ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್
- ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಸೋತ ಟೀಮ್ ಇಂಡಿಯಾ
- 2-1 ಅಂತರದಲ್ಲಿ ಸರಣಿ ಸೋತ ಶುಭಮನ್ ಗಿಲ್ ಪಡೆ
- ಸರಣಿ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ಕ್ಯಾಪ್ಟನ್ ಶುಭಮನ್ ಗಿಲ್ ಕಾಮೆಂಟ್ಸ್ ವೈರಲ್
ಇಂದೋರ್: ನಿನ್ನೆ (ಜ.18) ನಡೆದ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ 41 ರನ್ಗಳಿಂದ ಕಿವೀಸ್ ಪಡೆ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ 2-1 ಅಂತರದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತು. ತಂಡದ ಪರ ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಶತಕದಾಟ ನ್ಯೂಜಿಲೆಂಡ್ ಸರಣಿ ಗೆಲುವಿಗೆ ದೊಡ್ಡ ಕಾರಣವಾಯಿತು.
ಇನ್ನು ಸರಣಿ ಸೋತ ಬೆನ್ನಲ್ಲೇ ಸೋಲಿನ ಕುರಿತು ಮೌನಮುರಿದ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್, "ನಾವು ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಕಂಡೆವು. ಅದೇ ಎರಡನೇ ಪಂದ್ಯವನ್ನು ಸೋತು ಸರಣಿಯಲ್ಲಿ 1-1 ಅಂತರ ಸಮಬಲಗೊಳಿಸಿದ್ದೆವು. ಆದರೆ, ಇಂದೋರ್ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ನಾವು ಆಡಿದ ರೀತಿ ಸ್ವಲ್ಪ ನಿರಾಶಾದಾಯಕವಾಗಿದೆ" ಎಂದರು.
ಆ ಸ್ಥಾನದಲ್ಲಿ ಆಡುವುದು ಅಷ್ಟು ಸುಲಭವಲ್ಲ...
ಈ ಸರಣಿಯ ಸೋಲು ನಮಗೊಂದು ಪಾಠ. ಮತ್ತು ನಾವು ಬದಲಿಸಿಕೊಳ್ಳಲು ಒಂದಷ್ಟು ವಿಷಯಗಳಿವೆ. ಈ ಸರಣಿಯಿಂದ ಕೆಲವು ಸಕಾರಾತ್ಮಕ ವಿಷಯಗಳೂ ಇವೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು. ಸರಣಿಯಲ್ಲಿ ಹರ್ಷಿತ್ ರಾಣಾ ಆಡಿದ ರೀತಿ ಪ್ರಭಾವಶಾಲಿಯಾಗಿತ್ತು ಹಾಗೂ 8ನೇ ಕ್ರಮಾಂಕದಲ್ಲಿ ಬಂದು ಆಡುವುದು ತುಂಬಾ ಉತ್ತಮ. ಸರಣಿ ಪೂರ ನಮ್ಮ ವೇಗಿಗಳು ಬೌಲಿಂಗ್ ಮಾಡಿದ ರೀತಿ ತುಂಬಾ ಚೆನ್ನಾಗಿತ್ತು ಎಂದು ಹೇಳಿದರು.
ಪಂದ್ಯದ ವಿವರ
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 337 ರನ್ ಗಳಿಸಿತು. ಕಿವೀಸ್ ಪರ ಡ್ಯಾರಿಲ್ ಮಿಚೆಲ್ (137 ರನ್, 15 ಬೌಂಡರಿ, 131 ಎಸೆತ, 3 ಸಿಕ್ಸರ್) ತಮ್ಮ ಸತತ ಎರಡನೇ ಶತಕವನ್ನು ಗಳಿಸಿದರೆ, ಗ್ಲೆನ್ ಫಿಲಿಪ್ಸ್ (106 ರನ್, 9 ಬೌಂಡರಿ, 88 ಎಸೆತ, 3 ಸಿಕ್ಸರ್) ಕೂಡ ಸೆಂಚುರಿ ಬಾರಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಪರ ವೇಗಿಗಳಾದ ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ತಲಾ ಮೂರು ವಿಕೆಟ್‌ಗಳನ್ನು ಪಡೆದರೆ, ಸಿರಾಜ್ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತುವಲ್ಲಿ ಭಾರತ ವಿಫಲ
ಕಿವೀಸ್ ನೀಡಿದ 338 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ (124 ರನ್, 10 ಬೌಂಡರಿ, 3 ಸಿಕ್ಸರ್)) ವೀರೋಚಿತ ಶತಕ, ನಿತೀಶ್ ಕುಮಾರ್ ರೆಡ್ಡಿ (53 ರನ್, 57 ಎಸೆತ, 2 ಬೌಂಡರಿ, 2 ಸಿಕ್ಸರ್) ಅರ್ಧಶತಕ ಮತ್ತು ಹರ್ಷಿತ್ ರಾಣಾ (52 ರನ್, 4 ಬೌಂಡರಿ, 4 ಸಿಕ್ಸರ್) ಅರ್ಧಶತಕಗಳ ಹೊರತಾಗಿಯೂ, ಭಾರತ 46 ಓವರ್‌ಗಳಲ್ಲಿ 296 ರನ್‌ಗೆ ಆಲೌಟ್ ಆಗಿದ್ದು ಸರಣಿ ಸೋಲಿಗೆ ಕಾರಣವಾಯಿತು,(ಏಜೆನ್ಸೀಸ್).