ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ್ತಿ ಸ್ಮೃತಿ ಮಂಧಾನ 
ಕ್ರಿಕೆಟ್

ಮದ್ವೆ ಸಮಾರಂಭದ ನಡುವೆಯೇ ಸ್ಮೃತಿ ತಂದೆಗೆ ಹೃದಯಾಘಾತ: ಸ್ಟಾರ್​ ಕ್ರಿಕೆಟರ್​ ವಿವಾಹ ಮುಂದೂಡಿಕೆ! Smriti Mandhana

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ್ತಿ ಸ್ಮೃತಿ ಮಂಧಾನ ಮದುವೆ ಮುಂದೂಡಿಕೆ
  • ಮದುವೆ ಸಮಾರಂಭದ ನಡುವೆ ತಂದೆಗೆ ಹೃದಯಾಘಾತ ಹಿನ್ನೆಲೆ ವಿವಾಹ ಮುಂದಕ್ಕೆ
  • ಮದುವೆಯನ್ನು ಮೊಟಕುಗೊಳಿಸಿ ಆಸ್ಪತ್ರೆಗೆ ದೌಡಾಯಿಸಿದ ಸ್ಮೃತಿ ಮಂಧಾನ ಕುಟುಂಬ
ಮುಂಬೈ: ಬಹುಕಾಲದ ಗೆಳೆಯ ಹಾಗೂ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೊತೆ ಇಂದು (ನ.23) ನಡೆಯಬೇಕಿದ್ದ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ್ತಿ ಸ್ಮೃತಿ ಮಂಧಾನ ( Smriti Mandhana ) ಅವರ ಮದುವೆ ಸಮಾರಂಭವನ್ನು ದಿಢೀರನೇ ಮುಂದೂಡಲಾಗಿದೆ. ಸ್ಮೃತಿ ಅವರ ತಂದೆಗೆ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಇಂಥದ್ದೊಂದು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಮ್ದೋಲ್​ನಲ್ಲಿರುವ ಸ್ಮೃತಿ ಮಂಧಾನ ಒಡೆತನದ ಫಾರ್ಮ್​ ಹೌಸ್​ನಲ್ಲಿ ವಿವಾಹ ಸಮಾರಂಭ ನಡೆಯಬೇಕಿತ್ತು. ಆದರೆ, ಸ್ಮೃತಿ ಅವರ ತಂದೆಗೆ ಹೃದಯಾಘಾತ ಸಂಭವಿಸಿದ ಕಾರಣ ಮದುವೆಯನ್ನು ಮುಂದೂಡಲಾಗಿದೆ ಎಂದು ಸ್ಮೃತಿ ಅವರ ಬಿಜಿನೆಸ್​ ಮ್ಯಾನೇಜರ್​ ತುಹಿನ್​ ಮಿಶ್ರಾ ಖಚಿತಪಡಿಸಿದ್ದಾರೆ.
ಸ್ಮೃತಿ ಅವರ ತಂದೆ ಶ್ರೀನಿವಾಸ್​ ಮಂಧಾನ ಅವರನ್ನು ತಕ್ಷಣವೇ ಸಾಂಗ್ಲಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಈ ಸುದ್ದಿ ತಿಳಿದ ತಕ್ಷಣ ಸ್ಮೃತಿ ಮಂಧಾನ ಮತ್ತು ಅವರ ಹತ್ತಿರದ ಕುಟುಂಬ ಸದಸ್ಯರು ಆಸ್ಪತ್ರೆಗೆ ಧಾವಿಸಿದ್ದಾರೆ ಎಂದು ಕುಟುಂಬದ ಆಪ್ತ ಮೂಲಗಳು ದೃಢಪಡಿಸಿವೆ.
ಪ್ರಸ್ತುತ ಸ್ಮೃತಿ ಅವರ ತಂದೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವರ ಮೇಲೆ ನಿಗಾ ಇಡಲಾಗಿದೆ ಎಂದು ಕುಟುಂಬ ತಿಳಿಸಿದೆ. ಸದ್ಯಕ್ಕೆ ಇಂದಿನ ಮದುವೆ ಸಮಾರಂಭವನ್ನು ರದ್ದುಗೊಳಿಸಲಾಗಿದೆ ಎಂದು ಅವರ ಕುಟುಂಬಸ್ಥರು ಅಧಿಕೃತವಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿವಾಹ ಸಮಾರಂಭ ಮತ್ತೆ ಯಾವ ಪುನಾರಂಭಗೊಳ್ಳತ್ತದೆ ಎಂಬುದನ್ನು ಸದ್ಯಕ್ಕೆ ಸ್ಮೃತಿ ಕುಟುಂಬ ತಿಳಿಸಿಲ್ಲ.
ಶ್ರೀನಿವಾಸ್​ ಮಂಧಾನ ಅವರು ಇಂದು ಬೆಳಗ್ಗೆ ಉಪಾಹಾರ ಸೇವಿಸುತ್ತಿದ್ದಾಗಲೇ ಅಸ್ವಸ್ಥರಾದರು. ಇದೆಲ್ಲ ಮಾಮೂಲಿ ಅವರು ಸರಿ ಹೋಗುತ್ತಾರೆ ಅಂತ ಸ್ವಲ್ಪ ಸಮಯ ಕಾದೆವು. ಆದರೆ, ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು. ಹೀಗಾಗಿ ಯಾವುದೇ ಅಪಾಯವನ್ನು ತೆಗೆದುಕೊಳ್ಳಬಾರದು ಅಂತ ತಕ್ಷಣ ನಾವು ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ದೆವು. ಈಗ ಅವರು ವೈದ್ಯರ ನಿಗಾದಲ್ಲಿದ್ದಾರೆ ಎಂದು ಸ್ಮೃತಿ ಅವರ ಮ್ಯಾನೇಜರ್​ ಹೇಳಿದ್ದಾರೆ.
ನಿಮಗೆ ಗೊತ್ತು ಸ್ಮೃತಿ ಅವರಿಗೆ ತಂದೆ ಅಂದರೆ ಜೀವ. ಹೀಗಾಗಿ ಅವರು ಗುಣಮುಖರಾಗುವವರೆಗೆ, ಇಂದು ನಡೆಯಬೇಕಿದ್ದ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಆಕೆಯೇ ನಿರ್ಧರಿಸಿದರು. ಇಡೀ ಕುಟುಂಬ ಇದೀಗ ಆಘಾತದಲ್ಲಿದೆ. ಸ್ಮೃತಿ ಅವರ ತಂದೆ ಚೇತರಿಸಿಕೊಳ್ಳಬೇಕಿದೆ. ಆದಷ್ಟು ಬೇಗ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದು ಮ್ಯಾನೇಜರ್​ ತಿಳಿಸಿದರು.
ಅಂದಹಾಗೆ, ಸ್ಮೃತಿ ಮತ್ತು ಪಲಾಶ್ ನವೆಂಬರ್ 23 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಆಪ್ತ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳ ಸಮ್ಮುಖದಲ್ಲಿ ವಿವಾಹವಾಗಬೇಕಿತ್ತು. ಮಹಿಳಾ ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ಅನೇಕ ಸದಸ್ಯರು ಈ ವಿವಾಹ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಆದರೆ, ಸ್ಮೃತಿ ಅವರ ತಂದೆಗೆ ಹೃದಯಾಘಾತ ಸಂಭವಿಸಿದ್ದರಿಂದ ಮದುವೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ, (ಏಜೆನ್ಸೀಸ್​).