ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಬೆನ್ನಲ್ಲೇ ಅತ್ಯಂತ ಕಳಪೆ ದಾಖಲೆ ಬರೆದ ಭಾರತ! Team India
- ಸೂಪರ್ 8ರ ಮಹತ್ವದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಹೀನಾಯ ಸೋಲು
- ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರ ಕಟು ಟೀಕೆಗೆ ಗುರಿಯಾದ ಟೀಮ್ ಇಂಡಿಯಾ ಆಟಗಾರರು
- ಈ ಟಿ20 ವಿಶ್ವಕಪ್ನಲ್ಲಿ ತನ್ನ ಹೆಸರಿಗೆ ಮತ್ತೊಂದು ಕಳಪೆ ದಾಖಲೆ ಬರೆದುಕೊಂಡು ಭಾರತ
Team India : ಸದ್ಯ ಎಲ್ಲೆಡೆ ಟೀಮ್ ಇಂಡಿಯಾದ್ದೇ ಚರ್ಚೆ. ಅದಕ್ಕೆ ಕಾರಣ ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ನ ಸೂಪರ್ 8ರ ಮಹತ್ವದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಹೀನಾಯ ಸೋಲು ಅನುಭವಿಸಿರುವುದು. ಲೀಗ್ ಹಂತದಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ, ಸೂಪರ್ 8ರ ಘಟ್ಟಕ್ಕೆ ಭರ್ಜರಿ ಎಂಟ್ರಿ ನೀಡಿದ್ದ ಟೀಮ್ ಇಂಡಿಯಾ, ನಿರ್ಣಾಯಕ ಪಂದ್ಯದಲ್ಲೇ ಮುಗ್ಗರಿಸಿದೆ. ಅದು ಕೂಡ ಹೀನಾಯ ಸೋಲು. ಹೀಗಾಗಿ, ಟೀಮ್ ಇಂಡಿಯಾ ಆಟಗಾರರು ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರ ಕಟು ಟೀಕೆಗೆ ಗುರಿಯಾಗಿದ್ದಾರೆ. ಈ ಹೀನಾಯ ಸೋಲಿನೊಂದಿಗೆ ಭಾರತ ತಂಡ ಈ ಟಿ20 ವಿಶ್ವಕಪ್ನಲ್ಲಿ ಮತ್ತೊಂದು ಕಳಪೆ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
ಮೆಗಾ ಟೂರ್ನಮೆಂಟ್‌ನ ಭಾಗವಾಗಿ ನಿನ್ನೆ (ಫೆ.22) ಅಹಮದಾಬಾದ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್-8 ಪಂದ್ಯದಲ್ಲಿ ಭಾರತ 76 ರನ್‌ಗಳ ಭಾರಿ ಅಂತರದಿಂದ ಸೋಲುಂಡಿತು. ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವಿಫಲವಾಯಿತು. ದಕ್ಷಿಣ ಆಫ್ರಿಕಾ ನೀಡಿದ್ದ 187 ರನ್‌ಗಳ ಗುರಿಯನ್ನು ಬೆನ್ನಟ್ಟಲು ಸಾಧ್ಯವಾಗದೆ, ಭಾರತ ತಂಡ ಕೇವಲ 111 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ, ಭಾರತ 76 ರನ್‌ಗಳ ಭಾರಿ ಅಂತರದಿಂದ ಸೋತಿತು. ಈ ಸೋಲಿನ ಜೊತೆಗೆ, ಟೀಮ್ ಇಂಡಿಯಾ ಅನಗತ್ಯ ದಾಖಲೆಯನ್ನೂ ತನ್ನ ಹೆಸರಿಗೆ ಬರೆದುಕೊಂಡಿದೆ.
ಸದ್ಯ ನಡೆಯುತ್ತಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್-2026ರಲ್ಲಿ ಟೀಮ್ ಇಂಡಿಯಾ ಆಟಗಾರರು ಅತಿ ಹೆಚ್ಚು ಬಾರಿ ಡಕ್ (0 ರನ್)ಗೆ ಔಟಾದ ತಂಡವೆಂಬ ಅಪಕೀರ್ತಿಗೆ ಗುರಿಯಾಗಿದೆ. ಒಟ್ಟು 11 ಬಾರಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯದೆ ಪೆವಿಲಿಯನ್ ತಲುಪಿದ್ದಾರೆ. ಹಾಗಾದರೆ, ಯಾರ್ಯಾರು ಶೂನ್ಯಕ್ಕೆ ಔಟಾದರು ಎಂಬ ಪಟ್ಟಿ ಈ ಕೆಳಕಂಡಂತಿದೆ.
* ಹಾರ್ದಿಕ್ ಪಾಂಡ್ಯ – 1 ಬಾರಿ
* ವರುಣ್ ಚಕ್ರವರ್ತಿ - 1 ಬಾರಿ
* ಜಸ್ಪ್ರೀತ್ ಬುಮ್ರಾ - 1 ಬಾರಿ
ಪಂದ್ಯದ ಫಲಿತಾಂಶ
ಟೀಮ್ ಇಂಡಿಯಾ ಆಟಗಾರರು 11 ಬಾರಿ ಶೂನ್ಯಕ್ಕೆ ಔಟಾದರೆ, ಇಟಲಿ 8 ಬಾರಿ, ಓಮನ್ 7 ಬಾರಿ ಮತ್ತು ಪಾಕಿಸ್ತಾನ 6 ಬಾರಿ ಶೂನ್ಯಕ್ಕೆ ಔಟಾದ ತಂಡಗಳಲ್ಲಿ ಪಟ್ಟಿಯಲ್ಲಿದೆ. ನಿನ್ನೆ (ಫೆ.22) ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಮೂವರು ಭಾರತೀಯ ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಔಟಾದರು. ಇಶಾನ್ ಕಿಶನ್, ರಿಂಕು ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ ರನ್ ಖಾತೆ ತೆರೆಯದೇ ಶೂನ್ಯಕ್ಕೆ ಔಟಾದರು. ಇದರೊಂದಿಗೆ ಇಡೀ ತಂಡವು 111 ರನ್‌ಗಳಿಗೆ ಕುಸಿಯಿತು. ಈ ಸೋಲಿನೊಂದಿಗೆ, ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ಕಠಿಣವಾಗಿದೆ. ವಿಶೇಷವಾಗಿ ನೆಟ್ ರನ್ ರೇಟ್ ತೀವ್ರವಾಗಿ ಕುಸಿದಿದ್ದು, ಸೆಮಿಫೈನಲ್ ತಲುಪಲು ಭಾರತ ತನ್ನ ಉಳಿದ ಪಂದ್ಯಗಳಲ್ಲಿ ದೊಡ್ಡ ಗೆಲುವು ಸಾಧಿಸಬೇಕಾಗಿದೆ.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ (ಫೆ.22) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 187 ರನ್ ಗಳಿಸಿತು. ಪ್ರೋಟಿಯಸ್ ಬ್ಯಾಟ್ಸ್‌ಮನ್‌ಗಳಲ್ಲಿ ಡೇವಿಡ್ ಮಿಲ್ಲರ್ (63 ರನ್, 35 ಎಸೆತ, 7 ಬೌಂಡರಿ, 3 ಸಿಕ್ಸರ್‌ಗಳು) ಅದ್ಭುತ ಅರ್ಧಶತಕ ಗಳಿಸಿದರು. ಜೂನಿಯರ್ ಎಬಿಡಿ ಎಂದೇ ಖ್ಯಾತಿಯಾಗಿರುವ ಡೆವಾಲ್ಡ್ ಬ್ರೆವಿಸ್ (45 ರನ್, 29 ಎಸೆತ, 3 ಬೌಂಡರಿಗಳು, 3 ಸಿಕ್ಸರ್‌ಗಳು) ಮತ್ತು ಡೆತ್ ಓವರ್‌ಗಳಲ್ಲಿ ಅದ್ಭುತ ಬ್ಯಾಟಿಂಗ್ ಮಾಡುವಲ್ಲಿ ಹೆಸರಾಗಿರುವ ಟ್ರಿಸ್ಟಾನ್ ಸ್ಟಬ್ಸ್ (ಅಜೇಯ 44 ರನ್, 24 ಎಸೆತ, 1 ಬೌಂಡರಿ, 3 ಸಿಕ್ಸರ್‌ಗಳು) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಭಾರತೀಯ ಬೌಲರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ ಎರಡು ವಿಕೆಟ್ ಪಡೆದರು. ವರುಣ್ ಚಕ್ರವರ್ತಿ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.
ಆಫ್ರಿಕಾ ಪಡೆ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತ 18.5 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್ ಆಯಿತು. ಶಿವಂ ದುಬೆ (42 ರನ್, 37 ಎಸೆತ, 1 ಬೌಂಡರಿ, 3 ಸಿಕ್ಸರ್) ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ತಂಡದ ಉಳಿದ ಆಟಗಾರರು ಬ್ಯಾಟಿಂಗ್ನಲ್ಲಿ ವಿಫಲರಾದ್ದರಿಂದ ಟೀಮ್ ಇಂಡಿಯಾ ಸೋಲಬೇಕಾಯಿತು. ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ ಮಾರ್ಕೊ ಜಾನ್ಸೆನ್ ನಾಲ್ಕು ವಿಕೆಟ್ ಪಡೆದರೆ, ಕೇಶವ್ ಮಹಾರಾಜ್ ಮೂರು ವಿಕೆಟ್ ಪಡೆದರು. ಕಾರ್ಬಿನ್ ಬಾಷ್ ಎರಡು ವಿಕೆಟ್ ಪಡೆದರೆ, ಐಡೆನ್ ಮಾರ್ಕ್ರಾಮ್ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್).