ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬಾಲ್ ಟ್ಯಾಂಪರಿಂಗ್ (ಚೆಂಡು ವಿರೂಪಗೊಳಿಸುವುದು) ಕುರಿತಂತೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ (Shoaib Akhtar) ಸ್ಪೋಟಕ ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಕ್ರಿಕೆಟ್ ದಿನಗಳಲ್ಲಿ ಪಾಕ್ ಆಟಗಾರರು ಬಾಟಲ್ ಮುಚ್ಚಳಗಳನ್ನು ಬಳಸಿ ಚೆಂಡಿನ ಸ್ಥಿತಿಯನ್ನು ಬದಲಿಸುತ್ತಿದ್ದರು ಎಂದು ಅಖ್ತರ್ ಒಪ್ಪಿಕೊಂಡಿದ್ದು, ಇದಷ್ಟೇ ಅಲ್ಲದೆ, ಅಗತ್ಯವಿದ್ದಾಗ ಚೆಂಡುಗಳನ್ನೇ ಬದಲಿಸಲು ಪಾಕಿಸ್ತಾನ ತಂಡ ಹಿಂಜರಿಯುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ 2018ರ ಸ್ಯಾಂಡ್ಪೇಪರ್ ಗೇಟ್ ವಿವಾದವು ಮುನ್ನೆಲೆಗೆ ಬಂದಿರುವ ಈ ಹೊತ್ತಿನಲ್ಲೇ ಅಖ್ತರ್ ಈ ವಿಷಯವನ್ನು ಕೆದಕಿದ್ದು, ಹಳೆಯ ವಿವಾದವನ್ನು ಮತ್ತೆ ಮತ್ತೆ ಕೆದಕುವುದನ್ನು ನಿಲ್ಲಿಸುವಂತೆ ಕ್ರಿಕೆಟ್ ವಲಯಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ವಿಸ್ಡನ್ ಸ್ಕೂಪ್ ಕಾರ್ಯಕ್ರಮದಲ್ಲಿ ಮಾತನಾಡಿದ ಅಖ್ತರ್, ಸ್ಯಾಂಡ್ಪೇಪರ್ ವಿವಾದವನ್ನು ಬಿಟ್ಟುಬಿಡಿ, ಅದನ್ನೇಕೆ ಇಷ್ಟು ದೊಡ್ಡ ವಿಷಯ ಮಾಡುತ್ತಿದ್ದೀರಿ? ಇದು ಆಸ್ಟ್ರೇಲಿಯಾ ಕ್ರಿಕೆಟ್ಗೆ ಹಾನಿ ಮಾಡುತ್ತದೆ ಎಂಬುದು ನನಗೆ ಅರ್ಥವಾಗುತ್ತದೆ, ಕ್ರಿಕೆಟ್ಗೂ ಇದರಿಂದ ಹಾನಿಯಾಗಿತ್ತು. ನಾವು ಸ್ಯಾಂಡ್ಪೇಪರ್ ಬದಲಿಗೆ ಬಾಟಲ್ ಮುಚ್ಚಳಗಳನ್ನು ಬಳಸುತ್ತಿದ್ದೆವು. ನಾವು ಚೆಂಡುಗಳನ್ನೇ ಬದಲಿಸುತ್ತಿದ್ದೆವು ಎಂದು ಅಖ್ತರ್ ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ, ತಮ್ಮ ಆತ್ಮಚರಿತ್ರೆ ಸಬ್ರ್ (Sabr) ನಲ್ಲಿ ಉಲ್ಲೇಖ ಮಾಡಿದ ನಂತರ ಈ ವಿವಾದವು ಹೊಸ ತಿರುವು ಪಡೆದುಕೊಂಡಿದೆ. 2018ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಚೆಂಡನ್ನು ವಿರೂಪಗೊಳಿಸಲು ಸ್ಯಾಂಡ್ಪೇಪರ್ ಬಳಸುತ್ತಿರುವ ವಿಚಾರ ಇಡೀ ತಂಡಕ್ಕೆ ತಿಳಿದಿತ್ತು ಎಂದು ಖವಾಜಾ ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದು, ತಮಗೆ ಈ ಘಟನೆಯ ಬಗ್ಗೆ ಪೂರ್ವ ಮಾಹಿತಿ ಇರಲಿಲ್ಲ ಎಂದು ಈ ಹಿಂದೆ ಹೇಳಿದ್ದ ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್ವುಡ್ ಮತ್ತು ಮಿಚೆಲ್ ಸ್ಟಾರ್ಕ್ ಅವರ ನಿಲುವಿಗೆ ಖವಾಜಾ ಅವರ ಹೇಳಿಕೆ ತದ್ವಿರುದ್ಧವಾಗಿದೆ.
ಸ್ಯಾಂಡ್ಪೇಪರ್ ಬಳಸಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಕ್ಯಾಮರೂನ್ ಬ್ಯಾನ್ಕ್ರಾಫ್ಟ್ ಕೂಡ ಬುಧವಾರ ಪ್ರಕಟವಾದ ವಿಸ್ತೃತ ಬರಹವೊಂದರಲ್ಲಿ ವಿವಾದಕ್ಕೆ ಹೊಸ ಆಯಾಮ ನೀಡಿದ್ದಾರೆ. ಈ ಕಾರ್ಯಾಚರಣೆಯ ಮಾಹಿತಿ ಕೇವಲ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ತಮಗೆ ಮಾತ್ರವಲ್ಲದೆ ತಂಡದ ಇತರರಿಗೂ ತಿಳಿದಿತ್ತು ಎಂದು ಬ್ಯಾನ್ಕ್ರಾಫ್ಟ್ ಹೇಳಿದ್ದಾರೆ. ಎಲ್ಲರಿಗಾಗಿ ಸತ್ಯವನ್ನು ಬಹಿರಂಗಪಡಿಸಿದ್ದಕ್ಕೆ ಖವಾಜಾ ಅವರು ಬ್ಯಾನ್ಕ್ರಾಫ್ಟ್ ಅವರನ್ನು ಶ್ಲಾಘಿಸಿದ್ದಾರೆ.
ಖವಾಜಾ ಅವರು ಸತ್ಯವನ್ನು ಹೊರತಂದಿದ್ದನ್ನು ಬೆಂಬಲಿಸಿದರೂ, ಅವರು ಈ ಸಮಯವನ್ನು ಆಯ್ಕೆ ಮಾಡಿಕೊಂಡ ಬಗ್ಗೆ ಅಖ್ತರ್ ಪ್ರಶ್ನಿಸಿದ್ದಾರೆ. ಅಲ್ಲದೆ, ಇಂತಹ ದೊಡ್ಡ ಕಾರ್ಯಾಚರಣೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಆಟಗಾರರು ಮಾತ್ರ ಭಾಗಿಯಾಗಿರಲು ಸಾಧ್ಯವಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಆಟದ ದಿನಗಳ ಕರಾಳ ಅನುಭವಗಳನ್ನು ಹಂಚಿಕೊಂಡ ಅಖ್ತರ್, ಮ್ಯಾಚ್ ಫಿಕ್ಸಿಂಗ್ ವಿವಾದಗಳು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅನುಮಾನದ ವಾತಾವರಣವನ್ನು ಸೃಷ್ಟಿಸಿದ್ದವು ಎಂದರು. ನನ್ನ ಹಳೆಯ ಸಹ ಆಟಗಾರರ ಬಗ್ಗೆ ಹೇಳಲು ನನ್ನ ಬಳಿ ಸಾಕಷ್ಟು ವಿಚಾರಗಳಿವೆ, ಆದರೆ ನಾನು ಹೇಳುವುದಿಲ್ಲ. ಅವರನ್ನು ನಾನು ಸಂಕಷ್ಟಕ್ಕೆ ಸಿಲುಕಿಸಲು ಬಯಸುವುದಿಲ್ಲ. ಒಂದು ಕಾಲದಲ್ಲಿ ನಾನು ಮೈದಾನದಲ್ಲಿ 22 ಆಟಗಾರರ ವಿರುದ್ಧ ಆಡುತ್ತಿದ್ದೇನೆ ಎಂದು ಭಾವಿಸಿದ್ದೆ; ಏಕೆಂದರೆ ನಾನು ಆಡಿದ ಪ್ರತಿಯೊಬ್ಬ ಆಟಗಾರನೂ ಮ್ಯಾಚ್ ಫಿಕ್ಸಿಂಗ್ ಅನುಮಾನದ ಸುಳಿಯಲ್ಲಿದ್ದ. ಹಾಗಾಗಿ ಯಾರನ್ನು ನಂಬಬೇಕೆಂದೇ ನನಗೆ ತಿಳಿಯುತ್ತಿರಲಿಲ್ಲ ಎಂದು ಅಖ್ತರ್ ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ(ಏಜೆನ್ಸೀಸ್).