ವೈಭವ್ ಆಟವನ್ನು ಸಚಿನ್ ತೆಂಡೂಲ್ಕರ್‌ಗೆ ಹೋಲಿಸಿ ಜೋಸ್ ಬಟ್ಲರ್ ಹೇಳಿದ್ದೇನು?
- ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟ ವೈಭವ್ ಸೂರ್ಯವಂಶಿ
- ವೈಭವ್ ಆಟವನ್ನು ಸಚಿನ್ ತೆಂಡೂಲ್ಕರ್‌ಗೆ ಹೋಲಿಸಿ ಜೋಸ್ ಬಟ್ಲರ್ ಹೇಳಿದ್ದೇನು?
- ಸಚಿನ್ ಬಗ್ಗೆ ಜನ ಕೇಳಿದ್ದರು, ವೈಭವ್ನ ಆಟವನ್ನು ನೋಡುತ್ತಿದ್ದಾರೆ
ಇಂಗ್ಲೆಂಡ್: ಈ ವರ್ಷದ ಐಪಿಎಲ್ನಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾದ ಹೆಸರೆಂದರೆ ಅದು ಖಂಡಿತವಾಗಿ ವೈಭವ್ ಸೂರ್ಯವಂಶಿಯದ್ದಾಗಿದೆ. ಕೇವಲ 15 ವರ್ಷದ ಈ ಬಾಲಕ, ಅಂತಾರಾಷ್ಟ್ರೀಯ ಖ್ಯಾತಿಯ ಬೌಲರ್ಗಳನ್ನು ಎದುರಿಸಿ, 776 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಜೊತೆ ಇತರೆ 4 ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾನೆ.
ಐಪಿಎಲ್ನಲ್ಲಿ ಶ್ರೇಷ್ಟ ಪ್ರದರ್ಶನ ನೀಡಿದ ಹಿನ್ನಲೆ ಇವನನ್ನು ಈಗ ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧ ನಡೆಯಲಿರುವ ಟಿ-20 ಟೂರ್ನಿಗೆ ಆಯ್ಕೆ ಮಾಡಲಾಗಿದೆ. ಇದರೊಟ್ಟಿಗೆ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಅತಿ ಕಡಿಮೆ ವಯಸ್ಸಿನ ಆಟಗಾರ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರನಾಗಿದ್ದಾನೆ.
ಸಚಿನ್ ಬಗ್ಗೆ ಜನ ಕೇಳಿದ್ದರು, ವೈಭವ್ನನ್ನು ನೋಡಿದ್ದಾರೆ!
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋಸ್ ಬಟ್ಲರ್ (Jos Buttler on Vaibhav Suryavanshi), 15 ವರ್ಷದ ವೈಭವ್ ಸೂರ್ಯವಂಶಿ ಒಬ್ಬ ಉತ್ತಮ ಬ್ಯಾಟ್ಸ್ಮನ್ ಆಗಿದ್ದಾನೆ. ಭಾರತ ತಂಡದಲ್ಲಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಸ್ಥಾನ ಪಡೆಯುವುದು ಕಡಿಮೆ ಸಾಧನೆ ಅಲ್ಲವೇ ಅಲ್ಲ ಎಂದಿದ್ದಾರೆ.
ತಾವು ಗುಜರಾತ್ ಟೈಟಾನ್ಸ್ ತಂಡದಲ್ಲಿ ಆಡುತ್ತಿದ್ದಾಗ, ಸಹಾಯಕ ಕೋಚ್ ಆಗಿದ್ದ ಆಶಿಶ್ ಕಪೂರ್, ಕ್ರಿಕೆಟ್ ದೇವರೆಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ಮತ್ತು ವೈಭವ್ ಸೂರ್ಯವಂಶಿಯನ್ನು ಹೋಲಿಸಿ ಹೀಗೆ ಹೇಳಿದ್ದರಂತೆ.
ಸಚಿನ್ ತೆಂಡೂಲ್ಕರ್ ಮತ್ತು ವೈಭವ್ ಸೂರ್ಯವಂಶಿ ಇಬ್ಬರು ವಯಸ್ಸಿಗೆ ಮೀರಿದ ಪ್ರದರ್ಶನ ನೀಡಿದ್ದಾರೆ. ಆದರೆ ಈಗ ಸೋಷಿಯಲ್ ಮೀಡಿಯಾ ಸಾಕಷ್ಟು ಬೆಳೆದಿರುವ ಕಾರಣ ವೈಭವ್ ಸೂರ್ಯವಂಶಿ ಎಲ್ಲರಿಗೂ ಗೊತ್ತು, ಅವನ ಆಟವನ್ನು ಹೆಚ್ಚು ಕಡಿಮೆ ಎಲ್ಲರೂ ವೀಕ್ಷಿಸಿದ್ದಾರೆ.
ಆದರೆ ಸಚಿನ್ ತೆಂಡೂಲ್ಕರ್ ತನ್ನ ಉತ್ತುಂಗದಲ್ಲಿದ್ದಾಗ, ಯಾವುದೇ ಸಾಮಾಜಿಕ ಜಾಲತಾಣಗಳು ಇರಲಿಲ್ಲ. ಸಚಿನ್ ಬಗ್ಗೆ ನ್ಯೂಸ್ ಪೇಪರ್ನಲ್ಲಿ ಪ್ರಕಟವಾದ ಲೇಖಗಳಲ್ಲಿ ಅವನ ಆಟದ ಚಿತ್ರಣ ದೊರೆಯುತ್ತಿತ್ತು. ಹೆಚ್ಚಿನ ಜನರಿಗೆ ಸಚಿನ್ ಕಥೆಗಳ ಮೂಲಕವೇ ಪರಿಚಿತನಾಗಿದ್ದ, ಬಹಳ ಕಡಿಮೆ ಜನ ಸಚಿನ್ನ ಆಟವನ್ನು ನೋಡಿದ್ದರು. ಆ ಸಮಯದಲ್ಲಿ ಸೋಷಿಯಲ್ ಮೀಡಿಯಾ ಇದ್ದಿದ್ದರೆ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಲೋಕದ ಖಾಯಂ ಅನಭಿಷಕ್ತ ದೊರೆಯಾಗಿರುತ್ತಿದ್ದ ಎಂದು ಕೋಚ್ ಆಶಿಶ್ ಕಪೂರ್ ಹೇಳಿದ್ದರಂತೆ.
ವೈಭವ್ನನ್ನು ಶ್ಲಾಘಿಸಿದ ಬಟ್ಲರ್!
ಈ ಭಾರಿಯ ಐಪಿಎಲ್ನಲ್ಲಿ ವೈಭವ್ ಸೂರ್ಯವಂಶಿ ಬಹಳ ಶ್ರೇಷ್ಟವಾದ ಆಟವನ್ನು ಪ್ರದರ್ಶಿಸಿದ್ದಾನೆ. ಅಂತಾರಾಷ್ಟ್ರೀಯ ಬೌಲರ್ಗಳನ್ನು ಎದುರಿಸಿ 776 ರನ್ ಗಳಿಸುವುದು ಸುಲಭದ ಮಾತಲ್ಲ. ಘಟಾನುಘಟಿ ಬ್ಯಾಟ್ಸ್ಮನ್ಗಳ ಜೊತೆ ಪೈಪೋಟಿ ನಡೆಸಿ ಆರೆಂಜ್ ಕ್ಯಾಪ್ ಪಡೆದಿರುವುದು ಸಾಧನೆಯೇ ಸರಿ ಎಂದು ಹೊಗಳಿದ್ದಾರೆ, (ಏಜನ್ಸೀಸ್).