ಪರಿಸ್ಥಿತಿಯ ಲಾಭ ಪಡೆದರು...ವಿಶ್ವಕಪ್​ನಿಂದ ಹೊರಬಿದ್ರೂ ಮಾರ್ಕ್ರಮ್ ಆಡಿದ ಮಾತಿಗೆ ತಲೆಬಾಗಿದ ಕ್ರೀಡಾ ಜಗತ್ತು! Aiden Markram 
ಕ್ರಿಕೆಟ್

ಪರಿಸ್ಥಿತಿಯ ಲಾಭ ಪಡೆದರು...ವಿಶ್ವಕಪ್​ನಿಂದ ಹೊರಬಿದ್ರೂ ಮಾರ್ಕ್ರಮ್ ಆಡಿದ ಮಾತಿಗೆ ತಲೆಬಾಗಿದ ಕ್ರೀಡಾ ಜಗತ್ತು! Aiden Markram

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಆಫ್ರಿಕಾ ತಂಡವು ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ನಿಂದ ಹೊರಬಿದ್ದಿದೆ
  • ಒಂದೇ ಒಂದು ಪಂದ್ಯವನ್ನು ಸೋಲದೇ ಸೆಮಿಫೈನಲ್ ತಲುಪಿದ್ದ ಹರಿಣಗಳ ಪಡೆ
  • ಬುಧವಾ ಕೋಲ್ಕತದ ಈಡನ್ ಗಾರ್ಡನ್ಸ್​ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು
  • ನಮ್ಮ​ ಬ್ಯಾಟ್ಸ್‌ಮನ್‌ಗಳ ವೈಫಲ್ಯವೇ ಸೋಲಿಗೆ ಕಾರಣ ಎಂದ ನಾಯಕ ಐಡೆನ್ ಮಾರ್ಕ್ರಮ್
Aiden Markram : ದಕ್ಷಿಣ ಆಫ್ರಿಕಾ ತಂಡವು ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ನಿಂದ ಹೊರಬಿದ್ದಿದೆ. ಒಂದೇ ಒಂದು ಪಂದ್ಯವನ್ನು ಸೋಲದೇ ಸೆಮಿಫೈನಲ್ ತಲುಪಿದ್ದ ಹರಿಣಗಳ ಪಡೆ, ಬುಧವಾರ (ಮಾರ್ಚ್​ 04) ಕೋಲ್ಕತದ ಈಡನ್ ಗಾರ್ಡನ್ಸ್​ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಅನುಭವಿಸಿತು. ಈ ಬಗ್ಗೆ ಮಾತನಾಡಿದ ನಾಯಕ ಐಡೆನ್ ಮಾರ್ಕ್ರಮ್, ನಮ್ಮ​ ಬ್ಯಾಟ್ಸ್‌ಮನ್‌ಗಳ ವೈಫಲ್ಯವೇ ಸೋಲಿಗೆ ಕಾರಣ ಎಂದರು. ಅಲ್ಲದೆ, ಎದುರಾಳಿ ತಂಡದ ಆಟವನ್ನು ಮನಸಾರೆ ಹೊಗಳುವ ಮೂಲಕ ಕ್ರೀಡಾ ಸ್ಫೂರ್ತಿಯನ್ನು ಮೆರೆದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿತು. ತಂಡದ ಪರ ಆಲ್​ರೌಂಡರ್​ ಮಾರ್ಕೊ ಜಾನ್ಸೆನ್ (ಅಜೇಯ 55 ರನ್​ 30 ಎಸೆತ, 2 ಬೌಂಡರಿ, 5 ಸಿಕ್ಸರ್) ಅರ್ಧಶತಕ ಗಳಿಸಿದರು. ಡೆವಾಲ್ಡ್ ಬ್ರೆವಿಸ್ (34 ರನ್​, 27 ಎಸೆತ, 3 ಬೌಂಡರಿ, 2 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಉಳಿದಂತೆ ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ಪ್ರಭಾವ ಬೀರಲಿಲ್ಲ. ಕಿವೀಸ್ ಬೌಲರ್‌ಗಳಲ್ಲಿ ಮ್ಯಾಟ್ ಹೆನ್ರಿ, ಕೋಲ್ ಮೆಕಾಂಚಿ ಮತ್ತು ರಾಚಿನ್ ರವೀಂದ್ರ ತಲಾ ಎರಡು ವಿಕೆಟ್ ಪಡೆದರು. ಲಾಕಿ ಫರ್ಗುಸನ್ ಮತ್ತು ಜೇಮ್ಸ್ ನೀಶಮ್ ತಲಾ ಒಂದು ವಿಕೆಟ್ ಪಡೆದರು.
ನಂತರ, ಗುರಿ ಬೆನ್ನತ್ತಿದ ಕಿವೀಸ್​ ತಂಡ, ಫಿನ್ ಅಲೆನ್ (ಔಟಾಗದೆ 100 ರನ್​, 33 ಎಸೆತ, 10 ಬೌಂಡರಿ, 8 ಸಿಕ್ಸರ್) ಅಜೇಯ ಶತಕದ ನೆರವಿನಿಂದ 12.5 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 170 ರನ್‌ಗಳ ಗುರಿಯನ್ನು ತಲುಪಿತು. ಟಿಮ್ ಸೀಫರ್ಟ್ (58 ರನ್​, 33 ಎಸೆತ, 7 ಬೌಂಡರಿ, 2 ಸಿಕ್ಸರ್) ಅರ್ಧಶತಕ ಗಳಿಸಿದರು. ಕಿವೀಸ್ ಕಳೆದುಕೊಂಡ ಏಕೈಕ ವಿಕೆಟ್ ಅನ್ನು ಕಾಗಿಸೊ ರಬಾಡ ಅವರು ಪಡೆದರು. ಹರಿಣಗಳ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಕಿವೀಸ್​ ಫೈನಲ್​ಗೆ ಲಗ್ಗೆ ಇಟ್ಟಿತು.
ಇನ್ನೂ ಈ ಪಂದ್ಯ ಬಳಿಕ ಮಾತನಾಡಿದ ದಕ್ಷಿಣ ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಮ್, ಆರಂಭದಲ್ಲಿ ಈಡನ್​ ಗಾರ್ಡನ್​ ಪಿಚ್ ಬ್ಯಾಟಿಂಗ್‌ಗೆ ಪ್ರತಿಕೂಲವಾಗಿತ್ತು. ನಾವು ನಿರೀಕ್ಷೆ ಮಾಡಿದಂತೆ ಚೆಂಡು ಬ್ಯಾಟ್‌ಗೆ ಬರಲಿಲ್ಲ. ಕೆಲವು ಚೆಂಡುಗಳು ಕಡಿಮೆ ಎತ್ತರದಲ್ಲಿ ಬಂದವು. ಹೀಗಾಗಿ, ರನ್​ ಗಳಿಸುವ ಒತ್ತಡದಲ್ಲಿ ನಾವು ವಿಕೆಟ್​ ಕಳೆದುಕೊಂಡೆವು. ಕಿವೀಸ್ ಬೌಲರ್‌ಗಳು ಈ ಪರಿಸ್ಥಿತಿಯ ಲಾಭ ಪಡೆದು ಅದ್ಭುತವಾಗಿ ಬೌಲಿಂಗ್ ಮಾಡಿದರು. ಹೀಗಾಗಿ, ಈ ಗೆಲುವಿನಲ್ಲಿ ಕಿವೀಸ್ ಬೌಲರ್‌ಗಳಿಗೆ ಕ್ರೆಡಿಟ್ ನೀಡಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಸ್ಫೋಟಕ ಆಟವಾಡಿದ ಫಿನ್​ ಅಲೆನ್​ ಹೊಗಳಿದ ಮಾರ್ಕ್ರಮ್​, ಅಂತಹ ಅದ್ಭುತ ಇನ್ನಿಂಗ್ಸ್ ಆಡಿದಾಗ, ಫೀಲ್ಡಿಂಗ್ ತಂಡದ ಗೆಲುವಿನ ಸಾಧ್ಯತೆಗಳು ಕಡಿಮೆ ಎಂದರು. ವಾಸ್ತವವಾಗಿ, 170 ರನ್ ಗಳಿಸುವುದು ಸಹ ಒಂದು ಉತ್ತಮ ಪ್ರಯತ್ನ. ಆದರೆ, ಪವರ್ ಪ್ಲೇನಲ್ಲಿ ಕಿವೀಸ್ ಆರಂಭಿಕ ಆಟಗಾರರು ಆಕ್ರಮಣಕಾರಿಯಾಗಿ ಆಡಿದರು ಮತ್ತು ಪಂದ್ಯವನ್ನು ನಮ್ಮಿಂದ ಕಸಿದುಕೊಂಡರು. ನಾವೇನಾದರೂ 190 ರನ್ ಗಳಿಸಿದ್ದರೆ, ಫಲಿತಾಂಶ ಬೇರೆಯಾಗಿರುತ್ತಿತ್ತು ಎಂದರು.
ಇನ್ನೂ ಈ ಪಂದ್ಯಾವಳಿಯಲ್ಲಿ ತಮ್ಮ ತಂಡದ ಪ್ರದರ್ಶನದ ಬಗ್ಗೆ ಮಾರ್ಕ್ರಮ್ ತೃಪ್ತಿ ವ್ಯಕ್ತಪಡಿಸಿದರು. ತಮ್ಮ ಹುಡುಗರು ಅದ್ಭುತವಾಗಿ ಆಡಿದ್ದಕ್ಕಾಗಿ ಶ್ಲಾಘಿಸಿದರು. ಆದರೂ, ಈ ಒಂದು ಸೋಲು ನೋವುಂಟು ಮಾಡಿದೆ ಎಂದರು. ಈ ನೋವಿನಿಂದ ಹೊರಬಂದ ಬಳಿಕ, ಒಂದು ತಂಡವಾಗಿ ಅದರ ಬಗ್ಗೆ ಚರ್ಚಿಸುವುದಾಗಿ ಹೇಳಿದರು. ನಾವು ನಮ್ಮ ತಪ್ಪುಗಳಿಂದ ಕಲಿಯುತ್ತೇವೆ ಮತ್ತು ಬಲವಾಗಿ ಮರಳುತ್ತೇವೆ ಎಂದು ಮಾರ್ಕ್ರಮ್ ಇದೇ ಸಂದರ್ಭದಲ್ಲಿ ತಿಳಿಸಿದರು..
ತಮ್ಮ ಸೋಲಿಗಿಂತ ಹೆಚ್ಚಾಗಿ ಅದ್ಭುತ ಆಟವಾಡಿದ ಎದುರಾಳಿ ತಂಡದ ಆಟಗಾರರನ್ನು ಮನಸಾರೆ ಹೊಗಳಿ, ಮಾರ್ಕ್ರಮ್​ ಕ್ರೀಡಾಸ್ಫೂರ್ತಿ ಮೆರೆದರು. ಇದಕ್ಕಾಗಿ ಅವರನ್ನು ಕ್ರೀಡಾ ಜಗತ್ತು ಪ್ರಶಂಸಿಸುತ್ತಿದೆ, (ಏಜೆನ್ಸೀಸ್​).