RCB  
ಕ್ರಿಕೆಟ್

RCB ಗೆಲುವಿನ ಬೆನ್ನಲ್ಲೇ ಪ್ರೇಮಾನಂದ್ ಮಹಾರಾಜ್ ಆಶೀರ್ವಾದ ಪಡೆದ ಕೊಹ್ಲಿ ದಂಪತಿ! ವೈರಲ್​ ವಿಡಿಯೋ ಇಲ್ಲಿದೆ

ಬೆಂಗಳೂರು: ಗುಜರಾತ್ ಟೈಟನ್ಸ್ ವಿರುದ್ಧದ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟ ಬೆನ್ನಲ್ಲೇ, ರನ್ ಮಷೀನ್ ವಿರಾಟ್ ಕೊಹ್ಲಿ ಆಧ್ಯಾತ್ಮದತ್ತ ಮುಖ ಮಾಡಿದ್ದಾರೆ. ಸೋಮವಾರ ಕೊಹ್ಲಿ ಹಾಗೂ ಅವರ ಧರ್ಮಪತ್ನಿ, ಅನುಷ್ಕಾ ಶರ್ಮಾ ವೃಂದಾವನದಲ್ಲಿರುವ ಪ್ರಸಿದ್ಧ ಆಧ್ಯಾತ್ಮಿಕ ಗುರು ಪ್ರೇಮಾನಂದ್ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿ ವಿಶೇಷ ಆಶೀರ್ವಾದ ಪಡೆದಿದ್ದಾರೆ.
ಸದಾ ಪ್ರಚಾರದ ಬೆಳಕಿನಿಂದ ದೂರ ಉಳಿದು ಸರಳತೆ ಇಷ್ಟಪಡುವ ಈ ಸ್ಟಾರ್ ದಂಪತಿ, ಮುಖಕ್ಕೆ ಮಾಸ್ಕ್ ಧರಿಸಿ ಅತ್ಯಂತ ಸಾಧಾರಣ ಉಡುಪಿನಲ್ಲಿ ವೃಂದಾವನದ 'ರಾಧಾ ಕೇಳಿ ಕುಂಜ್ ಆಶ್ರಮ'ಕ್ಕೆ ಆಗಮಿಸಿದ್ದರು. ಆಶ್ರಮದಿಂದ ಹೊರಬರುವ ಇವರ ಕೆಲವು ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಕೀರ್ತಿ, ಯಶಸ್ಸು ಹಾಗೂ ಸೆಲೆಬ್ರಿಟಿ ಜೀವನದ ಆಚೆಗಿನ ಬದುಕಿನ ಪಾಠಗಳನ್ನು ಕಲಿಯಲು ಕೊಹ್ಲಿ ದಂಪತಿ ಆಗಾಗ ವೃಂದಾವನಕ್ಕೆ ಭೇಟಿ ನೀಡುವುದು ವಾಡಿಕೆ.
ℹ️

ಖುಷಿ ಹಂಚಿಕೊಂಡ ಅನುಷ್ಕಾ ಶರ್ಮಾ

ಆರ್‌ಸಿಬಿ ತಂಡದ ಈ ಐತಿಹಾಸಿಕ ಗೆಲುವನ್ನು ಸಂಭ್ರಮಿಸಲು ಅನುಷ್ಕಾ ಶರ್ಮಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರೀತಿಯ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ವಿರಾಟ್ ಮತ್ತು ಅನುಷ್ಕಾ ಒಟ್ಟಿಗೆ ಐಪಿಎಲ್ ಟ್ರೋಫಿ ಹಿಡಿದುಕೊಂಡಿದ್ದು, ಅನುಷ್ಕಾ ಅವರು ವಿರಾಟ್ ಕೊಹ್ಲಿ ಅವರ ಹಣೆಗೊಂದು ಮುತ್ತಿಟ್ಟು ಗೆಲುವಿನ ಸಿಹಿಯನ್ನು ಕೊಂಡಾಡಿದ್ದಾರೆ. ಇದರೊಂದಿಗೆ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಕೊಹ್ಲಿ ಮನಬಿಚ್ಚಿ ಡ್ಯಾನ್ಸ್ ಮಾಡುತ್ತಿದ್ದರೆ, ಅನುಷ್ಕಾ ತಮ್ಮ ಫೋನ್‌ನಲ್ಲಿ ಅದನ್ನು ರೆಕಾರ್ಡ್ ಮಾಡುತ್ತಿದ್ದಾರೆ. ಈ ವಿಜಯೋತ್ಸವದ ನೃತ್ಯದಲ್ಲಿ ಆರ್‌ಸಿಬಿ ಆಟಗಾರ ದಿನೇಶ್ ಕಾರ್ತಿಕ್ ಕೂಡ ಕೊಹ್ಲಿಗೆ ಸಾಥ್ ನೀಡಿದ್ದಾರೆ.

ಫೈನಲ್ ಪಂದ್ಯದಲ್ಲಿ ಅಜೇಯ 75 ರನ್

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ 156 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಪರ ಹಿರಿಯ ಬ್ಯಾಟರ್ ವಿರಾಟ್ ಕೊಹ್ಲಿ ಅಬ್ಬರಿಸಿದರು. ಕೇವಲ 12 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದ ಕೊಹ್ಲಿ, ಅಜೇಯ 75 ರನ್ ಚಚ್ಚಿದರು. ಮೈದಾನದ ನೇರಕ್ಕೆ ಭರ್ಜರಿ ಬೌಂಡರಿ ಹಾಗೂ ಸಿಕ್ಸರ್ ಬಾರಿಸುವ ಮೂಲಕ ವಿಶಿಷ್ಟ ಶೈಲಿಯಲ್ಲಿ ಗೆಲುವನ್ನು ಆಚರಿಸಿದರು.

ಈ ಬಾರಿ ಆರ್‌ಸಿಬಿ ತಂಡದಲ್ಲಿ ಸಮತೋಲನವಿತ್ತು

ಗೆಲುವಿನ ನಂತರ ಮಾತನಾಡಿದ ಕೊಹ್ಲಿ, "ಈ ಬಾರಿಯ ಆರ್‌ಸಿಬಿ ತಂಡ ಅತ್ಯಂತ ಬಲಿಷ್ಠ ಹಾಗೂ ಸಮತೋಲನದಿಂದ ಕೂಡಿತ್ತು. ಕಳೆದ ವರ್ಷದ ಫೈನಲ್‌ನಲ್ಲಿದ್ದಷ್ಟು ಒತ್ತಡ ಈ ಬಾರಿ ನಮಗೆ ಇರಲಿಲ್ಲ. ನಾವು ನಮ್ಮ ಎಂದಿನ ಶೈಲಿಯ ಕ್ರಿಕೆಟ್ ಆಡಿದರೆ ನಾವೇ ಬೆಸ್ಟ್ ತಂಡ ಎಂದು ನಮಗೆ ತಿಳಿದಿತ್ತು. ಲೀಗ್ ಹಂತದಲ್ಲೂ ನಾವು ಅಗ್ರಸ್ಥಾನದಲ್ಲಿದ್ದೆವು. ಇಡೀ ಟೂರ್ನಮೆಂಟ್‌ನಲ್ಲಿ ನಮ್ಮ ಆಟಗಾರರು ತೋರಿದ ಪ್ರಬುದ್ಧತೆ ಮತ್ತು ಸಂಯಮವೇ ಈ ಗೆಲುವಿಗೆ ಮುಖ್ಯ ಕಾರಣ" ಎಂದು ತಂಡವನ್ನು ಕೊಂಡಾಡಿದ್ದಾರೆ.
2017ರಲ್ಲಿ ವಿವಾಹವಾಗಿದ್ದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ ಅಕಾಯ್ ಎಂಬ ಮಗ ಹಾಗೂ ವಾಮಿಕಾ ಎಂಬ ಮಗಳಿದ್ದಾರೆ. ಸದ್ಯ ಕ್ರಿಕೆಟ್ ಬಿಡುವಿನ ವೇಳೆಯನ್ನು ಕೊಹ್ಲಿ ಸಂಪೂರ್ಣವಾಗಿ ಕುಟುಂಬ ಮತ್ತು ಆಧ್ಯಾತ್ಮಕ್ಕೆ ಮೀಸಲಿಟ್ಟಿದ್ದಾರೆ,(ಏಜೆನ್ಸೀಸ್​).