ಡ್ರೆಸಿಂಗ್ ರೂಮ್ನಲ್ಲಿ ನಿಷೇದಿತ ಇ-ಸಿಗರೇಟ್ ಸೇದಿದ ರಿಯಾನ್ ಪರಾಗ್
- ಡ್ರೆಸಿಂಗ್ ರೂಮ್ನಲ್ಲಿ ನಿಷೇದಿತ ಇ-ಸಿಗರೇಟ್ ಸೇದಿದ ರಿಯಾನ್ ಪರಾಗ್
- ಐಪಿಎಲ್ನಲ್ಲಿ ವೇಪಿಂಗ್ ಇದೇ ಮೊದಲಲ್ಲ
- 2020 ರಲ್ಲಿ ಇ-ಸಿಗರೇಟ್ ಸೇದಿದ್ದ ಆರನ್ ಫಿಂಚ್
- ಎಬಿಡಿ ಮೇಲೆ ಇದೆ ವೇಪಿಂಗ್ ಆರೋಪ!
ಐಪಿಎಲ್: ಭಾರತದಲ್ಲಿ ಐಪಿಎಲ್ ಎಂದರೆ ಅದು ಕ್ರಿಕೆಟ್ನ ಹಬ್ಬವಿದ್ದಂತೆ ಇಲ್ಲಿ, ಕೇವಲ ಸಿಕ್ಸ್, ಫೋರ್ ಮತ್ತು ವಿಕೆಟ್ಗಳ ಸದ್ದು ಸ್ವಲ್ಪ ಜಾಸ್ತಿಯೇ ಇರುತ್ತದೆ. ಆದರೆ ಮೊನ್ನೆಯಿಂದ ಮೈದಾನದಿಂದ ಬರೀ 'ಹೊಗೆ' ಬಗ್ಗೆಯೇ ಹೆಚ್ಚಿನ ಸುದ್ದಿ ಬರುತ್ತಿದೆ.
ಇ-ಸಿಗರೇಟ್ ಸೇದಿದ ಪರಾಗ್!
ಮೊನ್ನೆ (ಏ.28) ಪಂಜಾಬ್ನ ಪಿಸಿಎ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವರ್ಸ್ರ್ಸ್ ರಾಜಸ್ಥಾನ್ ರಾಯಲ್ಸ್ ತಂಡದ ನಡುವಿನ ಪಂದ್ಯದಲ್ಲಿ ರಾಜಸ್ಥಾನ್ ತಂಡದ ನಾಯಕ ರಿಯಾನ್ ಪರಾಗ್ (Riyan Parag) ಡ್ರೆಸಿಂಗ್ ರೂಮ್ನಲ್ಲಿ ನಿಷೇದಿತ ಇ-ಸಿಗರೇಟ್ (ವೇಪ್) ನ್ನು ಸೇದುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ಈ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಬಿಸಿಸಿಐ, ನಮ್ಮ ಗಮನಕ್ಕೆ ಈ ವಿಚಾರ ಬಂದಿದ್ದು, ನಾವು ರಿಯಾನ್ ಪರಾಗ್ಗೆ ಇದರ ಕುರಿತು ಮಾಹಿತಿ ನೀಡುವಂತೆ ಹೇಳಿದ್ದೆವೆ. ಅವರು ಮಾಡಿದ್ದೇನಾದರೂ ನಿಯಮಬಾಹಿರವಾಗಿದ್ದರೆ, ಖಂಡಿತವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಐಪಿಎಲ್ನಲ್ಲಿ ವೇಪಿಂಗ್ ಇದೇ ಮೊದಲಲ್ಲ!
ಭಾರತ ಸರ್ಕಾರವು 2019 ರಲ್ಲಿ ಇ- ಸಿಗರೇಟಿನ ಸೇವನೆಯನ್ನು ನಿಷೇಧಿಸಿದೆ. ಐಪಿಎಲ್ನಲ್ಲಿ ಆಟಗಾರರು ಈ ವೇಪಿಂಗ್ನಲ್ಲಿ ತೊಡಗಿರುವುದು ಇದೇ ಮೊದಲಲ್ಲ.
2020 ರಲ್ಲಿ ಕೋವಿಡ್ನಿಂದ ಯುಎಇನಲ್ಲಿ ನಡೆದಿದ್ದ ಐಪಿಎಲ್ ಪಂದ್ಯಾವಳಿ ಸಂದರ್ಭದಲ್ಲಿ ಆರ್ಸಿಬಿ ಆಟಗಾರ ಆರನ್ ಫಿಂಚ್, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಇ-ಸಿಗರೇಟ್ನ್ನು ಸೇದುತ್ತಿರುವ ವಿಡಿಯೋ ಎಲ್ಲಡೆ ಹರಿದಾಡಿತ್ತು. ಅದೇ ರೀತಿ, ಆರ್ಸಿಬಿಯ ಪರ ಆಟವಾಡುತ್ತಿದ್ದ, ಎ.ಬಿ. ಡಿವಿಲಿಯರ್ಸ್ ಇತ್ತೀಚೆಗೆ ಎಸ್ಎ 20 (SA 20) ಟೂರ್ನಿಯಲ್ಲಿ ವೇಪಿಂಗ್ ಮಾಡುತ್ತಿದ್ದ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿತ್ತು.
ಆದರೆ ಇವರಿಬ್ಬರೂ, ಭಾರತದ ಆಚೆ ಇ-ಸಿಗರೇಟ್ನ್ನು ಸೇದಿರುವ ಕಾರಣ ಯಾವುದೇ ಕಾನೂನಾತ್ಮಕ ತೊಡಕು ಎದುರಾಗಿರಲಿಲ್ಲ. ಆದರೆ ರಿಯಾನ್ ಪರಾಗ್ ಭಾರತದಲ್ಲಿ ಸೇದಿರುವ ಕಾರಣ, ಟೂರ್ನಿಯಿಂದಲೇ ಬ್ಯಾನ್ ಆಗುತ್ತಾರೋ? ಅಥವಾ ದಂಡ ಕಟ್ಟಿಸಿಕೊಂಡು ಸುಮ್ಮನಾಗುತ್ತಾರೋ? ಎನ್ನುವುದನ್ನು ಕಾದು ನೋಡಬೇಕು.
ಕಾನೂನು ಏನು ಹೇಳುತ್ತದೆ?
ಭಾರತ ಸರ್ಕಾರವು 2019ರಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ (PECA - Prohibition of Electronic Cigarettes Act) ಅಡಿಯಲ್ಲಿ ಇ-ಸಿಗರೇಟ್ ಮತ್ತು ವೇಪ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಈ ಕಾಯ್ದೆಯ ಪ್ರಕಾರ, ಇ-ಸಿಗರೇಟ್ ಮತ್ತು ವೇಪ್‌ಗಳ ಉತ್ಪಾದನೆ ಮತ್ತು ತಯಾರಿಕೆ, ಆಮದು ಮತ್ತು ರಫ್ತು, ಸಂಗ್ರಹಣೆ ಮತ್ತು ಮಾರಾಟ ಅಂತೆಯೇ ಯಾವುದೇ ರೀತಿಯ ಜಾಹೀರಾತನ್ನು ಮಾಡುವಂತಿಲ್ಲ ಎಂಬ ನಿಯಮವಿದೆ.
ಮೊದಲ ಬಾರಿಗೆ ಈ ನಿಯಮಗಳನ್ನು ಮೀರಿದರೆ 1 ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರೂಪಾಯಿವರೆಗೆ ದಂಡ, ಎರಡಕ್ಕಿಂತ ಹೆಚ್ಚು ಬಾರಿ ಉಲ್ಲಂಘಿಸಿದರೆ 3 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. ಹಾಗೆಯೇ ಇ-ಸಿಗರೇಟ್ ಮತ್ತು ವೇಪ್‌ಗಳ ಸಂಗ್ರಹಣೆಯನ್ನು ಮಾಡಿದಲ್ಲಿ, 6 ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 50,000 ರೂಪಾಯಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ, (ಏಜನ್ಸೀಸ್).