ನವದೆಹಲಿ: ಮಹಿಳಾ ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಟಿ20 ಕ್ರಿಕೆಟ್‌ನಲ್ಲಿ ಅಬ್ಬರದ ಇನ್ನಿಂಗ್ಸ್ ಆಡಿದ್ದೇ ಆದರೂ ಇದೀಗ ಐಸಿಸಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇತ್ತೀಚೆಗಷ್ಟೇ ಸೆಪ್ಟೆಂಬರ್ ತಿಂಗಳ ಐಸಿಸಿ ಪ್ರಶಸ್ತಿಗೆ ಭಾಜನರಾದ ಶಫಾಲಿಗೆ ಇದೀಗ ಅದೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಡಿಮೆರಿಟ್ ಪಾಯಿಂಟ್ ಕೊಟ್ಟಿರುವುದು ಸದ್ಯ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ತಂದಿದೆ. ಪ್ರಸಕ್ತ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಶಫಾಲಿ, ಎರಡನೇ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ್ದೇ ಆದರೂ ಫೀಲ್ಡಿಂಗ್ ವೇಳೆ ತೋರಿದ ವರ್ತನೆಗೆ ಶಿಕ್ಷೆ ವಿಧಿಸಲಾಗಿದೆ.
ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿ ವಿಶ್ವದಾಖಲೆ ನಿರ್ಮಿಸಿದ ಶಫಾಲಿ, ಅದೇ ಪಂದ್ಯದ ಫೀಲ್ಡಿಂಗ್ ವೇಳೆ ತಮ್ಮ ಕೈಗೆ ಬಂದ ಕ್ಯಾಚ್ ಹಿಡಿಯುವಲ್ಲಿ ವಿಫಲರಾದರು. ಕ್ಯಾಚ್ ಕೈಚೆಲ್ಲಿದ ಸಿಟ್ಟಿಗೆ ಚೆಂಡನ್ನು ಜೋರಾಗಿ ಕೋಪದಲ್ಲಿ ನೆಲಕ್ಕೆ ಎಸೆದರು. ಐಸಿಸಿಯ ಮೂಲ ನಿಯಮವನ್ನು ಉಲ್ಲಂಘಿಸಿದರು ಎಂಬ ಕಾರಣಕ್ಕೆ ಶಫಾಲಿ ವರ್ಮಾಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಿ, ವಾರ್ನಿಂಗ್ ಕೊಡಲಾಗಿದೆ.
ಭಾರತ ಮತ್ತು ಜಿಂಬಾಬ್ವೆ ಮಹಿಳಾ ತಂಡಗಳ ನಡುವಿನ ಎರಡನೇ ಟಿ20 ಭಾನುವಾರ ರಾಯ್‌ಪುರದಲ್ಲಿ ನಡೆಯಿತು. ಮೊದಲ ಇನಿಂಗ್ಸ್‌ನ 12ನೇ ಓವರ್‌ನಲ್ಲಿ, ಶ್ರೀ ಚರಣಿ ಅವರ ಓವರ್‌ನಲ್ಲಿ, ಚಿಪೋ ಮುಗೇರಿ-ತಿರಿಪಾನೊ ಮಿಡ್-ಆಫ್ ಕಡೆ ಬಾರಿಸಿದರು. ಈ ವೇಳೆ, ಬಾಲ್ ಹಿಡಿಯಲು ಓಡಿ ಬಂದರೂ ಶಫಾಲಿ ಕೈಗೆ ಕ್ಯಾಚ್ ಸಿಗಲಿಲ್ಲ. ಇದರಿಂದ, ತೀವ್ರ ನಿರಾಶೆಗೊಂಡ ವರ್ಮಾ, ಚೆಂಡನ್ನು ಜೋರಾಗಿ ನೆಲಕ್ಕೆ ಬಡಿದರು.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.2ರ ಅಡಿಯಲ್ಲಿ ಇದು ನಿಯಮ ಉಲ್ಲಂಘನೆಯಾಗಿದೆ. ಅಂತಾರಾಷ್ಟ್ರೀಯ ಪಂದ್ಯದ ವೇಳೆ ಕ್ರಿಕೆಟ್ ಉಪಕರಣಗಳು, ಬಟ್ಟೆ, ಮೈದಾನದಲ್ಲಿನ ಉಪಕರಣಗಳು ದುರುಪಯೋಗದ ಮೂಲ ನಿಬಂಧನೆಯನ್ನು ಉಲ್ಲಂಘಿಸಿದ್ದಾರೆ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಈ ತಪ್ಪಿಗಾಗಿ, ಒಂದು ಡಿಮೆರಿಟ್ ಪಾಯಿಂಟ್ ಅನ್ನು ನೀಡಲಾಗಿದೆ. ಕಳೆದ 24 ತಿಂಗಳಲ್ಲಿ ಇದು ಶಫಾಲಿ ಅವರ ಮೊದಲ ಉಲ್ಲಂಘನೆ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).