- ಇಂಜುರಿಯಿಂದ ಬಳಲುತ್ತಿದ್ದ ತಿಲಕ್ ವರ್ಮಾ
- ಶಸ್ತ್ರಚಿಕಿತ್ಸೆಗೆ ಒಳಗಾದ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್
- ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಮಾತ್ರವಲ್ಲ, ಟಿ20 ವಿಶ್ವಕಪ್ಗೂ ಅಲಭ್ಯ ಎಂಬ ವದಂತಿ
- ಹೈದರಾಬಾದ್ ಕೋಚ್ ರವಿತೇಜ ಕೊಟ್ಟರು ಅಪ್ಡೇಟ್
ಮುಂಬೈ: ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಸದ್ಯ ಸಣ್ಣ ಇಂಜುರಿಯಿಂದ ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಈ ವಿಚಾರ ಹೊರಬೀಳುತ್ತಿದ್ದಂತೆ ಅವರ ಜಾಗಕ್ಕೆ ಯಾರೆಂಬ ಪ್ರಶ್ನೆಗಳು ಹರಿದಾಡುತ್ತಿವೆ. ಇದೆಲ್ಲದರ ಮಧ್ಯೆ, ಹೈದರಾಬಾದ್ ಕೋಚ್ ರವಿತೇಜ ನೀಡಿರುವ ಮಾಹಿತಿ ವದಂತಿಗಳಿಗೆ ಬ್ರೇಕ್ ಹಾಕಿದೆ.
ಹೊಟ್ಟೆ ಭಾಗದಲ್ಲಿ ಉಂಟಾದ ನೋವಿನಿಂದ ಬಳಲುತ್ತಿದ್ದ ತಿಲಕ್, ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೂಲಕ ಮೈದಾನದಿಂದ ಹೊರಗುಳಿದರು. ಈ ಸುದ್ದಿ ಹೊರಬಿದ್ದಿದ್ದೇ ತಡ ತಿಲಕ್ ವರ್ಮಾ, ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಿಂದ ಹೊರಗುಳಿಯುವುದು ಖಚಿತ ಎನ್ನಲಾಯಿತು. ಆದರೆ, ಇದರೊಟ್ಟಿಗೆ ಅವರು, ಫೆಬ್ರವರಿ 7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಯಿಂದಲೂ ಹೊರಗುಳಿಯಬಹುದು ಎಂಬ ಸುದ್ದಿಗಳು ಹರಿದಾಡಿತು. ಇದರ ಬೆನ್ನಲ್ಲೇ ರವಿತೇಜ ಹೊಸ ಮಾಹಿತಿ ಹಂಚಿಕೊಂಡಿದ್ದಾರೆ.
ತಿಲಕ್ ಆರೋಗ್ಯವಾಗಿದ್ದಾರೆ ಮತ್ತು ಶೀಘ್ರವೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲಿದ್ದಾರೆ. ಅವರಿಗೆ ಆಗಿರುವುದು ಮೈನರ್ ಆಪರೇಷನ್. ಕೇವಲ 4 ದಿನಗಳ ವಿಶ್ರಾಂತಿ ಸಾಕು ಎಂದು ಹೈದರಾಬಾದ್ ಕ್ರಿಕೆಟ್ ತಂಡದ ಕೋಚ್ ಡಿ.ಬಿ. ರವಿತೇಜ ಹೇಳಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ನಲ್ಲಿ ಅವರ ಅಲಭ್ಯತೆ ಕುರಿತಂತೆ ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದರು. ಜನವರಿ 21ರಿಂದ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿ ಮೊದಲ ಮೂರು ಪಂದ್ಯಗಳಲ್ಲಿ ತಿಲಕ್ ವರ್ಮಾ ಆಡುವುದಿಲ್ಲ ಎಂದು ವರದಿಯಾಗಿದೆ,(ಏಜೆನ್ಸೀಸ್).