ಕನ್ನಡಿಗನಿಂದ ಟೀಮ್​ ಇಂಡಿಯಾ ಜೆರ್ಸಿ ಸ್ವೀಕರಿಸಿದ ವೈಭವ್​: ಭಾವುಕರಾಗಿ ವಂಡರ್​ ಕಿಡ್​ ಹೇಳಿದ್ದೇನು? ಜೆರ್ಸಿ ನಂಬರ್ ಎಷ್ಟು? Vaibhav Suryavanshi  
ಕ್ರಿಕೆಟ್

ಕನ್ನಡಿಗನಿಂದ ಟೀಮ್​ ಇಂಡಿಯಾ ಜೆರ್ಸಿ ಸ್ವೀಕರಿಸಿದ ವೈಭವ್​: ಭಾವುಕರಾಗಿ ವಂಡರ್​ ಕಿಡ್​ ಹೇಳಿದ್ದೇನು? ಜೆರ್ಸಿ ನಂಬರ್ ಎಷ್ಟು? Vaibhav Suryavanshi ​

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾ ಜರ್ಸಿ ತೊಟ್ಟು ಸಂಭ್ರಮಿಸಿದ ವೈಭವ್ ಸೂರ್ಯವಂಶಿ
  • 'ಕನಸು ನನಸಾಗಿದೆ' ಎಂದ 15ರ ಹರೆಯದ ವಂಡರ್​ ಕಿಡ್​
  • ನೀಲಿ ಜರ್ಸಿ ತೊಟ್ಟು ಇತಿಹಾಸ ಬರೆಯಲು ಸಜ್ಜಾದ ಸೂರ್ಯವಂಶಿ
  • ಬಿಸಿಸಿಐ ನೀಡಿದ ಸರ್ಪ್ರೈಸ್ ಜರ್ಸಿ ನೋಡಿ ಕಣ್ಣಾಲಿಗಳು ತುಂಬಿಬಂದವು ಎಂದ ವೈಭವ್
Vaibhav Suryavanshi : ಐಪಿಎಲ್‌ನಲ್ಲಿ ಅಬ್ಬರದ ಬ್ಯಾಟಿಂಗ್​ ಮೂಲಕ ಇಡೀ ಜಗತ್ತಿನ ಗಮನ ಸೆಳೆದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ, ಭಾರತ ಟಿ20 ತಂಡ ಹಾಗೂ ಏಷ್ಯನ್ ಗೇಮ್ಸ್ ಜಂಟಿ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ಇದೀಗ ಅವರಿಗೆ ಅಧಿಕೃತ ಭಾರತೀಯ ತಂಡದ ಜೆರ್ಸಿಯನ್ನು ಹಸ್ತಾಂತರಿಸಲಾಗಿದೆ. 
ಟೀಮ್ ಇಂಡಿಯಾದ ಥ್ರೋಡೌನ್‌ ತಜ್ಞ ಕನ್ನಡಿಗ ಡಿ. ರಾಘವೇಂದ್ರ ಅವರಿಂದ ವೈಭವ್ ತಮ್ಮ ಚೊಚ್ಚಲ ಜೆರ್ಸಿಯನ್ನು ಸ್ವೀಕರಿಸುತ್ತಿರುವ ವಿಶೇಷ ವಿಡಿಯೋವನ್ನು ಬಿಸಿಸಿಐ (BCCI) ಹಂಚಿಕೊಂಡಿದ್ದು, 'ಇಡೀ ದೇಶ ಕಾಯುತ್ತಿದ್ದ ಕ್ಷಣವಿದು' ಎಂಬ ರೋಚಕ ಅಡಿಬರಹವನ್ನು ನೀಡಿದೆ.
ಇದನ್ನು ವರ್ಣಿಸಲು ನನ್ನ ಬಳಿ ಪದಗಳೇ ಇಲ್ಲ. ನಾನು ಯಾವುದೋ ಒಂದು ದಿನ ಬ್ಯಾಟ್ ಹಿಡಿದು ಕ್ರಿಕೆಟ್ ತರಬೇತಿಗೆ ಹೋಗಲು ಕಾರಣವಾಗಿದ್ದ ಆ ಮಹದಾಸೆಯ ದಿನ ಕೊನೆಗೂ ಬಂದಿದೆ. ಇಂದು ನನ್ನ ಆ ಕನಸು ನನಸಾಗಿದೆ ಮತ್ತು ನನ್ನ ಈ ಸುದೀರ್ಘ ಜರ್ನಿಯಲ್ಲಿ ಒಂದು ದೊಡ್ಡ ಹೆಜ್ಜೆಯನ್ನು ಪೂರ್ಣಗೊಳಿಸಿದ್ದೇನೆ. ಇದೆಲ್ಲವೂ ನನಗೊಂದು ಸುಂದರ ಕನಸಿನಂತೆ ಭಾಸವಾಗುತ್ತಿದೆ. ಆ ಟಿ-ಶರ್ಟ್ (ಜೆರ್ಸಿ) ನೋಡಿದಾಗ ನನ್ನ ಸಂತೋಷವನ್ನು ತಡೆದುಕೊಳ್ಳಲು ನನಗಾಗಲಿಲ್ಲ ಎಂದು ಜೆರ್ಸಿ ಸ್ವೀಕರಿಸುವಾಗ ವೈಭವ್ ಸೂರ್ಯವಂಶಿ ಭಾವುಕರಾಗಿ ನುಡಿದಿದ್ದಾರೆ.
ವಿಶೇಷವೆಂದರೆ ಯುವ ಆಟಗಾರ ವೈಭವ್ ಅವರಿಗೆ ಟೀಮ್ ಇಂಡಿಯಾದ 'ನಂಬರ್ 3' (3ನೇ ಸಂಖ್ಯೆಯ) ಜೆರ್ಸಿಯನ್ನು ನೀಡಲಾಗಿದೆ. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದಕ್ಕೂ ಮುನ್ನ ದೇಶದ ದಿಗ್ಗಜ ಕ್ರಿಕೆಟರ್‌ಗಳಾದ ಹರಭಜನ್ ಸಿಂಗ್ ಮತ್ತು ಸುರೇಶ್ ರೈನಾ ಅವರು ಇದೇ ನಂಬರ್ 3 ಜೆರ್ಸಿಯನ್ನು ಧರಿಸಿ ಮೈದಾನಕ್ಕಿಳಿಯುತ್ತಿದ್ದರು ಎಂಬುದು ಈ ಜರ್ಸಿಯ ಮತ್ತೊಂದು ಹೆಗ್ಗಳಿಕೆಯಾಗಿದೆ.
ಅಂದಹಾಗೆ, ಭಾರತೀಯ ಕ್ರಿಕೆಟ್‌ನ ನೀಲಿ ಜೆರ್ಸಿಯನ್ನು ಧರಿಸಿದಾಗ ವೈಭವ್ ಮುಖದಲ್ಲಿ ಮೂಡಿದ ನಗು ಅಪಾರ ಸಂತಸವನ್ನು ತೋರ್ಪಡಿಸುತ್ತಿತ್ತು. ಆದರೆ, ಆ ನಗುವಿನ ಹಿಂದೆ ವರ್ಷಗಳ ಕಠಿಣ ಪರಿಶ್ರಮ, ನಿರಂತರ ಹೋರಾಟ ಹಾಗೂ ಮೈದಾನದಲ್ಲಿ ಕಳೆದ ಅಗಣಿತ ಗಂಟೆಗಳ ಸಿದ್ಧತೆಯ ತ್ಯಾಗದ ಕಥೆಯಿದೆ. ಬ್ಯಾಟನ್ನೇ ತನ್ನ ಸಂಗಾತಿಯನ್ನಾಗಿಸಿ, ಮೈದಾನವನ್ನೇ ತನ್ನ ಗುರುತಾಗಿಸಿಕೊಂಡ ಈ ಯುವ ಪ್ರತಿಭೆ ಟೀಮ್ ಇಂಡಿಯಾ ಪರವಾಗಿ ಮೈದಾನಕ್ಕಿಳಿಯುವ ಕ್ಷಣ ಈಗ ಅತ್ಯಂತ ಹತ್ತಿರದಲ್ಲಿದೆ. 
ಹೌದು, ಬೆಲ್​ಫಾಸ್ಟ್‌ನಲ್ಲಿ ಇದೇ ಶುಕ್ರವಾರ (ಜೂನ್ 26) ನಡೆಯಲಿರುವ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೈಭವ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕರೆ, ಅವರು ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಲಿದ್ದಾರೆ. ಆ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಂದಿಕ್ಕಿ, ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಬಿಹಾರದ ಮೋತಿಪುರ ಎಂಬ ಪುಟ್ಟ ಹಳ್ಳಿಯಿಂದ ಆರಂಭವಾದ ವೈಭವ್ ಪಯಣ ಕೇವಲ ಒಬ್ಬ ಕ್ರಿಕೆಟಿಗನ ಯಶೋಗಾಥೆಯಲ್ಲ, ಇದು ದೊಡ್ಡ ಕನಸುಗಳನ್ನು ಕಾಣುವ ಭಾರತದ ಗ್ರಾಮೀಣ ಭಾಗದ ಕೋಟ್ಯಂತರ ಮಕ್ಕಳ ಭರವಸೆಯ ಸಂಕೇತವಾಗಿದೆ. ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ಶತಕ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಯೊಂದಿಗೆ ವೈಭವ್ ಹೆಸರು ಜಾಗತಿಕ ಮಟ್ಟದಲ್ಲಿ ಮುಂಚೂಣಿಗೆ ಬಂದಾಗ, ಭಾರತೀಯ ಕ್ರಿಕೆಟ್‌ಗೆ ಮತ್ತೊಬ್ಬ ಉದಯೋನ್ಮುಖ ತಾರೆ ಸಿಕ್ಕಿರುವುದು ಖಚಿತವಾಗಿತ್ತು. ಕೇವಲ ಪ್ರಚಾರಕ್ಕೆ ಸೀಮಿತವಾಗದ ವೈಭವ್ ಸೂರ್ಯವಂಶಿ, ತಮಗೆ ಸಿಕ್ಕ ಪ್ರತಿಯೊಂದು ಅವಕಾಶವನ್ನೂ ಅದ್ಭುತ ಪ್ರದರ್ಶನವನ್ನಾಗಿ ಪರಿವರ್ತಿಸಿ ಇಂದು ಇಡೀ ವಿಶ್ವವೇ ಹೆಮ್ಮೆಯಿಂದ ನೋಡುವಂತೆ ಮಾಡಿದ್ದಾರೆ.
ಇನ್ನು ವೈಭವ್ ಕೇವಲ ದೇಶಿ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ವಿದೇಶಿ ನೆಲದಲ್ಲೂ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ. ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಅಂಡರ್-19 ಕ್ರಿಕೆಟ್‌ನಲ್ಲಿ ಅವರು ಆಡಿದ ಸ್ಫೋಟಕ ಇನ್ನಿಂಗ್ಸ್‌ಗಳು ಇಡೀ ವಿಶ್ವದ ಗಮನ ಸೆಳೆದಿದ್ದವು. ಪ್ರತಿಯೊಂದು ದೊಡ್ಡ ವೇದಿಕೆಯಲ್ಲೂ ಅವರು ತಮ್ಮ ವಯಸ್ಸು ಚಿಕ್ಕದಾಗಿದ್ದರೂ, ಧೈರ್ಯ ಮತ್ತು ಪ್ರತಿಭೆಗೆ ಯಾವುದೇ ಎಲ್ಲೆ ಇಲ್ಲ ಎಂಬುದನ್ನು ಸಾಬೀತುಪಡಿಸಿದರು. ಅನುಭವಿ ಬ್ಯಾಟ್ಸ್‌ಮನ್‌ಗಳಂತೆ ಕ್ರೀಸ್‌ನಲ್ಲಿ ಆತ್ಮವಿಶ್ವಾಸದಿಂದ ನಿಲ್ಲುತ್ತಿದ್ದ ವೈಭವ್, ವೇಗದ ಬೌಲರ್‌ಗಳ ದಾಳಿಗೆ ಹೆದರದೆ ಅದನ್ನೊಂದು ಸವಾಲಾಗಿ ಸ್ವೀಕರಿಸುತ್ತಿದ್ದರು. ಇವರ ಅಂಜದ ಆಟ, ಭರ್ಜರಿ ಶಾಟ್‌ಗಳು ಮತ್ತು ರನ್ ಗಳಿಸುವ ಹಪಾಹಪಿ ಇವರನ್ನು ಇತರ ಆಟಗಾರರಿಗಿಂತ ಸಂಪೂರ್ಣ ಭಿನ್ನವಾಗಿ ನಿಲ್ಲಿಸಿವೆ. ದೇಶಿ ಕ್ರಿಕೆಟ್‌ನಲ್ಲಿ ನಿರಂತರವಾಗಿ ರನ್ ಮಳೆ ಹರಿಸುತ್ತಾ ದಾಖಲೆಗಳನ್ನು ಮುರಿದಿರುವ ವೈಭವ್, ಕೇವಲ ಭವಿಷ್ಯದ ತಾರೆಯಲ್ಲ, ಬದಲಿಗೆ ಇಂದಿನ ತಂಡದ ಅಗತ್ಯವಾಗಿದ್ದಾರೆ.
ಈ ರನ್ ಸುಂಟರಗಾಳಿ ಐಪಿಎಲ್ 2026 ರಲ್ಲೂ ಮುಂದುವರೆಯಿತು. ಕೆಲವು ವಿಶ್ಲೇಷಕರು ಬೌಲರ್‌ಗಳು ವೈಭವ್ ಬ್ಯಾಟಿಂಗ್ ಶೈಲಿಯನ್ನು ಪತ್ತೆಹಚ್ಚಿದ್ದಾರೆ ಎಂದು ಭಾವಿಸಿದ್ದರು, ಆದರೆ ವೈಭವ್ ಕಥೆಯೇ ಬೇರೆಯಾಗಿತ್ತು. ಇಡೀ ಸೀಸನ್‌ನಲ್ಲಿ ಭರ್ಜರಿ 776 ರನ್ ಗಳಿಸಿದ ಅವರು, ವಿರಾಟ್ ಕೊಹ್ಲಿ, ಶುಭಮಾನ್​ ಗಿಲ್ ಮತ್ತು ಕೆ.ಎಲ್. ರಾಹುಲ್ ಅವರಂತಹ ದಿಗ್ಗಜ ಬ್ಯಾಟ್ಸ್‌ಮನ್‌ಗಳನ್ನು ಹಿಂದಿಕ್ಕಿ ಅತ್ಯಂತ ಕಿರಿಯ ವಯಸ್ಸಿನಲ್ಲೇ 'ಆರೆಂಜ್ ಕ್ಯಾಪ್' ಮುಡಿಗೇರಿಸಿಕೊಂಡರು. ಇದು ಬರಿ ಅಂಕಿ-ಅಂಶವಾಗಿರದೆ, ತಾವೇ ಭಾರತೀಯ ಕ್ರಿಕೆಟ್‌ನ ಹೊಸ ಆಶಾಕಿರಣ ಎಂಬುದಕ್ಕೆ ಸಾಕ್ಷಿಯಾಗಿತ್ತು. ಇನ್ನು ಇತ್ತೀಚೆಗಷ್ಟೇ ಮುಕ್ತಾಯಗೊಂಡ 'ಇಂಡಿಯಾ ಎ' ಪರ ಶ್ರೀಲಂಕಾ ಎ ವಿರುದ್ಧದ ತ್ರಿಕೋನ ಸರಣಿಯ ಫೈನಲ್‌ನಲ್ಲಿ 94 ರನ್‌ಗಳ ಆಕರ್ಷಕ ಇನ್ನಿಂಗ್ಸ್ ಆಡಿ ದೊಡ್ಡ ವೇದಿಕೆಯ ಒತ್ತಡ ನಿಭಾಯಿಸಬಲ್ಲ ತಮ್ಮ ಸಾಮರ್ಥ್ಯವನ್ನು ತೋರಿದ್ದರು. ಈಗ ಇಡೀ ದೇಶವೇ ಆ ಒಂದು ಕ್ಷಣಕ್ಕಾಗಿ ಕಾಯುತ್ತಿದೆ. ಬಿಹಾರದ ಮೋತಿಪುರದ ಈ ಯುವಕ ಭಾರತದ ನೀಲಿ ಜರ್ಸಿ ಧರಿಸಿ ಮೈದಾನಕ್ಕಿಳಿದಾಗ ಕೋಟ್ಯಂತರ ಭಾರತೀಯರ ಪ್ರಾರ್ಥನೆ ಮತ್ತು ಭರವಸೆ ಅವರೊಂದಿಗಿರುತ್ತದೆ ಎಂಬುದು ಮಾತ್ರ ಅಕ್ಷರಶಃ ಸತ್ಯ, (ಏಜೆನ್ಸೀಸ್​).