Virat Kohli: ಇಂದು ನ್ಯೂಜಿಲೆಂಡ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಗೆದ್ದಿದ್ದೇ ಆದರೂ ಸ್ಟಾರ್ ಹಾಗೂ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಬಾರಿಸಿದ್ದು ಮಾತ್ರ ಕೇವಲ 7 ರನ್ ಅಷ್ಟೇ. ಇದು ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿತು. ಆದರೆ, ಅದೇ ಈಗ ಮತ್ತೊಬ್ಬ ಕ್ರಿಕೆಟ್ ದಂತಕಥೆಯ ದಾಖಲೆ ಹಿಂದಿಕ್ಕಲು ಸಾಕ್ಷಿಯಾಗಿದೆ ಎಂಬ ಸಂಗತಿ ಸದ್ಯ ಹುಬ್ಬೇರಿಸಿದೆ.
ದಾಖಲೆಗಳ ಸರದಾರ ಎಂದೇ ಖ್ಯಾತಿ ಗಳಿಸಿರುವ ವಿರಾಟ್ ಕೊಹ್ಲಿ ಈಗ ಮತ್ತೊಂದು ಅಪರೂಪದ ಸಾಧನೆ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಕೇವಲ 7 ರನ್ಗಳಿಗೆ ಕೊಹ್ಲಿ ಔಟಾದರೂ ಏಕದಿನ ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಮೊದಲು ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.
ಶನಿವಾರ ವೆಲ್ಲಿಂಗ್ಟನ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 7 ಎಸೆತಗಳಲ್ಲಿ ಒಂದು ಬೌಂಡರಿ ನೆರವಿನಿಂದ 7 ರನ್ ಗಳಿಸಿ ವೇಗಿ ಜಾಕೋಬ್ ಡಫಿ ಬೌಲಿಂಗ್ನಲ್ಲಿ ವಿಲ್ ಯಂಗ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು. ಆದಾಗ್ಯೂ, ಅವರು ಈ ಇನ್ನಿಂಗ್ಸ್ನಲ್ಲಿ ಒಂದು ರನ್ ಹೆಚ್ಚು ಗಳಿಸುವ ಮೂಲಕ ಪಾಂಟಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಇದುವರೆಗೆ 38 ಏಕದಿನ ಪಂದ್ಯಗಳನ್ನು ಆಡಿರುವ ಕೊಹ್ಲಿ, 56.51 ಸರಾಸರಿಯಲ್ಲಿ 1,978 ರನ್ ಗಳಿಸಿದ್ದಾರೆ.
ಇದರಲ್ಲಿ ಏಳು ಶತಕಗಳು ಮತ್ತು 11 ಅರ್ಧ ಶತಕಗಳು ಸೇರಿವೆ. 2010ರಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಕೊಹ್ಲಿ ಇದೀಗ ಆ ತಂಡದ ವಿರುದ್ಧವೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇದುವರೆಗೂ ಈ ದಾಖಲೆ ರಿಕಿ ಪಾಂಟಿಂಗ್ ಹೆಸರಿನಲ್ಲಿತ್ತು. ಅವರು ನ್ಯೂಜಿಲೆಂಡ್ ವಿರುದ್ಧ 51 ಏಕದಿನಗಳಲ್ಲಿ 45.83 ಸರಾಸರಿಯಲ್ಲಿ 1,971 ರನ್ ಗಳಿಸಿದರು. ಇದರಲ್ಲಿ ಆರು ಶತಕಗಳು ಮತ್ತು 12 ಅರ್ಧ ಶತಕಗಳು ಸೇರಿವೆ.
ಎರಡನೇ ಏಕದಿನ ಪಂದ್ಯದಲ್ಲಿ ಕಿವೀಸ್ ನೀಡಿದ 135 ರನ್ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭದಲ್ಲೇ ಹಿನ್ನಡೆ ಎದುರಾಯಿತು. ನಾಯಕ ಶುಭಮನ್ ಗಿಲ್ ಗೋಲ್ಡನ್ ಡಕ್ಗೆ ಔಟಾದರು. ರೋಹಿತ್ ಶರ್ಮಾ 28 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 23 ರನ್ ಗಳಿಸಿ ಔಟಾದರು. ಇನ್ನು, ಕೊಹ್ಲಿ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲು ಸಾಧ್ಯವಾಗದಿದ್ದರೂ ಅಪರೂಪದ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ, ಈ ಪಟ್ಟಿಯಲ್ಲಿ 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಮೂರನೇ ಸ್ಥಾನದಲ್ಲಿದ್ದಾರೆ.
1. ವಿರಾಟ್ ಕೊಹ್ಲಿ (ಭಾರತ) - 1,978 ರನ್
2. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 1,971 ರನ್
3. ಸಚಿನ್ ತೆಂಡೂಲ್ಕರ್ (ಭಾರತ) - 1,750 ರನ್
4. ಕುಮಾರ್ ಸಂಗಕ್ಕಾರ (ಶ್ರೀಲಂಕಾ) - 1,568 ರನ್
5. ಸನತ್ ಜಯಸೂರ್ಯ (ಶ್ರೀಲಂಕಾ) - 1,519 ರನ್
6. ಜಾಕ್ವೆಸ್ ಕಾಲಿಸ್ (ದಕ್ಷಿಣ ಆಫ್ರಿಕಾ) - 1,449 ರನ್