ಟೀಮ್​ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಹಾಗೂ ಸೋಫಿ ಶೈನ್ 
ಕ್ರಿಕೆಟ್

ಎರಡನೇ ಮದುವೆಗೆ ರೆಡಿಯಾದ ಶಿಖರ್ ಧವನ್: ಗಬ್ಬರ್​ ಕೈಹಿಡಿಯಲಿರುವ ಸೋಫಿ ಶೈನ್ ಯಾರು? Shikhar Dhawan Marriage

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಎರಡನೇ ಮದುವೆಗೆ ಸಿದ್ಧತೆ
  • ತಮ್ಮ ಗರ್ಲ್​ಫ್ರೆಂಡ್​ ಸೋಫಿ ಶೈನ್ ಅವರನ್ನು ಮದುವೆಯಾಗಲಿದ್ದಾರೆ ಗಬ್ಬರ್​
  • ಫೆಬ್ರವರಿ ಮೂರನೇ ವಾರದಲ್ಲಿ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಅದ್ಧೂರಿಯಾಗಿ ನಡೆಯಲಿದೆ
ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಎರಡನೇ ಮದುವೆಗೆ ( Shikhar Dhawan Marriage ) ಸಿದ್ಧತೆ ನಡೆಸುತ್ತಿದ್ದು, ತಮ್ಮ ಗರ್ಲ್​ಫ್ರೆಂಡ್​ ಸೋಫಿ ಶೈನ್ ಅವರನ್ನು ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.
ಧವನ್-ಸೋಫಿ ವಿವಾಹ ಸಮಾರಂಭ ಫೆಬ್ರವರಿ ಮೂರನೇ ವಾರದಲ್ಲಿ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಅದ್ಧೂರಿಯಾಗಿ ನಡೆಯಲಿದ್ದು, ವಿವಾಹದ ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿವೆ ಎಂದು ವರದಿಯಾಗಿದೆ. ಅನೇಕ ಕ್ರಿಕೆಟ್ ಸೆಲೆಬ್ರಿಟಿಗಳು ಮತ್ತು ಶಿಖರ್​ ಧವನ್​ ಅವರ ಆಪ್ತರು ಈ ವಿವಾಹ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ಅಂದಹಾಗೆ, ಶಿಖರ್ ಧವನ್ ಮತ್ತು ಸೋಫಿ ಶೈನ್ ಅವರ ಪರಿಚಯ ಕೆಲವು ವರ್ಷಗಳ ಹಿಂದೆ ಪ್ರಾರಂಭವಾಯಿತು. ಇಬ್ಬರೂ ಮೊದಲ ಬಾರಿಗೆ ದುಬೈನಲ್ಲಿ ಭೇಟಿಯಾದರು. ಆರಂಭದ ಪರಿಚಯ ಸ್ನೇಹಕ್ಕೆ ತಿರುಗಿತು. ಸ್ವಲ್ಪ ದಿನಗಳ ಬಳಿಕ ಅದು ಪ್ರೀತಿಯಾಗಿ ಬದಲಾಯಿತು. 2025ರ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಇಬ್ಬರ ನಡುವಿನ ಸಂಬಂಧ ಬೆಳಕಿಗೆ ಬಂದಿತು. ಈ ವೇಳೆ ಧವನ್-ಸೋಫಿ ಫೈನಲ್ ಪಂದ್ಯವನ್ನು ಒಟ್ಟಿಗೆ ವೀಕ್ಷಿಸಿದರು. ಅಂದಿನಿಂದ, ಇಬ್ಬರೂ ಹಾಟ್​ ಟಾಪಿಕ್​ ಆಗಿದ್ದಾರೆ. ಇಬ್ಬರೂ ಒಂದು ವರ್ಷಕ್ಕೂ ಹೆಚ್ಚು ಕಾಲ ಸಂಬಂಧದಲ್ಲಿದ್ದಾರೆಂದು ತಿಳಿದುಬಂದಿದೆ.
ಧವನ್ ಅವರು 2012 ರಲ್ಲಿ ಆಯೇಷಾ ಮುಖರ್ಜಿಯನ್ನು ವಿವಾಹವಾದರು. ದಂಪತಿಗೆ 2014 ರಲ್ಲಿ ಜೊರಾವರ್ ಧವನ್ ಎಂಬ ಮಗ ಜನಿಸಿದನು. ವೈಯಕ್ತಿಕ ಕಾರಣಗಳಿಂದ ಆಯೇಷಾ ಹಾಗೂ ಧವನ್​ 2023 ರಲ್ಲಿ ವಿಚ್ಛೇದನ ಪಡೆದರು. ಇದಾದ ನಂತರ, ಗಬ್ಬರ್ ಅವರು ತಮ್ಮ ವೈಯಕ್ತಿಕ ಜೀವನವನ್ನು ಬಹಳ ಗೌಪ್ಯವಾಗಿ ಇಟ್ಟುಕೊಂಡರು. ಇದೀಗ ಎರಡನೇ ಮದುವೆ ಸುದ್ದಿ ಹೊರಬಿದ್ದಿದೆ.

ಯಾರು ಈ ಸೋಫಿ ಶೈನ್​?

ಸೋಫಿ ಶೈನ್ ಅವರ ಹಿನ್ನೆಲೆ ತುಂಬಾ ಕುತೂಹಲವಾಗಿದೆ. ಸೋಫಿ ಅವರು ಐರ್ಲೆಂಡ್‌ ಮೂಲದವರು. ಅವರು ಶಿಕ್ಷಣ ಕ್ಷೇತ್ರದಲ್ಲಿ ಚೆನ್ನಾಗಿ ಪರಿಣತಿ ಹೊಂದಿದ್ದಾರೆ. ಸೋಫಿ, ಕ್ಯಾಸಲ್‌ರಾಯ್ ಕಾಲೇಜಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು ಲಿಮೆರಿಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದರು. ಈ ಹಿಂದೆ ಪ್ರಾಡಕ್ಟ್​ ಸಲಹೆಗಾರರಾಗಿ ಕೆಲಸ ಮಾಡಿದ್ದ ಸೋಫಿ, ಪ್ರಸ್ತುತ ಅಬುಧಾಬಿಯ ನಾರ್ದರ್ನ್ ಟ್ರಸ್ಟ್ ಕಾರ್ಪೊರೇಷನ್‌ನಲ್ಲಿ ಎರಡನೇ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕ್ರೀಡಾಪಟುಗಳು ಸಾಮಾನ್ಯವಾಗಿ ನಟಿಯರನ್ನು ಮದುವೆಯಾಗುತ್ತಾರೆ. ಆದರೆ, ಧವನ್​ ವಿಚಾರದಲ್ಲಿ ಇದು ವಿಭಿನ್ನವಾಗಿದೆ. ಸೋಫಿ ಅವರ ಶೈಕ್ಷಣಿಕ ಹಿನ್ನೆಲೆ ಮತ್ತು ಕಾರ್ಪೊರೇಟ್ ವೃತ್ತಿಜೀವನದ ಜೊತೆಗೆ, ಅವರು ಸಾಮಾಜಿಕ ಸೇವೆಗಳಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಅವರು ಪ್ರಸ್ತುತ 'ಡಾ ಒನ್ ಸ್ಪೋರ್ಟ್ಸ್' ಜೊತೆ ಸಂಯೋಜಿತವಾಗಿರುವ ಶಿಖರ್ ಧವನ್ ಫೌಂಡೇಶನ್ ಅನ್ನು ನಡೆಸುತ್ತಿದ್ದಾರೆ.
ಸೋಫಿ ಶೈನ್ ಸಾಮಾಜಿಕ ಜಾಲತಾಣದಲ್ಲಿಯೂ ಉತ್ತಮ ಫಾಲೋವರ್ಸ್​ ಹೊಂದಿದ್ದಾರೆ. ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 3.41 ಲಕ್ಷ ಫಾಲೋವರ್ಸ್​ ಹೊಂದಿದ್ದಾರೆ. ಕೆಲವು ಸಮಯದಿಂದ, ಶಿಖರ್ ಧವನ್ ಜತೆಗಿನ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಲವು ಬಾರಿ ಒಟ್ಟಿಗೆ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುವ ಮೂಲಕ ವದಂತಿ ಹರಡಲು ಕಾರಣವಾಗಿದ್ದರು. ಇತ್ತೀಚೆಗೆ ಶಿಖರ್, ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಘೋಷಿಸುವ ಮೂಲಕ ವದಂತಿಗೆ ತೆರೆಎಳೆದರು. ಅಂತಿಮವಾಗಿ ಈ ಜೋಡಿ ವಿವಾಹದೊಂದಿಗೆ ಒಂದಾಗಲಿದೆ. ಗಬ್ಬರ್, ಭಾರತಕ್ಕಾಗಿ 34 ಟೆಸ್ಟ್, 167 ಏಕದಿನ ಮತ್ತು 68 ಟಿ20ಐಗಳನ್ನು ಆಡಿದ್ದಾರೆ, (ಏಜೆನ್ಸೀಸ್​).