಯ 37 ವರ್ಷದ ವಿರಾಟ್ ಕೊಹ್ಲಿ ಅವರು ಚೇತರಿಸಿಕೊಳ್ಳುತ್ತಿದ್ದು, ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆಗೆ ಸಂಪೂರ್ಣ ಫಿಟ್ನೆಸ್ ಮರಳಿ ಪಡೆಯುವ ನಿರೀಕ್ಷೆಯಿದೆ. ಇನ್ನೂ ಈ ಗಾಯದ ಹಿನ್ನಡೆಗೂ ಮುನ್ನ ವಿರಾಟ್ ಕೊಹ್ಲಿ ಅವರು ಮತ್ತೊಂದು ಅದ್ಭುತ ಐಪಿಎಲ್ ಕಿರೀಟವನ್ನು ಮುಡಿಗೇರಿಸಿಕೊಂಡರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಯಶಸ್ವಿಯಾಗಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೊಹ್ಲಿ, 16 ಪಂದ್ಯಗಳಲ್ಲಿ ಒಟ್ಟು 675 ರನ್ ಚಚ್ಚಿದ್ದರು. ಈ ಹಿರಿಯ ಬ್ಯಾಟರ್ 165.85 ರ ಸ್ಟ್ರೈಕ್ ರೇಟ್ ಮತ್ತು 56.25 ರ ಅತ್ಯಾಕರ್ಷಕ ಸರಾಸರಿಯೊಂದಿಗೆ ಸೀಸನ್ ಮುಗಿಸುವ ಮೂಲಕ ಫ್ರಾಂಚೈಸಿಗೆ ತಮ್ಮ ಪ್ರಾಮುಖ್ಯತೆ ಏನು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇನ್ನು ಅಭಿಮಾನಿಗಳು ಕೊಹ್ಲಿ ಯಾವಾಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸ್ಸಾಗುತ್ತಾರೆ ಅಂತ ಕಾತರದಿಂದ ಕಾಯುತ್ತಿದ್ದಾರೆ, (ಏಜೆನ್ಸೀಸ್).