ಯುವರಾಜ್ ಸಿಂಗ್ ಕೊಟ್ಟ ಸಲಹೆ ಏನು? 
ಕ್ರಿಕೆಟ್

ಪಂದ್ಯಕ್ಕೂ ಮುನ್ನ ಆ 'ನಾಲ್ವರು' ಆಡಿದ ಮಾತೇ ಸೂರ್ಯವಂಶಿ 'ಸುನಾಮಿ'ಗೆ ಕಾರಣವಾಯ್ತಂತೆ! ಅದರಲ್ಲೂ ಯುವರಾಜ್ ಸಿಂಗ್ ಕೊಟ್ಟ ಸಲಹೆ ಏನು? | Vaibhav Sooryavanshi

ದೋಹಾ: ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್​​ನ ಮಹತ್ವದ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ವೈಭವ್ ಸೂರ್ಯವಂಶಿ (Vaibhav Sooryavanshi) ಅಕ್ಷರಶಃ ರನ್ ಮಳೆ ಸುರಿಸಿದ್ದಾರೆ. ನಿನ್ನೆ (ಮಂಗಳವಾರ) ನಡೆದ ನಿರ್ಣಾಯಕ ಪಂದ್ಯದಲ್ಲಿ 250 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಎ ತಂಡಕ್ಕೆ ವೈಭವ್ ಅವರ ಸ್ಫೋಟಕ ಆಟವು ಭರ್ಜರಿ ಜಯ ತಂದುಕೊಟ್ಟಿದ್ದಲ್ಲದೆ, ತಿಲಕ್ ವರ್ಮಾ ಬಳಗವನ್ನು ಸೆಮಿಫೈನಲ್‌ಗೆ ಕೊಂಡೊಯ್ದಿದೆ.

ಕೇವಲ 53 ಎಸೆತಗಳನ್ನು ಎದುರಿಸಿದ ಈ ಯುವ ಪ್ರತಿಭೆ, 7 ಮನಮೋಹಕ ಬೌಂಡರಿ ಹಾಗೂ ಬರೋಬ್ಬರಿ 28 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 204 ರನ್ ಚಚ್ಚುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನ ಇತಿಹಾಸವನ್ನೇ ಮತ್ತೆ ಬರೆದಿದ್ದಾರೆ.

ದಾಖಲೆಗಳ ಧೂಳೀಪಟ!

ಯುಎಇ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸಿದ ವೈಭವ್ ಸೂರ್ಯವಂಶಿ, ಒಂದೇ ಇನ್ನಿಂಗ್ಸ್‌ನಲ್ಲಿ ಹಲವು ವಿಶ್ವದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕ (50), ಶತಕ (100), 150 ರನ್ ಹಾಗೂ ದ್ವಿಶತಕ (200) ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಕಳೆದ 10 ಇನ್ನಿಂಗ್ಸ್‌ಗಳಲ್ಲಿ (40, 44, 8, 38, 15, 4, 45, 18, 26 ಮತ್ತು 11) ದೊಡ್ಡ ಮೊತ್ತ ಗಳಿಸಲು ವಿಫಲರಾಗಿ ಟೀಕೆಗೆ ಗುರಿಯಾಗಿದ್ದ ವೈಭವ್, ಈ ಒಂದೇ ಇನ್ನಿಂಗ್ಸ್​​ನಲ್ಲಿ ಎಲ್ಲರಿಗೂ ತಮ್ಮ ಬ್ಯಾಟಿಂಗ್ ಮೂಲಕ​ ತಕ್ಕ ಉತ್ತರ ನೀಡಿದ್ದಾರೆ.

ಯುವರಾಜ್ ಸಿಂಗ್ ನೀಡಿದ 30 ನಿಮಿಷಗಳ ಮಂತ್ರ!

ವೈಭವ್ ಈ ಐತಿಹಾಸಿಕ ಇನ್ನಿಂಗ್ಸ್ ಆಡಿದ ಬಳಿಕ ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ವೈಭವ್ ತಮ್ಮ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಸತತ ವೈಫಲ್ಯಗಳಿಂದ ಕಂಗೆಟ್ಟಿದ್ದ ತಮಗೆ ಟೀಮ್​ ಇಂಡಿಯಾ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರೊಂದಿಗಿನ ಮಾತುಕತೆ ಹೊಸ ಚೈತನ್ಯ ನೀಡಿತು ಎಂದು ಅವರು ತಿಳಿಸಿದ್ದಾರೆ.

ಯುಎಇ ವಿರುದ್ಧದ ಪಂದ್ಯಕ್ಕೂ ಮುನ್ನ ನಾನು ನಾಲ್ಕು ಜನರೊಂದಿಗೆ ಮಾತನಾಡಿದ್ದೆ. ನನ್ನ ತಂದೆ, ಬಾಲ್ಯದ ಕೋಚ್ ಮನೀಶ್ ಓಜಾ, ಗೆಳೆಯ ಪ್ರಥಮ್ ಹಾಗೂ ನನ್ನ ಆರಾಧ್ಯ ದೈವ ಯುವರಾಜ್ ಸಿಂಗ್. ಯುವರಾಜ್ ಪಾಜಿ ಅವರೊಂದಿಗೆ ಸುಮಾರು ಅರ್ಧ ಗಂಟೆಗಳ ಕಾಲ ಮಾತನಾಡಿದೆ. ನನ್ನ ಬ್ಯಾಟಿಂಗ್‌ನಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳನ್ನು ಅವರ ಮುಂದೆ ಮುಕ್ತವಾಗಿ ಹೇಳಿಕೊಂಡೆ. ಅವರು ನನ್ನ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡು, ಬ್ಯಾಟಿಂಗ್‌ನ ಕೆಲವು ತಾಂತ್ರಿಕ ಅಂಶಗಳನ್ನು ವಿವರಿಸಿದರು. ನೀನು ಕ್ರೀಸ್‌ನಲ್ಲಿ 20 ಎಸೆತಗಳನ್ನು ಎದುರಿಸಿದರೆ ಸಾಕು, ನಿನ್ನ ಸ್ಕೋರ್ ಸಂಪೂರ್ಣವಾಗಿ ಬದಲಾಗುತ್ತದೆ ಎಂದು ಅವರು ನನಗೆ ಆತ್ಮವಿಶ್ವಾಸ ತುಂಬಿದರು ಎಂದು ವೈಭವ್ ಸ್ಮರಿಸಿದ್ದಾರೆ.

ಯುವರಾಜ್ ಸಿಂಗ್ ಅವರು ಎತ್ತಿ ತೋರಿಸಿದ ತಪ್ಪುಗಳನ್ನು ತಾವು ಹಳೆಯ ಬ್ಯಾಟಿಂಗ್ ವಿಡಿಯೋಗಳನ್ನು ನೋಡುವ ಮೂಲಕ ಅರಿತುಕೊಂಡಿದ್ದಾಗಿಯೂ, ಪಂದ್ಯದಲ್ಲಿ ಅವುಗಳನ್ನು ತಿದ್ದಿಕೊಂಡು ಆಡಿದ್ದರಿಂದ ಈ ಯಶಸ್ಸು ಸಾಧ್ಯವಾಯಿತು ಎಂದೂ ವೈಭವ್ ಹೇಳಿದ್ದಾರೆ.

ಪಿಚ್ ಅರಿತು ಸಹಜ ಆಟಕ್ಕೆ ಮೊರೆ

ಪಂದ್ಯದ ಆರಂಭದಲ್ಲಿ ತಮ್ಮ ಮನಸ್ಥಿತಿ ಹೇಗಿತ್ತು ಎಂಬುದನ್ನು ವಿವರಿಸಿದ ವೈಭವ್, ಕಳೆದ ಕೆಲವು ಪಂದ್ಯಗಳಲ್ಲಿ ರನ್ ಬಾರಿಸದ ಕಾರಣ ನನ್ನ ಮನಸ್ಸು ಸ್ವಲ್ಪ ಗೊಂದಲದಲ್ಲಿತ್ತು. ಹಾಗಾಗಿ ಕ್ರೀಸ್‌ಗೆ ಇಳಿದ ತಕ್ಷಣ ಪಿಚ್ ಹೇಗೆ ವರ್ತಿಸುತ್ತಿದೆ ಎಂಬುದನ್ನು ಅರಿಯುವುದು ನನ್ನ ಮೊದಲ ಗುರಿಯಾಗಿತ್ತು. ಒಂದೆರಡು ಎಸೆತಗಳನ್ನು ಎದುರಿಸಿದಾಗ ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತಿರುವುದು ತಿಳಿಯಿತು. ಬೌಲರ್‌ಗಳಿಗೆ ಪಿಚ್‌ನಿಂದ ಹೆಚ್ಚಿನ ನೆರವು ಸಿಗುತ್ತಿಲ್ಲ ಎಂಬುದನ್ನು ಅರಿತು, ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸಹಜ ಆಟವಾಡಲು ನಿರ್ಧರಿಸಿದೆ ಎಂದಿದ್ದಾರೆ.

ಎಲ್ಲಾ ಮಾದರಿಗೂ ಸೈ ಎಂದ ಯುವ ಆಟಗಾರ!

ತಾವು ಕೇವಲ ಸ್ಫೋಟಕ ಬ್ಯಾಟಿಂಗ್‌ಗೆ ಮಾತ್ರ ಸೀಮಿತವಲ್ಲ, ಕ್ರಿಕೆಟ್‌ನ ಮೂರೂ ಮಾದರಿಗಳಲ್ಲಿ ಆಡುವ ಸಾಮರ್ಥ್ಯ ಹೊಂದಿದ್ದೇನೆ ಎಂದು ವೈಭವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಸಂದರ್ಭದಲ್ಲೂ ನಾನು ಇದೇ ಮಾತನ್ನು ಹೇಳಿದ್ದೆ. ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ನನ್ನ ಆಟವನ್ನು ಬದಲಾಯಿಸಿಕೊಳ್ಳುವ ನಿಯಂತ್ರಣ ನನ್ನಲ್ಲಿದೆ. ಕಳೆದ ಎರಡು ಪಂದ್ಯಗಳಲ್ಲಿ ದೀರ್ಘಕಾಲ ಕ್ರೀಸ್‌ನಲ್ಲಿ ಉಳಿಯುವ ಪ್ರಯತ್ನದಲ್ಲಿ ನನ್ನ ಆಟಕ್ಕೆ ಕಡಿವಾಣ ಹಾಕಿಕೊಂಡಿದ್ದೆ. ಆದರೆ ಇಂದು ಪಿಚ್ ಬ್ಯಾಟಿಂಗ್‌ಗೆ ಪೂರಕವಾಗಿದ್ದರಿಂದ ಮುಕ್ತವಾಗಿ ಬ್ಯಾಟ್ ಬೀಸಿದೆ ಎಂದು ವಂಡರ್​ ಕಿಡ್​ ತಿಳಿಸಿದ್ದಾರೆ.

ಒಟ್ಟಾರೆಯಾಗಿ, ಒತ್ತಡದ ಪರಿಸ್ಥಿತಿಯಲ್ಲಿ ದಿಗ್ಗಜ ಆಟಗಾರನ ಮಾರ್ಗದರ್ಶನ ಪಡೆದು, ಅದನ್ನು ಮೈದಾನದಲ್ಲಿ ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದ ವೈಭವ್ ಸೂರ್ಯವಂಶಿ ಅವರ ಈ ಅಮೋಘ ಇನ್ನಿಂಗ್ಸ್ ಟೀಮ್​ ಇಂಡಿಯಾ ಕ್ರಿಕೆಟ್‌ನ ಭವಿಷ್ಯಕ್ಕೆ ಹೊಸ ಭರವಸೆ ಮೂಡಿಸಿದೆ(ಏಜೆನ್ಸೀಸ್​).