DRS ತೆಗೆದುಕೊಂಡರೂ ಸಿಗದ ಫಲ: ಹೆಟ್ಮೆಯರ್ ಬೇಸರ, ಕೋಪಗೊಂಡ ವಿಂಡೀಸ್ ಕೋಚ್ ಡ್ಯಾರೆನ್ ಸ್ಯಾಮಿ...! DRS Call
- ನಿನ್ನೆ ರೋಮಾಂಚನಕಾರಿ ಟಿ20 ವಿಶ್ವಕಪ್ ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸಾಕ್ಷಿಯಾಗಿತ್ತು
- ಈ ಪಂದ್ಯದಲ್ಲಿ ವಿಂಡೀಸ್ ಪಡೆಯನ್ನು ಬಗ್ಗುಬಡಿದ ಭಾರತ ಭರ್ಜರಿಯಾಗಿ ಸೆಮೀಸ್ಗೆ ಲಗ್ಗೆ ಇಟ್ಟಿತು
- ವಿಂಡೀಸ್ ದಾಂಡಿಗ ಶಿಮ್ರಾನ್ ಹೆಟ್ಮೆಯರ್ ಔಟ್ ಆದ ರೀತಿ ತಂಡಕ್ಕೆ ಬೇಸರ ಉಂಟು ಮಾಡಿದೆ
- ಹೆಟ್ಮಯರ್ ಹಾಗೂ ಕೋಚ್ ಡರೆನ್ ಸ್ಯಾಮಿ ಕೂಡ ಅದನ್ನು ಔಟ್ ಎಂದು ಒಪ್ಪಿಕೊಳ್ಳುತ್ತಿಲ್ಲ
DRS Call : ನಿನ್ನೆ (ಮಾರ್ಚ್ 02) ರೋಮಾಂಚನಕಾರಿ ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸಾಕ್ಷಿಯಾಗಿತ್ತು. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಸೂಪರ್-8 ಪಂದ್ಯವು ಸೆಮಿಸ್ಗೆ ಅರ್ಹತೆ ಪಡೆಯಲು ನಿರ್ಣಾಯಕವಾಗಿತ್ತು. ಅಂತಿಮವಾಗಿ ಈ ಪಂದ್ಯದಲ್ಲಿ ವಿಂಡೀಸ್ ಪಡೆಯನ್ನು ಬಗ್ಗುಬಡಿದ ಭಾರತ, ಭರ್ಜರಿಯಾಗಿ ಸೆಮೀಸ್ಗೆ ಲಗ್ಗೆ ಇಟ್ಟಿತು.
ಇನ್ನೂ ಈ ಪಂದ್ಯದಲ್ಲಿ ವಿಂಡೀಸ್ ದಾಂಡಿಗ ಶಿಮ್ರಾನ್ ಹೆಟ್ಮೆಯರ್ ಔಟ್ ಆದ ರೀತಿ ವಿಂಡೀಸ್ ತಂಡಕ್ಕೆ ಬೇಸರ ಉಂಟು ಮಾಡಿದೆ. ಹೇಳಬೇಕೆಂದರೆ, ಹೆಟ್ಮಯರ್ ಹಾಗೂ ಕೋಚ್ ಡರೆನ್ ಸ್ಯಾಮಿ ಕೂಡ ಅದನ್ನು ಔಟ್ ಎಂದು ಒಪ್ಪಿಕೊಳ್ಳುತ್ತಿಲ್ಲ.
ಹೌದು, ಟಾಸ್ ಸೋತು ಮೊದಲು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ನಿಧಾನ ಗತಿಯಲ್ಲಿ ಬ್ಯಾಟ್ ಮಾಡತೊಡಗಿತಾದರೂ ತಮ್ಮ ವಿಕೆಟ್‌ಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಒಂಬತ್ತನೇ ಓವರ್‌ನಲ್ಲಿ ವರುಣ್ ಚಕ್ರವರ್ತಿ, ವಿಂಡೀಸ್ ನಾಯಕ ಶೈ ಹೋಪ್ ಅವರನ್ನು ಔಟ್ ಮಾಡುವ ಮೂಲಕ ಮೊದಲ ವಿಕೆಟ್ ತಂದು ಕೊಟ್ಟರು.
ಇದಾದ ನಂತರ 12ನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರ ಮಾರಕ ದಾಳಿಗೆ ತತ್ತರಿಸಿದ ವಿಂಡೀಸ್, ಶಿಮ್ರಾನ್ ಹೆಟ್ಮೈಯರ್ (27) ಮತ್ತು ಕ್ರೀಸ್ನಲ್ಲಿ ಅಂಟಿಕೊಂಡಿದ್ದ ರೋಸ್ಟನ್ ಚೇಸ್ (40) ವಿಕೆಟ್ ಕಳೆದುಕೊಂಡಿತು. ಎಡಗೈ ಬ್ಯಾಟ್ಸ್ಮನ್ ಹೆಟ್ಮಯರ್, ಶಾರ್ಟ್-ಆಫ್-ಲೆಂಗ್ತ್ ಬಾಲ್ ಅನ್ನು ಸ್ಲಾಗ್ ಸ್ವೀಪ್ನತ್ತ ತಳ್ಳಲು ಪ್ರಯತ್ನಿಸಿದಾಗ ಬಾಲ್ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರ ಕೈ ಸೇರಿತ್ತು. ಆಗ ಬುಮ್ರಾ ಅವರ ಅಫೀಲ್ಗೆ ಅಂಪೈರ್ ಕ್ರಿಸ್ ಗ್ಯಾಫ್ನಿ ಔಟ್ ಎಂದು ಕೈ ಎತ್ತಿದ ತಕ್ಷಣ ಹೆಟ್ಮಾಯರ್ ಡಿಆರ್ಎಸ್ಗೆ ಮನವಿ ಮಾಡಿದರು. ಥರ್ಡ್ ಅಂಪೈರ್ ಅದನ್ನು ಪರೀಕ್ಷಿಸಿದಾಗ ಅಲ್ಟ್ರಾಎಡ್ಜ್ನಲ್ಲಿ ಸ್ಪೈಕ್ ತೋರಿಸಿತ್ತು. ಹಾಗಾಗಿ ಇದು ಔಟ್ ಎಂದು ಥರ್ಡ್ ಅಂಪೈರ್ ರೀಚರ್ಡ್ ಕೆಟಲ್ಬರೋ ಖಚಿತ ಪಡಿಸಿದರು. ಈ ನಿರ್ಣಯದಿಂದ ಶಿಮ್ರಾನ್ ಬೇಸರಗೊಂಡರು.
ಬ್ಯಾಟ್ ಮತ್ತು ಬಾಲ್ನ ನಡುವೆ ಅಂತರವಿದ್ದರೂ ಔಟ್ ಎಂದು ನೀಡಲಾಗಿದೆ ಎಂದು ಹೆಟ್ಮಯರ್ ಬೇಸರಗೊಂಡರೆ, ವಿಂಡೀಸ್ ಕೋಚ್ ಡರೆನ್ ಸ್ಯಾಮಿ ಕೂಡ ಡಗೌಟ್ನಲ್ಲಿ ತಮ್ಮ ಅಸಮಧಾನ ಹೊರಹಾಕಿದರು. ಇದೀಗ ಈ ಔಟ್ ವಿಚಾರವು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ವಿಂಡೀಸ್ ಪಡೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಬ್ಯಾಟಿಂಗ್ಗಿಳಿದ ವೆಸ್ಟ್ ಇಂಡೀಸ್ ದೈತ್ಯರು, 20 ಓವರ್‌ನಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿದರು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಸೂರ್ಯ ಪಡೆಗೆ, ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಇನ್ನಿಂಗ್ಸ್ ಗೆಲುವಿಗೆ ಪ್ರಮುಖ ಕಾರಣವಾಯಿತು. ಚೇಸಿಂಗ್ನಲ್ಲಿ ವಿರಾಟ್ ಕೊಹ್ಲಿ ಬಿಟ್ಟರೆ ಸ್ಯಾಮ್ಸನ್ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದಿದ್ದು ವಿಶೇಷ.
ಇದೇ ಸಮಯದಲ್ಲಿ ಕೇವಲ 10 ರನ್ಗೆ ಪೆವಿಲಿಯನ್ ಹಾದಿ ಹಿಡಿದ ಸ್ಫೋಟಕ ಎಡಗೈ ಬ್ಯಾಟರ್ಗಳಾದ ಅಭಿಷೇಕ್ ಶರ್ಮ ಮತ್ತು ಇಶಾನ್ ಕಿಶನ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರಿಯರನ್ನು ಮತ್ತೊಮ್ಮೆ ಭಾರೀ ನಿರಾಶೆಗೊಳಿಸಿದರು. ಉಳಿದಂತೆ ಕ್ರೀಸ್ಗೆ ಬಂದ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಹೆಚ್ಚು ಕಾಲ ನಿಲ್ಲಲಿಲ್ಲ. ಆದರೆ, ಏಕಾಂಗಿಯಾಗಿ ಹೋರಾಟ ನಡೆಸಿದ ಸಂಜು, ಇಡೀ ಪಂದ್ಯದ ಪೂರ ಕೂಲ್ ಆಗಿಯೇ ಚೇಸ್ ಮಾಡಿದ್ದು ನಿಜಕ್ಕೂ ರೋಮಾಂಚಕಕಾರಿ ಆಗಿತ್ತು. ಕಡೆಯ 2 ಓವರ್‌ನಲ್ಲಿ ಸ್ಯಾಮ್ಸನ್ ಮೇಲಿದ್ದ ಒತ್ತಡವನ್ನು ಇಳಿಸಿದ್ದೇ ಶಿವಂ ದುಬೆ ಅವರ ಎರಡು ಬೌಂಡರಿಗಳು. ಕೇವಲ 50 ರನ್ಗೆ 97 ರನ್ ಬಾರಿಸಿದ ಸಂಜು ಸ್ಯಾಮ್ಸನ್, ಟೀಮ್ ಇಂಡಿಯಾದ ರೋಚಕ ಗೆಲುವಿನ ರೂವಾರಿ. ಈ ಅದ್ಭುತ ಇನ್ನಿಂಗ್ಸ್ನಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ಗಳು ಸೇರಿವೆ. ತನ್ನ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಭಾರತವನ್ನು ಸೆಮಿಫೈನಲ್ಗೆ ಕೊಂಡೊಯ್ದ ಸಂಜುಗೆ ಇಡೀ ಭಾರತೀಯ ಕ್ರಿಕೆಟ್ ಪ್ರಿಯರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).