ಕ್ರಿಕೆಟ್

ಮ್ಯಾಚ್ ಮುಗಿಸೋಕೆ ನಾವು ಆಗ್ಲೇ ಆ ಪ್ಲ್ಯಾನ್ ಮಾಡಿದ್ವಿ!....ಗೆಲುವಿನ ಗುಟ್ಟು ಬಹಿರಂಗಪಡಿಸಿದ ಸಂಜು | Sanju Samson

Sanju Samson: ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ರೋಚಕ ಆರಂಭಿಕ ಪಂದ್ಯದಲ್ಲಿ ಭಾರತ ತಂಡವು 226 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ ದಾಖಲೆಯ ಜಯ ಸಾಧಿಸಿದೆ.

Sanju Samson: ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ರೋಚಕ ಆರಂಭಿಕ ಪಂದ್ಯದಲ್ಲಿ ಭಾರತ ತಂಡವು 226 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ ದಾಖಲೆಯ ಜಯ ಸಾಧಿಸಿದೆ. ಹಾಗ್ಲಿ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡವು ತನ್ನ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ರನ್ ಚೇಸ್ ದಾಖಲಿಸಿತು. ಈ ರೋಚಕ ಗೆಲುವಿನಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಮತ್ತು ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಸ್ಟೋಟಕ ಬ್ಯಾಟಿಂಗ್ ಪ್ರಮುಖ ಪಾತ್ರ ವಹಿಸಿತು ಎನ್ನುವುದರಲ್ಲಿ ಎರಡನೇ ಮಾತಿಲ್ಲ.

226 ರನ್‌ಗಳ ದೊಡ್ಡ ಗುರಿಯನ್ನು ಬೆನ್ನತ್ತಿದ ಟೀಮ್​ ಇಂಡಿಯಾಗೆ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಜೋಡಿಯು ಕೇವಲ ಆರು ಓವರ್​ಗಳಲ್ಲಿ 93 ರನ್‌ಗಳ ಜೊತೆಯಾಟವನ್ನು ನೀಡಿ ಭದ್ರವಾದ ಬುನಾದಿ ಹಾಕಿತು. ಅಭಿಷೇಕ್ ಶರ್ಮಾ ಕೇವಲ 12 ಎಸೆತಗಳಲ್ಲಿ 29 ರನ್ ಸಿಡಿಸಿದರೆ, ಸಂಜು ಸ್ಯಾಮ್ಸನ್ ಕೇವಲ 33 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 67 ರನ್‌ಗಳ ಅರ್ಧಶತಕ ಬಾರಿಸಿದರು.

ಗೆಲುವಿನ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ ಸಂಜು ಸ್ಯಾಮ್ಸನ್, ತಮ್ಮ ಮತ್ತು ಅಭಿಷೇಕ್ ನಡುವೆ ಯಾವುದೇ ದೊಡ್ಡ ಯೋಜನೆ ಅಥವಾ ರಣತಂತ್ರ ಇರಲಿಲ್ಲ ಎಂದು ತಿಳಿಸಿದರು. ಪ್ರತಿ ಪಂದ್ಯದಲ್ಲಿ ನಾವು ಸಾಕಷ್ಟು ಚರ್ಚೆ ಮಾಡುತ್ತೇವೆ, ಆದರೆ ಅಂತಿಮವಾಗಿ ಯಾವುದೇ ಯೋಜನೆ ಕೆಲಸ ಮಾಡುವುದಿಲ್ಲ. ನಾವು ಕೇವಲ ಎಸೆತವನ್ನು ಗಮನಿಸಿ ಬಲವಾಗಿ ಹೊಡೆಯುತ್ತೇವೆ. ಇದು ನಮಗೆ ಉತ್ತಮವಾಗಿ ಫಲ ನೀಡುತ್ತಿದೆ ಮತ್ತು ಅಭಿಷೇಕ್ ಜೊತೆ ಇನ್ನಿಂಗ್ಸ್ ಆರಂಭಿಸುವುದನ್ನು ನಾನು ನಿಜಕ್ಕೂ ಆನಂದಿಸುತ್ತೇನೆ ಎಂದು ಪಂದ್ಯದ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಸ್ಯಾಮ್ಸನ್​ ತಿಳಿಸಿದರು.

ಇದನ್ನೂ ಓದಿ:ಸಂಜು, ನಮನ್ ಧೀರ್ ಅಬ್ಬರ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ! New Zealand vs India

ಎರಡನೇ ಇನ್ನಿಂಗ್ಸ್‌ನಲ್ಲಿ ಆರಂಭದಲ್ಲಿ ಚೆಂಡು ಹೆಚ್ಚು ಸ್ವಿಂಗ್ ಆಗುತ್ತಿದ್ದರೂ, ಪಿಚ್ ಬ್ಯಾಟಿಂಗ್‌ಗೆ ಅತ್ಯಂತ ಅನುಕೂಲಕರವಾಗಿತ್ತು ಎಂದು ಸ್ಯಾಮ್ಸನ್ ವಿವರಿಸಿದರು. ಪವರ್‌ಪ್ಲೇನ ಮೊದಲ ಆರು ಓವರ್‌ಗಳಲ್ಲೇ 90ಕ್ಕೂ ಹೆಚ್ಚು ರನ್ ಕಲೆಹಾಕಿದ ಜೋಡಿ ಪಂದ್ಯವನ್ನು ಮೊದಲಾರ್ಧದಲ್ಲೇ ಮುಗಿಸುವ ಯೋಚನೆ ಮಾಡಿತ್ತು ಎಂದರು.

ಸಂಜು ಔಟಾದ ಬಳಿಕ ನಾಯಕ ಶ್ರೇಯಸ್ ಐಯರ್ (42 ರನ್) ಮತ್ತು ನಮನ್ ಧೀರ್ (ಔಟಾಗದೆ 42 ರನ್) ತಂಡವನ್ನು ಜಯದ ಸಮೀಪ ತಂದರು. ಅಂತಿಮವಾಗಿ ಭಾರತ ತಂಡವು 2 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿ 4 ವಿಕೆಟ್‌ಗಳ ರೋಚಕ ಜಯ ದಾಖಲಿಸಿತು. ಇದು ಸಂಪೂರ್ಣವಾಗಿ ಒಗ್ಗಟ್ಟಿನ ಪ್ರದರ್ಶನ ಮತ್ತು ತಂಡದ ಸಾಮೂಹಿಕ ಕೊಡುಗೆಯಾಗಿದೆ ಎಂದು ಸಂಜು ಹರ್ಷ ವ್ಯಕ್ತಪಡಿಸಿದರು. ವಿಕೆಟ್ ಕೀಪಿಂಗ್ ಮಾಡುವಾಗ ಪಿಚ್‌ನ ಸ್ವರೂಪ ಅರ್ಥವಾಯಿತು ಎಂದು ಹೇಳಿದ ಸ್ಯಾಮ್ಸನ್, ಮೈದಾನದಲ್ಲಿ ಇಬ್ಬನಿಯ ಪ್ರಭಾವದಿಂದಾಗಿ ಎರಡನೇ ಇನ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಸುಲಭವಾಯಿತು ಎಂದರು. ಸರಣಿಯ ಎರಡನೇ ಪಂದ್ಯವು ಇದೇ ಶನಿವಾರ ಅದೇ ಮೈದಾನದಲ್ಲಿ ನಡೆಯಲಿದೆ(ಏಜೆನ್ಸೀಸ್​).