ಹೆಲ್ಮೆಟ್​ ಧರಿಸಿ ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಟ: ಯಾರೂ ಗುರುತಿಸದ ಸಂಜುರನ್ನು ಈ ಯುವತಿ ಗುರತಿಸಿದ್ದೇ ರೋಚಕ!  
ಕ್ರಿಕೆಟ್

ಹೆಲ್ಮೆಟ್​ ಧರಿಸಿ ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಟ: ಯಾರೂ ಗುರುತಿಸದ ಸಂಜುರನ್ನು ಈ ಯುವತಿ ಗುರತಿಸಿದ್ದೇ ರೋಚಕ! Sanju Samson

ತಮ್ಮ ನೆಚ್ಚಿನ ಕ್ರಿಕೆಟರ್ ಕಣ್ಣೆದುರೇ ಇರುವುದನ್ನು ಕಂಡು ಭಾವುಕರಾದ ಅಖಿಲಾ, ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ತಮ್ಮ ಸಂತಸವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ತಿರುವನಂತಪುರಂ: ಟೀಮ್​ ಇಂಡಿಯಾದ ಸ್ಟಾರ್​ ವಿಕೆಟ್ ಕೀಪರ್ ಕಮ್​ ಬ್ಯಾಟರ್ ಸಂಜು ಸ್ಯಾಮ್ಸನ್ ( Sanju Samson ) ತಿರುವನಂತಪುರದ ಕವಾಡಿಯಾರ್ ರಸ್ತೆಯಲ್ಲಿ ಸಾಮಾನ್ಯರಂತೆ ಓಡಾಡುತ್ತಿದ್ದ ಅಪರೂಪದ ಪ್ರಸಂಗವೊಂದು ಜರುಗಿದೆ. ಕಪ್ಪು ಬಣ್ಣದ ಟೀ-ಶರ್ಟ್, ಶಾರ್ಟ್ಸ್ ಧರಿಸಿ, ತಲೆಗೆ ಹೆಲ್ಮೆಟ್ ಹಾಕ್ಕೊಂಡು ಒಬ್ಬಂಟಿಯಾಗಿ ಸಾಗುತ್ತಿದ್ದ ಸಂಜು ಅವರನ್ನು ನಗರದ ಗಡಿಬಿಡಿಯಲ್ಲಿ ಯಾರೂ ಗಮನಿಸಿರಲಿಲ್ಲ. ಆದರೆ, ಸ್ನೇಹಿತರೊಂದಿಗೆ ಟೀ ಕುಡಿಯಲು ಬಂದಿದ್ದ ಕ್ರೀಡಾಪಟು ಅಖಿಲಾ ಅನಿಲ್ ಅವರ ಕಣ್ಣಿಗೆ ಬಿದ್ದ ಕೂಡಲೇ ತಕ್ಷಣವೇ ಅವರನ್ನು ಗುರುತಿಸಿ ಮಾತನಾಡುವ ಮೂಲಕ ಅಪರೂಪದ 'ಫ್ಯಾನ್ ಗರ್ಲ್ ಕ್ಷಣ'ಕ್ಕೆ ಸಾಕ್ಷಿಯಾದರು.

ಕವಾಡಿಯಾರ್ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದಾಗ ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯ ನಡಿಗೆಯನ್ನು ನೋಡಿ ಅನುಮಾನಗೊಂಡ ಅಖಿಲಾ, ತಮ್ಮ ವಾಹನವನ್ನು ಬದಿಗೆ ನಿಲ್ಲಿಸಿ "ಚೇಟಾ" ಎಂದು ಜೋರಾಗಿ ಕೂಗಿದ್ದಾರೆ. ತಿರುಗಿ ನೋಡದಿದ್ದಾಗ, ಮತ್ತೆ ಧೈರ್ಯ ಮಾಡಿ "ಸಂಜು ಚೇಟಾ" ಎಂದು ಕರೆದಿದ್ದಾರೆ. ಆ ಕ್ಷಣದಲ್ಲಿ ಹೆಲ್ಮೆಟ್ ಬಿಚ್ಚಿದ ಸಂಜು ಸ್ಯಾಮ್ಸನ್, ಅಖಿಲಾರ ಜತೆ ಆತ್ಮೀಯವಾಗಿ ಮಾತನಾಡಿದ್ದಾರೆ. ತಮ್ಮ ನೆಚ್ಚಿನ ಕ್ರಿಕೆಟರ್ ಕಣ್ಣೆದುರೇ ಇರುವುದನ್ನು ಕಂಡು ಭಾವುಕರಾದ ಅಖಿಲಾ, ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ತಮ್ಮ ಸಂತಸವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಮುಗಿಸಿ ತಾಯ್ನಾಡಿಗೆ ಮರಳಿರುವ ಸಂಜು ಸ್ಯಾಮ್ಸನ್, ಪ್ರಸ್ತುತ ತಿರುವನಂತಪುರದಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ವೈಯಕ್ತಿಕ ಕೆಲಸದ ನಿಮಿತ್ತ ನಗರಕ್ಕೆ ಬಂದಿದ್ದ ಅವರು, ಸಾರ್ವಜನಿಕರ ಗಮನ ಸೆಳೆಯಬಾರದು ಎಂಬ ಕಾರಣಕ್ಕೆ ಹೆಲ್ಮೆಟ್ ಧರಿಸಿ ಹೆಜ್ಜೆ ಹಾಕುತ್ತಿದ್ದರು. ಅನಿರೀಕ್ಷಿತವಾಗಿ ಸಿಕ್ಕ ಈ ಅಪರೂಪದ ಭೇಟಿಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಖಿಲಾ, "ಎಂಎಸ್ ಧೋನಿ ಅವರ ನಂತರ ನಾನು ಸಂಜು ಸ್ಯಾಮ್ಸನ್ ಅವರ ಆಟಕ್ಕೆ ಅಭಿಮಾನಿಯಾಗಿದ್ದೆ. ಈ ಮುಂಚೆ ಕೆಲ ಕಾರ್ಯಕ್ರಮಗಳಲ್ಲಿ ಅವರನ್ನು ನೋಡಿದ್ದರೂ, ಹತ್ತಿರದಿಂದ ಮಾತನಾಡುವ ಅಥವಾ ಸೆಲ್ಫಿ ಪಡೆಯುವ ಅವಕಾಶ ಸಿಕ್ಕಿರಲಿಲ್ಲ. ರಸ್ತೆಯಲ್ಲಿ ಕಂಡಾಗ ಸ್ನೇಹಿತರಿಗೆ ಹೇಳಿದರೆ ಅವರು ನಂಬಲಿಲ್ಲ, ಆದರೆ ಈ ಕ್ಷಣ ನನ್ನ ಜೀವನದ ಅತ್ಯಂತ ಸ್ಮರಣೀಯ ಘಟನೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಸಂಜು ಸ್ಯಾಮ್ಸನ್ ಅವರನ್ನು ಗುರುತಿಸಿದ ಅಖಿಲಾ ಅನಿಲ್ ಸಾಮಾನ್ಯ ಅಭಿಮಾನಿಯಲ್ಲ, ಅವರೂ ಸಹ ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಫೆನ್ಸಿಂಗ್ ಪಟು ಎಂಬುದು ವಿಶೇಷ. ಪತ್ತನಂತಿಟ್ಟ ಮೂಲದವರಾದ ಅಖಿಲಾ, ಪ್ರಸ್ತುತ ತಿರುವನಂತಪುರದ ಸ್ಥಳೀಯ ಸ್ವಯಂ ಆಡಳಿತ ಇಲಾಖೆಯಲ್ಲಿ ಗುಮಾಸ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರೀಡಾ ಕೋಟಾದಡಿಯಲ್ಲಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡಿರುವ ಇವರು ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್, ಏಷ್ಯನ್ ಚಾಂಪಿಯನ್‌ಶಿಪ್ ಹಾಗೂ ಥೈಲ್ಯಾಂಡ್ ಓಪನ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತಕ್ಕೆ ಪದಕಗಳನ್ನು ಗೆದ್ದುಕೊಟ್ಟಿದ್ದಾರೆ.

ಅಷ್ಟು ಮಾತ್ರವಲ್ಲದೆ, ಕ್ರೀಡಾ ತರಬೇತಿಯಲ್ಲಿ ಡಿಪ್ಲೊಮಾ ಹೊಂದಿರುವ ಅಖಿಲಾ, ವಯನಾಡ್ ಸ್ಪೋರ್ಟ್ಸ್ ಕೌನ್ಸಿಲ್‌ನಲ್ಲಿ ಕೋಚ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಫೆನ್ಸಿಂಗ್ ತಂಡಕ್ಕೆ ತರಬೇತುದಾರರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಕ್ರೀಡಾ ರಂಗದಲ್ಲಿ ಅಪಾರ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿರುವ ಅಖಿಲಾ ಅವರಿಗೆ, ಭಾರತೀಯ ಕ್ರಿಕೆಟ್‌ನ ಯುವ ತಾರೆ ಸಂಜು ಸ್ಯಾಮ್ಸನ್ ಈ ರೀತಿ ರಸ್ತೆಯಲ್ಲಿ ತೀರಾ ಸರಳವಾಗಿ ಸಿಕ್ಕಿರುವುದು ಕ್ರೀಡಾ ಪ್ರೇಮಿಗಳಲ್ಲೂ ಅಚ್ಚರಿ ಮತ್ತು ಶ್ಲಾಘನೆಗೆ ಕಾರಣವಾಗಿದೆ, (ಏಜೆನ್ಸೀಸ್​).