ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಬಳಿಕ ಭಾವುಕ ಮಾತುಗಳಾಡಿದ ಸಂಜು ಸ್ಯಾಮ್ಸನ್! Sanju Samson
- ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಸಾಧಿಸಿ ಟಿ20 ವಿಶ್ವಕಪ್ ಟೂರ್ನಿಯ ಸಮಿಫೈನಲ್ಗೆ ಭಾರತ ಎಂಟ್ರಿ
- ಕೊನೆಯವರೆಗೂ ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತು ತಂಡಕ್ಕೆ ಗೆಲುವು ತಂದುಕಟ್ಟ ಸಂಜು ಸ್ಯಾಮ್ಸನ್
- ಕೇವಲ 50 ಎಸೆತಗಳಲ್ಲಿ 97 ರನ್ ಗಳಿಸಿ ಶ್ರೇಷ್ಠ ಇನ್ನಿಂಗ್ಸ್ ಆಡಿದ ಕೇರಳದ ಹುಡುಗ
- ಇಂತಹ ದಿನಕ್ಕಾಗಿ ನಾನು ತುಂಬಾ ವರ್ಷಗಳಿಂದ ಕಾಯುತ್ತಿದ್ದೆ ಎಂದು ಪಂದ್ಯದ ಬಳಿಕ ಸಂಜು ಭಾವುಕ
Sanju Samson : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿತು. ವೆಸ್ಟ್ ಇಂಡೀಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ, ಸೂರ್ಯಕುಮಾರ್ ಯಾದವ್ ಪಡೆ ಸೆಮೀಸ್ಗೆ ಲಗ್ಗೆ ಇಟ್ಟಿತು. ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಕೊನೆಯವರೆಗೂ ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತು ತಂಡಕ್ಕೆ ಗೆಲುವು ತಂದುಕೊಟ್ಟರು. ಸಂಜು 50 ಎಸೆತಗಳಲ್ಲಿ 97 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ಈ ಪಂದ್ಯದ ಬಳಿಕ ಸಂಜು ತುಂಬಾ ಭಾವುಕರಾಗಿ ಮಾತನಾಡಿದರು.
ಈ ದಿನ ನನ್ನ ಜೀವನದ ಶ್ರೇಷ್ಠ ದಿನಗಳಲ್ಲಿ ಒಂದು. ಇದೇ (ಆಟ) ನನ್ನ ಜಗತ್ತು. ನಾನು ಕ್ರಿಕೆಟ್ ಆಡಲು ಪ್ರಾರಂಭಿಸಿದಾಗಿನಿಂದ, ನನ್ನ ದೇಶಕ್ಕಾಗಿ ಆಡುವ ಕನಸು ಕಂಡಿದ್ದೆ. ಇಂತಹ ದಿನಕ್ಕಾಗಿ ನಾನು ತುಂಬಾ ವರ್ಷಗಳಿಂದ ಕಾಯುತ್ತಿದ್ದೆ. ಆ ದಿನ ಇಂದು ಬಂದಿದೆ. ಇದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ಸಂಜು ಭಾವುಕರಾದರು.
ನನ್ನ ವೃತ್ತಿಜೀವನದಲ್ಲಿ ನಾನು ಅನೇಕ ಏರಿಳಿತಗಳನ್ನು ಕಂಡಿದ್ದೇನೆ. ಕೆಲವೊಮ್ಮೆ ನನ್ನ ಮೇಲೆಯೇ ನಾನು ಅನುಮಾನ ಪಟ್ಟುಕೊಳ್ಳುತ್ತಿದ್ದೆ. ಯಾವಾಗಲೂ ಯೋಚನೆ ಮಾಡುತ್ತಿದ್ದೆ. ನನ್ನಿಂದ ಆಡಲು ಸಾಧ್ಯವಾಗುತ್ತದೆಯೇ? ನನ್ನಿಂದ ಅದನ್ನು ಮಾಡಬಹುದೇ? ನಾನು ನಿರೀಕ್ಷಿಸಿದಂತೆ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆಯೇ? ಸಾಕಷ್ಟು ಅನುಮಾನಗಳು ನನ್ನನ್ನು ಕಾಡುತ್ತಿದ್ದವು. ಆದರೆ, ನಾನು ನನ್ನ ಮೇಲೆ ಹಾಗೂ ದೇವರ ಮೇಲೆ ಇಟ್ಟಿದ್ದ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಲಿಲ್ಲ. ಇಂದು ಆತ (ದೇವರು) ನನ್ನನ್ನು ಆಶೀರ್ವದಿಸಿದನು. ಆ ಸರ್ವಶಕ್ತ ಭಗವಂತನಿಗೆ ಧನ್ಯವಾದಗಳು. ನಾನಿಂದು ತುಂಬಾ ತುಂಬಾ ಸಂತೋಷವಾಗಿದ್ದೇನೆ ಎಂದು ಸಂಜು ಹೇಳಿದರು.
ಟಿ20 ಸ್ವರೂಪದಲ್ಲಿ ನನಗೆ ಸಾಕಷ್ಟು ಅನುಭವವಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜ ಆಟಗಾರರಿಂದ ನಾನು ಬಹಳಷ್ಟು ಕಲಿತಿದ್ದೇನೆ. ಹಿಂದಿನ ಪಂದ್ಯಗಳಲ್ಲಿ, ನಾನು ಸ್ಫೋಟಕ ಇನ್ನಿಂಗ್ಸ್ ಆಡಲು ಹೋಗಿ ವಿಕೆಟ್‌ಗಳನ್ನು ಕಳೆದುಕೊಂಡೆ. ಆದರೆ, ಇಂದು ನಾನು ಜತೆಯಾಟ ನಿರ್ಮಿಸುವತ್ತ ಹೆಚ್ಚು ಗಮನಹರಿಸಿದೆ. ನಾನು ಚೆಂಡನ್ನು ನೋಡುತ್ತಾ ಅದಕ್ಕೆ ತಕ್ಕಂತೆ ಆಟವಾಡಿದೆ. ಇಂದು ನಾನು ನನ್ನ ಯೋಜನೆಗಳನ್ನು ಪರಿಪೂರ್ಣವಾಗಿ ಕಾರ್ಯಗತಗೊಳಿಸಿದೆ ಎಂದು ಹೇಳುತ್ತಾ ಸಂಜು ತುಂಬಾ ಭಾವುಕರಾದರು.
ಅಂದಹಾಗೆ, ಭಾರತ ತಂಡ ಸೆಮಿಫೈನಲ್ ತಲುಪುವಲ್ಲಿ ಸಂಜು ಪ್ರಮುಖ ಪಾತ್ರ ವಹಿಸಿದರು. ಟಿ20 ಸ್ವರೂಪದಲ್ಲಿ ಅಪಾಯಕಾರಿ ತಂಡವೆಂದು ಕರೆಯಲ್ಪಡುವ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕೇರಳದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಟೀಮ್ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ದರು. ತಮ್ಮ ತಂಡದ ಸದಸ್ಯರು ವಿಕೆಟ್ ಒಪ್ಪಿಸುತ್ತಾ ಪೆವಿಲಿಯನ್ ಪರೇಡ್ ಮಾಡಿದರು ಕೂಡ ಸಂಜು ಮಾತ್ರ ಆತ್ಮವಿಶ್ವಾಸದಿಂದ ಸ್ಥಿರವಾಗಿ ಬ್ಯಾಟಿಂಗ್ ಮಾಡಿದರು. ನಿರ್ಣಾಯಕ ಪಂದ್ಯದಲ್ಲಿ 97 ರನ್ ಗಳಿಸಿ ಅಜೇಯರಾಗಿ ಉಳಿದು ಭಾರತ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಸಂಜು ಅವರ ಅದ್ಭುತ ಇನ್ನಿಂಗ್ಸ್ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಲು ಸಹಾಯ ಮಾಡಿತು. ಆದಾಗ್ಯೂ, ಸಂಜು ಕಳೆದ ಕೆಲವು ದಿನಗಳಿಂದ ಫಾರ್ಮ್ ಕೊರತೆಯಿಂದ ಬಳಲುತ್ತಿದ್ದರು. ಪರಿಣಾಮವಾಗಿ, ಅವರು ಆರಂಭಿಕ ಆಟಗಾರನ ಸ್ಥಾನವನ್ನು ಕಳೆದುಕೊಂಡಿದ್ದರು. ಆದಾಗ್ಯೂ, ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಅಂತಿಮವಾಗಿ ತಂಡಕ್ಕೆ ಮರಳಿದ್ದ ಸಂಜು, ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ಪ್ರಭಾವ ಬೀರುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಅವರು ಸ್ಮರಣೀಯ ಇನ್ನಿಂಗ್ಸ್ ಮೂಲಕ ಅಭಿಮಾನಿಗಳನ್ನು ಸಂತೋಷಪಡಿಸಿದರು.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ವಿಂಡೀಸ್ ಪಡೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಬ್ಯಾಟಿಂಗ್ಗಿಳಿದ ವೆಸ್ಟ್ ಇಂಡೀಸ್ ದೈತ್ಯರು, 20 ಓವರ್ನಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿದರು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಸೂರ್ಯ ಪಡೆಗೆ, ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಇನ್ನಿಂಗ್ಸ್ ಗೆಲುವಿಗೆ ಪ್ರಮುಖ ಕಾರಣವಾಯಿತು. ಚೇಸಿಂಗ್ನಲ್ಲಿ ವಿರಾಟ್ ಕೊಹ್ಲಿ ಬಿಟ್ಟರೆ ಸ್ಯಾಮ್ಸನ್ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದಿದ್ದು ವಿಶೇಷ.
ಇದೇ ಸಮಯದಲ್ಲಿ ಕೇವಲ 10 ರನ್ಗೆ ಪೆವಿಲಿಯನ್ ಹಾದಿ ಹಿಡಿದ ಸ್ಫೋಟಕ ಎಡಗೈ ಬ್ಯಾಟರ್ಗಳಾದ ಅಭಿಷೇಕ್ ಶರ್ಮ ಮತ್ತು ಇಶಾನ್ ಕಿಶನ್ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರಿಯರನ್ನು ಮತ್ತೊಮ್ಮೆ ಭಾರೀ ನಿರಾಶೆಗೊಳಿಸಿದರು. ಉಳಿದಂತೆ ಕ್ರೀಸ್ಗೆ ಬಂದ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಹೆಚ್ಚು ಕಾಲ ನಿಲ್ಲಲಿಲ್ಲ. ಆದರೆ, ಏಕಾಂಗಿಯಾಗಿ ಹೋರಾಟ ನಡೆಸಿದ ಸಂಜು, ಇಡೀ ಪಂದ್ಯದ ಪೂರ ಕೂಲ್ ಆಗಿಯೇ ಚೇಸ್ ಮಾಡಿದ್ದು ನಿಜಕ್ಕೂ ರೋಮಾಂಚಕಕಾರಿ ಆಗಿತ್ತು. ಕಡೆಯ 2 ಓವರ್ನಲ್ಲಿ ಸ್ಯಾಮ್ಸನ್ ಮೇಲಿದ್ದ ಒತ್ತಡವನ್ನು ಇಳಿಸಿದ್ದೇ ಶಿವಂ ದುಬೆ ಅವರ ಎರಡು ಬೌಂಡರಿಗಳು. ಕೇವಲ 50 ರನ್ಗೆ 97 ರನ್ ಬಾರಿಸಿದ ಸಂಜು ಸ್ಯಾಮ್ಸನ್, ಟೀಮ್ ಇಂಡಿಯಾದ ರೋಚಕ ಗೆಲುವಿನ ರೂವಾರಿ. ಈ ಅದ್ಭುತ ಇನ್ನಿಂಗ್ಸ್ನಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್ಗಳು ಸೇರಿವೆ. ತನ್ನ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಭಾರತವನ್ನು ಸೆಮಿಫೈನಲ್‌ಗೆ ಕೊಂಡೊಯ್ದ ಸಂಜುಗೆ ಇಡೀ ಭಾರತೀಯ ಕ್ರಿಕೆಟ್ ಪ್ರಿಯರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).