ವೈಬವ್ ಸೂರ್ಯವಂಶಿ (ಎಡ), ಶಿಖರ್ ಧವನ್ (ಬಲ)
- ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ
- ಟಿ20, ಏಕದಿನ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಉಡೀಸ್ ಮಾಡಿದ ಬೇಬಿ ಬಾಸ್
- ವೈಭವ್ ಸೂರ್ಯವಂಶಿ ಯಾಕಿಷ್ಟು ಸ್ಪೆಷಲ್ ಎಂಬ ಪ್ರಶ್ನೆಗೆ ಮಾಜಿ ಕ್ರಿಕೆಟಿಗನ ಉತ್ತರ ವೈರಲ್
ಮುಂಬೈ: ಕ್ರಿಕೆಟ್ ಜಗತ್ತಿನ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Sooryavanshi) ಯಾವ ದೇಶದ ಕ್ರಿಕೆಟ್ ಪ್ರೇಮಿಗಳಿಗೆ ಇಷ್ಟವಿಲ್ಲ ಹೇಳಿ? ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದ ಈ 15 ವರ್ಷದ ಬಾಲಕ, ಆಂಗ್ಲರ ಮಣ್ಣಿನಲ್ಲಿ ಶತಕ ಬಾರಿಸಲು ವಿಫಲವಾದರೂ ಸ್ಫೋಟಕ ಓಪನಿಂಗ್ ನೀಡುವಲ್ಲಿ ವೈಫಲ್ಯ ಕಾಣಲಿಲ್ಲ. ಇನ್ನು, ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಎಂದಿನಂತೆ ತಮ್ಮ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ, ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ವೈಭವ್ಗೆ ಯಾಕೆ ಇಷ್ಟೊಂದು ಪ್ರೀತಿ, ಮನ್ನಣೆ ಅಪ್ಪುಗೆ ಸಿಗುತ್ತಿದೆ ಎಂಬುದಕ್ಕೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಕೊಟ್ಟ ಉತ್ತರ ನೆಟ್ಟಿಗರ ಹೃದಯ ಗೆದ್ದಿದೆ.
ಎಎನ್‌ಐ ಜತೆ ಮಾತನಾಡಿದ ಧವನ್, ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಶೈಲಿ ನಿಜಕ್ಕೂ ಅದ್ಭುತ. 15 ವರ್ಷದ ಯುವಕ ಐಪಿಎಲ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಮಟ್ಟಿಗೆ ಪ್ರದರ್ಶನ ನೀಡುತ್ತಿರುವುದು ಮಹತ್ತರ ಸಾಧನೆಯಾಗಿದೆ. ಆತ್ಮವಿಶ್ವಾಸದಿಂದ ಬೌಂಡರಿ ಬಾರಿಸುವ ಯುವಕರ ಸಾಮರ್ಥ್ಯ ಮೆಚ್ಚಬೇಕು. ಕೌಶಲ್ಯ ಎಷ್ಟೇ ಮುಖ್ಯವಾಗಿದ್ದರೂ, ಕಿರಿಯ ವಯಸ್ಸಿನಲ್ಲೇ ಇಂತಹ ಅಮೋಘ ಶಾಟ್ಗಳನ್ನು ಆಡುತ್ತಿರುವ ಆತನ ಧೈರ್ಯ ಮತ್ತು ಮನಸ್ಥಿತಿಯು ಒಂದು ವಿಶೇಷ ಗುಣ. ಟೀಮ್ ಇಂಡಿಯಾದಲ್ಲಿ ಸೂರ್ಯವಂಶಿಗೆ ಒಳ್ಳೆಯ ಭವಿಷ್ಯವಿದೆ ಎಂದರು.
ಕೇವಲ 15ನೇ ವಯಸ್ಸಿನಲ್ಲಿಯೇ ತನ್ನ ಅಸಾಧಾರಣ ಆತ್ಮವಿಶ್ವಾಸದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಯುವ ಕ್ರಿಕೆಟ್ ಸಂಚಲನ ವೈಭವ್ ಸೂರ್ಯವಂಶಿ, ಮುಂಬರುವ ದುಲೀಪ್ ಟ್ರೋಫಿ ಟೂರ್ನಿಗೆ ಈಸ್ಟ್ ಜೋನ್ ತಂಡದ ಉಪನಾಯಕನಾಗಿ ಆಯ್ಕೆಯಾಗುವ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಇಶಾನ್ ಕಿಶನ್ ನಾಯಕತ್ವದ ಈ ಬಲಶಾಲಿ ತಂಡದಲ್ಲಿ ಕೇವಲ 15 ವರ್ಷದ ಯುವ ಆಟಗಾರನಿಗೆ ಈ ಜವಾಬ್ದಾರಿ ನೀಡಿರುವುದು ವಿಶೇಷ ದಾಖಲೆಯಾಗಿದೆ.
ಇನ್ನು, ಟೀಮ್ ಇಂಡಿಯಾ ಪರ ಟಿ20, ಏಕದಿನ ಕ್ರಿಕೆಟ್‌ನಲ್ಲಿ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸುತ್ತಿರುವ ವೈಭವ್ ಸೂರ್ಯವಂಶಿ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಬರೋಬ್ಬರಿ 151 ರನ್ ಗಳಿಸಿ, 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದಕ್ಕೂ ಮೊದಲು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ, ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಭಾರತದ ಅತ್ಯಂತ ಕಿರಿಯ ಆಟಗಾರ ಎಂಬ ಅಪರೂಪದ ದಾಖಲೆಗೂ ಸಾಕ್ಷಿಯಾದರು. ಈ ಮೂಲಕ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಹಳೆಯ ದಾಖಲೆಯನ್ನು ಮುರಿದರು,(ಏಜೆನ್ಸೀಸ್).