ಮೊದಲ ಎರಡು ಪಂದ್ಯಗಳಲ್ಲಿ ರನ್ ಬಂದಿರಲಿಲ್ಲ! ವಿಶ್ವದಾಖಲೆ ದ್ವಿಶತಕದ ಬಳಿಕ ವೈಭವ್ ಸೂರ್ಯವಂಶಿ ಮೊದಲ ಪ್ರತಿಕ್ರಿಯೆ | Vaibhav Sooryavanshi

ಮೊದಲ ಎರಡು ಪಂದ್ಯಗಳಲ್ಲಿ ರನ್ ಬಂದಿರಲಿಲ್ಲ! ವಿಶ್ವದಾಖಲೆ ದ್ವಿಶತಕದ ಬಳಿಕ ವೈಭವ್ ಸೂರ್ಯವಂಶಿ ಮೊದಲ ಪ್ರತಿಕ್ರಿಯೆ | Vaibhav Sooryavanshi
Published on: 

Vaibhav Sooryavanshi: ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಗುಂಪು ಹಂತದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಿಡಿಸಿದ 53 ಎಸೆತಗಳ 204 ರನ್‌ಗಳ ಐತಿಹಾಸಿಕ ಇನ್ನಿಂಗ್ಸ್ ನೆರವಿನಿಂದ ಭಾರತ ಎ ತಂಡ, ಯುಎಇ ನೀಡಿದ 250 ರನ್‌ಗಳ ಗುರಿಯನ್ನು ಕೇವಲ 14.2 ಓವರ್‌ಗಳಲ್ಲಿ ಬೆನ್ನಟ್ಟಿ ಭರ್ಜರಿ ಜಯ ಸಾಧಿಸಿದೆ. ಪಾಕಿಸ್ತಾನ ವಿರುದ್ಧದ ಹಿಂದಿನ ಸೋಲಿನ ಬಳಿಕ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಟೀಮ್​ ಇಂಡಿಯಾ ಎ, ಈ ಗೆಲುವಿನೊಂದಿಗೆ ಸೆಮಿಫೈನಲ್‌ ಪ್ರವೇಶಿಸಿದೆ.

ಮೊದಲ ಎರಡು ಪಂದ್ಯಗಳಲ್ಲಿ ಬೇಗನೆ ಔಟಾಗಿ ನಿರಾಶೆ ಮೂಡಿಸಿದ್ದ ವೈಭವ್, ಈ ಪಂದ್ಯದಲ್ಲಿ ಸಿಕ್ಸರ್‌ಗಳ ಮಳೆಯನ್ನೇ ಸುರಿಸಿದರು. ಸ್ಪಿನ್ ಅಥವಾ ವೇಗ ಎನ್ನದೆ ಮೈದಾನದ ಮೂಲೆಮೂಲೆಗೂ ಚೆಂಡನ್ನು ಅಟ್ಟಿದ ಅವರು, ಕೇವಲ 28 ಎಸೆತಗಳಲ್ಲಿ ಶತಕ ಬಾರಿಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕದ ವಿಶ್ವದಾಖಲೆ ಮುರಿದರು.

Also Read
UAE ವಿರುದ್ಧ ಸೂರ್ಯವಂಶಿ ಬ್ಯಾಟಿಂಗ್​ 'ವೈಭವ'! ಒಂದೇ ಇನ್ನಿಂಗ್ಸ್‌ನಲ್ಲಿ ವಂಡರ್ ಕಿಡ್ ಮುರಿದ ದಾಖಲೆಗಳೆಷ್ಟು ಗೊತ್ತಾ? | Vaibhav Sooryavanshi
ಮೊದಲ ಎರಡು ಪಂದ್ಯಗಳಲ್ಲಿ ರನ್ ಬಂದಿರಲಿಲ್ಲ! ವಿಶ್ವದಾಖಲೆ ದ್ವಿಶತಕದ ಬಳಿಕ ವೈಭವ್ ಸೂರ್ಯವಂಶಿ ಮೊದಲ ಪ್ರತಿಕ್ರಿಯೆ | Vaibhav Sooryavanshi

ಮೊದಲ 100 ರನ್‌ಗಳಿಗೆ 28 ಎಸೆತ ತೆಗೆದುಕೊಂಡರೆ, ಮುಂದಿನ 100 ರನ್‌ಗಳನ್ನು ಕೇವಲ 24 ಎಸೆತಗಳಲ್ಲಿ ಪೂರೈಸಿ, 52ನೇ ಎಸೆತದಲ್ಲಿ ವೃತ್ತಿಪರ ಕ್ರಿಕೆಟ್‌ನ ಅತಿ ವೇಗದ ದ್ವಿಶತಕ ದಾಖಲೆ ಬರೆದರು. ಒಟ್ಟಾರೆ 28 ಸಿಕ್ಸರ್‌ಗಳೊಂದಿಗೆ ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವದಾಖಲೆಯನ್ನೂ ತಮ್ಮದಾಗಿಸಿಕೊಂಡರು. 11ನೇ ಓವರ್‌ನಲ್ಲಿ ಸಿಕ್ಕ ಜೀವದಾನವನ್ನು ಸದುಪಯೋಗಪಡಿಸಿಕೊಂಡ ಅವರು, ದ್ವಿಶತಕದ ಬೆನ್ನಲ್ಲೇ ಔಟಾದರು.

ಪಂದ್ಯದ ಬಳಿಕ ಈ ವಿಷಯವಾಗಿ ಮಾತನಾಡಿರುವ ವೈಭವ್​, ಮೊದಲ ಎರಡು ಪಂದ್ಯಗಳಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಪಿಚ್ ಬೌಲರ್‌ಗಳಿಗೆ ಹೆಚ್ಚು ನೆರವು ನೀಡುತ್ತಿಲ್ಲ ಎಂಬುದನ್ನು ಅರಿತು ನನ್ನ ಆಟದ ಮೇಲೆ ನಂಬಿಕೆ ಇಟ್ಟೆ. ದೀರ್ಘ ಇನ್ನಿಂಗ್ಸ್ ಆಡುವುದಷ್ಟೇ ನನ್ನ ಗುರಿಯಾಗಿತ್ತು ಎಂದು ತಿಳಿಸಿದರು.

ಶತಕ ಸಿಡಿಸಿ ಮಿಂಚಿದ ಭಾಟಿಯಾ!

ಇದಕ್ಕೂ ಮೊದಲು ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 249 ರನ್ ಗಳಿಸಿತು. ಟೀಮ್​ ಇಂಡಿಯಾ ಪರ 86 ಪ್ರಥಮ ದರ್ಜೆ ಪಂದ್ಯಗಳನ್ನಾಡಿ, ಕಳೆದ ವರ್ಷವಷ್ಟೇ ದೇಶೀಯ ಕ್ರಿಕೆಟ್ ಆಡಿದ್ದ 35 ವರ್ಷದ ಹರ್‌ಪ್ರೀತ್ ಸಿಂಗ್ ಭಾಟಿಯಾ (ಈಗ ಯುಎಇ ಪ್ರಜೆ) 144 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್ ಸಹಿತ 130 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಆರಂಭಿಕರು ಬೇಗನೆ ವಿಕೆಟ್‌ ಒಪ್ಪಿಸಿದ ಬಳಿಕ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದ ಅವರು, ಹರ್ಷಿತ್ ರಾಣಾ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿ ತಮ್ಮ ಏಳನೇ ಲಿಸ್ಟ್ ಎ ಶತಕ ಪೂರೈಸಿದರು.

ತಾಯ್ನಾಡಿನ ತಂಡದ ವಿರುದ್ಧ ಆಡುವಾಗ ಯಾವಾಗಲೂ ವಿಶೇಷ ಪ್ರೇರಣೆ ಇರುತ್ತದೆ. ಇಂದು ಗುರುನಾನಕ್ ಜಯಂತಿ ಎಂಬುದನ್ನು ಬೆಳಿಗ್ಗೆಯೇ ಯೋಚಿಸಿದ್ದೆ ಮತ್ತು ಇಂದು ಶತಕ ಬಾರಿಸುವ ಭಾವನೆ ಮೂಡಿತ್ತು. ಎಲ್ಲರಿಗೂ ಗುರುಪುರಬ್ ಶುಭಾಶಯಗಳು ಎಂದು ಹರ್‌ಪ್ರೀತ್ ಭಾವುಕರಾಗಿ ನುಡಿದರು. 47ನೇ ಓವರ್‌ನಲ್ಲಿ ಅರ್ಷದ್ ಖಾನ್ ಅವರಿಗೆ ಹರ್‌ಪ್ರೀತ್ ವಿಕೆಟ್ ಒಪ್ಪಿಸಿದರು.

ಭಾರತ 'ಎ' ಪರ ಎಡಗೈ ವೇಗಿ ಅರ್ಷದ್ ಖಾನ್ 10 ಓವರ್‌ಗಳಲ್ಲಿ 43 ರನ್ ನೀಡಿ 4 ವಿಕೆಟ್ ಕಬಳಿಸಿ ಗಮನ ಸೆಳೆದರು. ಗಾಯದಿಂದ ಚೇತರಿಸಿಕೊಂಡು ಫಿಟ್ನೆಸ್ ಸಾಬೀತುಪಡಿಸಬೇಕಿರುವ ಹರ್ಷಿತ್ ರಾಣಾ 10 ಓವರ್‌ಗಳಲ್ಲಿ 63 ರನ್ ನೀಡಿ 1 ವಿಕೆಟ್ ಪಡೆದರು. ಯುಎಇ ಪರ ಇತರ ಬ್ಯಾಟರ್‌ಗಳು ಸ್ಟ್ರೈಕ್ ರೊಟೇಟ್ ಮಾಡಲು ಪರದಾಡಿದರೆ, ಹರ್‌ಪ್ರೀತ್ 90.28ರ ಸ್ಟ್ರೈಕ್ ರೇಟ್‌ನಲ್ಲಿ ಆಡಿ ತಂಡಕ್ಕೆ ಗೌರವಯುತ ಮೊತ್ತ ತಂದುಕೊಟ್ಟರು. ಐಸಿಸಿ ನಿಯಮದಂತೆ ಮೂರು ವರ್ಷ ವಾಸವಿದ್ದರೆ ಮಾತ್ರ ಅರ್ಹತೆ ಸಿಗಬೇಕಿತ್ತಾದರೂ, ಯುಎಇ ಪಾಸ್‌ಪೋರ್ಟ್ ಆಧಾರದ ಮೇಲೆ ಹರ್‌ಪ್ರೀತ್ ಏಪ್ರಿಲ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು(ಏಜೆನ್ಸೀಸ್).