ಅತಿರೇಕದ ಸಂಭ್ರಮ ಓಕೆನಾ? ಏಷ್ಯಾಕಪ್​ ಗೆದ್ದ ಕೂಡಲೇ ಪಾಕ್ ಎದುರು​ ಸಂಭ್ರಮಿಸಿದ ಟೀಮ್ ಇಂಡಿಯಾ ಬಗ್ಗೆ ಬಿಸಿಸಿಐ ಹೇಳಿದ್ದಿಷ್ಟು  
ಕ್ರಿಕೆಟ್

ಅತಿರೇಕದ ಸಂಭ್ರಮ ಓಕೆನಾ? ಏಷ್ಯಾಕಪ್​ ಗೆದ್ದ ಕೂಡಲೇ ಪಾಕ್ ಎದುರು​ ಸಂಭ್ರಮಿಸಿದ ಟೀಮ್ ಇಂಡಿಯಾ ಬಗ್ಗೆ ಬಿಸಿಸಿಐ ಹೇಳಿದ್ದಿಷ್ಟು

U19 Asia Cup Final: ಪಾಕಿಸ್ತಾನ ಎದುರು 1 ವಿಕೆಟ್​ಗಳ ರೋಚಕ ಜಯ ಸಾಧಿಸಿ, ಅಂಡರ್​-19 ಏಷ್ಯಾಕಪ್ ಗೆದ್ದ ಟೀಮ್ ಇಂಡಿಯಾ, ಗೆಲುವು ನೋಡಿದ ಕೂಡಲೇ ಪಾಕಿಸ್ತಾನ ಆಟಗಾರರ ವಿರುದ್ಧ ತೋರಿದ ಸಂಭ್ರಮ, ಚೀರಾಟ, ಕುಣಿತ ಮತ್ತು ಒಂದಷ್ಟು ಕೈಸನ್ನೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಈ ಮಟ್ಟಿಗಿನ ಸಂಭ್ರಮ ಬೇಕಿತ್ತೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ವಿಷಯ ಮುನ್ನೆಲೆಗೆ ಬಂದಿದ್ದೇ ತಡ ಸ್ವತಃ ಬಿಸಿಸಿಐ ಕಾರ್ಯದರ್ಶಿ ಇದಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ್ದಾರೆ.

ಶನಿವಾರ ಸಂಜೆ ನಡೆದ ಈ ಫೈನಲ್​ ಪಂದ್ಯದಲ್ಲಿ ಒಂದು ಹಂತದಲ್ಲಿ ಟೀಮ್ ಇಂಡಿಯಾ ಇನ್ನೇನು ಸೋಲುತ್ತೆ ಎಂದೇ ಕ್ರಿಕೆಟ್​ ಪ್ರೇಮಿಗಳು ಅಂದುಕೊಂಡಿದ್ದರು. ಆದರೆ, ಕೊನೇ ಓವರ್​ನಲ್ಲಿ ಇಡೀ ಪಂದ್ಯದ ಲೆಕ್ಕಾಚಾರವೇ ಬದಲಾಗಿ ಹೋಯಿತು. ಒಂದು ಬೌಂಡರಿ ಮೂಲಕ ರೋಚಕ ಜಯ ಸಾಧಿಸಿದ ಟೀಮ್ ಇಂಡಿಯಾ, ಪಾಕಿಸ್ತಾನದ ಅಂಡರ್​-19 ಏಷ್ಯಾಕಪ್​ ಟ್ರೋಫಿ ಎತ್ತಿಹಿಡಿಯುವ ಆಸೆಯನ್ನು ಛಿದ್ರಗೊಳಿಸಿತು. ಗೆಲುವಿನ ಶಾಟ್​ ಬರುತ್ತಿದ್ದಂತೆ ಮೈದಾನಕ್ಕೆ ಓಡಿಬಂದ ಭಾರತೀಯ ಆಟಗಾರರು ಮಾಡಿದ್ದು ಮಾತ್ರ ಪಾಕ್​ ಕ್ರಿಕೆಟಿಗರು ಮತ್ತು ಪ್ರೇಮಿಗಳಿ ಇನ್ಯಾವತ್ತು ಮರೆಯಬಾರದು ಆ ರೀತಿ ಇತ್ತು.

ಸೋತ ಬೇಸರದಲ್ಲಿ ಪೆವಿಲಿಯನ್​ ಕಡೆ ಹೋಗುತ್ತಿದ್ದ ಪಾಕ್​ ಆಟಗಾರರ ಎದುರೇ ಹೋಗಿ ಕುಣಿದು, ಚೀರಾಡಿದ ಟೀಮ್ ಇಂಡಿಯಾ ಆಟಗಾರರು, ಸಂಭ್ರಮದಲ್ಲಿ ಅನುಚಿತ ಸನ್ನೆಗಳನ್ನು ತೋರಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಆದರೆ, ಇದರಲ್ಲಿ ಯಾವುದೇ ಕೆಟ್ಟ ರೀತಿ ಅಥವಾ ತಪ್ಪು ಅರ್ಥಗಳು ಇಲ್ಲ ಎಂಬುದಂತು ಸ್ಪಷ್ಟವಾಗಿದೆ. ಕಳೆದ ಬಾರಿ ಪಾಕಿಸ್ತಾನಿಗಳು ಇದೇ ರೀತಿ ಟೀಮ್ ಇಂಡಿಯಾ ಆಟಗಾರರು ಸೋತಾಗ ತೋರಿದ ವರ್ತನೆಯನ್ನು ನೆನಪಿಸಿಕೊಂಡೇ, ಯುವ ಕ್ರಿಕೆಟಿಗರು ಈ ಕ್ಷಣದಲ್ಲಿ ವಾಪಾಸ್​ ಕೊಟ್ಟಿದ್ದು ಎಂಬುದಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯ ಇದನ್ನೇ ಬಿಸಿಸಿಐ ಕಾರ್ಯದರ್ಶಿ ಕೂಡ ಬೆಂಬಲಿಸಿದ್ದಾರೆ.

ಹಿರಿಯ ಆಟಗಾರರೂ ಕೆಲವೊಮ್ಮೆ ತಮ್ಮ ಭಾವನೆಗಳನ್ನು ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಕೊನೆಯ ಎಸೆತದಲ್ಲಿ ಸೋತ ಪಂದ್ಯವನ್ನು ಗೆದ್ದಾಗ ಆ ಹುಡುಗರಿಗೆ ಸಿಗುವ ಅಡ್ರಿನಾಲಿನ್ ರಶ್ ಊಹೆಗೂ ನಿಲುಕದ್ದು. ಗೆಲುವಿನ ಖುಷಿ ಅನುಭವಿಸುವುದರಲ್ಲಿ ತಪ್ಪೇನಿಲ್ಲ. ಆದರೆ, ಅತಿರೇಕಕ್ಕೆ ಹೋಗಬಾರದು ಎಂದಿದ್ದಾರೆ ಕ್ರಿಕೆಟ್ ವಿಶ್ಲೇಷಕರು. ಈ ಕುರಿತು ಎಎನ್​ಐ ಪತ್ರಕರ್ತರು ಕೇಳಿದ ಪ್ರಶ್ನೆಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕೊಟ್ಟ ಉತ್ತರ ಹೀಗಿದೆ.

ಕೊನೆಯ ಕ್ಷಣದಲ್ಲಿ ರೋಚಕ ಗೆಲುವು ನೋಡಿದಾಗ ಆ ಖುಷಿ ಬಂದಿದೆ. ಹುಡುಗರಿಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಎಲ್ಲ ಹಕ್ಕಿದೆ. ಇದು ಅವರ ಪಾತ್ರ ಮತ್ತು ಹೋರಾಟದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಇಂದಿನ ಪಂದ್ಯವು ಎಷ್ಟು ರೋಚಕವಾಗಿತ್ತು ಎಂಬುದನ್ನು ಪರಿಗಣಿಸಿ. ಒಂದು ಹಂತದಲ್ಲಿ, ಅದು ನಿಜವಾಗಿಯೂ ಭಾರತದ ಪರವಾಗಿರಲಿಲ್ಲ. ಆದರೂ, ಭಾರತ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದು ತಂಡದ ಆತ್ಮವಿಶ್ವಾಸದ ಮಟ್ಟವನ್ನು ದುಪ್ಪಟ್ಟಾಗಿಸಿದೆ" ಎಂದರು.

ನಮ್ಮ ಆಟಗಾರರು ಅಂತಹ ಕಠಿಣ ಸಮಯದಲ್ಲಿ ಪಂದ್ಯವನ್ನು ಗೆದ್ದರು ಎಂದಮೇಲೆ ಖಂಡಿತವಾಗಿಯೂ ಅವರೆಲ್ಲ ಸಂಭ್ರಮಿಸಲು ಅರ್ಹರು. ಇದು ನಾವು ಅನುಮತಿಸಲೇ ಬೇಕಾದ ವಿಷಯ" ಎಂದು ಹೇಳುವ ಮೂಲಕ ಆಟಗಾರರ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ,(ಏಜೆನ್ಸೀಸ್).