ಈ ವರ್ಷ SSLC ಪರೀಕ್ಷೆ ಬರೆಯಲ್ಲ ವೈಭವ್ ಸೂರ್ಯವಂಶಿ​ ( Vaibhav Suryavanshi ) 
ಕ್ರಿಕೆಟ್

ಈ ವರ್ಷ SSLC ಪರೀಕ್ಷೆ ಬರೆಯಲ್ಲ ಎಂದ ವೈಭವ್ ಸೂರ್ಯವಂಶಿ: ತಂದೆ ಕೊಟ್ಟ ಕಾರಣ ಹೀಗಿದೆ ನೋಡಿ...Vaibhav Suryavanshi

ಪ್ರಮುಖ ಮುಖ್ಯಾಂಶಗಳು

  • ವೈಭವ್​ ಸೂರ್ಯವಂಶಿ ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಭಾರಿ ಸುದ್ದಿಯಾಗಿತ್ತು
  • ವೈಭವ್ ಅವರ ಪರೀಕ್ಷಾ ಫಾರ್ಮ್​ ಅನ್ನು ಭರ್ತಿ ಮಾಡಿ, ಹಾಲ್​ ಟಿಕೆಟ್​ ಕೂಡ ನೀಡಲಾಗಿದೆ
  • ಪರೀಕ್ಷಾ ಕೇಂದ್ರವನ್ನು ಪೊದ್ದಾರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಿಗದಿಪಡಿಸಲಾಗಿದೆ
  • ಆದರೆ ಈ ವರ್ಷ ಸೂರ್ಯವಂಶಿ ಪರೀಕ್ಷೆಯನ್ನು ಬರೆಯುವುದಿಲ್ಲ ಎಂಬ ಸುದ್ದಿ ಇದೀಗ ಹೊರಬಿದ್ದಿದೆ
Vaibhav Suryavanshi : ಟೀಮ್​​ ಇಂಡಿಯಾದ ಭವಿಷ್ಯದ ಭರವಸೆ ಆಟಗಾರ ವೈಭವ್​ ಸೂರ್ಯವಂಶಿ ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಎರಡು ದಿನಗಳ ಹಿಂದಷ್ಟೇ ಭಾರಿ ಸುದ್ದಿಯಾಗಿತ್ತು. ಆದರೆ, ಅದೇ ವಿಷಯವಾಗಿ ಮತ್ತೊಂದು ಸುದ್ದಿ ಹೊರಬಿದ್ದಿದ್ದೆ. ಅದೇನೆಂದರೆ, ಈ ವರ್ಷ ಸೂರ್ಯವಂಶಿ ಪರೀಕ್ಷೆಯನ್ನು ಬರೆಯುವುದಿಲ್ಲ.
ಸೂರ್ಯವಂಶಿ ಅವರು ಬಿಹಾರದ ಸಮಷ್ಠಿಪುರ ಜಿಲ್ಲೆಯ ತಾಜ್‌ಪುರದ ನಿವಾಸಿ. ಇಲ್ಲಿನ ಮಾಡೆಸ್ಟಿ ಸ್ಕೂಲ್​ನಲ್ಲಿ ಓದುತ್ತಿರುವ ಸೂರ್ಯವಂಶಿ, ಫೆಬ್ರವರಿ 17 ರಿಂದ ಮಾರ್ಚ್ 11ರವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ಬೋರ್ಡ್​ ಪರೀಕ್ಷೆಗೆ ಹಾಜರಾಗಬೇಕಿತ್ತು. ಆದಾಗ್ಯೂ, ಕ್ರಿಕೆಟ್​ನಲ್ಲಿ ನಿರಂತರವಾಗಿ ಬಿಜಿಯಾದ್ದರಿಂದ ಮನೆ ಮತ್ತು ಶಾಲೆಯಿಂದ ದೂರ ಉಳಿಯಬೇಕಾಯಿತು. ಇದರಿಂದಾಗಿ ಸೂರ್ಯವಂಶಿ, ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಧ್ಯವಾಗಿಲ್ಲ. ಹಾಗಾಗಿ, ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ಸೂರ್ಯವಂಶಿ ದೂರ ಉಳಿಯಲಿದ್ದಾರೆ.
ಅಂದಹಾಗೆ, ವೈಭವ್ ಅವರ ಪರೀಕ್ಷಾ ಫಾರ್ಮ್​ ಅನ್ನು ಭರ್ತಿ ಮಾಡಿ, ಹಾಲ್​ ಟಿಕೆಟ್​ ಕೂಡ ನೀಡಲಾಗಿದೆ. ಪರೀಕ್ಷಾ ಕೇಂದ್ರವನ್ನು ಪೊದ್ದಾರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಿಗದಿಪಡಿಸಲಾಗಿದೆ ಎಂದು ತಾಜ್​ಪುರದ ಮಾಡೆಸ್ಟಿ ಸ್ಕೂಲ್ ನಿರ್ದೇಶಕ ಆದರ್ಶ್ ಕುಮಾರ್ ಪಿಂಟು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಬಗ್ಗೆ ಪೋದಾರ್ ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲ ನೀಲ್ ಕಿಶೋರ್ ಸಿನ್ಹಾ ಕೂಡ ಮಾತನಾಡಿದ್ದರು. ವೈಭವ್ ಸೂರ್ಯವಂಶಿ ನಮ್ಮ ಶಾಲೆಯಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯಲಿದ್ದಾರೆ. ನಾವು ಈಗಾಗಲೇ ಆತನಿಗೆ ಪ್ರವೇಶ ಪತ್ರವನ್ನು ನೀಡಿದ್ದೇವೆ. ವೈಭವ್ ಆಗಮನಕ್ಕಾಗಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಕಾತರದಿಂದ ಕಾಯುತ್ತಿದ್ದಾರೆ. ಆತ ಇನ್ನೂ ವಿದ್ಯಾರ್ಥಿಯಾಗಿರುವುದರಿಂದ ಯಾವುದೇ ವಿಶೇಷ ಸೌಲಭ್ಯಗಳನ್ನು ಆತನಿಗೆ ಒದಗಿಸುವುದಿಲ್ಲ. ಆತ ಮಿಶ್ರ ಸ್ವರೂಪದಲ್ಲಿ ಪರೀಕ್ಷೆಗಳನ್ನು ಬರೆಯುತ್ತಾನೆ. ಅದಕ್ಕೆ ಅನುಗುಣವಾಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದಿದ್ದರು.
ಪರೀಕ್ಷೆ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ವೈಭವ್ ಅವರ ತಂದೆ ಸಂಜೀವ್ ಸೂರ್ಯವಂಶಿ ಅವರನ್ನು ಸಂಪರ್ಕಿಸಿದಾಗ, ತಮ್ಮ ಮಗ ಈ ವರ್ಷ ಪರೀಕ್ಷೆಗೆ ಹಾಜರಾಗುವುದಿಲ್ಲ ಎಂದು ಹೇಳಿರುವುದಾಗಿ ಎನ್​ಡಿಟಿವಿ ವರದಿ ಮಾಡಿದೆ. ಪರೀಕ್ಷೆಗೆ ಯಾವುದೇ ಸಿದ್ಧತೆ ನಡೆಸಿಲ್ಲ. ಕ್ರಿಕೆಟ್​ನಲ್ಲಿ ಸಖತ್​ ಬಿಜಿಯಾಗಿರುವುದರಿಂದ ನನ್ನ ಮಗ ಮನೆ ಮತ್ತು ಶಾಲೆಯಿಂದ ದೂರ ಉಳಿದಿದ್ದಾನೆ ಎಂದು ಸಂಜೀವ್​ ತಿಳಿಸಿದ್ದಾರೆ.
ಅಂದಹಾಗೆ, 14 ವರ್ಷದ ವೈಭವ್, 2025ರ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ಪರ ಪಾದರ್ಪಣೆ ಮಾಡಿ ಕೇವಲ 15 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದರು. ಅದಾದ ನಂತರ, ಭಾರತ-ಎ ತಂಡ ಮತ್ತು ಅಂಡರ್-19 ತಂಡದಲ್ಲೂ ರೋಮಾಂಚಕ ಪ್ರದರ್ಶನ ನೀಡಿದರು. ಇತ್ತೀಚೆಗೆ ನಡೆದ ಅಂಡರ್-19 ವಿಶ್ವಕಪ್‌ನಲ್ಲೂ ವೈಭವ್​ ಮಿಂಚಿದರು.
ಇಂಗ್ಲೆಂಡ್ ವಿರುದ್ಧದ ಅಂಡರ್-19 ವಿಶ್ವಕಪ್‌ನ ಫೈನಲ್‌ನಲ್ಲಿ 15 ಬೌಂಡರಿ ಮತ್ತು 15 ಸಿಕ್ಸರ್​ಗಳ ನೆರವಿನಿಂದ ಕೇವಲ 80 ಎಸೆತಗಳಲ್ಲಿ 175 ರನ್ ಗಳಿಸಿದ ವೈಭವ್, ಭಾರತವನ್ನು ಚಾಂಪಿಯನ್ ಆಗಿ ಮಾಡಿದರು. ಒಟ್ಟು 439 ರನ್ ಗಳಿಸಿದ ವೈಭವ್ 'ಟೂರ್ನಮೆಂಟ್‌ನ ಆಟಗಾರ'ನೆಂಬ ಗೌರವಕ್ಕೆ ಪಾತ್ರರಾದರು, (ಏಜೆನ್ಸೀಸ್​).