ಯುವ ಬ್ಯಾಟಿಂಗ್ ಸೆನ್ಸೇಷನ್​ ಹೆಗಲಿಗೆ ದೊಡ್ಡ ಜವಾಬ್ದಾರಿ! ಹಿರಿಯ ತಂಡದ ಕ್ಯಾಪ್ಟನ್​ ಆಗಿ ವೈಭವ್​ ಸೂರ್ಯವಂಶಿ | Vaibhav Sooryavanshi ​ 
ಕ್ರಿಕೆಟ್

ಚಿಕ್ಕ ವಯಸ್ಸಿನಲ್ಲೇ ಅಸಾಧಾರಣ ಪ್ರತಿಭೆ... ಯುವ ಬ್ಯಾಟಿಂಗ್ ಸೆನ್ಸೇಷನ್​ ಹೆಗಲಿಗೆ ದೊಡ್ಡ ಜವಾಬ್ದಾರಿ ಕೊಟ್ಟ ಬಿಸಿಎ! | Vaibhav Sooryavanshi ​

Vaibhav Sooryavanshi: ಟೀಮ್ ಇಂಡಿಯಾದ ಯುವ ಬ್ಯಾಟಿಂಗ್​ ಸೆನ್ಸೇಷನ್ ವೈಭವ್ ಸೂರ್ಯವಂಶಿ ಹೆಗಲಿಗೆ ಇದೀಗ ದೊಡ್ಡ ಜವಾಬ್ದಾರಿಯನ್ನು ಹೊರಿಸಲಾಗಿದ್ದು, ಬಿಹಾರದ ಹಿರಿಯ ಕ್ರಿಕೆಟ್ ತಂಡದ ಕ್ಯಾಪ್ಟನ್​ ಆಗಿ ನೇಮಕ ಮಾಡಲಾಗಿದೆ. ಭಾರತದ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಅವರ ಎಚ್ಚರಿಕೆಯ ಸಲಹೆಯನ್ನು ಮರೆತು ವೈಭವ್​ಗೆ ಈ ಸ್ಥಾನ ನೀಡಿರುವುದು ಸದ್ಯ ಕ್ರಿಕೆಟ್​ ಪ್ರೇಮಿಗಳ ಹುಬ್ಬೇರಿಸಿದೆ.

ಕ್ಯಾಪ್ಟನ್​ ವೈಭವ್ ಸೂರ್ಯವಂಶಿ

ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಹಿರಿಯರ ತಂಡವನ್ನು ಮುನ್ನಡೆಸುವ ಅವಕಾಶ 15 ವರ್ಷದ ವೈಭವ್​ಗೆ ಸಿಕ್ಕಿದೆ. ನವೆಂಬರ್ 14ರಿಂದ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಮೊದಲೆರಡು ಪಂದ್ಯಗಳಿಗೆ 17 ಸದಸ್ಯರ ತಂಡವನ್ನು ವೈಭವ್​ಗೆ ವಹಿಸಲಾಗಿದ್ದು, ಸೂರಜ್ ಕಶ್ಯಪ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಕುರಿತಾಗಿ ಬಿಹಾರ ಕ್ರಿಕೆಟ್ ಸಂಸ್ಥೆ (ಬಿಸಿಎ) ತಂಡದ ವಿವರಗಳನ್ನು ಪ್ರಕಟಿಸಿದೆ.

ಬಿಹಾರ ತನ್ನ ಮೊದಲ ಪಂದ್ಯವನ್ನು ಸೌರಾಷ್ಟ್ರ ವಿರುದ್ಧ ಇದೇ ನವೆಂಬರ್ 14ರಂದು ಇಂದೋರ್‌ನಲ್ಲಿ ಆಡಲಿದ್ದು, ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಗ್ರೂಪ್​ ಬಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಗುಂಪಿನಲ್ಲಿ ದೆಹಲಿ, ಹರಿಯಾಣ, ಜಮ್ಮು-ಕಾಶ್ಮೀರ, ಪಂಜಾಬ್, ರೈಲ್ವೇಸ್, ಸೌರಾಷ್ಟ್ರ ಮತ್ತು ತಮಿಳುನಾಡು ಸೇರಿವೆ. ಮೊದಲ ಎರಡು ಪಂದ್ಯಗಳಿಗೆ ವೈಭವ್ ಸೂರ್ಯವಂಶಿ ನಾಯಕರಾಗಿ ತಂಡದ ಜವಾಬ್ದಾರಿ ಹೊರಲಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಅಸಾಧಾರಣ ಪ್ರತಿಭೆ

ವೈಭವ್​ಗೆ ನಾಯಕತ್ವ ಕೊಟ್ಟಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಬಿಹಾರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಹರ್ಷವರ್ಧನ್, ಈ ಕ್ಯಾಪ್ಟನ್ಸಿ ಮೂಲಕ ವೈಭವ್ ನಾಯಕನಾಗಿ ಬೆಳೆಯುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಅಸಾಧಾರಣ ಪ್ರತಿಭೆ, ಆತ್ಮವಿಶ್ವಾಸ ಮತ್ತು ಪ್ರಬುದ್ಧತೆಯನ್ನು ಪ್ರದರ್ಶಿಸಿದ್ದಾರೆ. ವೈಭವ್ ನಾಯಕತ್ವದಲ್ಲಿ ತಂಡ ಶಿಸ್ತಿನಿಂದ ಮಿಂಚಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ಘೋಷಿಸಿರುವ ತಂಡದಲ್ಲಿ ಒಟ್ಟು 17 ಸದಸ್ಯರಿದ್ದಾರೆ. ವೈಭವ್ ಸೂರ್ಯವಂಶಿ (ನಾಯಕ), ಅಲೋಕ್ ಕುಮಾರ್, ಆಯುಷ್ ಲೋಹರುಕ (ವಿಕೆಟ್ ಕೀಪರ್), ಅಲ್ತಮಶ್ ಅಶ್ರಫ್, ಪರಮ್ ಕುಮಾರ್ ಸಿಂಗ್, ಅನ್ಮೋಲ್ ಕುಮಾರ್ (ವಿಕೆಟ್ ಕೀಪರ್), ರಿತ್ವಿಕ್ ರಾಜ್, ಸೂರಜ್ ಕಶ್ಯಪ್, ರಾಘವ್‌ಕ್ಯಾಪ್‌ಟೈನ್, ಮೇ. ಕುಮಾರ್, ವಾಸುದೇವ್ ಪ್ರತಾಪ್ ಸಿಂಗ್, ಮೊಹಮ್ಮದ್ ಇಝಾರ್, ಅಮೋದ್ ಯಾದವ್, ಪ್ರಶಾಂತ್ ಸಿಂಗ್, ನವಾಜ್ ಖಾನ್ ಮತ್ತು ಹಿಮಾಂಶು ಸಿಂಗ್ ಇದ್ದಾರೆ.

ಅಲ್ಲದೆ, ಬಿಪಿನ್ ಸೌರಭ್, ಸುಮನ್ ಕುಮಾರ್, ಆಕಾಶ್ ರಾಜ್, ಖಾಲಿದ್ ಆಲಂ, ಭಾಸ್ಕರ್ ದುಬೆ, ಕುಮಾರ್ ರಜನೀಶ್, ಸುಯಶ್, ಅಭಿಜೀತ್ ಸಾಕೇತ್, ಯಶಸ್ವಿ ರಿಶವ್, ಲಖನ್ ರಾಜಾ, ಪವನ್ ಕುಮಾರ್, ಅಮಿತ್ ಚೌಧರಿ, ಪಿಯೂಷ್ ಸಿಂಗ್, ಭಾನು ಕುಮಾರ್, ಲೋಕೇಶ್ ಬಾಬುಲಾಲ್ ಕುಮಾರ್, ಪ್ರಶಾಂತ್ ಶ್ರೀವಾಸ್ತವ ಸ್ಟ್ಯಾಂಡ್‌ಬೈ ಆಟಗಾರರಾಗಿ ಆಯ್ಕೆಯಾಗಿದ್ದಾರೆ. ಈ ಮಧ್ಯೆ, ಮೊದಲ ಎರಡು ಪಂದ್ಯಗಳ ನಂತರ ಮಂಗಲ್ ಮಹೂರ್ ಮತ್ತು ಶಾಕಿಬ್ ಹುಸೇನ್ ಅವರ ಫಿಟ್ನೆಸ್ ಪರೀಕ್ಷೆಯ ಆಧಾರದ ಮೇಲೆ ತಂಡದಲ್ಲಿ ಲಭ್ಯವಿರುತ್ತಾರೋ, ಇಲ್ಲವೋ ಎಂಬುದು ನಿರ್ಧರಿಸಲಾಗುತ್ತದೆ.

ಸ್ಫೋಟಕ ಬ್ಯಾಟರ್​ ವೈಭವ್​

ಕಳೆದ ಹಾಗೂ ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಹಾಗೂ ಅಂಡರ್​-19 ವಿಶ್ವಕಪ್​ ಪಂದ್ಯಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿರುವ ವೈಭವ್​, ಅಲ್ಪಾವಧಿಯಲ್ಲಿ ಅಪಾರ ಜನಪ್ರಿಯತೆ, ಅಭಿಮಾನ ಗಿಟ್ಟಿಸಿಕೊಂಡಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ ಆಡಿದ ಸೂರ್ಯವಂಶಿ, 19ನೇ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದರು. ಆಡಿದ 16 ಇನ್ನಿಂಗ್ಸ್‌ಗಳಲ್ಲಿ 776 ರನ್ ಗಳಿಸಿದ ವೈಭವ್, 237ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ ಆಡಿದ್ದಾರೆ. ಇದಲ್ಲದೇ, ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿಯೂ ಸ್ಫೋಟಕ ಪ್ರದರ್ಶನ ನೀಡಿದ್ದಾರೆ. ಆದ್ರೆ, ಹೆಚ್ಚಿನ ಸರಣಿಗಳಲ್ಲಿ ಅವರಿಗೆ ಅವಕಾಶ ಕೊಡದೆ, ಸುಮ್ಮನೆ ಬೆಂಚ್​ನಲ್ಲಿ ಕೂರಿಸಿದ್ದು ಕ್ರಿಕೆಟ್​ ಪ್ರೇಮಿಗಳ ಬೇಸರ, ಅಸಮಾಧಾನಕ್ಕೆ ಕಾರಣವಾಗಿದೆ,(ಏಜೆನ್ಸೀಸ್).