ಮೀಡಿಯಾ ರೈಟ್ಸ್ ಒಪ್ಪಂದದಿಂದ ಹಿಂದೆ ಸರಿದ ಜಿಯೋ ಹಾಟ್‌ಸ್ಟಾರ್
- ಟಿ20 ವಿಶ್ವಕಪ್ 2026 ಟೂರ್ನಮೆಂಟ್ಗೆ ಇನ್ನು ಎರಡೇ ತಿಂಗಳು ಬಾಕಿ ಇದೆ
- ಮೀಡಿಯಾ ರೈಟ್ಸ್ ಒಪ್ಪಂದದಿಂದ ಹಿಂದೆ ಸರಿಯಲು ಜಿಯೋ ಹಾಟ್‌ಸ್ಟಾರ್ ನಿರ್ಧಾರ
- ಭಾರಿ ನಷ್ಟದಿಂದಾಗಿ ಒಪ್ಪಂದದ ಮಧ್ಯದಲ್ಲೇ ಹಿಂದೆ ಸರಿದ ಜಿಯೋ ಹಾಟ್‌ಸ್ಟಾರ್
T20 World Cup 2026 : ಟಿ20 ವಿಶ್ವಕಪ್ 2026 ಟೂರ್ನಮೆಂಟ್ ಹತ್ತಿರ ಬರುತ್ತಿದೆ. ಇನ್ನು ಎರಡೇ ತಿಂಗಳಲ್ಲಿ ಈ ಮೆಗಾ ಟೂರ್ನಮೆಂಟ್ ಆರಂಭವಾಗಲಿದ್ದು, ಅದಕ್ಕೂ ಮುನ್ನವೇ ಕ್ರೀಡಾಭಿಮಾನಿಗಳಿಗೆ ಒಂದು ಆಘಾತಕಾರಿ ಸುದ್ದಿ ಬಂದಿದೆ. ಅದೇನೆಂದರೆ, ಜಿಯೋ ಹಾಟ್‌ಸ್ಟಾರ್ ಒಂದು ಸಂಚಲನಾತ್ಮಕ ನಿರ್ಧಾರ ತೆಗೆದುಕೊಂಡಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಜೊತೆಗಿನ 4 ವರ್ಷಗಳ ಮೀಡಿಯಾ ರೈಟ್ಸ್ ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಘೋಷಿಸಿದೆ.
ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳ ಪ್ರಕಾರ, ಟಿ20 ವಿಶ್ವಕಪ್ 2026 ಟೂರ್ನಮೆಂಟ್‌ನ ಪ್ರಸಾರದ ಹಕ್ಕುಗಳು ಹೊಸ ಕಂಪನಿಗೆ ಹೋಗಲಿವೆ ಎಂಬ ವರದಿಗಳಿವೆ. ಜಿಯೋ ಹಾಟ್‌ಸ್ಟಾರ್ ಕಂಪನಿ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿರುವಂತೆ ತೋರುತ್ತದೆ. ಅದಕ್ಕಾಗಿಯೇ ಜಿಯೋ ಹಾಟ್‌ಸ್ಟಾರ್ ಟಿ20 ವಿಶ್ವಕಪ್ 2026 ಟೂರ್ನಮೆಂಟ್‌ನ ಮೀಡಿಯಾ ರೈಟ್ಸ್ ಒಪ್ಪಂದದಿಂದ ಹಿಂದೆ ಸರಿಯುತ್ತಿದೆ.
ಅಂದಹಾಗೆ, ಭಾರತೀಯ ಮೀಡಿಯಾ ಕಂಪನಿಯಾಗಿರುವ ಜಿಯೋಸ್ಟಾರ್ (JioStar) ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಡಿಸ್ನಿ ಸ್ಟಾರ್‌ನ ಸಹಯೋಗದಿಂದ ರೂಪುಗೊಂಡಿದೆ. ಐಸಿಸಿ ಜತೆ ಮೀಡಿಯಾ ರೈಟ್ಸ್ಗಾಗಿ 2024ರಿಂದ 2027ರವರೆಗೆ ಒಪ್ಪಂದ ಮಾಡಿಕೊಂಡಿತ್ತು. ಇದರ ಮೌಲ್ಯ ಬರೋಬ್ಬರಿ 3 ಬಿಲಿಯನ್ ಡಾಲರ್. ಇದರಲ್ಲಿ 2026ರ ಟಿ20 ವಿಶ್ವಕಪ್ ಸೇರಿದಂತೆ ಪ್ರಮುಖ ಕ್ರಿಕೆಟ್ ಈವೆಂಟ್‌ಗಳು ಕೂಡ ಸೇರಿವೆ. ಆದರೆ, ಇದೀಗ ಮಧ್ಯದಲ್ಲೇ ಒಪ್ಪಂದದಿಂದ ಜಿಯೋಸ್ಟಾರ್ ಹಿಂದೆ ಸರಿಯುತ್ತಿದೆ.
ಕಾರಣವೇನು?
ಜಿಯೋಸ್ಟಾರ್ 2024-25ರಲ್ಲಿ ಸ್ಪೋರ್ಟ್ಸ್ ಕಂಟೆಂಟ್ ಒಪ್ಪಂದಗಳಿಗೆ ಸಂಬಂಧಿಸಿದಂತೆ ಸುಮಾರು 25,760 ಕೋಟಿ ರೂ. ನಷ್ಟಗಳನ್ನು ಅನುಭವಿಸಿದೆ. ಇದು ಹಿಂದಿನ ವರ್ಷದ 12,319 ಕೋಟಿ ರೂ.ಗಳಿಗಿಂತಲೂ ದ್ವಿಗುಣವಾಗಿದ್ದು, ಕಂಟೆಂಟ್ ವೆಚ್ಚ ಮತ್ತು ಆದಾಯದ ನಡುವಿನ ಅಂತರವು ಹೆಚ್ಚಾಗುತ್ತಿರುವುದರಿಂದ ಇಂಥದ್ದೊಂದು ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ. ಅಲ್ಲದೆ, ಭಾರತ ಸರ್ಕಾರ ರಿಯಲ್ ಮನಿ ಗೇಮಿಂಗ್ ಅನ್ನು ನಿಷೇಧಿಸಿದ ನಂತರ ಕಂಪನಿಯ ಆರ್ಥಿಕ ಹೊರೆ ಇನ್ನಷ್ಟು ತೀವ್ರಗೊಂಡಿದೆ. ಸರ್ಕಾರದ ನಿಷೇಧವು ಕ್ರಿಕೆಟ್‌ನ ಏಕೈಕ ಅತಿದೊಡ್ಡ ಜಾಹೀರಾತುದಾರರನ್ನೇ ತೆಗೆದುಹಾಕಿದೆ. ಸಾಂಪ್ರದಾಯಿಕ ಬ್ರ್ಯಾಂಡ್‌ಗಳು ತುಂಬಲು ಸಾಧ್ಯವಾಗದ 840 ಮಿಲಿಯನ್ ಡಾಲರ್ ಅಂತರವನ್ನು ಗೇಮಿಂಗ್ ನಿಷೇಧದಿಂದ ಸೃಷ್ಟಿಯಾಗಿದೆ ಎಂದು ಉದ್ಯಮ ಕಾರ್ಯನಿರ್ವಾಹಕರು ಅಂದಾಜಿಸಿದ್ದಾರೆ.
ಬಿಡ್ನಲ್ಲಿ ಯಾರಿದ್ದಾರೆ?
ಜಿಯೋಸ್ಟಾರ್ ತೆಗೆದುಕೊಂಡ ಈ ನಿರ್ಧಾರದಿಂದ ಐಸಿಸಿ, 2026-29ರ ಸೈಕಲ್ಗೆ ಹೊಸ ಬಿಡ್ಡಿಂಗ್ ಪ್ರಕ್ರಿಯೆ ಪ್ರಾರಂಭಿಸಬೇಕಿದೆ. ಸಂಭಾವ್ಯ ಖರೀದಿದಾರರಿಂದ ಸುಮಾರು 2.4 ಬಿಲಿಯನ್ ಡಾಲರ್ ಹಣವನ್ನು ಐಸಿಸಿ ಕೋರಿದೆ ಎಂದು ತಿಳಿದುಬಂದಿದೆ. ಮೀಡಿಯಾ ರೈಟ್ಸ್ ಒಪ್ಪಂದಕ್ಕಾಗಿ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ, ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋವನ್ನು ಐಸಿಸಿ ಸಂಪರ್ಕಿಸಿದ್ದು, ಬೆಲೆಗಳು ತೀವ್ರವಾಗಿರುವುದರಿಂದ ಖರೀದಿ ಮಾಡಲು ಯಾರೂ ಆಸಕ್ತಿ ತೋರಿಸುತ್ತಿಲ್ಲ ಎಂದು ವರದಿಯಾಗಿದೆ.
ಅಂದಹಾಗೆ, 2026ರ ಟಿ20 ವಿಶ್ವಕಪ್ ಫೆಬ್ರವರಿ 7 ರಂದು ಆರಂಭವಾಗಲಿದೆ. ಈ ಬಾರಿ ಭಾರತ ಮತ್ತು ಶ್ರೀಲಂಕಾ ಆತಿಥ್ಯ ವಹಿಸಿವೆ. ಆದರೆ, ಮೀಡಿಯಾ ರೈಟ್ಸ್ ಒಪ್ಪಂದಿಂದ ಹಿಂದೆ ಸರಿಯುವ ನಿರ್ಧಾರವನ್ನು ಜಿಯೋ ಹಾಟ್‌ಸ್ಟಾರ್ ತೆಗೆದುಕೊಂಡಿರುವು ಅನಿಶ್ಚಿತತೆ ಉಂಟುಮಾಡಿದೆ. ಪ್ರಸ್ತುತ ಐಸಿಸಿಗೆ ಇದೊಂದು ಸವಾಲಾಗಿದೆ. ಏಕೆಂದರೆ, ತನ್ನ ಆದಾಯದ ಸುಮಾರು 80 ರಷ್ಟು ಭಾರತದಿಂದಲೇ ಬರುತ್ತದೆ. ಹೀಗಾಗಿ ಐಸಿಸಿ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ, (ಏಜೆನ್ಸೀಸ್).