ಟೀಮ್​ ಇಂಡಿಯಾ ( Team India ) ಗೆ ಅಭಿಮಾನಿಗಳ ಎಚ್ಚರಿಕೆ 
ಕ್ರಿಕೆಟ್

ಇದೇನಾದರೂ ನಡೆದ್ರೆ ಪಾಕ್​ ವಿರುದ್ಧ ಸೋಲು ಖಚಿತ... ಟೀಮ್​ ಇಂಡಿಯಾಗೆ ಅಭಿಮಾನಿಗಳ ಎಚ್ಚರಿಕೆ! ಏನದು? Team India

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್‌ ಭಾಗವಾಗಿ ಗುರುವಾರ ಭಾರತ ಮತ್ತು ನಮೀಬಿಯಾ ನಡುವೆ ಲೀಗ್​ ಪಂದ್ಯ ನಡೆಯಿತು
  • ಈ ಲೀಗ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಭರ್ಜರಿ ಜಯ ಗಳಿಸಿ, ಉತ್ಸಾಹ ಹೆಚ್ಚಿಸಿಕೊಂಡಿತು
  • ಆದರೆ, ಅದೇ ಸಮಯದಲ್ಲಿ ನಮೀಬಿಯಾ ತಂಡದಿಂದ ಒಂದು ಎಚ್ಚರಿಕೆ ಸಂದೇಶವೂ ರವಾನೆ ಆಗಿದೆ
Team India : ಟಿ20 ವಿಶ್ವಕಪ್‌ ಭಾಗವಾಗಿ ಗುರುವಾರ (ಫೆ.12) ರಾತ್ರಿ ಭಾರತ ಮತ್ತು ನಮೀಬಿಯಾ ನಡುವೆ ಲೀಗ್​ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಟೀಮ್​ ಇಂಡಿಯಾ ಭರ್ಜರಿ ಜಯವೇನೋ ಗಳಿಸಿತು. ಆದರೆ, ಅದೇ ಸಮಯದಲ್ಲಿ ನಮೀಬಿಯಾ ತಂಡದಿಂದ ಒಂದು ಎಚ್ಚರಿಕೆ ಸಂದೇಶವೂ ರವಾನೆ ಆಯಿತು. ಅದೇನೆಂದು ತಿಳಿಯಲು ಮುಂದೆ ಓದಿ.
ಅಂದಹಾಗೆ, ಈ ಪಂದ್ಯದಲ್ಲಿ ಟೀಮ್​ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು. ಇಶಾನ್ ಕಿಶನ್ (24 ಎಸೆತಗಳಲ್ಲಿ 61 ರನ್​) ಮತ್ತು ಹಾರ್ದಿಕ್ ಪಾಂಡ್ಯ (28 ಎಸೆತಗಳಲ್ಲಿ 52 ರನ್​) ಅರ್ಧ ತಕಗಳೊಂದಿಗೆ ಮಿಂಚಿದರು. ಉಳಿದ ಬ್ಯಾಟ್ಸ್‌ಮನ್‌ಗಳು ದೊಡ್ಡ ಸ್ಕೋರ್ ಗಳಿಸುವಲ್ಲಿ ವಿಫಲರಾದರು. ಇದರೊಂದಿಗೆ, ಭಾರತ ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳ ನಷ್ಟಕ್ಕೆ 209 ರನ್ ಗಳಿಸಿತು.
ಬೃಹತ್ ಗುರಿಯನ್ನು ಬೆನ್ನಟ್ಟಲು ಮೈದಾನಕ್ಕೆ ಬಂದ ನಮೀಬಿಯಾ ಬ್ಯಾಟ್ಸ್‌ಮನ್‌ಗಳು ಆರಂಭದಲ್ಲಿ ಆಕ್ರಮಣಕಾರಿಯಾಗಿ ಆಡಿದರು. ಆದರೆ, ಭಾರತೀಯ ಬೌಲರ್‌ಗಳು ಬಿಗಿ ಬೌಲಿಂಗ್ ಆಕ್ರಮಣ ಮಾಡಿದ್ದರಿಂದ ಕ್ರಮೇಣ ವಿಕೆಟ್​ಗಳನ್ನು ಒಪ್ಪಿಸಿದರು. ಇದರೊಂದಿಗೆ, ನಮೀಬಿಯಾ ತಂಡವು 18.2 ಓವರ್‌ಗಳಲ್ಲಿ 116 ರನ್‌ಗಳಿಗೆ ಆಲೌಟ್ ಆಯಿತು. ಭಾರತ ತಂಡವು 93 ರನ್‌ಗಳಿಂದ ಗೆದ್ದಿತು.
ಭಾರತ ಪಂದ್ಯವನ್ನು ಗೆದ್ದರು ಕೂಡ, ಇಲ್ಲಿ ತಂಡದ ಬ್ಯಾಟಿಂಗ್‌ ವೈಫಲ್ಯ ಸ್ಪಷ್ಟವಾಗಿ ಗೋಚರಿಸಿತು. ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯರ ಅರ್ಧ ಶತಕಗಳೊಂದಿಗೆ, ಭಾರತದ ಸ್ಕೋರ್ 200ರ ಗಡಿ ದಾಟಿತು. ಇಲ್ಲದಿದ್ದರೆ, ಟೀಮ್​ ಇಂಡಿಯಾ 150 ರನ್‌ಗಳಿಗೆ ಸೀಮಿತವಾಗುತ್ತಿತ್ತು. ವಿಶೇಷವಾಗಿ ಕೊನೆಯ ಓವರ್‌ಗಳಲ್ಲಿ, ಭಾರತೀಯ ಬ್ಯಾಟ್ಸ್‌ಮನ್‌ಗಳು ತೀರಾ ಕಳಪೆ ಪ್ರದರ್ಶನ ನೀಡಿದರು.
ನಮೀಬಿಯಾದ ಬೌಲರ್‌ಗಳು ಬಿಗಿ ಬೌಲಿಂಗ್ ದಾಳಿ ಮಾಡಿ ಮಾಡಿದ ಪರಿಣಾಮ ಟೀಮ್​ ಇಂಡಿಯಾ, 17 ಮತ್ತು 18ನೇ ಓವರ್‌ಗಳಲ್ಲಿ ಕೇವಲ 15 ರನ್ ಗಳಿಸಿತು. ಆದಾಗ್ಯೂ, ಹಾರ್ದಿಕ್ ಅವರು 19ನೇ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿ ಸ್ಕೋರ್ ಅನ್ನು 205 ಕ್ಕೆ ತಲುಪಿಸಿದರು. ಇನ್ನೂ 30 ರನ್‌ಗಳು ಬರುವಂತಿತ್ತು. ಆದರೆ, ಭಾರತ ಅನಿರೀಕ್ಷಿತವಾಗಿ ಕೇವಲ ನಾಲ್ಕು ರನ್‌ಗಳನ್ನು ಗಳಿಸಿ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು.
ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿ, ಹಾರ್ದಿಕ್ ಕ್ಯಾಚ್ ನೀಡಿದರು. ರಿಂಕು ಜೊತೆ ಹೊಂದಾಣಿಕೆಯ ಕೊರತೆಯಿಂದಾಗಿ ದುಬೆ ರನೌಟ್ ಆದರು. ಅದರ ನಂತರ, ಅಕ್ಷರ್ ಮತ್ತು ರಿಂಕು ಸಿಂಗ್ ಬೇಗನೆ ಔಟಾದರು. ಕೊನೆಯಲ್ಲಿ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡಿದ್ದರೆ, ಭಾರತ 250ರ ಗಡಿ ದಾಟುತ್ತಿತ್ತು. ಆದರೆ, ಬ್ಯಾಟರ್‌ಗಳು ಸತತವಾಗಿ ವಿಫಲರಾದರು. ಇದು ಮುಂದಿನ ಪಂದ್ಯಕ್ಕೆ ಒಂದು ಎಚ್ಚರಿಕೆ ಗಂಟೆ ಎಂದು ಹೇಳಬಹುದು. ಏಕೆಂದರೆ, ಮುಂದಿನ ಪಂದ್ಯ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನಡೆಯಲಿದೆ. ನಮೀಬಿಯಾ ವಿರುದ್ಧ ಆಡಿದಂತೆ ಪಾಕ್​ ವಿರುದ್ಧ ಆಡಲಾದು. ಹೀಗಾಗಿ, ಭಾರತೀಯ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಆರಂಭಿಕರು ಆಡದಿದ್ದರೆ ಟೀಮ್​ ಇಂಡಿಯಾ ಬಹುಬೇಗ ಕುಸಿತ ಕಾಣುತ್ತದೆ ಅನ್ನೋದು ಭಾರತೀಯ ಚಿಂತೆಯಾಗಿದೆ.
ಅಂದಹಾಗೆ, ಟಿ20 ವಿಶ್ವಕಪ್‌ನ ಭಾಗವಾಗಿ ಈ ತಿಂಗಳ 15 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವುದನ್ನು ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಆಸಕ್ತಿಯಿಂದ ಎದುರು ನೋಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ, ಇತ್ತೀಚೆಗೆ ಬಾಂಗ್ಲಾದೇಶ ಪರವಹಿಸಿ, ಪಾಕಿಸ್ತಾನ ಆರಂಭದಲ್ಲಿ ತೆಗೆದುಕೊಂಡ ಟಿ20 ವಿಶ್ವಕಪ್​ ಬಹಿಷ್ಕಾರದ ನಿರ್ಧಾರವೂ ದೊಡ್ಡ ವಿವಾದಕ್ಕೆ ಕಾರಣವಾಯಿತು. ಕೊನೆಗೆ ಬಹಿಷ್ಕಾರದಿಂದ ಯುಟರ್ನ್​ ಹೊಡೆಯಿತು. ಆದರೆ, ಭಾರತದ ವಿರುದ್ಧ ಆಡುವುದಿಲ್ಲ ಎನ್ನುವ ಮೂಲಕ ಮತ್ತೊಂದು ಖ್ಯಾತೆ ತೆಗೆಯಿತು. ಅಂತಿಮವಾಗಿ ಭಾರತದ ವಿರುದ್ಧ ಆಡಲು ಒಪ್ಪಿಕೊಂಡಿತು. ಇಷ್ಟೆಲ್ಲ ಖ್ಯಾತೆ ತೆಗೆದ ಪಾಕ್​ ವಿರುದ್ಧ ಟೀಮ್​ ಇಂಡಿಯಾ ಬಹಳ ಎಚ್ಚರಿಕೆಯಿಂದ ಆಡಬೇಕಾಗುತ್ತದೆ.
ಫೆ. 15 ರಂದು ನಡೆಯಲಿರುವ ಪಾಕಿಸ್ತಾನ vs ಭಾರತ ಪಂದ್ಯವು ಬಹಳ ಪ್ರತಿಷ್ಠಿತವಾಗಿದೆ. ಈ ಪಂದ್ಯದಲ್ಲಿ, ಯಾವುದೇ ಸಣ್ಣ ತಪ್ಪಿಗೂ ಭಾರತೀಯ ತಂಡದ ಆಟಗಾರರು ಭಾರಿ ಬೆಲೆ ತೆರಬೇಕಾಗುತ್ತದೆ. ನಮೀಬಿಯಾ ತಂಡದ ವಿರುದ್ಧದ ಪಂದ್ಯದ ಕೊನೆಯಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳ ಪ್ರದರ್ಶನ ಅಭಿಮಾನಿಗಳನ್ನು ಚಿಂತೆಗೀಡುಮಾಡುತ್ತಿದೆ. ಪಾಕಿಸ್ತಾನ ತಂಡದ ವಿರುದ್ಧವೂ ಅದೇ ಪ್ರದರ್ಶನವನ್ನು ತೋರಿಸಿದರೆ, ಅವರು ಖಂಡಿತವಾಗಿಯೂ ಸೋಲುತ್ತಾರೆ ಎಂದು ಅಭಿಮಾನಿಗಳು ಆತಂಕಗೊಂಡಿದ್ದಾರೆ. ಪಾಕಿಸ್ತಾನ ಪಂದ್ಯದಲ್ಲಿ ಭಾರತೀಯ ಆಟಗಾರರು ಸ್ವಲ್ಪ ಹೆಚ್ಚು ಎಚ್ಚರಿಕೆಯಿಂದ ಆಡಬೇಕೆಂದು ಟೀಮ್ ಇಂಡಿಯಾ ಅಭಿಮಾನಿಗಳು ಕೇಳುತ್ತಿದ್ದಾರೆ, (ಏಜೆನ್ಸೀಸ್​).