ತಮ್ಮ ಸ್ವಂತ ರಾಷ್ಟ್ರದ ವಿರುದ್ಧವೇ ಆಡುತ್ತಿರುವ ಕ್ರಿಕೆಟಿಗರಿವರು ( T20 World Cup 2026 ) 
ಕ್ರಿಕೆಟ್

ತಮ್ಮ ಸ್ವಂತ ರಾಷ್ಟ್ರದ ವಿರುದ್ಧವೇ ಆಡುತ್ತಿರುವ ಕ್ರಿಕೆಟಿಗರಿವರು... ಟಿ20 ವಿಶ್ವಕಪ್​ನಲ್ಲಿ ಅಪರೂಪದ ದೃಶ್ಯ! T20 World Cup 2026

ಪ್ರಮುಖ ಮುಖ್ಯಾಂಶಗಳು

  • ಫೆಬ್ರವರಿ 7ರಿಂದ ಆರಂಭವಾಗಿರುವ ಟಿ20 ವಿಶ್ವಕಪ್ ಟೂರ್ನಿ ತುಂಬಾ ರೋಚಕ ಹಾದಿಯಲ್ಲಿ ಸಾಗುತ್ತಿದೆ
  • ಕ್ರಿಕೆಟ್​ ಪ್ರಿಯರ ಉತ್ಸಾಹ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದ್ದು ಭರಪೂರ ಮನರಂಜನೆ ಸಿಗುತ್ತಿದೆ
  • ಕ್ರಿಕೆಟ್​ ಶಿಶುಗಳೆಂದು ಪರಿಗಣಿಸಲಾದ ತಂಡಗಳು ಕೂಡ ಕಠಿಣ ಸ್ಪರ್ಧೆಯೊಡ್ಡಿ ಬಲಿಷ್ಠ ತಂಡಗಳಿಗೆ ಪೈಪೋಟಿ ನೀಡುತ್ತಿವೆ
  • ಈ ವಿಶ್ವಕಪ್‌ನಲ್ಲಿ ಆಡುತ್ತಿರುವ ಕೆಲವು ಆಟಗಾರರು ಎರಡು ತಂಡಗಳ ಪರ ಆಡಿರುವ ಹೆಗ್ಗಳಿಕೆಯನ್ನು ಸಾಧಿಸಿದ್ದಾರೆ
T20 World Cup 2026 : ಫೆಬ್ರವರಿ 7ರಿಂದ ಆರಂಭವಾಗಿರುವ ಟಿ20 ವಿಶ್ವಕಪ್ ಟೂರ್ನಿ ತುಂಬಾ ರೋಚಕ ಹಾದಿಯಲ್ಲಿ ಸಾಗುತ್ತಿದೆ. ಕ್ರಿಕೆಟ್​ ಪ್ರಿಯರ ಉತ್ಸಾಹ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಪ್ರತಿ ಪಂದ್ಯದಲ್ಲೂ ಭರಪೂರ ಮನರಂಜನೆ ಸಿಗುತ್ತಿದೆ. ಕ್ರಿಕೆಟ್​ ಶಿಶುಗಳೆಂದು ಪರಿಗಣಿಸಲಾದ ತಂಡಗಳು ಕೂಡ ಕಠಿಣ ಸ್ಪರ್ಧೆಯೊಡ್ಡಿ ಬಲಿಷ್ಠ ತಂಡಗಳಿಗೆ ಪೈಪೋಟಿ ನೀಡುತ್ತಿವೆ. ಸಣ್ಣ ತಂಡಗಳು ನಿರೀಕ್ಷೆಗೂ ಮೀರಿದ ಪ್ರದರ್ಶನವನ್ನು ನೀಡುತ್ತಿವೆ. ನಿನ್ನೆ (ಫೆ.11) ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವೆ ನಡೆದ ಪಂದ್ಯವೇ ಇದಕ್ಕೆ ಸಾಕ್ಷಿಯಾಗಿದೆ. ಡಬಲ್ ಸೂಪರ್ ಓವರ್ ಮೂಲಕ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಯಿತು. ಅಫ್ಘಾನಿಸ್ತಾನ ಎಷ್ಟರಮಟ್ಟಿಗೆ ಹರಿಣ ಪಡೆಗೆ ಸ್ಪರ್ಧೆ ನೀಡಿತು ಅನ್ನೋದನ್ನು ಪಂದ್ಯ ನೋಡಿದರೆ ನೀವು ಅರ್ಥ ಮಾಡಿಕೊಳ್ಳಬಹುದು.
ಈ ಪಂದ್ಯಾವಳಿಗೆ ಸಂಬಂಧಿಸಿದಂತೆ ಮತ್ತೊಂದು ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ. ಈ ವಿಶ್ವಕಪ್‌ನಲ್ಲಿ ಆಡುತ್ತಿರುವ ಕೆಲವು ಆಟಗಾರರು ಎರಡು ತಂಡಗಳ ಪರ ಆಡಿರುವ ಹೆಗ್ಗಳಿಕೆಯನ್ನು ಸಾಧಿಸಿದ್ದಾರೆ. ಕಳೆದ ಐಸಿಸಿ ಟೂರ್ನಿಯಲ್ಲಿ ಒಂದು ತಂಡವನ್ನು ಪ್ರತಿನಿಧಿಸಿದ್ದವರು ಈಗ ವಿಶ್ವಕಪ್‌ನಲ್ಲಿ ಮತ್ತೊಂದು ತಂಡಕ್ಕಾಗಿ ಆಡುತ್ತಿದ್ದಾರೆ. ಅದರಲ್ಲೂ ತಮ್ಮ ಸ್ವಂತ ದೇಶದ ವಿರುದ್ಧ ಈ ಟಿ20 ವಿಶ್ವಕಪ್​ನಲ್ಲಿ ಆಡುತ್ತಿದ್ದಾರೆ ಅನ್ನೋದು ಗಮನಾರ್ಹ. ಅಂತಹ ಐದು ಆಟಗಾರರ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.

ರೋಲೋಫ್ ವ್ಯಾನ್ ಡೆರ್ ಮೆರ್ವೆ

ಪ್ರಸ್ತುತ ನೆದರ್ಲೆಂಡ್ಸ್​ ತಂಡದ ಪರ ಆಡುತ್ತಿರುವ ಬೌಲಿಂಗ್ ಆಲ್‌ರೌಂಡರ್ ರೋಲೋಫ್ ವ್ಯಾನ್ ಡೆರ್ ಮೆರ್ವೆಗೆ 41 ವರ್ಷ ವಯಸ್ಸು. 2000ದ ಕೊನೆಯಲ್ಲಿ ತಮ್ಮ ವೃತ್ತಿಜೀವನದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಪರ ಒಟ್ಟು 26 ವೈಟ್-ಬಾಲ್ ಪಂದ್ಯಗಳನ್ನು ಆಡಿದ್ದರು. ವ್ಯಾನ್ ಡೆರ್ ಮೆರ್ವೆ 2009ರ ಚಾಂಪಿಯನ್ಸ್ ಟ್ರೋಫಿ, 2009 ಮತ್ತು 2010ರ ಟಿ20 ವಿಶ್ವಕಪ್‌ಗಳಲ್ಲಿ ದಕ್ಷಿಣ ಆಫ್ರಿಕಾ ಪರ ಆಡಿದ್ದರು. ದುರದೃಷ್ಟವಶಾತ್, ಅವರ ತಂಡವು ಮೂರು ಈವೆಂಟ್‌ಗಳಲ್ಲಿ ಎರಡರಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ವಿಫಲವಾಯಿತು. 2009ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿಯೂ ಅವರು ಸೋತರು. ಇದಾದ ಬಳಿಕ ತಂಡವನ್ನು ಬದಲಿಸಿರುವ ಮೆರ್ವೆ, 2023ರ ಏಕದಿನ ವಿಶ್ವಕಪ್ ಸೇರಿದಂತೆ ಹಿಂದಿನ ನಾಲ್ಕು T20 ವಿಶ್ವಕಪ್‌ಗಳಲ್ಲಿ ನೆದರ್ಲೆಂಡ್ಸ್​ ತಂಡವನ್ನು ಪ್ರತಿನಿಧಿಸಿದ್ದಾರೆ.

ಎಹ್ಸಾನ್ ಆದಿಲ್

ಅಮೆರಿಕದ ಎತ್ತರದ ವೇಗಿ ಎಹ್ಸಾನ್ ಆದಿಲ್, ಪಾಕಿಸ್ತಾನ ವಿರುದ್ಧದ ಗ್ರೂಪ್ ಎ ಪಂದ್ಯದಲ್ಲಿ ಯುಎಸ್​ಎ ತಂಡಕ್ಕೆ ಪಾದಾರ್ಪಣೆ ಮಾಡಿದರು. 32 ವರ್ಷದ ಆದಿಲ್,​ 2010ರ ದಶಕದ ಆರಂಭದಲ್ಲಿ ಪಾಕಿಸ್ತಾನ ಪರ ಆಡಿದ್ದರು. ಅವರು ಟೆಸ್ಟ್ ಮತ್ತು ಏಕದಿನ ಮಾದರಿಗಳಲ್ಲಿ ಒಂಬತ್ತು ಪಂದ್ಯಗಳನ್ನು ಆಡಿದ್ದರು. 2015ರ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಪರ ಎರಡು ಪಂದ್ಯಗಳನ್ನು ಆಡಿದ್ದರು. ಆದಿಲ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದಾರೆ (ಎಲ್ಲವೂ ಪಾಕಿಸ್ತಾನ ಪರ). ಇದೀಗ ಆದಿಲ್​ ಅವರು ಅಮೆರಿಕ ಪರ ಆಡುತ್ತಿದ್ದಾರೆ.

ಮಾರ್ಕ್ ಚಾಪ್ಮನ್

ಕಳೆದ ಕೆಲವು ವರ್ಷಗಳಿಂದ ನ್ಯೂಜಿಲೆಂಡ್‌ ತಂಡದ ಪ್ರಮುಖ ಟಿ20 ಆಟಗಾರರಲ್ಲಿ ಒಬ್ಬರಾದ ಮಾರ್ಕ್ ಚಾಪ್‌ಮನ್, ಹಾಂಗ್​ಕಾಂಗ್‌ನೊಂದಿಗೆ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. 31 ವರ್ಷದ ಚಾಪ್​ಮನ್​, 2010ರ ಮಧ್ಯದಲ್ಲಿ ಹಾಂಗ್ ಕಾಂಗ್ ಪರ ಎರಡು ಏಕದಿನ ಮತ್ತು 19 ಟಿ20ಐಗಳನ್ನು ಆಡಿದ್ದಾರೆ. ನಂತರ ಅವರು ನ್ಯೂಜಿಲೆಂಡ್‌ಗೆ ತೆರಳಿದರು. ಚಾಪ್‌ಮನ್ 2014 ಮತ್ತು 2016ರ ಟಿ20 ವಿಶ್ವಕಪ್‌ಗಳಲ್ಲಿ ಹಾಂಗ್ ಕಾಂಗ್ ತಂಡವನ್ನು ಪ್ರತಿನಿಧಿಸಿದ್ದರು. 2016 ರ ಆವೃತ್ತಿಯಲ್ಲಿ ಸ್ಕಾಟ್ಲೆಂಡ್ ವಿರುದ್ಧ ಅವರು ತಮ್ಮ ಅತ್ಯಧಿಕ ಟಿ20 ವಿಶ್ವಕಪ್ ಸ್ಕೋರ್ (60) ದಾಖಲಿಸಿದ್ದಾರೆ. ಎಡಗೈ ಬೌಲರ್ ಆಗಿರುವ ಈ ಆಟಗಾರ ಕಳೆದ ಮೂರು ಟಿ20 ವಿಶ್ವಕಪ್‌ಗಳಲ್ಲಿ ಕಿವೀಸ್ ಪರ ಆಡಿದ್ದಾರೆ.

ಶೆಹನ್ ಜಯಸೂರ್ಯ

ಅಮೆರಿಕದ ಮತ್ತೊಬ್ಬ ಕ್ರಿಕೆಟಿಗ ಶೆಹನ್ ಜಯಸೂರ್ಯ. ಅವರು 2010ರ ದಶಕದ ದ್ವಿತೀಯಾರ್ಧದಲ್ಲಿ ಶ್ರೀಲಂಕಾ ತಂಡದ ಭಾಗವಾಗಿದ್ದರು. 34 ವರ್ಷದ ಜಯಸೂರ್ಯ, ಇನ್ನೂ ಅಮೆರಿಕ ಪರ ಪಾದಾರ್ಪಣೆ ಮಾಡಿಲ್ಲ. ಆದರೆ, ಅವರು 30 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಎಲ್ಲವೂ ಶ್ರೀಲಂಕಾ ಪರ. 2016 ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಜಯಸೂರ್ಯ ಅವರು ಎರಡು ಪಂದ್ಯಗಳನ್ನು ಆಡಿದರು. ತಮ್ಮ ಏಕೈಕ ಇನ್ನಿಂಗ್ಸ್‌ನಲ್ಲಿ ಮೂರು ಎಸೆತಗಳಲ್ಲಿ ಒಂದು ರನ್ ಗಳಿಸಿದರು. ಒಟ್ಟಾರೆಯಾಗಿ, ಶೆಹಾನ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 436 ರನ್ ಗಳಿಸಿದ್ದು, 6 ವಿಕೆಟ್‌ಗಳನ್ನು ಪಡೆದಿದ್ದಾರೆ.

ಹರ್ಮಿತ್​ ಸಿಂಗ್

ಅಮೆರಿಕದ ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಹರ್ಮೀತ್ ಸಿಂಗ್ ಅವರು ಅಂಡರ್-19 ವಿಶ್ವಕಪ್‌ನಲ್ಲಿ ಬೇರೆ ದೇಶವನ್ನು ಪ್ರತಿನಿಧಿಸಿದ ಅಪರೂಪದ ಕ್ರಿಕೆಟಿಗ. 33 ವರ್ಷದ ಬೌಲರ್ 2010 ಮತ್ತು 2012ರ ಅಂಡರ್-19 ವಿಶ್ವಕಪ್‌ಗಳಲ್ಲಿ ಭಾರತ ಪರ ಆಡಿದ್ದರು. 2010ರ ಆವೃತ್ತಿಯಲ್ಲಿ ಅವರು ಒಂದೇ ಒಂದು ಪಂದ್ಯ ಆಡಿದರು. 2012ರ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಎಡಗೈ ಸ್ಪಿನ್ನರ್, ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ 2 ವಿಕೆಟ್‌ಗಳನ್ನು ಕಬಳಿಸಿದರು. 2024ರ ಟಿ20 ವಿಶ್ವಕಪ್​ನಲ್ಲಿ ಹರ್ಮಿತ್​, ಯುಎಸ್‌ಎ ಪರ ಪ್ರಮುಖ ಬೌಲರ್ ಆಗಿದ್ದರು. ಎಂಟು ಪಂದ್ಯಗಳಲ್ಲಿ 30 ಕ್ಕಿಂತ ಕಡಿಮೆ ಸರಾಸರಿಯಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸಿದರು. ಇದೀಗ 2026ರ ಟಿ20 ವಿಶ್ವಕಪ್​ನಲ್ಲಿಯೂ ಯುಎಸ್​ಎ ತಂಡವನ್ನು ಪ್ರತಿನಿಧಿಸಿದ್ದಾರೆ, (ಏಜೆನ್ಸೀಸ್​).