ಆ ಒಂದು ವಿಚಾರದಲ್ಲಿ ವೈಭವ್ ಮೇಲೆ ನನಗೆ ಅನುಮಾನವಿದೆ... ಎಬಿ ಡಿವಿಲಿಯರ್ಸ್ ಶಾಕಿಂಗ್ ಹೇಳಿಕೆ! Vaibhav Sooryavanshi
- 15ನೇ ವಯಸ್ಸಿಗೆ ಭಾರತದ ಟಿ20 ತಂಡಕ್ಕೆ ಆಯ್ಕೆಯಾಗಿರುವ ವಂಡರ್ ಕಿಡ್ ವೈಭವ್ ಸೂರ್ಯವಂಶಿ
- ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಳಿಕ ಭಾರತ ತಂಡಕ್ಕೆ ಲಗ್ಗೆಯಿಟ್ಟ ವೈಭವ್
- ಮೂರೂ ಮಾದರಿಯ ಕ್ರಿಕೆಟ್ ಆಡಲು ಇಷ್ಟವಿದೆ ಎಂದು ಸ್ವತಃ ಸೂರ್ಯವಂಶಿ ಅವರೇ ಹಲವು ಬಾರಿ ಹೇಳಿಕೊಂಡಿದ್ದಾರೆ
- ಆದರೆ ವೈಭವ್ ಅವರ ಟೆಸ್ಟ್ ಕ್ರಿಕೆಟ್ ಬಗ್ಗೆ ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅನುಮಾನ
Vaibhav Sooryavanshi : ಐಪಿಎಲ್‌ನಲ್ಲಿ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದ ಮೂಲಕ ಕೇವಲ 15ನೇ ವಯಸ್ಸಿಗೆ ಭಾರತದ ಟಿ20 ತಂಡಕ್ಕೆ ಆಯ್ಕೆಯಾಗಿರುವ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಅವರ ಅದ್ಭುತ ಪ್ರತಿಭೆಯ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೂ, ಅವರ ರೆಡ್-ಬಾಲ್ ಅಂದರೆ ಟೆಸ್ಟ್ ಕ್ರಿಕೆಟ್ ಆಟದ ಬಗ್ಗೆ ಕೆಲವು ಅಪಸ್ವರಗಳು ಕೇಳಿಬರುತ್ತಿವೆ. ನನಗೆ ಮೂರೂ ಮಾದರಿಯ ಕ್ರಿಕೆಟ್ ಆಡಲು ಇಷ್ಟವಿದೆ ಎಂದು ಸ್ವತಃ ಸೂರ್ಯವಂಶಿ ಅವರೇ ಹಲವು ಬಾರಿ ಹೇಳಿಕೊಂಡಿದ್ದಾರೆ. ಆದರೆ, ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಈ ಬಗ್ಗೆ ಮಾತನಾಡಿದ್ದು, ಸೂರ್ಯವಂಶಿ ದೀರ್ಘಾವಧಿಯ ಕ್ರಿಕೆಟ್‌ನಲ್ಲಿ ಅದೃಷ್ಟ ಪರೀಕ್ಷೆ ಮಾಡುವುದನ್ನು ನೋಡಲು ನನಗೆ ಆಸೆಯಿದ್ದರೂ, ಅವರು ನಿಜವಾಗಿಯೂ ರೆಡ್-ಬಾಲ್ ಕ್ರಿಕೆಟ್ ಆಡಲು ಬಯಸುತ್ತಾರೆಯೇ ಎಂಬ ಬಗ್ಗೆ ನನಗೆ ಸಂದೇಹವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ 2026ರ ಸೀಸನ್‌ನಲ್ಲಿ ಬರೋಬ್ಬರಿ 237ರ ಸ್ಟ್ರೈಕ್ ರೇಟ್‌ನಲ್ಲಿ 776 ರನ್ ಚಚ್ಚಿದ ಹದಿಹರೆಯದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ, ಅತಿ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ನೀಡಲಾಗುವ ಪ್ರತಿಷ್ಠಿತ 'ಆರೆಂಜ್ ಕ್ಯಾಪ್' ಅನ್ನು ಮುಡಿಗೇರಿಸಿಕೊಂಡಿದ್ದಾರೆ. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದ ಜಸ್ಪ್ರೀತ್ ಬುಮ್ರಾ, ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರಂತಹ ವಿಶ್ವದರ್ಜೆಯ ಬೌಲರ್‌ಗಳನ್ನೇ ಬೆಂಡೆತ್ತಿದ ಈ ಯುವ ಆಟಗಾರ, ಇದೇ ರೀತಿಯ ಪ್ರದರ್ಶನವನ್ನು ಟೆಸ್ಟ್ ಕ್ರಿಕೆಟ್‌ನಲ್ಲಿಯೂ ನೀಡಬಲ್ಲರೇ ಎಂಬ ಪ್ರಶ್ನೆ ಈಗ ಮೂಡಿದೆ. ಆದರೆ, ಸೂರ್ಯವಂಶಿಗೆ ಸ್ವತಃ ಟೆಸ್ಟ್ ಕ್ರಿಕೆಟ್ ಆಡುವ ಮನಸಿದೆಯೇ ಎಂಬ ಬಗ್ಗೆ ದಕ್ಷಿಣ ಆಫ್ರಿಕಾದ ಮಾಜಿ ದಿಗ್ಗಜ ಎಬಿ ಡಿ ವಿಲಿಯರ್ಸ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಮುಂಬೈನಲ್ಲಿ ನಡೆದ ಕಬುನಿ ಸಂಸ್ಥೆಯ ಎಐ-ಚಾಲಿತ ಜಾಗತಿಕ ಕ್ರೀಡಾ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಎನ್‌ಡಿಟಿವಿ ಜೊತೆ ಮಾತನಾಡಿದ ಡಿ ವಿಲಿಯರ್ಸ್, ವೈಭವ್ ಸೂರ್ಯವಂಶಿ ಓರ್ವ ಅದ್ಭುತ ಪ್ರತಿಭೆ, ಆದರೆ ರೆಡ್-ಬಾಲ್ ಕ್ರಿಕೆಟ್‌ನ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. ಅವರು ಮನಸ್ಸು ಮಾಡಿದರೆ ಖಂಡಿತಾ ಆಡಬಹುದು, ಆದರೆ ಇಲ್ಲಿರುವ ಅತಿ ದೊಡ್ಡ ಪ್ರಶ್ನೆಯೇ ಅದಾಗಿದೆ. ಅವರಿಗೆ ನಿಜವಾಗಿಯೂ ಟೆಸ್ಟ್ ಆಡಲು ಆಸಕ್ತಿ ಇದೆಯೇ? ಇದಕ್ಕೆ ಕಾಲವೇ ಉತ್ತರಿಸಬೇಕು. ಅವರಲ್ಲಿ ಅದಕ್ಕೆ ಬೇಕಾದ ಪ್ರತಿಭೆ ಮತ್ತು ಸಾಮರ್ಥ್ಯ ಇರುವುದರಲ್ಲಿ ಯಾವುದೇ ಸಂಶಯವಿಲ್ಲ, ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ವಿಯಾಗುವುದು ಯಾವಾಗಲೂ ಸುಲಭವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ವೈಭವ್ ಸೂರ್ಯವಂಶಿ ಒಂದು ವೇಳೆ ರೆಡ್-ಬಾಲ್ ಕ್ರಿಕೆಟ್ ಆಡಲು ನಿರ್ಧರಿಸಿದರೆ ಅವರ ಮುಂದೆ ಕೆಲವು ಸವಾಲುಗಳಿರುತ್ತವೆ, ಆದರೆ ಅವುಗಳನ್ನು ಮೆಟ್ಟಿನಿಂತು ಮುನ್ನಡೆಯುವ ಕೌಶಲ್ಯ ಮತ್ತು ಸಾಮರ್ಥ್ಯ ಅವರಲ್ಲಿದೆ. ನನ್ನ ವೈಯಕ್ತಿಕ ಅಭಿಪ್ರಾಯದಂತೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಲು ಪ್ರಯತ್ನಿಸಬೇಕು ಎಂದು ನಾನು ಆಶಿಸುತ್ತೇನೆ, ಆದರೆ ಅವರು ಆಡುವುದು ಅನುಮಾನವೇ? ಕಾದು ನೋಡೋಣ ಎಂದು ಎಬಿ ಡಿ ವಿಲಿಯರ್ಸ್ ಹೇಳಿದರು.
ಪ್ರಸ್ತುತ ದಿನಗಳಲ್ಲಿ ಕ್ರಿಕೆಟ್ ಆಟದ ಶೈಲಿ ಮತ್ತು ಅದರ ಡೇಟಾವನ್ನು ಸಂಗ್ರಹಿಸುವಲ್ಲಿ ಕೃತಕ ಬುದ್ಧಿಮತ್ತೆ (AI) ಪ್ರಮುಖ ಪಾತ್ರ ವಹಿಸುತ್ತಿದ್ದು, ತಮ್ಮ ಆಟದ ದಿನಗಳಲ್ಲೇ ಇಂತಹ ತಂತ್ರಜ್ಞಾನ ಲಭ್ಯವಿದ್ದಿದ್ದರೆ ಬಹಳ ಸಹಕಾರಿಯಾಗುತ್ತಿತ್ತು ಎಂದು ಡಿವಿಲಿಯರ್ಸ್ ಹೇಳಿದರು. ತಮ್ಮ ಶಾಟ್‌ಗಳ ಅಪಾಯದ ಪ್ರಮಾಣವನ್ನು (Risk factor) ಅಳೆಯಲು 'ಕಬುನಿ'ಯಂತಹ ತಂತ್ರಜ್ಞಾನವನ್ನು ಬಳಸಲು ಬಯಸುತ್ತಿದ್ದೀರಾ ಎಂದು ಕೇಳಿದಾಗ, ಖಂಡಿತವಾಗಿಯೂ, ಇನಿಂಗ್ಸ್ ಕಟ್ಟುವಾಗ ರಿಸ್ಕ್ ಲೆಕ್ಕಾಚಾರವು ಯಾವಾಗಲೂ ನಮ್ಮ ಮನಸ್ಸಿನಲ್ಲಿ ಓಡುತ್ತಿರುತ್ತದೆ. ಅಪಾಯದ ಪ್ರಮಾಣವು ಶೇ. 50 ಕ್ಕಿಂತ ಹೆಚ್ಚಾಗಲು ನಾವು ಎಂದಿಗೂ ಬಯಸುವುದಿಲ್ಲ. ನಾವು ಕಷ್ಟಪಟ್ಟು ಅಭ್ಯಾಸ ಮಾಡಿದ, ನಮಗೆ ಕಂಫರ್ಟಬಲ್ ಎನಿಸುವ ಹಾಗೂ ಬೌಲರ್, ಪಿಚ್ ಪರಿಸ್ಥಿತಿ ಮತ್ತು ಮೈದಾನದ ಗಾತ್ರಕ್ಕೆ ಸೂಕ್ತವಾದ ಶಾಟ್‌ಗಳ ಮೂಲಕ ಅಪಾಯದ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ ಎಂದು ಎಬಿಡಿ ವಿವರಿಸಿದ್ದಾರೆ.
ಮೈದಾನದಲ್ಲಿ ಸ್ವಲ್ಪ ಗಣಿತದ ಲೆಕ್ಕಾಚಾರ ನಡೆಸಿ, ನಾವು ಆಡಲು ಪ್ರಯತ್ನಿಸುವ ಶಾಟ್‌ಗೆ ಅತ್ಯಂತ ಕಡಿಮೆ ಅಪಾಯದ ದರವನ್ನು (Risk rate) ಕಂಡುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ 'ಕಬುನಿ' ತಂತ್ರಜ್ಞಾನವು ಖಂಡಿತವಾಗಿಯೂ ಸಹಕಾರಿಯಾಗುತ್ತಿತ್ತು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, ಕೆಲವು ನಿರ್ದಿಷ್ಟ ಶಾಟ್‌ಗಳ ಮೂಲಕ ನಾವು ಎಷ್ಟು ದೂರದವರೆಗೆ ಸ್ಥಿರವಾಗಿ ಚೆಂಡನ್ನು ಬಾರಿಸಬಹುದು ಎಂಬ ಅಂಕಿ-ಅಂಶಗಳು ಸಿಕ್ಕರೆ, ಮೈದಾನದ ಗಾತ್ರವನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ರಿಸ್ಕ್ ತೆಗೆದುಕೊಳ್ಳಲು ಇದು ಬಹಳ ನೆರವಾಗುತ್ತಿತ್ತು ಎಂದು ಡಿವಿಲಿಯರ್ಸ್ ಹೇಳಿದ್ದಾರೆ. ಆಧುನಿಕ ಕ್ರಿಕೆಟ್‌ನಲ್ಲಿ ತಂತ್ರಜ್ಞಾನದ ಮೂಲಕ ಸಿಗುವ ಡೇಟಾ ಅತ್ಯಂತ ಪ್ರಮುಖವಾಗಿದ್ದು, ಮೈದಾನದಲ್ಲಿ ಆಟಗಾರರು ತಮ್ಮ ಸಹಜ ಪ್ರವೃತ್ತಿಗೆ ತಕ್ಕಂತೆ ಆಡುವ ಮುನ್ನ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂತಹ ಇನ್‌ಪುಟ್‌ಗಳು ಅತ್ಯುತ್ತಮ ಅಳತೆಗೋಲಾಗಿ ಸಹಾಯ ಮಾಡುತ್ತವೆ ಎಂದು ಅವರು ನಂಬಿದ್ದಾರೆ, (ಏಜೆನ್ಸೀಸ್).