ಇದು ಧೋನಿಯ ಕೊನೆ ಐಪಿಎಲ್ ಎಂದ ರಾಬಿನ್ ಉತ್ತಪ್ಪ
- ಮಾರ್ಚ್ 28 ರಿಂದ ಆರಂಭವಾಗಲಿರುವ ಐಪಿಎಲ್
- ಇದು ಧೋನಿಯ ಕೊನೆ ಐಪಿಎಲ್ ಎಂದ ರಾಬಿನ್ ಉತ್ತಪ್ಪ
- ಸಿಎಸ್‌ಕೆ ತಂಡದ ಪರವಾಗಿ ಇದು ಅವರ ಕೊನೆಯ ಸೀಸನ್ ಆಗಲಿದೆ
ಚೆನ್ನೈ: ಇದೇ ಬರುವ ಮಾರ್ಚ್ 28 ರಿಂದ ಭಾರತದ ಕ್ರಿಕೆಟ್ ಹಬ್ಬ ಐಪಿಎಲ್ ಪ್ರಾರಂಭವಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳು ಈ ಟೂರ್ನಿಯ ರಸದೌತಣವನ್ನು ಸವಿಯಲು ಕಾತುರರಾಗಿದ್ದಾರೆ.
ಭಾರತದಲ್ಲಿ ಐಪಿಎಲ್ ಕೇವಲ ಕ್ರೀಡೆಯಾಗಲ್ಲ ಇದೊಂದು ದೇವಸ್ಥಾನದಂತೆ ಹಾಗೂ ಆಟಗಾರರನ್ನು ದೇವರಂತೆ ಕಾಣುವ ಪರಂಪರೆಯಿದೆ. ಇಲ್ಲಿ ಆಟವಾಡುವ ಪ್ರತಿ ಆಟಗಾರನಿಗೂ ತನ್ನದೇ ಆದ ಅಭಿಮಾನಿ ಬಳಗ ಸಹ ಹುಟ್ಟಿಕೊಂಡಿರುತ್ತದೆ.
ಈ ಸೀಸನ್ನಲ್ಲಿ ತನ್ನ ನೆಚ್ಚಿನ ಆಟಗಾರ ಉತ್ತಮವಾಗಿ ಆಟವಾಡಬೇಕು, ಅವನ ತಂಡವೇ ಚಾಂಪಿಯನ್ನಾಗಿ ಹೊರಹೊಮ್ಮಬೇಕು ಎನ್ನುವ ಆಸೆ ಐಪಿಎಲ್ ಪ್ರೇಮಿಯ ಮನಸ್ಸಿನಲ್ಲಿರುತ್ತದೆ.
ಅದೇ ರೀತಿ ಮಹೇಂದ್ರ ಸಿಂಗ್ ಧೋನಿ ತಮ್ಮ ನಾಯಕತ್ವ ಮತ್ತು ವಿಕೆಟ್ ಕೀಪಿಂಗ್ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಐಪಿಎಲ್ ಪ್ರಾರಂಭದಿಂದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಪರವಾಗಿ ಆಡುತ್ತಾ ಬಂದಿದ್ದಾರೆ.
ಈ ಸೀಸನ್ ಧೋನಿಯ ಕೊನೆ ಸೀಸನ್!
ಆದರೆ ಈ ಬಾರಿಯ ಐಪಿಎಲ್ ಧೋನಿ ಮೈದಾನಕ್ಕೀಳಿಯುವ ಕೊನೆಯ ಐಪಿಎಲ್ ಆಗಲಿದೆ ಎಂದು ಸಿಎಸ್‌ಕೆ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ (Robin Uthappa about MS Dhoni) ಭವಿಷ್ಯ ನುಡಿದ್ದಿದ್ದಾರೆ.
ಸಿಎಸ್‌ಕೆ ತಂಡಕ್ಕೆ 5 ಐಪಿಎಲ್ ಟ್ರೋಫಿಗಳನ್ನು ತಂದುಕೊಡುವಲ್ಲಿ ಧೋನಿಯ ಪಾತ್ರ ಬಹಳ ಪ್ರಮುಖವಾಗಿದೆ. ಧೋನಿ ಆಡಿರುವ 278 ಪಂದ್ಯಗಳಲ್ಲಿ ಸುಮಾರು 5438 ರನ್ಗಳನ್ನು ಗಳಿಸಿರುವುದು ಸಾಧನೆಯೇ ಸರಿ ಎಂದು ಉತ್ತಪ್ಪ ಹೇಳಿದ್ದಾರೆ.
ನನ್ನ ಪ್ರಕಾರ ಧೋನಿ ಈ ಸೀಸನ್ನಲ್ಲಿ ಕೊನೆಯ ಬಾರಿ ಸಿಎಸ್‌ಕೆ ಜರ್ಸಿ ತೊಡಲಿದ್ದಾರೆ. ನಂತರ ಸಿಎಸ್‌ಕೆ ಆಡಳಿತ ಮಂಡಳಿ ಅಥವಾ ಕೋಚಿಂಗ್ನಲ್ಲಿ ಮುಂದುವರಿಯಬಹುದು ಎಂದು ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಸಾಧನೆ
ಕ್ಯಾಪ್ಟನ್ ಕೂಲ್ ಎಂದೇ ಖ್ಯಾತರಾದ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದ ಅತ್ಯಂತ ಯಶಸ್ವಿ ಮತ್ತು ಪ್ರಭಾವಶಾಲಿ ಆಟಗಾರರಲ್ಲಿ ಒಬ್ಬರು. 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಅವಿಭಾಜ್ಯ ಅಂಗವಾಗಿರುವ ಅವರು, ತಂಡವನ್ನು ನಾಯಕನಾಗಿ ಐದು ಬಾರಿ (2010, 2011, 2018, 2021 ಮತ್ತು 2023) ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳಿಗೆ (226ಕ್ಕೂ ಹೆಚ್ಚು) ನಾಯಕತ್ವ ವಹಿಸಿದ ದಾಖಲೆ ಇವರ ಹೆಸರಲ್ಲಿದೆ. ವಿಕೆಟ್ ಕೀಪರ್ ಆಗಿ 190ಕ್ಕೂ ಹೆಚ್ಚು ಔಟ್ ಮಾಡುವ ಮೂಲಕ ಈ ವಿಭಾಗದಲ್ಲೂ ಅಗ್ರಸ್ಥಾನದಲ್ಲಿದ್ದಾರೆ.ಅಂತಿಮ ಓವರ್‌ಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಪಂದ್ಯವನ್ನು ಮುಗಿಸುವ ಅತ್ಯುತ್ತಮ ಫಿನಿಶರ್ ಆಗಿ ಗುರುತಿಸಿಕೊಂಡಿದ್ದಾರೆ.
ಶೇಕಡ 58% ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯದೊಂದಿಗೆ ಧೋನಿ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡವನ್ನು 10 ಬಾರಿ ಫೈನಲ್‌ಗೆ ಮತ್ತು 12 ಬಾರಿ ಪ್ಲೇ-ಆಫ್‌ಗೆ ಕರೆದೊಯ್ದಿದ್ದಾರೆ. ಹಾಗೆಯೇ 5,400ಕ್ಕೂ ಹೆಚ್ಚು ರನ್ ಕಲೆಹಾಕಿದ್ದು, ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ,(ಏಜನ್ಸೀಸ್).