3 ಪ್ರಮುಖ ಕ್ಯಾಚ್‌ಗಳನ್ನು ಬಿಟ್ಟರೂ ಶಶಾಂಕ್ ಜತೆ ಶ್ರೇಯಸ್ ಅಯ್ಯರ್, ರಿಕಿ ಪಾಂಟಿಂಗ್ ನಡೆದುಕೊಂಡ ರೀತಿಗೆ ಮೆಚ್ಚುಗೆ! Ricky Ponting
- ಪ್ರಸಕ್ತ 19ನೇ ಆವೃತ್ತಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿದೆ
- ಐದು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ ಪಡೆ ಮೊದಲ ಸ್ಥಾನದಲ್ಲಿದೆ
- ನಿನ್ನೆ ಎಲ್ಎಸ್ಜಿ ವಿರುದ್ಧ ಗೆದ್ದರು ಕೂಡ ಪಂಜಾಬ್ ತಂಡದ ಫೀಲ್ಡಿಂಗ್ ತುಂಬಾ ನಿರಾಶಾದಾಯಕವಾಗಿತ್ತು
- ಶಶಾಂಕ್ ಸಿಂಗ್ ಅವರು ಔಟ್‌ಫೀಲ್ಡ್‌ನಲ್ಲಿ ಮೂರು ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿದರು
Ricky Ponting : ಪ್ರಸಕ್ತ 19ನೇ ಆವೃತ್ತಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡ ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿದೆ. ಇದುವರೆಗೂ 6 ಪಂದ್ಯಗಳನ್ನು ಆಡಿರುವ ಪಂಜಾಬ್, ಐದರಲ್ಲಿ ಗೆಲುವು ದಾಖಲಿಸಿದ್ದು, ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ ಪಡೆ ಮೊದಲ ಸ್ಥಾನದಲ್ಲಿದೆ. ಭಾನುವಾರ (ಏಪ್ರಿಲ್ 19) ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಪಂಜಾಬ್, 54 ರನ್‌ಗಳಿಂದ ಜಯಗಳಿಸಿತು. ಈ ಪಂದ್ಯವನ್ನು ಗೆದ್ದರು ಕೂಡ ಪಂಜಾಬ್ ಫೀಲ್ಡಿಂಗ್ ತುಂಬಾ ನಿರಾಶಾದಾಯಕವಾಗಿತ್ತು. ವಿಶೇಷವಾಗಿ ಶಶಾಂಕ್ ಸಿಂಗ್ ಅವರು ಔಟ್‌ಫೀಲ್ಡ್‌ನಲ್ಲಿ ಮೂರು ಕ್ಯಾಚ್‌ಗಳನ್ನು ಬಿಟ್ಟರು.
ಶಶಾಂಕ್ ಸಿಂಗ್ ಮೂರು ಪ್ರಮುಖ ಕ್ಯಾಚ್‌ಗಳನ್ನು ಬಿಟ್ಟಿದ್ದರಿಂದ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೇಸರಗೊಂಡರು. ಅಲ್ಲದೆ, ಮುಖ್ಯ ಕೋಚ್ ರಿಕಿ ಪಾಂಟಿಂಗ್ ಕೂಡ ತೀವ್ರ ನಿರಾಶೆಗೊಂಡರು. ಆದಾಗ್ಯೂ, ಶ್ರೇಯಸ್ ಅಯ್ಯರ್ ಮತ್ತು ರಿಕಿ ಪಾಂಟಿಂಗ್ ಇಬ್ಬರೂ ಪಂದ್ಯದ ನಂತರ ಶಶಾಂಕ್ ಜೊತೆ ಹರ್ಷಚಿತ್ತದಿಂದಲೇ ಮಾತನಾಡಿದರು. ಬಹುಶಃ ಪಂದ್ಯ ಗೆದ್ದಿದ್ದರಿಂದ ಖುಷಿಯಾಗಿ ಮಾತನಾಡಿದ್ದಾರೆ. ಒಂದು ವೇಳೆ ಪಂದ್ಯ ಕೈತಪ್ಪಿದ್ದರೆ, ಶಶಾಂಕ್ಗೆ ಇಬ್ಬರೂ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು.
ಲಖನೌ ಇನ್ನಿಂಗ್ಸ್‌ನ 14ನೇ ಓವರ್‌ನಲ್ಲಿ ಶಶಾಂಕ್ ಸಿಂಗ್ ತಮ್ಮ ಮೊದಲ ಕ್ಯಾಚ್ ಅನ್ನು ಬಿಟ್ಟರು. ಯಜುವೇಂದ್ರ ಚಾಹಲ್ ಬೌಲಿಂಗ್‌ನಲ್ಲಿ ಹಾರ್ಡ್ ಹಿಟ್ಟರ್ ನಿಕೋಲಸ್ ಪೂರನ್ ದೊಡ್ಡ ಶಾಟ್ ಹೊಡೆಯಲು ಪ್ರಯತ್ನಿಸಿದರು. ಆದಾಗ್ಯೂ, ಟೈಮಿಂಗ್ ಮಿಸ್ ಆಗಿದ್ದರಿಂದ ಚೆಂಡು ಗಾಳಿಯಲ್ಲಿ ಮೇಲಕ್ಕೆ ಹೋಯಿತು. ಈ ವೇಳೆ ಶಶಾಂಕ್ ಸಿಂಗ್ ಕ್ಯಾಚ್ ಹಿಡಿಯಲಿಲ್ಲ. ಚೆಂಡು ಅವರ ಬೆರಳುಗಳಿಗೆ ಬಡಿದು ನೆಲಕ್ಕೆ ಅಪ್ಪಳಿಸಿತು.
18ನೇ ಓವರ್‌ನಲ್ಲಿ ಶಶಾಂಕ್ ಅವರು ಎರಡನೇ ಕ್ಯಾಚ್ ಅನ್ನು ಬಿಟ್ಟರು. ಐಡೆನ್ ಮಾರ್ಕ್ರಾಮ್ ಒಂದು ದೊಡ್ಡ ಹೊಡೆತವನ್ನು ಆಡಿದರು. ಇದರಿಂದ ಚೆಂಡು ಗಾಳಿಯಲ್ಲಿ ತುಂಬಾ ಎತ್ತರಕ್ಕೆ ಹೋಯಿತು. ಸ್ವೀಪರ್ ಕವರ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಶಶಾಂಕ್ ಸಿಂಗ್ ಬೌಂಡರಿ ಗೆರೆಯ ಕಡೆಗೆ ಓಡಿಹೋದರು. ಆದರೆ, ಚೆಂಡನ್ನು ಸರಿಯಾಗಿ ಗಮನಿಸಲಿಲ್ಲ. ಇದರಿಂದ ಗೊಂದಲಕ್ಕೆ ಒಳಗಾದ ಶಶಾಂಕ್ ಸುಮ್ಮನೇ ನಿಂತರು. ಈ ವೇಳೆ ಚೆಂಡು ಬೌಂಡರಿ ಲೈನ್ನ ಅಂಚಿಗೆ ಬಡಿಯಿತು ಮತ್ತು ಸಿಕ್ಸರ್ ಸಿಕ್ಕಿತು. ಈ ವೇಳೆ ಶಶಾಂಕ್ ಅವರು ಚೆಂಡನ್ನು ಸರಿಯಾಗಿ ಗಮನಿಸಿದ್ದರೆ, ಅದು ಒಳ್ಳೆಯ ಕ್ಯಾಚ್ ಆಗುತ್ತಿತ್ತು. ಡಗೌಟ್‌ನಿಂದ ಈ ದೃಶ್ಯವನ್ನು ನೋಡಿದ ರಿಕಿ ಪಾಂಟಿಂಗ್ ತುಂಬಾ ಆಶ್ಚರ್ಯಚಕಿತರಾದರು. ಇದೇನಿದು ಎಂಬಂತೆ ತಮ್ಮ ಮುಖಭಾವ ವ್ಯಕ್ತಪಡಿಸಿದರು.
ಕೊನೆಯ ಓವರ್‌ನಲ್ಲಿ, ಶಶಾಂಕ್ ಸಿಂಗ್ ಮತ್ತೊಂದು ಕ್ಯಾಚ್ ಬಿಟ್ಟರು. ಮುಕುಲ್ ಚೌಧರಿ ಅವರು ಹೊಡೆದ ಚೆಂಡನ್ನು ಹಿಡಿಯಲು ಡೀಪ್ ಸ್ಕ್ವೇರ್ ಲೆಗ್‌ಗೆ ಓಡಿದರು. ಆದರೆ, ಚೆಂಡು ಅವರ ಕೈಯಿಂದ ಜಾರಿ ಕೆಳಗೆ ಬಿದ್ದಿತು. ಈ ವೇಳೆ ಶ್ರೇಯಸ್ ಅಯ್ಯರ್ ಸ್ವಲ್ಪ ಮುಗುಳ್ನಕ್ಕರು ಆದರೆ, ಡಗೌಟ್‌ನಲ್ಲಿದ್ದ ಪಾಂಟಿಂಗ್ ತುಂಬಾ ಗಂಭೀರವಾಗಿ ಕಾಣುತ್ತಿದ್ದರು.
ಈ ಪಂದ್ಯದ ನಂತರ, ಪಾಂಟಿಂಗ್ ಮತ್ತು ಅಯ್ಯರ್ ಇಬ್ಬರೂ ಶಶಾಂಕ್ ಕೈಬಿಟ್ಟ ಕ್ಯಾಚ್‌ಗಳನ್ನು ಮರೆತಂತೆ ತೋರುತ್ತಿತ್ತು. ಹರಟೆ ಹೊಡೆಯುತ್ತಿರುವಾಗ, ಇಬ್ಬರೂ ಶಶಾಂಕ್ ಅವರನ್ನು ನಗುತ್ತಾ ತಬ್ಬಿಕೊಂಡರು. ಇದನ್ನು ನೋಡಿದ ನೆಟ್ಟಿಗರು ಪಂದ್ಯದಲ್ಲಿ ತಪ್ಪುಗಳು ಸಹಜ. ಆಟಗಾರನೊಬ್ಬ ವಿಫಲನಾದಾಗ ಆತನನ್ನು ಹುರಿದುಂಬಿಸಬೇಕು. ಅಯ್ಯರ್ ಮತ್ತು ಪಾಂಟಿಂಗ್ ಒಳ್ಳೆಯ ಉದ್ದೇಶಗಳನ್ನು ಹೊಂದಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 254 ರನ್ ಗಳಿಸಿತು. ಪಂಜಾಬ್ ಪರ ಪ್ರಿಯಾಂಶ್ ಆರ್ಯ (93 ರನ್, 37 ಎಸೆತ, 4 ಬೌಂಡರಿ, 9 ಸಿಕ್ಸರ್) ಮತ್ತು ಕೂಪರ್ ಕಾನೊಲಿ (87 ರನ್, 46 ಎಸೆತ, 8 ಬೌಂಡರಿ, 7 ಸಿಕ್ಸರ್) ಅದ್ಭುತ ಆಟವಾಡಿದರು. ಲಖನೌ ಬೌಲರ್‌ಗಳಲ್ಲಿ, ಪ್ರಿನ್ಸ್ ಯಾದವ್ ಮತ್ತು ಮಣಿಮಾರನ್ ಸಿದ್ಧಾರ್ಥ್ ತಲಾ ಎರಡು ವಿಕೆಟ್ ಪಡೆದರೆ, ಮೊಹ್ಸಿನ್ ಖಾನ್ ಮತ್ತು ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್ ಪಡೆದರು.
255 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಲಖನೌ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 200 ರನ್‌ಗಳಿಗೆ ಸೀಮಿತವಾಯಿತು. ಮಿಚೆಲ್ ಮಾರ್ಷ್ (40 ರನ್, 28 ಎಸೆತ), ಆಯುಷ್ ಬಡೋನಿ (21 ಎಸೆತಗಳಲ್ಲಿ 35 ರನ್), ನಾಯಕ ರಿಷಭ್ ಪಂತ್ (23 ಎಸೆತಗಳಲ್ಲಿ 43 ರನ್), ಮತ್ತು ಐಡೆನ್ ಮಾರ್ಕ್ರಾಮ್ (22 ಎಸೆತಗಳಲ್ಲಿ 42 ರನ್) ಲಖನೌ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಪಂಜಾಬ್ ಪರ ಮಾರ್ಕೊ ಜಾನ್ಸೆನ್ ಎರಡು ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್, ವಿಜಯ್ ಕುಮಾರ್ ವೈಶಾಕ್ ಮತ್ತು ಯುಜ್ವೇಂದ್ರ ಚಾಹಲ್ ತಲಾ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್).